ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಪರ್ಯಾಯ ನಾಯಕತ್ವ ಚಿಂತನೆ
ಶಾಸಕ ರಿಜ್ವಾನ್ʼಗೆ ಮೆಚ್ಚುಗೆ
ಸಚವ ಜಮೀರ್ ನಡೆ ನಿಗೂಢ
ಸರಕಾರಕ್ಕೆ ಸವಾಲಾಗಿದ್ದ ಉಪ ಚುನಾವಣೆ ಫಲಿತಾಂಶ ರಾಜಕಾರಣದಲ್ಲಿ ಬದಲಾವಣೆ ತರುವುದೋ ಇಲ್ಲವೋ, ಆದರೆ, ರಾಜ್ಯ ಅಲ್ಪಸಂಖ್ಯಾತರ ನಾಯಕತ್ವದಲ್ಲಿ ಮಾತ್ರ ಬದಲಾವಣೆ ಗಾಳಿ ಬೀಸುವಂತೆ ಮಾಡಿದೆ. ಅದರಲ್ಲೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾ ವಣೆಯ ಆರಂಭದಿಂದ ಮತದಾನದ ಅಂತ್ಯದವರೆಗೂ ನಡೆದ ವಿದ್ಯಮಾನಗಳು ರಾಜ್ಯ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ನಾಯಕತ್ವ ಮತ್ತು ಪರ್ಯಾಯ ನಾಯಕತ್ವದ ಮೇಲೆ ಪರಿಣಾಮ ಬೀರಿದ್ದು, ಇದು ಫಲಿತಾಂಶದ ನಂತರ ಬೇರೆಯದೇ ರೂಪ ಪಡೆಯುವ ಸಾಧ್ಯತೆಯೂ ಇದೆ.
ಅದು ಎಷ್ಟರ ಮಟ್ಟಿಗೆ ಎಂದರೆ, ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಅಲ್ಪಸಂಖ್ಯಾತರ ನಾಯ ಕತ್ವದಲ್ಲಿ ಕೊಂಚ ಬದಲಾವಣೆಯಾಗುವ ಗಂಭೀರ ಚರ್ಚೆ ನಡೆದಿದೆ. ಒಂದೊಮ್ಮೆ ಸೋಲನುಭವಿಸಿದರೆ, ಸದ್ಯದ ಪಕ್ಷಾತೀತ ನಾಯಕರ ವರ್ಚಸ್ಸು ಇನ್ನೂ ಗಟ್ಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ವಸತಿ ಸಚಿವ ಜಮೀರ್ ಅಹಮ್ಮದ್ ಅವರಿಗೆ ಲಾಭವಾದರೂ ಅಚ್ಚರಿ ಇಲ್ಲ. ಹಾಗೆಯೇ ಚುನಾವಣೆ ವೇಳೆ ಕಾಂಗ್ರೆಸ್ ವಿರುದ್ಧ ಸಿಡಿದಿದ್ದ ಅಲ್ಪಸಂಖ್ಯಾತರ ಸಮಾಧಾನದ ಸೂತ್ರವಾಗಿದ್ದ ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್‌ಗೆ ಹಿನ್ನಡೆಯಾದರೂ ಪಕ್ಷದಲ್ಲಿ ಅವರ ವರ್ಚಸ್ಸು, ಭವಿಷ್ಯ ಗಟ್ಟಿಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಹಿರಿಯರು ಹೇಳಿದ್ದಾರೆ.
ಇದನ್ನೂ ಓದಿ: Minority marriage: ಅಲ್ಪಸಂಖ್ಯಾತರ ಸಾಮೂಹಿಕ ಮದುವೆ; ಪ್ರತಿ ಜೋಡಿಗೆ 50 ಸಾವಿರ ಮಂಜೂರು
ಹೀಗಾಗಿ ಸದ್ಯ ಮುಗಿದಿರುವ ಉಪಚುನಾವಣೆ ಸಂದರ್ಭದಲ್ಲಿ ತಲೆದೋರಿದ್ದ ಅಲ್ಪಸಂಖ್ಯಾತರ ನಡುವಿನ ಗೊಂದಲ, ಅವರಲ್ಲಿ ಕಾಂಗ್ರೆಸ್ ವಿರುದ್ಧ ಎದ್ದಿದ್ದ ಆಕ್ರೋಶಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿದರೆ ಹೇಗೆ ಎನ್ನುವ ಆತಂಕ ಕಾಂಗ್ರೆಸ್ ನಾಯಕರದ್ದಾಗಿದೆ ಎನ್ನಲಾಗಿದೆ.
ಈ ಮಧ್ಯೆ, ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್, ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೇ ಕಾಂಗ್ರೆಸ್ ಟಿಕೆಟ್ ನೀಡದಿದ್ದರೆ ಹೇಗೆ ಎಂದು ಎಚ್ಚರಿಸಿದ್ದು, ನಂತರದಲ್ಲಿ ಏನೂ ನಡೆದೇ ಇಲ್ಲ ಎನ್ನುವಂತೆ ಚುನಾವಣಾ ಕಣಕ್ಕೆ ಬಂದು ಪ್ರಚಾರದ ಶಾಸ್ತ್ರ ಮುಗಿಸಿದ್ದನ್ನು ಪಕ್ಷದ ನಾಯಕರು ಸೂಕ್ಷ್ಮವಾಗಿ ಗಮನಿಸಿದ್ದಾರೆ ಎನ್ನಲಾಗಿದೆ. ಅಂದರೆ, ಉಪಚುನಾವಣೆ ಆರಂಭದಲ್ಲಿ ಟಿಕೆಟ್ ರಾಜಕಾರಣಕ್ಕೆ ಚಾಲನೆ ನೀಡಿ ನಂತರ ಮೌನವಾದ ಜಮೀರ್‌ಗೆ ದಾವಣಗೆರೆ ಚುನಾವಣೆ ಲಾಭ ಮತ್ತು ನಷ್ಟ ಎರಡನ್ನೂ ತರುವ ಸಾಧ್ಯತೆ ಇದೆ. ಇಲ್ಲಿ ಕಾಂಗ್ರೆಸ್ ಗೆದ್ದರೆ, ಅದು ಪಕ್ಷದ ಗೆಲುವು ಮಾತ್ರ, ಒಂದೊಮ್ಮೆ ಸೋತರೆ ಅದು ಜರ್ಮೀ ಅವರ ಗೆಲುವು ಎನ್ನುವಂತೆ ಬಿಂಬಿತವಾಗುವ ಚರ್ಚೆಗಳು ನಡೆದಿವೆ. ಆದರೆ, ಇದು ಅವರ ನಾಯಕತ್ವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದೇ ರೀತಿ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಹಿರಿಯರಾದ ಸಲೀಂ ಅಹಮ್ಮದ್ ತಂಡಕ್ಕೆ ವ್ಯತಿರಿಕ್ತ ಪರಿಣಾಮವಾಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಅಂದರೆ ಕಾಂಗ್ರೆಸ್ ಗೆದ್ದರೆ, ಅದು ಜಮೀರ್ ಅವರಿಲ್ಲದ ಪರ್ಯಾಯ ನಾಯಕತ್ವ ತಂದುಕೊಟ್ಟ ಗೆಲುವಾಗುತ್ತದೆ. ಒಂದೊಮ್ಮೆ ಪಕ್ಷ ಸೋತರೆ, ಅದು ಪಕ್ಷಾತೀತ ನಾಯಕತ್ವದ ಗೆಲುವಾಗುತ್ತದೆ. ಇದರಿಂದ ಕಾಂಗ್ರೆಸ್‌ನಲ್ಲಿ ಅಲ್ಪ ಸಂಖ್ಯಾತರ ನಾಯಕತ್ವ ಸದ್ಯ ಕವಲು ದಾರಿಯಲಿ ಸಾಗುವ ಸೂಚನೆಗಳು ವ್ಯಕ್ತವಾಗುತ್ತಿದೆ ಎಂಬ ವಿಶ್ಲೇಷಣೆ ಕಾಂಗ್ರೆಸ್ ನಾಯಕರ ವಲಯದಲ್ಲಿದೆ.
ಏನಾಗಬೇಕಿತ್ತು, ಏನಾಯ್ತು?
ದಾವಣಗೆರೆಯಲ್ಲಿ ಟಿಕೆಟ್ ಕೈ ತಪ್ಪುತ್ತಿದ್ದಂತೆ ಕ್ಷೇತ್ರದಲ್ಲಿದ್ದ 80 ಸಾವಿರಕ್ಕೂ ಹೆಚ್ಚಿನ ಅಲ್ಪಸಂಖ್ಯಾತ ಮತದಾರರಲ್ಲಿ ಬಹುತೇಕ ಮಂದಿ ಆಕ್ರೋಶಗೊಂಡಿದ್ದರು. ಇದನ್ನು ಸಮಾಧಾನಗೊಳಿಸಲು ಸಚಿವ ಜಮೀರ್ ಅವರು ಬರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ನಂತರ ಪಕ್ಷದ ನಾಯಕರೆ ಸೇರಿದ್ದ ನಾಮ ಪತ್ರ ಸಲ್ಲಿಕೆಗಾದರೂ ಸಿಗುತ್ತಾರೆ ಎನ್ನುವ ಮಾತಿತ್ತು. ಆದರೆ ಎಲ್ಲ ನಿರೀಕ್ಷೆಗಳು ಹುಸಿಯಾಗಿತ್ತು.
ಕೇರಳ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಜಮೀರ್, ಪಕ್ಷದ ನಾಯಕರ ಆಹ್ವಾನದ ನಂತರವೂ ಕ್ಷೇತ್ರಕ್ಕೆ ಬರಲಿಲ್ಲ. ಅಷ್ಟೊತ್ತಿಗಾಗಲೇ ಕ್ಷೇತ್ರದಲ್ಲಿ ಪರ್ಯಾಯ ನಾಯಕತ್ವದ ಸಿದ್ಧತೆ ನಡೆದಿತ್ತು. ಅಂದರೆ ಪಕ್ಷದ ನಾಯಕರು ಶಾಸಕ ರಿಜ್ವಾನ್ ಅರ್ಷದ್ ಅವರಿಗೆ ವಿಶೇಷ ಜವಾಬ್ದಾರಿ ನೀಡಿ, ಕ್ಷೇತ್ರದಲ್ಲಿ ಚುನಾವಣೆ ಮುಗಿಯುವವರೆಗೂ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದರು.
ಇಷ್ಟರ ಮೇಲೂ ಕ್ಷೇತ್ರಕ್ಕೆ ಬಾರದ ಜಮೀರ್ ವಿರುದ್ಧ ಪಕ್ಷದ ಮುಖಂಡರಾದ ಸಲೀಂ ಅಹಮ್ಮದ್, ಎನ್.ಎ.ಹ್ಯಾರೀಸ್, ರಿಜ್ವಾನ್ ಅರ್ಷದ್ ತಂಡದಿಂದ ಪಕ್ಷದ ನಾಯಕರಿಗೆ ದೂರು ಸಲ್ಲಿಕೆಯಾಗಿತ್ತು ಎನ್ನಲಾಗಿದೆ. ನಂತರ ಪಕ್ಷದ ಹೈಗಮಾಂಡ್‌ಗೂ ಮಾಹಿತಿ ಹೋಗಿತ್ತು. ನಂತರ ಕ್ಷೇತ್ರಕ್ಕೆ ಬಂದ ಜಮೀರ್ ಅವರು, ಮಾಧ್ಯಮದ ಮೂಲಕ ಹಾಜರಾತಿ ಸಂದೇಶ ನೀಡಿದ್ದರು. ಆದರೆ ಪ್ರಚಾರದಲ್ಲಿ ತೊಡಗಿಸಿಕೊಳ್ಳದೆ, 80 ಸಾವಿರ ಮತದಾರರಿರುವ ತಮ್ಮ ಸಮುದಾಯಕ್ಕೆ ಟಿಕೆಟ್ ಕೊಡಿಸಲಾಗಲಿಲ್ಲ ಎನ್ನುವ ಬೇಸರವನ್ನು ದಾಖಲಿಸಿದ್ದರು.
ಮತದಾನ ಪ್ರಮಾಣ ತಂದ ಆತಂಕ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಳೆದ ಬಾರಿ ಶೇ.69ರಷ್ಟು ಮತದಾನ ನಡೆದಿತ್ತು. ಆದರೆ ಈ ಬಾರಿ ಶೇ.63ರಷ್ಟು ಮತದಾನವಾಗಿದೆ. ಮತದಾನದ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಬಿಜೆಪಿಯಲ್ಲಿ ವಿಶ್ವಾಸ ಮೂಡಿಸಿದ್ದು, ಕಾಂಗ್ರೆಸ್‌ನಲ್ಲಿ ಆತಂಕ ತರುವಂತೆ ಮಾಡಿದೆ. ಕಾರಣ ಕಳೆದ ಬಾರಿ 84,298 ಮತಗಳನ್ನು ಗಳಿಸಿದ್ದ ಕಾಂಗ್ರೆಸ್, ಈ ಬಾರಿ ಇನ್ನೂ ಹೆಚ್ಚಿನ ಮತ ಗಳಿಸುವ ವಿಶ್ವಾಸ ಇದ್ದಂತೆ ಕಾಣುತ್ತಿಲ್ಲ. ಹಾಗೆಯೇ ಕಳೆದ ಬಾರಿ 56410 ಮತಗಳನ್ನು ಪಡೆದಿದ್ದ ಬಿಜೆಪಿಯು ಈ ಬಾರಿ ಇನ್ನೂ ಹೆಚ್ಚಿನ ಮತಗಳನ್ನು ಗಳಿಸುವ ವಿಶ್ವಾಸದಲ್ಲಿದೆ. ಏಕೆಂದರೆ, ಕಣದಲ್ಲಿದ್ದ ಎಸ್‌ಡಿಪಿಐ ಅಭ್ಯರ್ಥಿ ಸೇರಿದಂತೆ ಅನೇಕ ಅಲ್ಪಸಂಖ್ಯಾತರ ಅಭ್ಯರ್ಥಿಗಳು ಈ ಬಾರಿ ಹೆಚ್ಚಿನ ಮತ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂದರೆ ಕಾಂಗ್ರೆಸ್ ಪಾಲಾಗುತ್ತಿದ್ದ ಅಲ್ಪಸಂಖ್ಯಾತರ ಮತಗಳು, ಆ ಸಮುದಾ ಯದ ನಾಯಕ ಜಮೀರ್ ಅವರ ಸಕಾಲಿಕ ಪ್ರಚಾರ ಮತ್ತು ಸಮಾಧಾನಗಳ ಕಾರ್ಯ ತಂತ್ರಗಳಿಲ್ಲದೆ ಹರಿದು ಹಂಚಿಕೆ ಹೋಗಿರಬಹುದೇ ಎನ್ನುವ ಆತಂಕ ಕಾಂಗ್ರೆಸ್‌ನಲ್ಲಿದೆ. ಇದೇನಾದರೂ ಚುನಾವಣಾ ಫಲಿತಾಂಶದಲ್ಲಿ ವ್ಯಕ್ತವಾಗಿದ್ದೇಯಾದರೆ ಪಕ್ಷದಲ್ಲಿ ಜಮೀರ್ ಅವರಿಗೆ ಇರುವ ಸ್ಥಾನಕ್ಕೆ ಕೊಂಚ ಕುತ್ತು ತರುವ ಆತಂಕವೂ ಇದೆ ಎನ್ನಲಾಗಿದೆ.