ಸರಕಾರಿ ನೌಕರರ ಹಾಜರಾತಿ ಕಡ್ಡಾಯ ಆನ್‌ಲೈನ್ ದಾಖಲು ಆಪ್
ಅಬಕಾರಿ, ಆರ್‌ಡಿಪಿಆರ್ ಇಲಾಖೆ ಸಿಬ್ಬಂದಿ ವಿರೋಧ
ಸರಕಾರಿ ಕೆಲಸಕ್ಕೆ ಗೈರಾಗುವವರನ್ನು ನಿಯಂತ್ರಿಸುವ ಉದ್ದೇಶದಿಂದ ಬೆಳಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ಆನ್'ಲೈನ್ ಹಾಜರಾತಿ ದಾಖಲಿಸುವ ಕರ್ತವ್ಯ ಆಪ್‌ಗೆ ಸರಕಾರಿ ನೌಕರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಸರಕಾರದ ಅಧೀನದ ಇಲಾಖೆಗಳು ಮತ್ತು ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಮೊಬೈಲ್ ಮೂಲಕ ಹಾಜರಾತಿ ದಾಖಲಿಸುವ ವ್ಯವಸ್ಥೆ ಮೇ 1 ಜಾರಿಗೆ ಬಂದಿದೆ. ಅದರನ್ವಯ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿನಿತ್ಯ ಬೆಳಗ್ಗೆ 10 ಗಂಟೆಗೆ ಬಂದಾಗ ಚೆಕ್‌ಇನ್‌ನಲ್ಲಿ ಹಾಗೂ ಸಂಜೆ ಕಚೇರಿಯಿಂದ ತೆರಳುವಾಗ ಚೆಕ್‌ಔಟ್‌ನಲ್ಲಿ ತಪ್ಪದೆ ಹಾಜರಾತಿ ದಾಖಲಿಸಬೇಕು. ಆದರೆ, ಹೊಸ ವ್ಯವಸ್ಥೆಗೆ ಮೊದಲು ಪೊಲೀಸ್ ಇಲಾಖೆಯಿಂದ ಅಪಸ್ವರ ವ್ಯಕ್ತವಾಯಿತು.
ಇದೀಗ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಅಬಕಾರಿ ಸೇರಿ ಇತರ ಇಲಾಖೆಗಳ ನೌಕರರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Kalaburagi Transport App: ಕೈಕೊಟ್ಟ ನಮ್ಮ ಕಲಬುರಗಿ ಸಾರಿಗೆ App
ಕರ್ತವ್ಯ ತಂತ್ರಾಂಶ ಆಧಾರಿತ ಜಿಯೋ ಪೆನ್ಸಿಂಗ್ ಹಾಜರಾತಿ ಪದ್ಧತಿಯು ಗ್ರಾಮೀಣ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ದೈನಂದಿನ ಕರ್ತವ್ಯ ನಿರ್ವಹಣೆಗೆ ಅತ್ಯಂತ ಕಠಿಣ ಸವಾಲು ಎದುರಾಗಲಿದೆ. ಕ್ಷೇತ್ರ ಮಟ್ಟದಲ್ಲಿ ಯೋಜನೆಗಳ ಅನುಷ್ಠಾನ ಸಮಸ್ಯೆಗಳು ಉಂಟಾಗುತ್ತಿದೆ. ಹಾಗಾಗಿ, ನಿಯಮದಿಂದ ವಿನಾಯಿತಿ ನೀಡಬೇಕು ಅಥವಾ ಸೂಕ್ತ ತಿದ್ದುಪಡಿ ತರಬೇಕೆಂದು ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘ, ಸಚಿವ ಈಶ್ವರ್ ಖಂಡ್ರೆಗೆ ಪತ್ರ ಬರೆದು ಮನವಿ ಮಾಡಿದೆ.
ಗ್ರಾಮೀಣ ಭಾಗದ ವಾಸ್ತವ ಸ್ಥಿತಿ ಹಾಗೂ ಪಿಡಿಒಗಳ ಕೆಲಸದ ಸ್ವರೂಪಕ್ಕೆ ಈ ಆಪ್ ಸಂಪೂರ್ಣ ವ್ಯತಿರಿಕ್ತವಾಗಿದೆ. ಇದರಿಂದ ಉಂಟಾಗುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಸಂಘವು ಸರಕಾರದ ಗಮನಕ್ಕೆ ತಂದಿದೆ. ತುರ್ತು ಸಾರ್ವಜನಿಕ ಸೇವೆಗಳು ಮತ್ತು ಕುಡಿಯುವ ನೀರಿನ ಸಮಸ್ಯೆಗಳ ನಿವಾರಣೆಗೆ ತೀವ್ರ ಅಡ್ಡಿ ಉಂಟಾಗಲಿದೆ. ಹಳ್ಳಿಗಳಲ್ಲಿ ಹಠಾತ್ ಕುಡಿಯುವ ನೀರಿನ ಪೈಪ್‌ಲೈನ್ ಹೊಡೆತ, ಬೋರ್‌ವೆಲ್ ಮೋಟಾರ್ ದುರಸ್ತಿ, ಸಾಂಕ್ರಾಮಿಕ ರೋಗ, ನೈಸರ್ಗಿಕ ವಿಕೋಪಗಳಂತಹ ತುರ್ತು ಸಂದರ್ಭಗಳಲ್ಲಿ ಪಿಡಿಒಗಳು ತಕ್ಷಣ ಸ್ಥಳಕ್ಕೆ ಧಾವಿಸಬೇಕಿರುತ್ತದೆ. ಆದರೆ, ಇಂತಹ ಮಾನವೀಯ ಸೇವೆಗಿಂತ ಕಚೇರಿ ಆವರಣ ತಲುಪಿ ಹಾಜರಾತಿ ದಾಖಲಿಸುವುದೇ ಮುಖ್ಯ ಎಂಬ ನಿಯಮವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಲಿದೆ ಎಂದು ಸಚಿವರಿಗೆ ಬರೆದಿರುವ ಪತ್ರದ ಸಂಘವು ಉಲ್ಲೇಖಿಸಿದೆ.
ಅಬಕಾರಿ ಇಲಾಖೆ ನೌಕರರಿಂದ ವಿರೋಧ
ಕರ್ತವ್ಯ ಆಪ್‌ಗೆ ಅಬಕಾರಿ ಇಲಾಖೆ ಅಧಿಕಾರಿ ಮತ್ತು ನೌಕರರಿಂದಲೂ ವಿರೋಧ ವ್ಯಕ್ತವಾಗಿದೆ. ಪೊಲೀಸ್ ಇಲಾಖೆಯಂತೆ ಅಬಕಾರಿ ಇಲಾಖೆಯಲ್ಲೂ ವಾರದ ಕವಾಯಿತು (ಪೆರೇಡ್ ) ಇರಲಿದೆ. ಬೆಳಗ್ಗೆ 7 ಗಂಟೆಗೆ ಪರೇಡ್ ಇರುವುದರಿಂದ ಕಚೇರಿಗೆ ತೆರಳಿ ಆನ್‌ಲೈನ್ ಹಾಜರಾತಿ ಆಗಲು ಸಾಧ್ಯ ವಿಲ್ಲ. ರಾಜ್ಯದಲ್ಲಿ ಮದ್ಯದಂಗಡಿಗಳು ಬೆಳಗ್ಗೆ 9 ರಿಂದ ರಾತ್ರಿ 12 ಗಂಟೆವರೆಗೆ ಹಾಗೂ ಬೆಂಗಳೂರು ನಗರದಲ್ಲಿ ರಾತ್ರಿ 1 ಗಂಟೆವರೆಗೆ ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಕರ್ತವ್ಯ ಆಪ್‌ನಲ್ಲಿ ಸಂಜೆ 5.30ಕ್ಕೆ ಚೆಕ್‌ಔಟ್‌ನಲ್ಲಿ ಹಾಜರಾತಿ ಹಾಕಿ ಮನೆಗೆ ತೆರಳಿದರೆ ನಂತರ ನಡೆಯುವ ಅಬಕಾರಿ ಅಪರಾಧಗಳಿಗೆ ಹೊಣೆ ಯಾರಾಗಲಿದ್ದಾರೆ. ಪೊಲೀಸ್, ಕಾರಾಗೃಹ, ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆಯಂತೆ ಅಬಕಾರಿ ಇಲಾಖೆ ಅಗತ್ಯ ಇಲಾಖೆಯೆಂದು ಘೋಷಿಸಬೇಕು. ನಿಗದಿತ ಪಾಳಿ ನಿಗದಿಪಡಿಸಬೇಕು. ಸಂಜೆ ಹಾಜರಾತಿ ಹಾಕಿದ ಬಳಿಕ ಕೆಲಸ ಮಾಡಬೇಕಾ ಅಥವಾ ಬೇಡ ಎಂಬ ಗೊಂದಲ ಇದೆ.
ಪಿಡಿಒ ಎದುರಿಸುತ್ತಿರುವ ಸಮಸ್ಯೆಯೇನು?
ಸರ್ವರ್ ಸಮಸ್ಯೆಯಿಂದ ನಿಗದಿತ ಸಮಯಕ್ಕೆ ಹಾಜರಾತಿ ಮಾರ್ಕ್ ಮಾಡಲು ಸಾಧ್ಯವಾಗದೆ ಕಚೇರಿಯ ಇದ್ದರೂ ಆಪ್‌ನಲ್ಲಿ ‘ಅನುಪಸ್ಥಿತಿ’ ಎಂದು ದಾಖಲು ನರೇಗಾ ಯೋಜನೆ ಮೇಲೆ ಪರಿಣಾಮ, ಗ್ರಾಮ, ವಾರ್ಡ್‌ಸಭೆಗಳ ಆಯೋಜನೆಗೆ ತೊಡಕು, ಕ್ಷೇತ್ರ ಆಧಾರಿತ ಕೆಲಸದ ಸ್ವರೂಪಕ್ಕೆ ಸಂಪೂರ್ಣ ವ್ಯತಿರಿಕ್ತ ಸ್ವಚ್ಛ ಭಾರತ ಮಿಷನ್ ಮತ್ತು ಘನತಾಜ್ಯ ನಿರ್ವಹಣೆಗೆ ಹಿನ್ನೆಡೆ, ಹಣಕಾಸು ಯೋಜನೆ, ಜಲಜೀವನ್ ಮಿಷನ್ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಲು ಸಾಧ್ಯವಿಲ್ಲ. ಶಾಸಕರು, ಉಸ್ತುವಾರಿ ಸಚಿವರ ಪ್ರವಾಸದ ವೇಳೆ ಗೊಂದಲ ಉಂಟಾಗಲಿದೆ, ಇತರ ಇಲಾಖೆಗಳ ಸಮನ್ವಯ ಸಭೆಗಳಿಗೆ ತಡೆ ಉಂಟಾಗಲಿದೆ ಮತ್ತು ಯೋಜನಾ ಫಲಾನುಭವಿಗಳ ತುರ್ತು ಸ್ಥಳ ತಪಾಸಣೆಗೂ ಅಡ್ಡಿ.