ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಡಳಿತದ ನಿರ್ಲಕ್ಷ್ಯಕ್ಕೆ ಕುಸಿದ ಕುಮದ್ವತಿ ನದಿ ದಂಡೆ

ಇತಿಹಾಸವನ್ನು ಅಳಿಸಿ ಹಾಕುವುದು ಸುಲಭ. ಆದರೆ ಅದನ್ನು ಮತ್ತೆ ಕಟ್ಟುವುದು ಅಸಾಧ್ಯ. ರಟ್ಟಿಹಳ್ಳಿ ಯ ಹೃದಯ ಭಾಗದಲ್ಲಿ ಹರಿಯುವ ಕುಮದ್ವತಿ ನದಿ ಇದಕ್ಕೆ ಜೀವಂತ ಸಾಕ್ಷಿ. ಶತಮಾನಗಳ ಇತಿಹಾಸ ಹೊತ್ತ ಕದಂಬೇಶ್ವರ ದೇವಾಲಯದ ಪಕ್ಕದಲ್ಲಿರುವ ಕಲ್ಲಿನ ಮೆಟ್ಟಿಲುಗಳು ಕುಸಿದು ಬೀಳುತ್ತಿದ್ದು, ಈ ಪ್ರದೇಶದ ಪರಂಪರೆ ನಿಧಾನವಾಗಿ ಕಣ್ಮರೆಯಾಗುತ್ತಿದೆ.

ಮಲ್ಲೇಶ್ ಓಲೆಕಾರ್, ರಟ್ಟಿಹಳ್ಳಿ

ಇತಿಹಾಸವನ್ನು ಅಳಿಸಿ ಹಾಕುವುದು ಸುಲಭ. ಆದರೆ ಅದನ್ನು ಮತ್ತೆ ಕಟ್ಟುವುದು ಅಸಾಧ್ಯ. ರಟ್ಟಿಹಳ್ಳಿಯ ಹೃದಯ ಭಾಗದಲ್ಲಿ ಹರಿಯುವ ಕುಮದ್ವತಿ ನದಿ ಇದಕ್ಕೆ ಜೀವಂತ ಸಾಕ್ಷಿ. ಶತಮಾನ ಗಳ ಇತಿಹಾಸ ಹೊತ್ತ ಕದಂಬೇಶ್ವರ ದೇವಾಲಯದ ಪಕ್ಕದಲ್ಲಿರುವ ಕಲ್ಲಿನ ಮೆಟ್ಟಿಲುಗಳು ಕುಸಿದು ಬೀಳುತ್ತಿದ್ದು, ಈ ಪ್ರದೇಶದ ಪರಂಪರೆ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಒಮ್ಮೆ ಭಕ್ತರ ಸಂಚಾರ, ಮಕ್ಕಳ ಆಟ, ಯುವಕರ ಉತ್ಸಾಹ ಮತ್ತು ಹಿರಿಯರ ನೆನಪುಗಳಿಂದ ಜೀವಂತವಾಗಿದ್ದ ಈ ನದಿದಂಡೆ, ಇಂದು ಕಲ್ಲುಗಳ ರಾಶಿಯಾಗಿ ಮಾರ್ಪಟ್ಟಿದೆ. ಕುಸಿದ ಮೆಟ್ಟಿಲುಗಳು ಕೇವಲ ಕಲ್ಲು ಗಳಲ್ಲ; ಅವು ರಟ್ಟಿಹಳ್ಳಿಯ ಸಾಂಸ್ಕೃತಿಕ ಪರಂಪರೆ ಯೇ ಕುಸಿಯುತ್ತಿರುವ ಸಂಕೇತಗಳಾಗಿವೆ.

ರಟ್ಟಿಹಳ್ಳಿ ಜೀವನಾಡಿ: ಒಂದು ಕಾಲದಲ್ಲಿ ಜನಜೀವನದ ಕೇಂದ್ರಬಿಂದು ಆಗಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ನೂರಾರು ಜನರು ಇದೇ ಮೆಟ್ಟಿಲುಗಳ ಮೂಲಕ ನದಿಗೆ ಇಳಿಯುತ್ತಿದ್ದರು. ನಾಗರ ಪಂಚಮಿ ದಿನ ಹೊಳೆ ಪೂಜೆ, ಗಣೇಶ ಚತುರ್ಥಿಯ ಮೂರ್ತಿ ವಿಸರ್ಜನೆ, ಧಾರ್ಮಿಕ ಆಚರಣೆಗಳು, ಈಜು, ಬಟ್ಟೆ ಒಗೆಯುವುದು, ವಿಶ್ರಾಂತಿ, ಎಲ್ಲವೂ ಈ ನದಿ ದಂಡೆಯ ಸುತ್ತಲೇ ನಡೆಯುತ್ತಿತ್ತು. ಕುಮದ್ವತಿ ನದಿ ಕೇವಲ ನೀರಿನ ಹರಿವಾಗಿರಲಿಲ್ಲ, ಅದು ರಟ್ಟಿಹಳ್ಳಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಜೀವನಾಡಿಯಾಗಿತ್ತು.

ಇದನ್ನೂ ಓದಿ: Haveri Rain: ಹಾವೇರಿ ಜಿಲ್ಲೆಯಾದ್ಯಂತ ಉತ್ತಮ ಮಳೆ; ಬರದ ಆತಂಕದಲ್ಲಿದ್ದ ರೈತರ ಮುಖದಲ್ಲಿ ಸಂತಸ

ಇಂದು ಅಪಾಯದ ಅಂಚಿನಲ್ಲಿದೆ. ನಿರ್ವಹಣೆಯ ಕೊರತೆ, ಕಾಲದ ಹೊಡೆತ ಮತ್ತು ನಿರ್ಲಕ್ಷ್ಯ ದಿಂದ ಮೆಟ್ಟಿಲುಗಳು ಸಂಪೂರ್ಣ ಶಿಥಿಲಗೊಂಡಿವೆ. ಬೃಹತ್ ಕಲ್ಲುಗಳು ಕುಸಿದು ಬಿದ್ದು ನದಿಯತ್ತ ಇಳಿಯುವುದು ಅಪಾಯಕಾರಿಯಾಗಿದೆ. ಮಳೆಗಾಲದಲ್ಲಿ ಮತ್ತಷ್ಟು ಕುಸಿತ ಸಂಭವಿಸುವ ಭೀತಿ ಎದುರಾಗಿದೆ. ಇಂತಹ ಅಮೂಲ್ಯ ಪರಂಪರೆ ಕಣ್ಣೆದುರೇ ಹಾಳಾಗುತ್ತಿದ್ದರೂ, ಸಂಬಂಧಪಟ್ಟ ಇಲಾಖೆಗಳ ಮೌನ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರವಾಸಿ ತಾಣ ಯೋಗ: ಸರಿಯಾದ ಯೋಜನೆ, ಅಭಿವೃದ್ಧಿ ಮತ್ತು ಸಂರಕ್ಷಣೆ ಇದ್ದಿದ್ದರೆ, ಕದಂಬೇಶ್ವರ ದೇವಾಲಯ ಮತ್ತು ಕುಮದ್ವತಿ ನದಿ ದಂಡೆ ರಾಜ್ಯದ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿ ಬೆಳೆಯಬಹುದಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆ ಅವಕಾಶವೂ ಕೈ ತಪ್ಪಿ ಹೋಗಿದೆ. ಸ್ಥಳೀಯರ ಒತ್ತಾಯ: ಪಟ್ಟಣ ಪಂಚಾಯಿತಿ, ಜಿಲ್ಲಾ ಆಡಳಿತ, ಪುರಾತತ್ವ ಇಲಾಖೆ ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಬೇಕಿದೆ.

ಕುಸಿದ ಮೆಟ್ಟಿಲುಗಳ ಪುನರ್ನಿರ್ಮಾಣ, ನದಿದಂಡೆಯ ಸಮಗ್ರ ಅಭಿವೃದ್ಧಿ, ಸ್ವಚ್ಛತೆ ಮತ್ತು ಸುರಕ್ಷತಾ ಕ್ರಮಗಳು, ಪ್ರವಾಸೋದ್ಯಮಕ್ಕೆ ಪೂರಕ ಮೂಲಸೌಕರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ‘ಒಂದು ಕಾಲದಲ್ಲಿ ಇದು ನಮ್ಮ ಊರಿನ ಹೆಮ್ಮೆ. ಇಂದು ಅದರ ದುಸ್ಥಿತಿ ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಸೂಕ್ತ ನಿರ್ವಹಣೆ ಇದ್ದಿದ್ದರೆ ಇದು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಬಹುದಿತ್ತು‘ ಎಂದು ಅಂಬುಜಿ ರಾವ್ ಸುಬಾಸಪ್ಪ ಕಡೂರು ಬೇಸರ ವ್ಯಕ್ತಪಡಿಸಿದರು.