ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮರಹಾನಕುಳಿ ಜ್ಞಾನ ಗಿರಿಗೆ ಶತಮಾನದ ಸಂಭ್ರಮ..

ಬ್ರಿಟಿಷರ ಆಳ್ವಿಕೆಯ ಸಂದರ್ಭ ಅಂದರೆ 1925 ರಲ್ಲಿ ಹೊಸಳ್ಳಿ ಆಂಜನೇಯ ದೇವಾಲಯದಲ್ಲಿ ಸ್ಥಾಪನೆಗೊಂಡ ಶಾಲೆ ನಂತರ ಹಿಂಡು ನಂಜುಂಡಪ್ಪನವರ ಮನೆ ಅಂಗಳಕ್ಕೆ ಬಂದು ತದ ನಂತರ ಮರಹಾನುಕುಳಿ ದೇವಸ್ಥಾನ ದಲ್ಲಿ ನಡೆದು ಕೆಲ ವರ್ಷಗಳ ನಂತರ ಸರಕಾರಿ ಕಟ್ಟಡ ದಲ್ಲಿ ಆರಂಭವಾಯಿತು.

ರಮೇಶ ಹೆಗಡೆ ಗುಂಡೂಮನೆ, ಸಾಗರ:

ಅಂದು ಊರಿನ ದೇಗುಲದ ಕಟ್ಟೆ ಮೇಲೆ ಆರಂಭವಾದ ಶಾಲೆ ಇಂದು ಜ್ಞಾನ ದೇಗುಲ !

ಇತ್ತೀಚಿನ ದಿನಗಳಲ್ಲಿ ಸರಕಾರಗಳೇ ಸರಕಾರಿ ಶಾಲೆಗಳ ಅಭಿವೃದ್ದಿಗೆ ಸಮುದಾಯ ಮತ್ತು ಹಳೆಯ ವಿದ್ಯಾರ್ಥಿಗಳು ಸಹಕರಿಸಬೇಕು ಎನ್ನುತ್ತಿದೆ. ಆದರೆ ಬಹು ಹಿಂದಿನಿಂದಲೇ ಗ್ರಾಮೀಣ ಪ್ರದೇಶಗಳ ಜನರು ಸರಕಾರಿ ಶಾಲೆಯನ್ನು ಅನ್ಯ ದೃಷ್ಟಿಯಿಂದ ನೋಡದೆ ‘ನಮ್ಮೂರ ಶಾಲೆ ‘ಎಂದೇ ಗಾಢವಾಗಿ ಪರಿಭಾವಿಸಿ ಅಭಿಮಾನದಿಂದ ಸಹಕರಿಸುತ್ತಾ ಬಂದಿದ್ದಾರೆ.

ಹೌದು. ಅಂತಹ ಶಾಲೆಗಳಲ್ಲಿ ಇದೀಗ ನೂರು ಸಂವತ್ಸರ ಕಳೆದ ಸಾಗರ ತಾಲೂಕಿನ ಮರಹಾನುಕುಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಜ್ಯದ ಅಪರೂಪದ ಶಾಲೆಗಳಲ್ಲಿ ಒಂದು.

ದೇಗುಲದಲ್ಲಿ ಆರಂಭ: ಒಂದು ಕಾಲದಲ್ಲಿ ದೇವಾಲಯದ ಕಟ್ಟೆ ಮೇಲೆ ಜ್ಞಾನದ ಗೆರೆ ಬರೆಯುವುದಕ್ಕೆ ಆರಂಭವಾದ ಶಾಲೆಗೆ, ನಂತರ ಕಟ್ಟಡದ ಹಿಡಿದು ಸೌಲಭ್ಯಗಳನ್ನು ಒದಗಿಸಿಕೊಡುವವರೆಗೆ ಇಲ್ಲಿ ಅಕ್ಷರ ಕಲಿತ ಹಳೆ ವಿದ್ಯಾರ್ಥಿಗಳೆ ಸಹಕರಿಸಿರುವುದು. ದೂರದ ಅಮೆರಿಕಾದಲ್ಲಿದ್ದರೂ ತನಗೆ ಅಕ್ಷರ ಕಲಿಸಿದ ಶಾಲೆ ಮರೆಯದೆ ಪ್ರತಿ ವರ್ಷ ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ಹಳೆಬರು, ಸ್ಥಳೀಯರು ತಮ್ಮೂರ ಶಾಲೆಯನ್ನು ಜ್ಞಾನಗಿರಿ ಎಂದೇ ಕರೆಯುತ್ತಾರೆ.

ಇದನ್ನೂ ಓದಿ: Shishir Hegde Column: ಜ್ಞಾನದಿಂದ ವಿಜ್ಞಾನದೆಡೆಗೆ ಹೊರಳುತ್ತಿದೆಯೇ ಸೈನ್ಸ್‌ ?

ಗಿರಿ ಹೆಗಡೆಯಿಂದ ಶಾಲೆ ದತ್ತು: ಬ್ರಿಟಿಷರ ಆಳ್ವಿಕೆಯ ಸಂದರ್ಭ ಅಂದರೆ 1925 ರಲ್ಲಿ ಹೊಸಳ್ಳಿ ಆಂಜನೇಯ ದೇವಾಲಯದಲ್ಲಿ ಸ್ಥಾಪನೆಗೊಂಡ ಶಾಲೆ ನಂತರ ಹಿಂಡು ನಂಜುಂಡಪ್ಪನವರ ಮನೆ ಅಂಗಳಕ್ಕೆ ಬಂದು ತದನಂತರ ಮರಹಾನುಕುಳಿ ದೇವಸ್ಥಾನ ದಲ್ಲಿ ನಡೆದು ಕೆಲ ವರ್ಷಗಳ ನಂತರ ಸರಕಾರಿ ಕಟ್ಟಡದಲ್ಲಿ ಆರಂಭವಾಯಿತು. ಈ ಶಾಲೆಯಲ್ಲಿ ಅಕ್ಷರ ಕಲಿತ ಪ್ರಸ್ತುತ ಅಮೆರಿಕಾದಲ್ಲಿರುವ ಗಿರಿ ಹೆಗಡೆ ಎನ್ನುವವರು 2004 ರಲ್ಲಿ ಈ ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಶಾಲೆಗೆ ಹೊಸ ಕಟ್ಟಡ ನಿರ್ಮಾಣ, ಮೂಲ ಸೌಲಭ್ಯಗಳನ್ನು ಒದಗಿಸಿದರು.

ಪ್ರಸ್ತುತ ಈ ಊರಿನಲ್ಲಿರುವ ಮನೆಗಳಿಗಿಂತ ಸುಂದರವಾಗಿರುವುದು ಈ ಶಾಲೆ. ಹೀಗೆ ಸುಂದರ ವಾಗಿಸಿರುವ ಇಲ್ಲಿನ ಸಮುದಾಯ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕೊರಗದೆ ಯಾವ ಪಟ್ಟಣದ ಶಾಲೆಗೂ ಕಡಿಮೆ ಇಲ್ಲದ ರೀತಿ ಸೌಲಭ್ಯ ಕಲ್ಪಿಸುತ್ತಲೇ ಬಂದಿ ದ್ದಾರೆ.

ಈಗ ಜ್ಞಾನ ದೇಗುಲ : ಶುದ್ದ ಹಳ್ಳಿಯ ಪರಿಸರದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನ ದೇಗುಲವಾಗಿ ಸಹಸ್ರಾರು ಮಕ್ಕಳಿಗೆ ಪ್ರಾಥಮಿಕ ಘಟ್ಟದ ಅಕ್ಷರ ಜ್ಞಾನ ನೀಡಿದ ಈ ಶಾಲೆಯಲ್ಲಿ ಓದಿದವರು ದೇಶ ವಿದೇಶಗಳಲ್ಲಿ ಗೌರವಯುತ ಉನ್ನತ ಹುದ್ದೆ ಅಲಂಕರಿಸಿ ದ್ದಾರೆ.

ಹಲವರು ಓದಿದ ಈ ಸರಕಾರಿ ಶಾಲೆಗೆ ಈಗ ಏ.4ರಂದು ಶತಮಾನದ ಸಂಭ್ರಮ. ಗುರು ನಮನ ಶೀರ್ಷಿಕೆಯ ಅಡಿಯಲ್ಲಿ ಈ ಶಾಲೆಯಲ್ಲಿ ಕರ್ತವ್ಯ ಮಾಡಿ ಅಕ್ಷರ ಕಲಿಸಿದ ಮತ್ತು ಅಕ್ಷರ ಕಲಿತು ಗೌರವಕ್ಕೆ ಪಾತ್ರರಾಗಿರುವವರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸುವ ಗುರು ವಂದನೆ, ಸಾಧಕ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಜತೆಗೆ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿವೆ.

ಶಾಲೆಗೆ ನೂರರ ಸಂಭ್ರಮ: ಸ್ಲೇಟು ಬಳಪವೂ ಇಲ್ಲದ ಆ ಕಾಲಘಟ್ಟದಲ್ಲಿ ಮಣ್ಣು, ಮರಳಿನ ಮೇಲೆ ಅಕ್ಷರಭಾಸ್ಯ ಮಾಡಿಸಿ ಬದುಕಿಗೆ ಜ್ಞಾನ ಜ್ಯೋತಿ ನೀಡಿದ ತಮ್ಮೂರ ಜ್ಞಾನಗಿರಿಗೆ ಈಗ ನೂರರ ಸಂಭ್ರಮ ಎನ್ನುವುದೇ ಈ ಊರಿನ ಹಿರಿಯರಿಗೆ ಸಂತಸ. ಒಂದೇ ಕುಟುಂಬದ ನಾಲ್ಕು ತಲೆಮಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಹೆಗ್ಗಳಿಕೆ ಹೊಂದಿರುವ ಈ ಶಾಲೆಗೆ ಏ.4ರಂದು ಶತಮಾನದ ಹಬ್ಬ.

ಅಂದಿನ ಏಕೈಕ ಶಾಲೆ: ಒಂದು ಕಾಲಕ್ಕೆ ಮರಹಾನುಕುಳಿ, ಮರಡುಮನೆ, ಗೋಟಗಾರು, ಅರೆಹದ, ಹೊಸಳ್ಳಿ, ಗೋರ್ಲಮಂಜಿ, ಬಟ್ಲಮನೆ, ಕೋಗೋಡು ಸುತ್ತಮುತ್ತಲ ಊರ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಕೆಗೆ ಇದ್ದ ಏಕೈಕ ಶಾಲೆಯಾಗಿದ್ದ ಈ ಶಾಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ ದಾಖಲೆ ಕೂಡ ಹೊಂದಿತ್ತು.

ಪ್ರಸ್ತುತ ಉತ್ತಮ ಕಟ್ಟಡ, ನೆಲ ಹಾಸು, ಅಂದದ ಚಿತ್ತಾರಗಳು, ಕೂರುವುದಕ್ಕೆ ಡೆಸ್ಕ್ ಸೌಲಭ್ಯ ಕಲ್ಪಿಸಿರುವ ಶಾಲೆಯಲ್ಲಿ, ಶತಮಾನೋತ್ಸವ ಸಮಿತಿ, ಶಾಲಾ ಸಮಿತಿ, ಹಳೆಯ ವಿದ್ಯಾರ್ಥಿ ಗಳು, ಊರ ಹಿರಿಯರು ಎಲ್ಲರೂ ಒಂದೇ ಮನಸ್ಸಿನಿಂದ ಹಳೆಯ ವೈಭವವನ್ನು ನೆನಪಿಸಿ ಕೊಳ್ಳುವ ಕಾರ್ಯಕ್ಕಾಗಿ ಸಜ್ಜುಗೊಳ್ಳುತ್ತಿದ್ದಾರೆ.

ಏ.4ರಂದು ಶಿಕ್ಷಣ ಸಚಿವರಿಂದ ಕಾರ್ಯಕ್ರಮಕ್ಕೆ ಚಾಲನೆ

ಏ.4ರಂದು ಶತಮನೋತ್ಸವ ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸ ಲಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಗುರುವಂದನೆ ನೀಡಿ ಸಾಧಕರಿಗೆ ಸನ್ಮಾನ ನೀಡಲಿ ದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಗೌರವ ಉಪಸ್ಥಿತಿ ಇರಲಿದೆ.

ವಿಶೇಷವಾಗಿ ಜಿ.ಎಸ್. ನಟೇಶ್ ಅವರಿಂದ ಮಂಕುತಿಮ್ಮನ ಕಗ್ಗ ಉಪನ್ಯಾಸ, ವಿಜಯಶ್ರಿ ನಟರಾಜ್ ಬೆಂಗಳೂರು ತಂಡದಿಂದ ಕಾವ್ಯ ಚಿತ್ರ, ಸ್ಥಳೀಯರ ಡೊಳ್ಳು ಕುಣಿತ, ಶಾಲಾ ಮಕ್ಕಳ ನೃತ್ಯ, ಲವಕುಶ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ ಎಂದು ಶತಮಾನೋ ತ್ಸವ ಸಮಿತಿ ಅಧ್ಯಕ್ಷ ಅರುಣ ಹೆಗಡೆ ಗೋಟಗಾರು ತಿಳಿಸಿದ್ದಾರೆ.