ಅಪರ್ಣಾ ಎ.ಎಸ್. ಬೆಂಗಳೂರು
ಕಳೆದ ವರ್ಷಕೆ ಹೋಲಿಸಿದರೆ ಈ ವರ್ಷ ದುಪ್ಪಟ್ಟು ನೀರು ಸಂಗ್ರಹ
ಕಾವೇರಿ ಕೊಳ್ಳದ ಜಲಾಶಯ ಭರ್ತಿಯತ್ತ, ಶೇ.77 ಟಿಎಂಸಿ ನೀರು
ದಾಖಲೆ ಸೃಷ್ಟಿಸಿರುವ ಪೂರ್ವ ಮುಂಗಾರು ಮಳೆಯ ಬೆನ್ನಲ್ಲೇ, ಮುಂಗಾರು ಮಳೆಯೂ ಕರ್ನಾಟಕ ದಲ್ಲಿ ಚುರುಕು ಪಡೆದಿದ್ದು, ರಾಜ್ಯದ ಹಲವು ಭಾಗದಲ್ಲಿ ಈಗಾಗಲೇ ಪ್ರವಾಹ ಪರಿಸ್ಥಿತಿ ನಿರ್ಮಾಣ ಗೊಂಡಿದೆ. ಈ ನಡುವೆ ಮುಂಗಾರು ಜೋರಾಗುವ ಮೊದಲೇ ರಾಜ್ಯದ ಬಹುತೇಕ ಜಲಾಶಯಗಳು ಶೇ.50ಕ್ಕಿಂತ ಹೆಚ್ಚು ಭರ್ತಿಯಾಗಿದ್ದು, ಈ ಮೂಲಕ ಡ್ಯಾಂಗಳಿಗೆ ಜೀವಕಳೆ ಬಂದಿದೆ.
ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿದ್ದರಿಂದ ರಾಜ್ಯದ ಹಲವು ಜಲಾಶಯಗಳು ಭರ್ತಿಯಾಗಿದ್ದವು. ಬೇಸಿಗೆಯಲ್ಲಿ ಖಾಲಿಯಾಗುವ ಹಂತಕ್ಕೆ ತಲುಪುವ ಮುನ್ನವೇ, ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರಾಜ್ಯದ ಪ್ರಮುಖ 14 ಜಲಾಶಯಗಳು ಶೇ.50ಕ್ಕಿಂತ ಹೆಚ್ಚು ಭರ್ತಿಯಾಗಿದ್ದು, ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ನೀರಿನ ಸಂಗ್ರಹ ದಲ್ಲಿಯೂ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿವೆ.
ಕಾವೇರಿ ನದಿಪಾತ್ರದಲ್ಲಿರುವ ನಾಲ್ಕು ಜಲಾಶಯಗಳಲ್ಲಿ ಈಗಾಗಲೇ 77 ಟಿಎಂಸಿ ನೀರು ಸಂಗ್ರಹ ವಿದ್ದರೆ, ಕೃಷ್ಣಾ ನದಿಪಾತ್ರದಲ್ಲಿ 169 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿ ದರೆ ಸರಿಸುಮಾರು ಎರಡರಷ್ಟು ನೀರು ಹೆಚ್ಚುವರಿಯಾಗಿ ಸಂಗ್ರಹವಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಏರಿಕೆಯಾಗದಿರುವುದರಿಂದ ಕೃಷ್ಣ ನದಿಪಾತ್ರದ ಜಲಾಶಯಗಳ ಒಳ ಹರಿವು ಕೊಂಚ ತಗ್ಗಿದೆ.
ಇದನ್ನೂ ಓದಿ: Cauvery Aarti : ಕಾವೇರಿ ಆರತಿ: ರೈತರ ತೀವ್ರ ವಿರೋಧದಿಂದ ಕಾಮಗಾರಿ ಸ್ಥಗಿತ
ಆದರೆ ಕಾವೇರಿ ನದಿ ಪಾತ್ರದಲ್ಲಿ ಈಗಾಗಲೇ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಒಳಹರಿವಿನ ಪ್ರಮಾಣದ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ. ಕರ್ನಾಟಕದಲ್ಲಿರುವ ಜಲಾಶಯ ಗಳಲ್ಲಿ ಸದ್ಯ 369 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ಸಮಯದಲ್ಲಿ 187 ಟಿಎಂಸಿ ನೀರು ಶೇಖರಣೆಯಾಗಿತ್ತು ಎಂದು ತಿಳಿದು ಬಂದಿತ್ತು.
ಕಳೆದ ವರ್ಷಕ್ಕಿಂತ ಮೊದಲೇ ಜಲಾಶಯ ಭರ್ತಿ?: ಮುಂಗಾರು ಆರಂಭಕ್ಕೂ ಮೊದಲೇ ಕರ್ನಾಟಕದಲ್ಲಿ ಭಾರಿ ಮಳೆಯಾಗಿದ್ದರಿಂದ ರಾಜ್ಯ ಬಹುತೇಕ ಜಲಾಶಯಗಳ ಒಳ ಹರಿವಿನ ಪ್ರಮಾಣ ಬಹುದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿತ್ತು. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಸೋಮವಾರದ ಅಂತ್ಯಕ್ಕೆ ಒಟ್ಟು 173422 ಕ್ಯುಸೆಕ್ ಒಳ ಹರಿವಿದ್ದರೆ, ಹೊರ ಹರಿವು 24775 ಕ್ಯುಸೆಕ್ ಆಗಿದೆ. ರಾಜ್ಯದೆಲ್ಲೆಡೆ ಇದೀಗ ಮುಂಗಾರು ತೀವ್ರಗೊಂಡಿರುವುದರಿಂದ ಮುಂದಿನ ವಾರದಲ್ಲಿ ನೀರಿನ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಪ್ರಸಕ್ತ ವರ್ಷ ಹಿಂದಿನ ವರ್ಷಗಳಿಗೆ ಹೋಲಿಸಿದರೆ ವೇಗವಾಗಿ ಜಲಾಶಯಗಳು ಭರ್ತಿಯಾಗಲಿವೆ ಎನ್ನುವ ಮಾತು ಗಳನ್ನು ತಜ್ಞರು ಹೇಳಿದ್ದಾರೆ.
ರಾಜ್ಯದಲ್ಲಿ ಹೆಚ್ಚಿದ ಅಂತರ್ಜಲ: ಉತ್ತಮ ಪೂರ್ವ ಮುಂಗಾರು ಮಳೆಯಿಂದಾಗಿ ಜಲಾಶಯ, ಕೆರೆಗಳಷ್ಟೇ ಅಲ್ಲದೇ ರಾಜ್ಯಾದ್ಯಂತ ಅಂತರ್ಜಲ ಮಟ್ಟದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಮಾರ್ಚ್ ಮತ್ತು ಮೇನಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದ್ದು, ಕೆಲವು ಜಿಲ್ಲೆ ಗಳಲ್ಲಿ ಹೆಚ್ಚುವರಿ ಮಳೆ ದಾಖಲಾಗಿದೆ.
ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ 117ಮಿ. ಮೀ ಮಳೆಯಾಗುತ್ತಿತ್ತು. ಆದರೆ ಈ ವರ್ಷ ಮಾತ್ರ 320 ಮಿ.ಮೀ ಮಳೆಯಾಗಿದೆ. ಪೂರ್ವ-ಮಾನ್ಸೂನ್ ಈ ವರ್ಷ ಉತ್ತಮವಾಗಿದ್ದು ರಾಜ್ಯದಲ್ಲಿ 200 ಮಿಮೀಗಿಂತ ಹೆಚ್ಚು ಮಳೆಯಾಗಿದೆ ಎಂದು ಹೇಳಿದೆ.
ಉತ್ತರ-ಕರ್ನಾಟಕ ಮತ್ತು ಇತರ ಸ್ಥಳಗಳಲ್ಲಿ ಹೆಚ್ಚುವರಿ ಮಳೆಯೊಂದಿಗೆ, ಜಲಾಶಯಗಳ ಜಲಾ ನಯನ ಪ್ರದೇಶಗಳು ಆರ್ದ್ರತೆಯಿಂದ ಕೂಡಿವೆ. ಮೇ ತಿಂಗಳಲ್ಲಿಯೇ ಅಣೆಕಟ್ಟುಗಳಿಗೆ ಉತ್ತಮ ಒಳಹರಿವು ಇದೆ. ಉತ್ತಮ ಮಳೆಯಿಂದಾಗಿ, ರೈತರು ಕೊಳವೆಬಾವಿಗಳನ್ನು ಕಡಿಮೆ ಬಳಸುತ್ತಿದ್ದಾರೆ, ಇದು ಅಂತರ್ಜಲ ಮರುಪೂರಣಕ್ಕೆ ಮತ್ತು ನೀರಿನ ಮಟ್ಟವನ್ನು ಹೆಚ್ಚಿಸಲು ಮತ್ತಷ್ಟು ಸಹಾಯ ಮಾಡಿದೆ.
ಅನೇಕ ಜಲಾಶಯಗಳು, ವಿಶೇಷವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿರುವವು, ಅವುಗಳ ಸಾಮರ್ಥ್ಯದ ಶೇ.65ಕ್ಕಿಂತ ಹೆಚ್ಚು ತಲುಪಿವೆ. ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ, 85 ತಾಲೂಕುಗಳಲ್ಲಿ ಅಂತರ್ಜಲ ಮಟ್ಟವು 4 ಮೀ., 53 ತಾಲೂಕುಗಳಲ್ಲಿ 2-4 ಮೀ. ಮತ್ತು 73 ತಾಲೂಕುಗಳಲ್ಲಿ 2 ಮೀ. ಹೆಚ್ಚಾಗಿದೆ.
ಪೂರ್ವ ಮಾನ್ಸೂನ್ ಮಳೆಯು ಅಂತರ್ಜಲ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೆಎಸ್ ಎನ್‌ಡಿಎಂಸಿ ಮಾಜಿ ನಿರ್ದೇಶಕ ಜಿ.ಎಸ್ ಶ್ರೀನಿವಾಸ ರೆಡ್ಡಿ ಹೇಳಿದರು.
ರಾಜ್ಯದೆಲ್ಲೆಡೆ ಕೆರೆಗಳೂ ಭರ್ತಿ
ಜಲಾಶಯಗಳ ರೀತಿಯಲ್ಲಿ ರಾಜ್ಯದೆಲ್ಲೆಡೆಯಿರುವ ಕೆರೆಗಳು ಭರ್ತಿಯಾಗುತ್ತಿದ್ದು, ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯ 3778 ಕೆರೆಗಳ ಪೈಕಿ ಶೇ.21ರಷ್ಟು ಕೆರೆಗಳು ಖಾಲಿಯಾಗಿದೆ. ಇನ್ನುಳಿದಂತೆ ಒಂದುವರೆ ಸಾವಿರಕ್ಕಿಂತ ಹೆಚ್ಚು ಕೆರೆಗಳು ಶೇ.50ರಷ್ಟು ಭರ್ತಿಯಾಗಿದ್ದು, ಶೇ.8ರಷ್ಟು ಕೆರೆಗಳು ಮಾತ್ರ ತುಂಬಿವೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸಂಪೂರ್ಣ ಭರ್ತಿ ಯಾಗಿರುವ ಕೆರೆಗಳ ಸಂಖ್ಯೆ ಏರಿಕೆಯಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.