ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಲಬಾರ್ ಕೇರಳ 2 ಒಕ್ಕೂಟಗಳಿಗೂ ಪ್ರತಿಷ್ಠೆಯ ಕಣ

8 ಗ್ರಾಮ ಪಂಚಾಯತ್‌ಗಳನ್ನೊಳಗೊಂಡ ಧರ್ಮಾಡಂ ವಿಧಾನಸಭಾ ಕ್ಷೇತ್ರದಲ್ಲಿ 2016ರ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ಅವರು ಸುಮಾರು 37,೦೦೦ ಅಂತರದಲ್ಲಿ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ದಿವಾಕರನ್ ಅವರನ್ನು ಸೋಲಿಸಿದರು, ಆ ಮೂಲಕ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿದ್ದ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಆಗ ಬಿಜೆಪಿಗೆ ಅಲ್ಲಿ ಒಟ್ಟು 12,000 ಮತಗಳಷ್ಟೇ ಬಂದಿದ್ದವು.

-ನರೇಂದ್ರ ಪಾರೆಕಟ್

ಕೇರಳದ ಉತ್ತರ ಭಾಗದ ನಾಲ್ಕು ಜಿಲ್ಲೆಗಳು ಮಲಬಾರ್ ಕೇರಳವೆಂದೇ ಜನಜನಿತ. ಮಂಜೇಶ್ವರ, ಕಾಸರಗೋಡು ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿದರೆ ಇಡೀ ಮಲಬಾರ್ ಕೇರಳ ಪ್ರದೇಶದಲ್ಲಿ ಯುಡಿಎಫ್ ಮತ್ತು ಎಲ್‌ಡಿಎಫ್ ಒಕ್ಕೂಟ ಗಳದ್ದೇ ಪ್ರತಿಷ್ಠೆಯ ಚುನಾವಣಾ ಸಮರ. ಎರಡೂ ಪಕ್ಷಗಳಿಗೂ ಈ ಸಲದ ಇಲ್ಲಿನ ಚುನಾವಣಾ ಕಣ ಬಹಳ ನಿರ್ಣಾಯಕ.

ಗಡಿನಾಡು ಪ್ರದೇಶವಾಗಿರುವ ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರ ವನ್ನು ಹೊರತುಪಡಿಸಿದರೆ ಕೇರಳ ವಿಧಾನಸಭಾ ಕ್ಷೇತ್ರಗಳ ಪೈಕಿ ಮಲಬಾರ್ ಪ್ರದೇಶದಲ್ಲಿ ಇದುವರೆಗೂ ಕೇರಳವನ್ನು ಆಳಿರುವ ಎಲ್.ಡಿ.ಎಫ್-ಯು.ಡಿ.ಎಫ್ ಒಕ್ಕೂಟಗಳೇ ಬಲಿಷ್ಠ, ಹಾಗಾಗಿ ಪ್ರತೀ ವಿಧಾನಸಭಾ ಚುನಾವಣೆಗಳಲ್ಲಿ ಅವುಗಳ ನಡುವೆಯೇ ನೇರವಾದ ಹಣಾಹಣಿ.

ಅವೆರಡೂ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿದರೆ ಕಾಸರಗೋಡು ಜಿಲ್ಲೆಯಲ್ಲಿ ಉದುಮ, ಕಾಞಂಗಾಡ್ ಮತ್ತು ತೃಕ್ಕರಿಪುರ್‌ನಲ್ಲಿ ಇದುವರೆಗೆ ಎಲ್‌ಡಿಎಫ್ ಮತ್ತು ಯುಡಿಎಫ್‌ನ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದಾರೆ, ಹಾಗಾಗಿ ಆ ಮೂರು ಕ್ಷೇತ್ರಗಳಲ್ಲಿ ನಡೆಯುತ್ತಿರುವುದು ಕೇರಳದ ಆಡಳಿತ-ವಿರೋಧ ಪಕ್ಷಗಳ ನಡುವಿನ ಪ್ರತಿಷ್ಠೆಯ ಕಾದಾಟ.

ಕರ್ನಾಟಕ ಗಡಿ ಪ್ರದೇಶವನ್ನು ಹೊಂದಿರುವ ಕಣ್ಣೂರು ಜಿಲ್ಲೆಯಲ್ಲಿರುವ ಹನ್ನೊಂದು ವಿಧಾನಸಭಾ ಕ್ಷೇತ್ರಗಳೆಂದರೆ ಪಯ್ಯನ್ನೂರ್, ಕಲ್ಲಶ್ಶೇರಿ, ತಳಿಪರಂಬ, ಇರಿಕ್ಕೂರ್, ಆಝಿಕ್ಕೋಡ್, ಕಣ್ಣೂರ್, ಧರ್ಮಾಂಡಂ, ತಲಶ್ಶೇರಿ, ಕೂತುಪರಂಬ, ಮಟ್ಟಾನ್ನೂರ್, ಪೆರವೂರ್.

ಈ ವಿಧಾನಸಭಾ ಕ್ಷೇತ್ರಗಳ ಪೈಕಿ ಧರ್ಮಾಡಂ ವಿಧಾನಸಭಾ ಕ್ಷೇತ್ರವು ಕಳೆದ ಹಲವಾರು ಚುನಾವಣೆಗಳಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ, ಕೇರಳದ ಈಗಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸ್ಪರ್ಧಿಸುವ ಕ್ಷೇತ್ರವೂ ಇದಾಗಿದೆ. ನಾಲ್ಕು ಬಾರಿ ಬೇರೆ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ಅವರು, ಈ ಕ್ಷೇತ್ರದಿಂದ 2016 ಮತ್ತು 2021ರ ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ ಗೆದ್ದು ಬಂದವರು.

ಇದನ್ನೂ ಓದಿ: Kerala Assembly Election 2026: ದೇವರ ನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚಿನ ಪ್ರಚಾರ; ಎಲ್‌ಡಿಎಫ್‌-ಯುಡಿಎಫ್‌ ವಿರುದ್ಧ ಗುಡುಗು

8 ಗ್ರಾಮ ಪಂಚಾಯತ್‌ಗಳನ್ನೊಳಗೊಂಡ ಧರ್ಮಾಡಂ ವಿಧಾನಸಭಾ ಕ್ಷೇತ್ರದಲ್ಲಿ 2016ರ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ಅವರು ಸುಮಾರು 37,೦೦೦ ಅಂತರದಲ್ಲಿ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ದಿವಾಕರನ್ ಅವರನ್ನು ಸೋಲಿಸಿದರು, ಆ ಮೂಲಕ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿದ್ದ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಆಗ ಬಿಜೆಪಿಗೆ ಅಲ್ಲಿ ಒಟ್ಟು 12,000 ಮತಗಳಷ್ಟೇ ಬಂದಿದ್ದವು.

2021ರ ಚುನಾವಣೆಯಲ್ಲಿ ಕಣ್ಣೂರು ಜಿಲ್ಲೆಯ ಅದೇ ಧರ್ಮಾಡಂ ಕ್ಷೇತ್ರದಲ್ಲೇ ಮತ್ತೆ ಪಿಣರಾಯಿ ಅವರು ಚುನಾವಣೆಗೆ ಸ್ಪರ್ಧಿಸಿದರು. ಆ ಸಲ ಯುಡಿಎಫ್‌ನ ರಘುನಾಥನ್ ವಿರುದ್ಧ 50 ಸಾವಿರ ಅಂತರದಲ್ಲಿ ಗೆದ್ದು ಮತ್ತೆ 2ನೇ ಬಾರಿ ಕೇರಳದ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು. ಆ ಸಲ ಅಲ್ಲಿ ಅಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಅಭ್ಯರ್ಥಿ ಸಿ.ಕೆ. ಪದ್ಮನಾಭನ್ ಅವರಿಗೆ 15,000 ಮತಗಳು ಬಿದ್ದವು.

2021ರ ಕೇರಳ ಚುನಾವಣೆಯಲ್ಲಿ ಕಣ್ಣೂರು ಜಿಲ್ಲೆಯಲ್ಲಿರುವ ಒಟ್ಟು 11 ಕ್ಷೇತ್ರಗಳ ಪೈಕಿ 8 ಕ್ಷೇತ್ರವನ್ನು ಗೆಲ್ಲಲು ಎಲ್‌ಡಿಎಫ್ ಯಶಸ್ವಿಯಾದರೆ, ಕೇವಲ 3 ಕ್ಷೇತ್ರಗಳ ಗೆಲುವಿನೊಂದಿಗೆ ಯುಡಿಎಫ್ ತೃಪ್ತಿ ಪಟ್ಟುಕೊಂಡಿತ್ತು.

ಈ ಸಲದ ಚುನಾವಣೆಯಲ್ಲಿ ಧರ್ಮಾಡಂ ಕ್ಷೇತ್ರದಲ್ಲಿ ಪಿಣರಾಯ್ ವಿಜಯನ್ ವಿರುದ್ಧ ಕಾಂಗ್ರೆಸ್ ಪಕ್ಷವು ವಿ.ಪಿ.ಅಬ್ದುಲ್ ರಶೀದ್ ಅವರನ್ನು ಕಣಕ್ಕಿಳಿಸಿದರೆ, ಬಿಜೆಪಿಯು ಕೆ. ರಂಜಿತ್ ಅವರನ್ನು ಕಣಕ್ಕಿಳಿಸಿದೆ. ಕಳೆದೆರಡು ಬಾರಿಯಂತೆ ಈ ಸಲವೂ ಪಿಣರಾಯಿ ವಿಜಯನ್ ಅವರಿಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಧರ್ಮಾಡಂನ ಮತದಾರರ ಮನದಾಳದ ಮಾತು.

3 ವಿಧಾಸಭಾ ಕ್ಷೇತ್ರಗಳ ವಯನಾಡ್: ಮಲಬಾರ್ ಕೇರಳದ ಮತ್ತೊಂದು ಜಿಲ್ಲೆ ಯಾಗಿರುವ ವಯನಾಡು ಕೇವಲ 3 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಕೇರಳದ ಪ್ರಮುಖ ಪ್ರವಾಸಿತಾಣ ಮತ್ತು ಗಿರಿಧಾಮವಾಗಿರುವ ವಯನಾಡ್ ಕರ್ನಾಟಕದ ಗಡಿ ಪ್ರದೇಶವೂ ಹೌದು. ಈ ಜಿಲ್ಲೆಯಲ್ಲಿ ದಕ್ಷಿಣ ಕೇರಳದಿಂದ ವಲಸಿಗರ ಪ್ರಮಾಣವೇ ಹೆಚ್ಚು. ಕ್ರಿಶ್ಚನ್ ಜನಾಂಗದ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

Screenshot_5 R

ವಯನಾಡ್ ಜಿಲ್ಲೆಯು ಕೇರಳದ ಯುಡಿಎಫ್ ಒಕ್ಕೂಟದ ಪ್ರಮುಖ ಅಂಗಪಕ್ಷವಾದ ಕಾಂಗ್ರೆಸ್‌ನ ಭದ್ರಕೋಟೆ. 2009ರಿಂದ ಇಲ್ಲಿಯವರೆಗೂ ಕಾಂಗ್ರೆಸ್ ಲೋಕಸಭಾ ಸದಸ್ಯರೇ ಈ ಜಿಲ್ಲೆಯನ್ನು ಸಂಸತ್‌ನಲ್ಲಿ ಪ್ರತಿನಿಧಿಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ 2019 ಮತ್ತು 2024ರ ಸಂಸತ್ ಚುನಾವಣೆ ಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದಿಂದಲೇ ಗೆದ್ದವರು. ಆದರೆ 2024ರಲ್ಲಿ ಅವರು 2 ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಕಾರಣ ವಯನಾಡ್ ಕ್ಷೇತ್ರದಲ್ಲಿ ಸಹೋದರಿ ಪ್ರಿಯಾಂಕ ಗಾಂಧಿಯನ್ನು ನಿಲ್ಲಿಸಿ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲ್ಲಿಸಿದರು. ವಯನಾಡ್ ಜಿಲ್ಲೆ ಯಲ್ಲಿರುವ ಮೂರು ವಿಧಾನಸಭಾ ಕ್ಷೇತ್ರಗಳೆಂದರೆ ಕಲ್ಪೆಟ್ಟಾ, ಸುಲ್ತಾನ್ ಬತ್ತೇರಿ ಮತ್ತು ಮಾನಂದವಾಡಿ.

ಕಲ್ಪೆಟ್ಟಾ ವಿಧಾನಸಭಾ ಕ್ಷೇತ್ರವು ಕಲ್ಪೆಟ್ಟಾ ನಗರಸಭೆ ಮತ್ತು 10 ಗ್ರಾಮ ಪಂಚಾಯತ್‌ ಗಳನ್ನು ಒಳಗೊಂಡಿದೆ. ವಿಧಾನಸಭಾ ಸದಸ್ಯರಾಗಿದ್ದ ಟಿ.ಸಿದ್ದಿಕ್ ಅವರನ್ನೇ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಮತ್ತೆ ಈ ಬಾರಿಯೂ ಕಣಕ್ಕಿಳಿಸಿದೆ. ಮಾನಂದವಾಡಿ ವಿಧಾನಸಭಾ ಕ್ಷೇತ್ರವು ಮಾನಂದವಾಡಿ ನಗರಸಭೆ ಅಲ್ಲದೇ ಆರು ಗ್ರಾಮ ಪಂಚಾಯತ್‌ಗಳನ್ನು ಒಳಗೊಂಡಿದೆ. ಆ ಕ್ಷೇತ್ರವನ್ನು ಎಲ್‌ಡಿಎಫ್‌ನ ಓ.ಆರ್. ಕೇಳು ಅವರು ಪ್ರತಿನಿಧಿಸುತ್ತಿದ್ದು, ಈ ಸಲವೂ ಅವರೇ ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಸುಲ್ತಾನ್ ಬತ್ತೇರಿ ವಿಧಾನಸಭಾ ಕ್ಷೇತ್ರವು ಸುಲ್ತಾನ್‌ಬತ್ತೇರಿ ನಗರಸಭೆ ಅಲ್ಲದೆ 6 ಗ್ರಾಮ ಪಂಚಾತ್‌ಗಳನ್ನು ಒಳಗೊಂಡಿದೆ.

ಕಳೆದ 3 ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವು ಇಲ್ಲಿ ಅಧಿಪತ್ಯ ಮೆರೆಯು ತ್ತಿದ್ದು, ಐ.ಸಿ.ಬಾಲಕೃಷ್ಣನ್ ಶಾಸಕರಾಗಿದ್ದು, ಈ ಸಲದ ಚುನಾವಣೆಯಲ್ಲೂ ಅವರು ಯುಡಿಎಫ್ ಅಭ್ಯರ್ಥಿಯಾಗಿ ಮತ್ತೆ ಚುನಾವಣಾ ಕಣದಲ್ಲಿದ್ದಾರೆ.

ಕೋಯಿಕ್ಕೋಡ್ (ಕೋಝಿಕ್ಕೋಡ್) ಹಣಾಹಣಿ: ಉತ್ತರ ಕೇರಳದ ಪ್ರಮುಖ ಜಿಲ್ಲೆ ಎನಿಸಿರುವ ಕೋಯಿಕ್ಕೋಡ್ ಜಿಲ್ಲೆಯು 13 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಈ ಜಿಲ್ಲೆಯಲ್ಲೂ ಬಹು ಹಿಂದಿನಿಂದಲೂ ಯುಡಿಎಫ್ ಮತ್ತು ಎಲ್‌ಡಿಎಫ್ ಮಧ್ಯೆಯೇ ಪ್ರಮುಖ ಸ್ಪರ್ಧೆ. ಬಾಲುಶ್ಶೇರಿ, ಬೇಪೂರ್, ಎಲತ್ತೂರ್, ಕೊಡುವಳ್ಳಿ, ಕೋಝಿಕ್ಕೋಡ್-ಉತ್ತರ, ಕೋಝಿಕ್ಕೋಡ್-ದಕ್ಷಿಣ, ಕುನ್ನಮಂಗಲಂ, ಕುಟ್ಯಾಡಿ, ನಾದಾಪುರಂ, ಪೇರಾಂಬ್ರ, ಕೊಯಿಲಾಂಡಿ, ತಿರುವಂಬಾಡಿ ಮತ್ತು ವಡಕೆರ ವಿಧಾನಸಭಾ ಕ್ಷೇತ್ರವು ಈ ಜಿಲ್ಲೆಯಲ್ಲಿದೆ.

ಕಳೆದ ಚುನಾವಣೆಯಲ್ಲಿ ಕೋಯಿಕ್ಕೋಡ್ ಜಿಲ್ಲೆಯಿಂದ 9 ಮಂದಿ ಎಲ್‌ಡಿಎಫ್ ಅಭ್ಯರ್ಥಿ ಗಳು ಆಯ್ಕೆಯಾದರೆ, 4 ಮಂದಿ ಯುಡಿಎಫ್ ಅಭ್ಯರ್ಥಿಗಳು ಶಾಸಕರಾಗಿದ್ದಾರೆ. ಕೊಚ್ಚಿನ್, ತಿರುವನಂತಪುರಂ ಹೊರತುಪಡಿಸಿದರೆ ಕೋಯಿಕ್ಕೋಡ್ ಪ್ರಮುಖ 3ನೇ ಪ್ರಮುಖ ನಗರ ಮತ್ತು ಮಲಬಾರ್ ಕೇರಳದ ಕೇಂದ್ರ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಇದೊಂದು ಉತ್ತಮ ವ್ಯಾಪಾರ ಕೇಂದ್ರವೂ ಹೌದು. ಹಿಂದೂ ಮತದಾರಲ್ಲದೆ, ಮುಸ್ಲಿಂ ಮತದಾರರು ಕೋಯಿಕ್ಕೋಡ್ ನಲ್ಲಿ ಬಹಳಷ್ಟಿದ್ದಾರೆ.

ಕೋಯಿಕ್ಕೋಡ್ ಜಿಲ್ಲೆಯಲ್ಲಿ ವಡಗರ ಮತ್ತು ಕೋಯಿಕ್ಕೋಡ್ ಸಂಸತ್ ಕ್ಷೇತ್ರಗಳಿದ್ದು 2014ರ ಸಂಸತ್ ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿತ್ತು. ಆದರೆ ವಿಧಾನಸಭಾ ಸಭಾ ಚುನಾವಣೆಗಳ ಸಂದರ್ಭದಲ್ಲಿ ಈ ಜಿಲ್ಲೆಯ ಮತದಾರರು ಎಡಪಕ್ಷಗಳಿಗಳಿಗೂ ಮನ್ನಣೆ ನೀಡುತ್ತಿದ್ದಾರೆಂಬುದು ವೈಶಿಷ್ಟ್ಯವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆ ಯಲ್ಲಿ ಬಿಜೆಪಿ ಶೇ.15 ಮತ ಗಳಿಸಿ ತನ್ನ ಛಾಪನ್ನೂ ಮೂಡಿಸಿತ್ತು. ಈ ಚುನಾವಣೆಯಲ್ಲೂ ಎಲ್‌ಡಿಎಫ್-ಯುಡಿಎಫ್ ಅಬ್ಬರದ ಪ್ರಚಾರದ ಮಧ್ಯೆ ಬಿಜೆಪಿಯೂ ನಿರಂತರ ಪ್ರಚಾರ ದಲ್ಲಿದೆ.

ಕೇರಳ ರಾಜ್ಯದ ಮತ್ತೊಂದು ಪ್ರಮುಖ ಮಲಬಾರ್ ಪ್ರದೇಶ ಎಂದು ಜನಜನಿತವಾಗಿರುವ ಮಲಪ್ಪುರಂ ಜಿಲ್ಲೆಯು ಕೇರಳದಲ್ಲೇ ಮುಸ್ಲಿಂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶವಾಗಿದೆ. ಒಟ್ಟು 16 ವಿಧಾನಸಭಾ ಕ್ಷೇತ್ರವನ್ನು ಮಲಪ್ಪುರಂ ಹೊಂದಿದೆ. ಅವುಗಳು ಯಾವುವೆಂದರೆ ಎರ್ನಾಡ್, ಕೊಂಡೊತ್ತಿ, ಕೋಟಕ್ಕಲ್, ಮಲಪ್ಪುರಂ, ಮಂಜೇರಿ, ಮಾನ್ಕಡ, ನಿಲಂಬೂರ್, ಪೆರಿಂತಲ್ಮಣ್ಣ, ಪೊನ್ನಾಣಿ, ಥಾನೂರ್, ತವನೂರ್, ತೀರೂರ್, ತೀರೂರಂಗಾಡಿ, ವಲ್ಲಿಕ್ಕುನ್ನು, ವೆಂಞರ, ವಾಂಡೂರ್.

ಮಲಪ್ಪುರಂ ಜಿಲ್ಲೆಯು ಮಲಪ್ಪುರಂ ಮತ್ತು ಮಂಜೇರಿ ಲೋಕಸಭಾ ಕ್ಷೇತ್ರವನ್ನು ಹೊಂದಿದ್ದು, ಯುಡಿಎಫ್ ಒಕ್ಕೂಟದ ಮುಸ್ಲಿಂಲೀಗ್ ಈ ಎರಡೂ ಲೋಕಸಭಾ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಹೊಂದಿದ್ದು ಕಳೆದ ಹಲವು ಚುನಾವಣೆಗಳಲ್ಲಿ ಗೆದ್ದು ವಿಜಯಪತಾಕೆ ಹಾರಿಸಿದೆ.

ಈ ಬಾರಿಯ ವಿಧಾನಸಭಾ ಚುನಾವಣೆ ತಮಗೆ ಪೂರಕ ಆಗಿರುವುದರಿಂದ ಮಲಬಾರ್‌ನ ಮೂರ‍್ನಾಲ್ಕು ಜಿಲ್ಲೆಗಳ ಸರಿಸುಮಾರು ನಲ್ವತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂವತ್ತು ಕ್ಷೇತ್ರಗಳಲ್ಲಿ ತಮ್ಮ ಒಕ್ಕೂಟ ಗೆದ್ದರೆ ಈ ಸಲ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯು ವುದು ಬಹಳ ಸುಲಭ ಎಂಬ ಆತ್ಮವಿಶ್ವಾಸ ಯುಡಿಎಫ್ ಮೈತ್ರಿಕೂಟದ್ದಾಗಿದೆ. ಆದರೆ ಮಲಬಾರ್ ಕೇರಳದಲ್ಲಿ ಕಳೆದ ಹತ್ತು ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿರುವುದರಿಂದ ಮಲಬಾರ್ ಪ್ರದೇಶ ಈ ಸಲ ತಮ್ಮ ಒಕ್ಕೂಟದ ಕೈ ಹಿಡಿಯಲಿದೆ ಎಂಬುದು ಆಡಳಿತಾರೂಢ ಎಡರಂಗ ಸರಕಾರದ ನಿರೀಕ್ಷೆ ಯಾಗಿದೆ. ಮಲಬಾರ್ ಪ್ರದೇಶದಲ್ಲಿ ಶೇಕಡವಾರು ಮತವನ್ನು ಸಾಧ್ಯವಾದಷ್ಟು ಹೆಚ್ಚಿಸುವುದಷ್ಟೇ ಬಿಜೆಪಿಯ ಸದ್ಯದ ಲೆಕ್ಕಾಚಾರ.

ಉದ್ಯೋಗಾಧಾರಿತ ಪ್ರದೇಶ

ಕೇರಳದ ಮಲಬಾರ್ ಪ್ರದೇಶ ಚಿಕ್ಕ ವ್ಯಾಪಾರ ತಾಣಗಳ ಕೇಂದ್ರವಾಗಿದೆ. ಆದರೆ ಇಲ್ಲಿನ ಸಾವಿರಾರು ಮಂದಿ ಈಗಲೂ ಗಲ್ಫ್ ಪ್ರದೇಶಗಳಲ್ಲಿ ಚಿಕ್ಕ ಪುಟ್ಟ ಉದ್ಯೋಗದಲ್ಲಿದ್ದಾರೆ. ವಿಶಾಲವಾದ ಅರಬ್ಬೀ ಸಮುದ್ರವನ್ನು ಹೊಂದಿರುವುದರಿಂದ ಮತ್ಸ್ಯೋದ್ಯವೂ ಇಲ್ಲಿನ ಒಂದು ಪ್ರಮುಖ ವೃತ್ತಿಯಾಗಿದೆ.

ಕರ್ನಾಟಕ-ಮಲಬಾರ್ ಸಂಪರ್ಕ

ಕೇರಳದ ಮಲಬಾರ್ ಪ್ರದೇಶವು ಕರ್ನಾಟಕದ ಹಲವು ಜಿಲ್ಲೆಗಳ ಗಡಿಪ್ರದೇಶಗಳಾಗಿವೆ. ಮಾಂಸಹಾರವೇ ಅಲ್ಲಿ ಹೆಚ್ಚಿರುವುದರಿಂದ ಕರ್ನಾಟಕದ ಮಂಡ್ಯ, ಮೈಸೂರು ಸೇರಿದಂತೆ ಹಲವೆಡೆ ಬೆಳೆಯುವ ವಿವಿಧ ತರಕಾರಿಗಳು ದಿನಾಲೂ ಕೇರಳದ ಮಲಬಾರ್ ಪ್ರದೇಶಗಳಿಗೆ ಸರಬರಾಜಾಗುತ್ತಿದ್ದು, ಕರ್ನಾಟಕಕ್ಕೆ ಉತ್ತಮ ಆದಾಯವನ್ನೂ ತಂದುಕೊಡುತ್ತಿದೆ.

ಮಲಬಾರ್: ಆಯುರ್ವೇದ ತಾಣ

ಕೇರಳದ ಪ್ರಮುಖ ಆಯರ್ವೇದ ಸಂಸ್ಥೆಗಳಿರುವುದು ಮಲಬಾರ್ ಪ್ರದೇಶದಲ್ಲೇ. ಅಲ್ಲಿನ ಪ್ರಖ್ಯಾತ ಕೋಟಕ್ಕಲ್ ಆಯುರ್ವೇದ ಸಂಸ್ಥೆಯ ನೂರಾರು ಶಾಖೆಗಳು ಕರ್ನಾಟಕದಲ್ಲಿ ಇರುವುದರಿಂದ ನಮ್ಮ ರಾಜ್ಯದ ಸಾವಿರಾರು ಮಂದಿ ಕೇರಳದ ಮಲಬಾರ್ ಪ್ರದೇಶಕ್ಕೆ ತೆರಳಿ ಆಯುರ್ವೇದ ಚಿಕಿತ್ಸೆ ಆಶ್ರಯಿಸಿಕೊಂಡಿದ್ದಾರೆ ಎಂಬುದು ಕೂಡಾ ಗಮನಾರ್ಹ.