ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KSIC: ದೂರವಾದ ಮೈಸೂರು ರೇಷ್ಮೆ ಸೀರೆ ಉದ್ಯಮ ಆತಂಕ

ಮೈಸೂರು ರೇಷ್ಮೆ ಹೆಸರಿನಲ್ಲಿ ಮೈಸೂರಿನಲ್ಲಿ ಕುತಂತ್ರಿಗಳ ದೊಡ್ಡ ಜಾಲವೊಂದು ಕೆಲಸ ಮಾಡುತ್ತಿದೆ. ಅದರ ಪರಿಣಾವೇ ಮೈಸೂರಿನ ಕೆಲ ಖಾಸಗಿ ಸೀರೆ ಮಳಿಗೆಗಳ ಮೇಲೆ ಕೆಎಸ್‌ ಐಸಿ ಪದ ಬಳಕೆಯ ದುರುಪಯೋಗ ಆಗಿದೆ. ಮೈಸೂರು ರೇಷ್ಮೆ ಸೀರೆ ಮಾದರಿ ಹೋಲುವ ಚೀನಾ ರೇಷ್ಮೆ ಸೀರೆಗಳನ್ನೇ ಮೈಸೂರು ರೇಷ್ಮೆ ಸೇರೆ ಎಂದು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ, ಆದರೆ ಇದನ್ನು ಪ್ರಶ್ನಿಸಬೇಕಾದ ಮಂದಿ ಜಾಣ ಕುರುಡರಾಗಿರುವುದು ನಿಜಕ್ಕೂ ಕಳವಳಕಾರಿ ಸಂಗತಿ.

ಕೆ.ಜೆ.ಲೋಕೇಶ್ ಬಾಬು, ಮೈಸೂರು

ತಿ.ನರಸೀಪುರದಲ್ಲಿನ ರೇಷ್ಮೆ ನೂಲು ತೆಗೆಯುವ ಘಟಕದ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣದ ಯೋಜನೆ ಇಲ್ಲ

ಭೌಗೋಳಿಕವಾಗಿ ಖ್ಯಾತಿಯುಳ್ಳ ಮೈಸೂರು ರೇಷ್ಮೆ ಎಂಬ ಶತಮಾನದ ಉದ್ಯಮಕ್ಕೇ ಕೊಡಲಿಯೇಟು ನೀಡುವ ಮಾಫಿಯಾ ಕರಾಮತ್ತು ಬಂದೊದಗಿದರೂ, ಇದೀಗ ಆ ಚಿಂತೆ ಸ್ವಲ್ಪ ಮಟ್ಟಿಗೆ ದೂರವಾದಂತಿದೆ.

ಚೀನಿ ರೇಷ್ಮೆಯ ಮಾರುಕಟ್ಟೆ ವಿಸ್ತರಣೆಗಾಗಿ ತೆರೆಮರೆಯಲ್ಲಿ ನಡೆಯುತ್ತಿರುವ ಕುತಂತ್ರದ ಭಾಗವಾಗಿ ಕಾಣದ ಕೈಗಳು ಕೆಲಸ ಮಾಡಿರುವ ಪರಿಣಾಮವಾಗಿಯೇ ತಿ.ನರಸೀಪುರದಲ್ಲಿನ ರೇಷ್ಮೆ ನೂಲು ತೆಗೆಯುವ ಘಟಕದ ಆವರಣ ದಲ್ಲಿ ಕ್ರೀಡಾಂಗಣ ನಿರ್ಮಾಣವೆಂಬ ಬೃಹನ್ನಾಟಕ ಮುನ್ನೆಲೆಗೆ ಬಂದಿತ್ತು. ಆದರೆ ಅದೃಷ್ಟ ವಶಾತ್ ಮೈಸೂರಿಗರು ಮೈಮರೆಯ ಲಿಲ್ಲ, ಸತತ ಹೋರಾಟ ನಡೆಸಿದರು. ಅದರ ಪರಿಣಾಮವಾಗಿ ಸರಕಾರವೇ ಈಗ ನಡೆಯು ತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಕ್ರೀಡಾಂಗಣ ಯೋಜನೆ ಅನುಷ್ಠಾನ ಇಲ್ಲ ಎಂದು ಘೋಷಿಸಿತು.

ಇದು ಮೈಸೂರಿಗರ ಪಾಲಿಗೆ ಒಂದು ಐತಿಹಾಸಿಕ ಜಯವೇ ಸರಿ. ಆದರೆ ರಾಜ್ಯ ಸರಕಾರ ಅಽವೇಶನದಲ್ಲಿ ತನ್ನ ನಿಲುವು ಘೋಷಿಸಿದೆ ಎಂದ ಮಾತ್ರಕ್ಕೆ ಮೈಮರೆಯುವಂತಿಲ್ಲ ಎಂಬುದು ಹೋರಾಟಗಾರರಿಗೆ ತಿಳಿಯದ ವಿಚಾರವೇನಲ್ಲ.

ಇದನ್ನೂ ಓದಿ: Mysore silk saree: ಮೈಸೂರು ರೇಷ್ಮೆ ಸೀರೆಗಳಿಗೆ ಭಾರಿ ಡಿಮ್ಯಾಂಡ್‌, ಆನ್‌ಲೈನ್‌ ಮಾರಾಟಕ್ಕೆ ಬ್ರೇಕ್‌

ಆದ ಕಾರಣ ಹೋರಾಟವನ್ನೂ ಸದಾಕಾಲವೂ ಜೀವಂತವಾಗಿರಿಸುವುದರ ಬಗ್ಗೆ ಚಿಂತನೆ ನಡೆದಿದೆ, ಏಕೆಂದರೆ ಇದರ ಹಿಂದಿರುವುದು ವಿದೇಶಿ ವ್ಯವಹಾರ ಎಂಬುವುದು ಬಟ್ಟಾ ಬಯಲಾಗಿದೆ, ಆದರೆ ಅದಕ್ಕೆ ಬೆಂಬಲವಾಗಿ ನಿಂತಿರುವುದು ಉದ್ಯಮಿಗಳ ಹೆಸರಿನ ಭೂಗತಲೋಕ ಎಂಬುವುದೂ ಖಾತ್ರಿಯಾಗಿದೆ.

ಮೈಸೂರು ರೇಷ್ಮೆ ಹೆಸರಿನಲ್ಲಿ ಮೈಸೂರಿನಲ್ಲಿ ಕುತಂತ್ರಿಗಳ ದೊಡ್ಡ ಜಾಲವೊಂದು ಕೆಲಸ ಮಾಡುತ್ತಿದೆ. ಅದರ ಪರಿಣಾವೇ ಮೈಸೂರಿನ ಕೆಲ ಖಾಸಗಿ ಸೀರೆ ಮಳಿಗೆಗಳ ಮೇಲೆ ಕೆಎಸ್‌ ಐಸಿ ಪದ ಬಳಕೆಯ ದುರುಪಯೋಗ ಆಗಿದೆ. ಮೈಸೂರು ರೇಷ್ಮೆ ಸೀರೆ ಮಾದರಿ ಹೋಲುವ ಚೀನಾ ರೇಷ್ಮೆ ಸೀರೆಗಳನ್ನೇ ಮೈಸೂರು ರೇಷ್ಮೆ ಸೇರೆ ಎಂದು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ, ಆದರೆ ಇದನ್ನು ಪ್ರಶ್ನಿಸಬೇಕಾದ ಮಂದಿ ಜಾಣ ಕುರುಡರಾಗಿರುವುದು ನಿಜಕ್ಕೂ ಕಳವಳಕಾರಿ ಸಂಗತಿ.

ಶತಮಾನದ ಇತಿಹಾಸ ಹೊಂದಿರುವ ಕೆಎಸ್ಐಸಿ ಅನ್ನು ದಿನಕಳೆದಂತೆ ಇತಿಹಾಸದ ಪುಟಗಳಲ್ಲಿ ಸೇರಿಸಲು ನಾಮುಂದು, ತಾಮುಂದು ಎಂಬ ಒಂದಷ್ಟು ಮಂದಿಯ ನಡುವೆ ಪೈಪೋಟಿ ನಡೆದಿದೆ, ಹಾಗಾಗಿ ಅಂತವರ ಪಾಲಿಗೆ ಈ ಒಂದು ಖ್ಯಾತ ಉದ್ಯಮ ಬೇಡ ವಾಗಿದೆ.

ಇದೆಲ್ಲದರ ಪರಿಣಾಮವೇ 114 ವರ್ಷಗಳ ಇತಿಹಾಸ ಹೊಂದಿರುವ, ಬೇಡಿಕೆಗೆ ಅನುಗುಣ ವಾಗಿ ಗುಣಮಟ್ಟದ ರೇಷ್ಮೆ ನೂಲು ಪೂರೈಸುತ್ತಾ ಬಂದಿರುವ ಈ ರೇಷ್ಮೆ ನೂಲು ತಯಾರಿಕಾ ಘಟಕಕ್ಕೆ ಅಂತವರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

ತಿ.ನರಸೀಪುರದ ರೇಷ್ಮೆ ನೂಲು ತಯಾರಿಕಾ ಘಟಕ 13.11 ಎಕರೆ ವಿಸ್ತೀರ್ಣ ಹೊಂದಿದ್ದು, ಅದರಲ್ಲಿ ಆರು ಎಕರೆ ಜಾಗದಲ್ಲಿ ನೂಲು ತಯಾರಿಕಾ ಘಟಕದ ಕಟ್ಟಡವಿದೆ. ಇನ್ನು ಉಳಿದ 7 ಎಕರೆ ಜಾಗದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ 5.08 ಎಕರೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸುಪರ್ದಿಗೆ ನೀಡಲಾಗಿದ್ದು, ಇದು ನೂಲು ತಯಾರಿಕಾ ಘಟಕ ಮುಚ್ಚುವ ಹುನ್ನಾರದ ಒಂದು ಭಾಗವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಇದೇ ವೇಳೆ ಇದರ ಹಿಂದಿನ ಒಳಸುಳಿ ಅರಿತ ಹೋರಾಟಗಾರರು ಪಟ್ಟುಬಿಡದೆ ನಡೆಸಿದ ಹೋರಾಟ ಯಶಸ್ವಿಯಾಯಿತು. ಇಲ್ಲವಾದರೆ ದಿನಕಳೆದಂತೆ ಇಡೀ ಘಟಕವನ್ನೇ ನೆಲಸಮ ಮಾಡುವ ಹುನ್ನಾರ ನಡೆದಿತ್ತು ಎಂಬುದರ ಬಗ್ಗೆ ಮೈಸೂರಿನ ರೇಷ್ಮೆ ಸೀರೆ ಉದ್ಯಮ ವಲಯದಲ್ಲಿ ಚರ್ಚೆ ನಡೆದಿದೆ.

ಘಟಕದ ಹಿನ್ನೆಲೆ: ನೂಲು ತೆಗೆಯುವ ಕಾರ್ಖಾನೆಯನ್ನು 1912ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆರ್ಯ ಸ್ಥಾಪಿಸಿದರು. ಕಾರ್ಖಾನೆಯು ಒಟ್ಟು 12.32 ಎಕರೆ ಜಾಗವನ್ನು ಹೊಂದಿದ್ದು, ಸುಂದರ ಪರಿಸರದಲ್ಲಿದೆ. ಕಾರ್ಖಾನೆ ಆವರಣದಲ್ಲಿ 834 ಮರಗಳಿದ್ದು, ಪಟ್ಟಣಕ್ಕೂ ಆರೋಗ್ಯಕರ ವಾತಾವರಣ ನೀಡಿವೆ.

114 ವರ್ಷಗಳಿಂದ ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ರೇಷ್ಮೆ ನೂಲು ಪೂರೈಸುತ್ತಾ ಘಟಕ ನಡೆದುಕೊಂಡು ಬಂದಿದೆ. ಶತಮಾನಕ್ಕೂ ಮಿಗಿಲಾದ ಇತಿಹಾಸ ಹೊಂದಿರುವ ಈ ರೇಷ್ಮೆ ನೂಲು ತಯಾರಿಕಾ ಘಟಕದ ಮೇಲೆ ಹಲವಾರು ದಿನ ಕರಿನೆರಳು ಮೂಡಿತ್ತು. ಆದರೆ ಸರಕಾರವೇ ಈ ಕುರಿತಾಗಿ ಪ್ರಸಕ್ತ ನಡೆಯುತ್ತಿರುವ ಅಧಿವೇಶನದ ಸಂದರ್ಭದಲ್ಲೇ ತನ್ನ ಸ್ಪಷ್ಟ ನಿಲುವನ್ನು ತಳೆದಿದ್ದ ಕಾರಣ ಮೈಸೂರು ರೇಷ್ಮೆ ಸೀರೆ ಅಭಿಮಾನಿಗಳಲ್ಲಿದ್ದ ಕಾರ್ಮೋಡ ಕರಗಿದಂತಾಯಿತು.

ಮೈಸೂರು ರೇಷ್ಮೆ ಸೀರೆಗೆ ಅಭಾವ

ಮೈಸೂರು ರೇಷ್ಮೆ ಸೀರೆ ಎಂಬುದು ಬಹುತೇಕ ಮಹಿಳೆಯರ ಪಾಲಿನ ಸ್ವರ್ಗ ಅಚ್ಚುಮೆಚ್ಚಿನ ಉಡುಗೊರೆ ಎನ್ನಬಹುದು. ಮಾರುಕಟ್ಟೆಯಲ್ಲಿ ಎಷ್ಟೆ ಬಗೆಯ ಸೀರೆಗಳಿದ್ದರೂ ಒಂದು ಮೈಸೂರ್ ಸಿಲ್ಕ್ ಸೀರೆಯನ್ನು ಖರೀದಿಸಿಯೇ ತೀರಬೇಕೆಂಬ ಬಯಕೆ ಕರ್ನಾಟಕದ ಮಹಿಳೆ ಯರಲ್ಲಿ ಸಾಮಾನ್ಯವಾಗಿದೆ.

ಮಾರುಕಟ್ಟೆ ಪರಿಸ್ಥಿತಿ ಹಾಗೂ ಮನಸ್ಥಿತಿ ಹೀಗಿದ್ದರೂ ಅಗತ್ಯ ಬೇಡಿಕೆ ಪೂರೈಸುವಲ್ಲಿ ಕೆಎಸ್‌ಐಸಿ ವಿಫಲವಾಗಿದೆ. ಮಾರುಕಟ್ಟೆ ವಿಸ್ತರಣೆಯ ಸವಾಲೇ ಎದುರಾಗದ ಹೊತ್ತಿನಲ್ಲಿ ಕನಿಷ್ಠ ಬೇಡಿಕೆಯನ್ನೂ ಪೂರೈಸದ ಸ್ಥಿತಿಗೆ ಇಂದು ಕೆಎಸ್‌ಐಸಿ ಬಂದು ನಿಂತಿದೆ. ನಿತ್ಯ ತಯಾರಾಗುವ ಬೆರಳೆಣಿಕೆ ಯಷ್ಟು ಸೀರೆ ಮರುದಿನದ ಕೆಲವೇ ನಿಮಿಷಗಳ ಅಂತರದಲ್ಲಿ ಖಾಲಿ ಆಗುತ್ತಿವೆ. ಸೀರೆಗಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಷ್ಟು ಬೇಡಿಕೆ ಮೈಸೂರು ರೇಷ್ಮೆ ಸೀರೆಗಿದ್ದರೂ, ನೀಡದಷ್ಟು ಅಸಹಾಯಕತೆ ಕೆಎಸ್‌ಐಸಿಗೆ ಬಂದೊದಗಿದೆ, ಹಾಗಾಗಿ ಇದರ ಹಿಂದಿನ ಮರ್ಮ ಮಾತ್ರ ನಿಗೂಢವಾಗಿದೆ.

ಕಾರ್ಖಾನೆಯ ವಾರ್ಷಿಕ ಆದಾಯ 118 ಕೋಟಿ ರು.

ಕಾರ್ಖಾನೆಯಲ್ಲಿ ನಿತ್ಯ 210 ಕೆ.ಜಿ. ನೂಲು ತೆಗೆಯಲಾಗುತ್ತಿದೆ. ಜತೆಗೆ 26 ರಿಂದ 28 ಗಟ್ಟಿ ಕಚ್ಚಾ ರೇಷ್ಮೆ ನೂಲು ತಯಾರಿಸಲಾಗುತ್ತಿದೆ. ಇದರಿಂದ ಮೈಸೂರು ರೇಷ್ಮೆ ಕಾರ್ಖಾನೆ ಯಲ್ಲಿ 1450 ಮೀಟರ್ ರೇಷ್ಮೆ ಸೀರೆ (350) ತಯಾರಾದರೆ, ಚನ್ನಪಟ್ಟಣ ಕಾರ್ಖಾನೆಯಲ್ಲಿ 120 ಸೀರೆಗಳು ತಯಾರಾಗುತ್ತವೆ. ಕಾರ್ಖಾನೆ ವಾರ್ಷಿಕ 118 ಕೋಟಿ ರು. ನಿವ್ವಳ ಆದಾಯ ಹೊಂದಿದ್ದು, 2018-19 ಮತ್ತು 2019-20ರಲ್ಲಿ ಮುಖ್ಯಮಂತ್ರಿ ಸ್ವರ್ಣ ಪದಕ ಪಡೆದಿದೆ.

ಕಾರ್ಖಾನೆಯು ಗುಣಮಟ್ಟದ ರೇಷ್ಮೆ ನೂಲನ್ನು ಉತ್ಪಾದಿಸಿ ಮೈಸೂರು ಹಾಗೂ ಚನ್ನಪಟ್ಟಣ ನೇಯ್ಗೆ ಘಟಕಗಳಿಗೆ ಪೂರೈಕೆ ಮಾಡುತ್ತಿದೆ. ಜಿಯಾಲಾಜಿಕಲ್ ಇಂಡಿಕೇಷನ್ ಸ್ಥಾನಮಾನ ಪಡೆದಿರುವ ಮೈಸೂರು ರೇಷ್ಮೆ ಸೀರೆಗಳ ಉತ್ಪಾದನೆಗಾಗಿ ಈ ನೂಲಿಗೆ ಭಾರಿ ಬೇಡಿಕೆ ಇದೆ.

ನಿತ್ಯ ಕಾರ್ಖಾನೆಯಲ್ಲಿ ನೂಲು ತೆಗೆಯಲು ಕೊಳ್ಳೇಗಾಲ ರೇಷ್ಮೆ ಮಾರುಕಟ್ಟೆಯಿಂದ 1200 ಕೆ.ಜಿ., ಶಿಡ್ಲಘಟ್ಟದಿಂದ 1000 ಕೆ.ಜಿ. ಹಾಗೂ ರಾಮನಗರ ಮಾರುಕಟ್ಟೆಯಿಂದ 1200 ಕೆ.ಜಿ. ಗೂಡು ಖರೀದಿಸಲಾಗುತ್ತಿದೆ.