ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kalaburgi Khadak Rotti: ದೇಶದ ಅಂಗಳಕ್ಕೆ ʼಕಲಬುರಗಿ ಖಡಕ್ ರೊಟ್ಟಿʼ ಲಗ್ಗೆ

ಇದು ಕೇವಲ ಆಹಾರ ಪದಾರ್ಥದ ಯಶಸ್ಸಲ್ಲ, ಬದಲಾಗಿ ಬಿಸಿಲು ನಾಡಿನ ಸಾಂಸ್ಕೃತಿಕ ಅಸ್ಮಿತೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಇಳಿಯುತ್ತಿರುವ ಹೆಮ್ಮೆಯ ಕ್ಷಣ. ಕಲಬುರಗಿಯ ಮಣ್ಣಿನ ಗುಣವೇ ಹಸಿರು ಸಿರಿಯ ಜೋಳ. ಇಲ್ಲಿನ ಹೊಲಗಳಲ್ಲಿ ಬೆಳೆಯುವ ‘ಮಾಲ್ದಂಡಿ’ ಜೋಳದ ಹಿಟ್ಟಿನಿಂದ ತಯಾರಾಗುವ ರೊಟ್ಟಿಗೆ ವಿಶಿಷ್ಟ ಪೌಷ್ಟಿಕಾಂಶವಿದೆ.

ದೇವೇಂದ್ರ ಜಾಡಿ ಕಲಬುರಗಿ

ಬಿಸಿಲು ನಾಡಿನ ಅಸ್ಮಿತೆ ‘ಖಡಕ್’ ರೊಟ್ಟಿಗೆ ಜಾಗತಿಕ ಮಾರುಕಟ್ಟೆ ಸ್ಪರ್ಶ

ಗ್ರಾಮೀಣ ಮಹಿಳೆಯರ ಕೈಚಳಕಕ್ಕೆ ಅಂತಾರಾಷ್ಟ್ರೀಯ ಮನ್ನಣೆ ವಿದೇಶದ ಅಂಗಳಕೆ ಕಲಬುರಗಿ ಖಡಕ್ ರೊಟ್ಟಿ ಲಗ್ಗೆ

ರೊಟ್ಟಿ ತಿಂದವ ಗಟ್ಟಿ ಎಂಬುದು ಉತ್ತರ ಕರ್ನಾಟಕದ ಜಾನಪದೀಯ ನಾಣ್ಣುಡಿ. ಈ ಮಾತು ಈಗ ಬರೀ ಗಾದೆಯಾಗಿ ಉಳಿದಿಲ್ಲ. ಸಮುದ್ರದಾಚೆಗಿನ ದೇಶಗಳಿಗೂ ತನ್ನ ರುಚಿಯ ಸಾರ ಸಾರಲು ಸಜ್ಜಾಗಿದೆ. ಕಲಬುರಗಿಯ ಕೆಂಪು ಮಣ್ಣಿನ ಬಿಸಿಲ ತಾಪದಲ್ಲಿ ಅರಳಿ, ಗ್ರಾಮೀಣ ಮಹಿಳೆಯರ ಶ್ರಮದ ಬೆವರಿನಲ್ಲಿ ಅಚ್ಚೊತ್ತಿದ ‘ಖಡಕ್ ಜೋಳದ ರೊಟ್ಟಿ’ ಈಗ ಅಮೆರಿಕ, ಯುಕೆ ಮತ್ತು ಆಸ್ಟ್ರೇಲಿಯಾದಲ್ಲಿ ಡೈನಿಂಗ್ ಟೇಬಲ್ ಅಲಂಕರಿಸಲು ಸನ್ನದ್ಧವಾಗಿದೆ.

ಇದು ಕೇವಲ ಆಹಾರ ಪದಾರ್ಥದ ಯಶಸ್ಸಲ್ಲ, ಬದಲಾಗಿ ಬಿಸಿಲು ನಾಡಿನ ಸಾಂಸ್ಕೃತಿಕ ಅಸ್ಮಿತೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಇಳಿಯುತ್ತಿರುವ ಹೆಮ್ಮೆಯ ಕ್ಷಣ. ಕಲಬುರಗಿ ಯ ಮಣ್ಣಿನ ಗುಣವೇ ಹಸಿರು ಸಿರಿಯ ಜೋಳ. ಇಲ್ಲಿನ ಹೊಲಗಳಲ್ಲಿ ಬೆಳೆಯುವ ‘ಮಾಲ್ದಂಡಿ’ ಜೋಳದ ಹಿಟ್ಟಿನಿಂದ ತಯಾರಾಗುವ ರೊಟ್ಟಿಗೆ ವಿಶಿಷ್ಟ ಪೌಷ್ಟಿಕಾಂಶವಿದೆ.

ಕಲ್ಯಾಣ ಕರ್ನಾಟಕದ ಶ್ರಮಜೀವಿಗಳ ಸಂಸ್ಕೃತಿ ಮತ್ತು ಸ್ವಾಭಿಮಾನದ ಸಂಕೇತವಾಗಿರುವ ಈ ರೊಟ್ಟಿಗೆ ಈಗ ಆಸ್ತಮ್‌ಎಕ್ಸ್ ಪೋರ್ಟ್ ಆಂಡ್ ಇಂಪೋರ್ಟ್ ಕಂಪನಿಯ ಮೂಲಕ ವಿದೇಶದ ಹಾದಿ ಸುಗಮವಾಗಿದೆ.

ಇದನ್ನೂ ಓದಿ: Vishweshwar Bhat Column: ಲಗೇಜ್‌ ನಿರ್ವಹಣೆ

ಕಳೆದ ಮೂರು ತಿಂಗಳಿನಿಂದ ನಡೆದ ಸತತ ಮಾತುಕತೆಯ ಫಲವಾಗಿ, ಶೀಘ್ರವೇ ವಿದೇಶ ಗಳಿಗೆ ರೊಟ್ಟಿಯ ಮೊದಲ ಸ್ಯಾಂಪಲ್ ರವಾನೆ ಆಗಲಿವೆ. ಯುಎಇ, ಯುನೈಟೆಡ್ ಕಿಂಗ್ ಡಮ್ ಮತ್ತು ಆಸ್ಟ್ರೇಲಿಯಾಗೆ ತಲಾ 10 ಬಾಕ್ಸ್‌ಗಳಂತೆ ಕ್ವಾಲಿಟಿ ಚೆಕ್ ಮಾಡಲು ಖಡಕ್ ರೊಟ್ಟಿಗಳನ್ನು ಕಳುಹಿಸಲಾಗುತ್ತಿದೆ.

ಈಗಾಗಲೇ, ಬೆಂಗಳೂರಿನಲ್ಲಿರುವ ಅಮೆರಿಕದ ಐವರು ಸಾಫ್ಟ್‌ʼವೇರ್ ಎಂಜಿನಿಯರ್‌ಗಳು ಈ ರೊಟ್ಟಿಯ ರುಚಿಗೆ ಮಾರುಹೋಗಿದ್ದು, ಅಧಿಕೃತವಾಗಿ ಒಪ್ಪಿದ್ದಾರೆ. ಒಮ್ಮೆ ಈ ಪ್ರಕ್ರಿಯೆ ಮುಗಿದ ಬಳಿಕ, ಮೊದಲ ಕಂತಿನಲ್ಲಿ ಬರೊಬ್ಬರಿ 10 ಸಾವಿರ ರೊಟ್ಟಿಗಳ ಬೃಹತ್ ಕನ್ಸೈನ್‌ ಮೆಂಟ್ ವಿದೇಶಕ್ಕೆ ರವಾನೆಯಾಗಲಿದೆ.

ಮಹಿಳಾ ಸಬಲೀಕರಣಕ್ಕೆ ತಾಂತ್ರಿಕತೆಯ ಬಲ: ರೊಟ್ಟಿ ತಯಾರಿಕೆಯಲ್ಲಿ ತೊಡಗಿರುವ ಗ್ರಾಮೀಣ ಮಹಿಳೆಯರ ಪರಿಶ್ರಮಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲಾಗುತ್ತಿದೆ. ಕೋಟನೂರ ಡಿ ಗ್ರಾಮದ ಬಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬೃಹತ್ ರೊಟ್ಟಿ ಪ್ಯಾಕಿಂಗ್ ಘಟಕ ತಲೆ ಎತ್ತುತ್ತಿದ್ದು, ಹೆಚ್ʼಡಿಎಫ್‌ʼಸಿ ಬ್ಯಾಂಕ್‌ನ ಸಿಎಸ್‌ಆರ್ ಅನುದಾನ ದಡಿ 55 ಲಕ್ಷ ರೂಪಾಯಿ ಮೌಲ್ಯದ ಸುಧಾರಿತ ಯಂತ್ರೋಪಕರಣಗಳನ್ನು ಅಳವಡಿಸ ಲಾಗುತ್ತಿದೆ. ಈ ಮೂಲಕ ಕಲಬುರಗಿಯ ಮಹಿಳೆಯರ ಸ್ವಾವಲಂಬಿ ಬದುಕಿಗೆ ಹೊಸ ಭಾಷ್ಯ ಬರೆಯಲಾಗುತ್ತಿದೆ.

ಸ್ಥಳೀಯವಾಗಿ 150 ರೂಪಾಯಿಗೆ ಮಾರಾಟವಾಗುತ್ತಿದ್ದ ಒಂದು ಬಾಕ್ಸ್ ರೊಟ್ಟಿ, ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ದರಕ್ಕೆ ಮಾರಾಟವಾಗುವ ಮೂಲಕ ಜಿಲ್ಲೆಯ ಆರ್ಥಿಕತೆಗೆ ಚೈತನ್ಯ ನೀಡಲಿದೆ.

ದೇಶಿಯ ರೊಟ್ಟಿಗೆ ಜಾಗತಿಕ ಗೆಲುವು

ಈ ರೊಟ್ಟಿ ಕೇವಲ ಹಸಿವು ನೀಗಿಸುವ ಆಹಾರವಲ್ಲ, ಅದು ಕಲ್ಯಾಣ ಕರ್ನಾಟಕದ ಪರಂಪರೆಯ ಕನ್ನಡಿ. ಯಾವುದೇ ರಾಸಾಯನಿಕ ಅಥವಾ ಸಂರಕ್ಷಕಗಳಿಲ್ಲದೆ ತಿಂಗಳು ಗಟ್ಟಲೆ ತಾಜಾವಾಗಿರುವುದು ಇದರ ಚಮತ್ಕಾರ. ಪ್ರಪಂಚದಾದ್ಯಂತ ‘ಗ್ಲುಟನ್ ಮುಕ್ತ’ ಆಹಾರಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಕಲಬುರಗಿಯ ಈ ಶ್ರಮಜೀವಿಗಳ ಉತ್ಪನ್ನವು ಅಂತರಾ ಷ್ಟ್ರೀಯ ಆರೋಗ್ಯ ಮಾರುಕಟ್ಟೆಯಲ್ಲಿ ಭಾರತದ ಅಪ್ಪಟ ದೇಶಿ ಬ್ರ್ಯಾಂಡ್ ಆಗಿ ಹೊರ ಹೊಮ್ಮುತ್ತಿದೆ. ಇದು ಮಣ್ಣಿನ ಸೊಗಡಿನ ಜಾಗತಿಕ ಗೆಲುವು.

ಗ್ಲೋಬಲ್ ಐಡೆಂಟಿಟಿ ಮಾನ್ಯತೆಯ ನಿರೀಕ್ಷೆ

ಕಲಬುರಗಿಯ ತೊಗರಿ ಮತ್ತು ಕಮಲಾಪುರದ ವಿಶಿಷ್ಟ ಕೆಂಬಾಳೆಗೆ ಈಗಾಗಲೇ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ಸಿಕ್ಕಿದ್ದು, ಜಿಲ್ಲೆಯ ಕೃಷಿ ಹಿರಿಮೆಯನ್ನು ವಿಶ್ವದಾದ್ಯಂತ ಪಸರಿಸಿವೆ. ಇದೀಗ ಇದೇ ಮಾದರಿಯಲ್ಲಿ ’ಕಲಬುರಗಿ ರೊಟ್ಟಿ’ಗೂ ಜಿಐ ಟ್ಯಾಗ್ ಸಿಗಲಿ ಎಂಬುದು ಜಿಲ್ಲೆಯ ಜನರ ಆಶಯವಾಗಿದೆ. ಈ ವಿಶಿಷ್ಟ ಮಾನ್ಯತೆ ದೊರೆತರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೊಟ್ಟಿಗೆ ಅಧಿಕೃತ ಬ್ರ್ಯಾಂಡ್ ಮೌಲ್ಯ ಲಭಿಸಲಿದೆ. ಇದರಿಂದ ಕಲಬು ರಗಿಯ ಮಣ್ಣಿನ ಈ ಸಾಂಪ್ರದಾಯಿಕ ಕಲೆಗೆ ಜಾಗತಿಕ ರಕ್ಷಣೆ ಸಿಗುವುದಲ್ಲದೆ, ನೂರಾರು ಮಹಿಳಾ ಸಂಘಟನೆಗಳ ಆರ್ಥಿಕ ಶಕ್ತಿಗೂ ದೊಡ್ಡ ಬಲ ಬರಲಿದೆ.

image

ಕಲಬುರಗಿಯ ಸ್ವಾದಿಷ್ಟ ‘ಖಡಕ್ ರೊಟ್ಟಿ’ ಈಗ ಕೇವಲ ಹಸಿವಿನ ಸಂಕೇತವಲ್ಲ. ಅದು ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಶಕ್ತಿ. ಸ್ಥಳೀಯ ಮಾರುಕಟ್ಟೆಯಿಂದ ವಿದೇಶದ ತಟ್ಟೆಯವರೆಗೆ ಹರಡುತ್ತಿರುವ ಈ ರೊಟ್ಟಿ, ಜಿಲ್ಲೆಯ ಉದ್ಯಮಶೀಲತೆ ಮತ್ತು ಶ್ರಮಜೀವಿ ಮಹಿಳೆಯರ ಆತ್ಮವಿಶ್ವಾಸಕ್ಕೆ ಜಾಗತಿಕ ಮನ್ನಣೆ ತಂದುಕೊಡುತ್ತಿದೆ. ನಮ್ಮ ಮಣ್ಣಿನ ಘಮಲು ಈಗ ವಿಶ್ವವ್ಯಾಪಿ.

- ಪ್ರಿಯಾಂಕ್ ಖರ್ಗೆ, ಕಲಬುರಗಿ ಉಸ್ತುವಾರಿ ಸಚಿವ
image

ಕಲಬುರಗಿ ರೊಟ್ಟಿ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ. ವೆಬ್‌ಸೈಟ್ ಮೂಲಕ ದೇಶ- ವಿದೇಶಗಳಿಂದ ಕರೆಗಳು ಬರುತ್ತಿವೆ. ವಿದೇಶಕ್ಕೆ ರೊಟ್ಟಿ ರಫ್ತು ಮಾಡಲು ಎಕ್ಸ್ ಪೋರ್ಟ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆ ಚುರುಕಿನಿಂದ ಸಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಬುರಗಿ ಜಿಲ್ಲೆಯ ಅಸ್ಮಿತೆಖಡಕ್‌ರೊಟ್ಟಿ ಸದ್ದಾಗುತ್ತಿರುವುದು ಅತ್ಯಂತ ಖುಷಿಯ ವಿಚಾರ.

--ಜಿಯಾ ತರನ್ನುಮ್, ಜಿಲ್ಲಾಧಿಕಾರಿ, ಕಲಬುರಗಿ.
image

ಕಲಬುರಗಿ ರೊಟ್ಟಿ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗುತ್ತಿದೆ. ಅಮೆರಿಕದಲ್ಲಿ ರೊಟ್ಟಿ ರುಚಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಶೀಘ್ರದಲ್ಲೇ ಮೊದಲ ಕನ್ಸೈನ್‌ಮೆಂಟ್ ರವಾನೆ ಯಾಗಲಿದೆ. ಪ್ಯಾಕಿಂಗ್ ಘಟಕ ಹಾಗೂ ಆಧುನಿಕ ಯಂತ್ರೋಪಕರಣಗಳ ಸಿದ್ಧತೆ ನಡೆದಿದ್ದು, ರಫ್ತು ಪರವಾನಗಿ ಸಿಕ್ಕ ತಕ್ಷಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರೊಟ್ಟಿ ಹೊಸ ಸಂಚಲನ ಮೂಡಿಸಲಿದೆ.

-ಸಮದ್ ಪಟೇಲ್, ಜಂಟಿ ಕೃಷಿ ನಿರ್ದೇಶಕ, ಕಲಬುರಗಿ