ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಜಯ ಯಾತ್ರೆಯೊಂದಿಗೆ ನವರಾತ್ರಿ ಆಚರಣೆಗೆ ತೆರೆ

ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುವಿನ ಸಮ್ಮುಖದಲ್ಲಿ ನಡೆದ ಈ ಸಾಂಪ್ರದಾಯಿಕ ಮೆರವಣಿಗೆ ಅರಮನೆಯ ಧಾರ್ಮಿಕ ಹಾಗೂ ರಾಜಸಂಪ್ರದಾಯದ ವೈಭವವನ್ನು ಮತ್ತೊಮ್ಮೆ ಅನಾವರಣಗೊಳಿಸಿತು. ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ಯದುವೀರ್ ಅವರು ವಿಶೇಷ ಪೂಜೆ ಸಲ್ಲಿಸಿದರು.

ಕೆ.ಜೆ.ಲೋಕೇಶ್ ಬಾಬು ಮೈಸೂರು

ನಾಡಹಬ್ಬ ದಸರಾ ಎಂದರೆ ಕೇವಲ ಉತ್ಸವವಲ್ಲ; ಅದು ಮೈಸೂರಿನ ರಾಜಪರಂಪರೆ, ಧಾರ್ಮಿಕ ನಂಬಿಕೆ ಹಾಗೂ ಸಾಂಸ್ಕೃತಿಕ ವೈಭವದ ಅನಾವರಣ. ಶರನ್ನವರಾತ್ರಿಯ ಒಂಬತ್ತು ದಿನಗಳ ಪೂಜಾ ಕೈಂಕರ್ಯ, ಖಾಸಗಿ ದರ್ಬಾರ್ ಹಾಗೂ ಸಾಂಪ್ರದಾಯಿಕ ಆಚರಣೆಗಳ ಬಳಿಕ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಜಯಯಾತ್ರೆ ನಡೆಸಿ ಬನ್ನಿ ಪೂಜೆ ನೆರವೇರಿಸುವ ಮೂಲಕ ಈ ವರ್ಷದ ಅರಮನೆಯ ನವರಾತ್ರಿ ಆಚರಣೆಗೆ ವಿದ್ಯುಕ್ತವಾಗಿ ತೆರೆ ಎಳೆದರು.

ಪಟ್ಟದ ಕತ್ತಿಯೊಂದಿಗೆ ವಿಜಯಯಾತ್ರೆ: ಬೆಳಿಗ್ಗೆ 11.15ರ ಸುಮಾರಿಗೆ ಅರಮನೆಯ ಆನೆ ಬಾಗಿಲಿನ ಮೂಲಕ ಹೊರಬಂದ ಯದುವೀರ್ ಅವರು ವಿಜಯಯಾತ್ರೆಗೆ ಚಾಲನೆ ನೀಡಿದರು. ರಾಜಮನೆತನದ ಶೌರ್ಯ ಮತ್ತು ಪರಂಪರೆಯ ಪ್ರತೀಕವಾದ ಪಟ್ಟದ ಕತ್ತಿಯನ್ನು ಪಲ್ಲಕ್ಕಿಯಲ್ಲಿ ರಿಸಿ, ಪಂಚಲೋಹದ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದ ಬಳಿಕ ವಿಜಯಯಾತ್ರೆ ಮುಂದುವರಿಯಿತು.

ಇದನ್ನೂ ಓದಿ: Mysuru Dasara vs Mahisha Dasara: ಮಹಿಷಾಸುರ ರಾಕ್ಷಸನೋ, ಬೌದ್ಧ ದೊರೆಯೋ? ದಸರಾ ಸಮೀಪಿಸುತ್ತಿದ್ದಂತೆ ಮತ್ತೆ ಆರಂಭವಾಯ್ತು ಚರ್ಚೆ: ಏನಿದು ವಿವಾದ?

ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುವಿನ ಸಮ್ಮುಖದಲ್ಲಿ ನಡೆದ ಈ ಸಾಂಪ್ರದಾ ಯಿಕ ಮೆರವಣಿಗೆ ಅರಮನೆಯ ಧಾರ್ಮಿಕ ಹಾಗೂ ರಾಜಸಂಪ್ರದಾಯದ ವೈಭವವನ್ನು ಮತ್ತೊಮ್ಮೆ ಅನಾವರಣಗೊಳಿಸಿತು. ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ಯದುವೀರ್ ಅವರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಒಳ ಆವರಣದಲ್ಲಿರುವ ಶಮೀ ವೃಕ್ಷಕ್ಕೆ ಸಂಪ್ರದಾಯಬದ್ಧವಾಗಿ ಪೂಜೆ ನೆರವೇರಿಸಿ, ವಿಜಯದ ಸಂಕೇತವಾದ ಬನ್ನಿ ಪೂಜೆಯನ್ನು ಆಚರಿಸಿದರು. ಪೂಜೆಯ ನಂತರ ಕಾರಿನಲ್ಲಿ ಅರಮನೆಗೆ ಮರಳಿದ ಅವರು, ನವರಾತ್ರಿಯ ಮೊದಲ ದಿನ ಧರಿಸಿದ್ದ ಕಂಕಣವನ್ನು ವಿಸರ್ಜನೆ ಮಾಡಿದರು. ಈ ಮೂಲಕ ರಾಜಮನೆತನದ ನವರಾತ್ರಿ ಧಾರ್ಮಿಕ ಆಚರಣೆಗಳಿಗೆ ಮಂಗಳ ಹಾಡಲಾಯಿತು.

ಆಯುಧ ಪೂಜೆಯಲ್ಲಿ ರಾಜವೈಭವದ ಅನಾವರಣ: ವಿಜಯದಶಮಿಯ ಮುನ್ನಾದಿನವಾದ ಮಂಗಳವಾರ ಮೈಸೂರು ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ ಮನೆಮಾಡಿತ್ತು. ರಾಜಪರಂಪರೆಯಂತೆ ಬೆಳಗ್ಗಿನಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಬೆಳಿಗ್ಗೆ 6 ಗಂಟೆಗೆ ಅರಮನೆಯೊಳಗೆ ಚಂಡಿಕಾ ಹೋಮ ಆರಂಭವಾಯಿತು. ನಂತರ ಪಟ್ಟದ ಕತ್ತಿ ಹಾಗೂ ಖಾಸಗಿ ಆಯುಧಗಳನ್ನು ಆನೆ ಬಾಗಿಲಿನ ಮೂಲಕ ಕೋಡಿ ಸೋಮೇಶ್ವರ ದೇವಾಲಯಕ್ಕೆ ಕೊಂಡೊಯ್ಯಲಾಯಿತು.

ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ, ಒಂಟೆ ಹಾಗೂ ಪಲ್ಲಕ್ಕಿಯೂ ಈ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಭಾಗಿಯಾದವು. ದೇವಾಲಯದ ಬಾವಿಯಿಂದ ನೀರು ತಂದು ಆಯುಧಗಳನ್ನು ಸ್ವಚ್ಛಗೊಳಿಸಿದ ಬಳಿಕ ಖಾಸಗಿ ಆಯುಧಗಳನ್ನು ಮತ್ತೆ ಅರಮನೆಯ ಕಲ್ಯಾಣದ ಆವರಣಕ್ಕೆ ತರಲಾಯಿತು. ಬೆಳಿಗ್ಗೆ ಚಂಡಿಕಾ ಹೋಮದ ಪೂರ್ಣಾಹುತಿ ನೆರವೇರಿತು. ಅರಮನೆಯ ಕಲ್ಯಾಣಮಂಟಪದಲ್ಲಿ ರಾಜವಂಶಸ್ಥರ ಖಾಸಗಿ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು.

ಬಳಿಕ ಪಟ್ಟದ ಆನೆ, ಕುದುರೆ ಹಾಗೂ ಹಸುವನ್ನು ಆನೆ ಬಾಗಿಲಿನಿಂದ ಕಲ್ಯಾಣಮಂಟಪದ ಆವರಣಕ್ಕೆ ಕರೆತಂದು ಪೂಜಿಸಲಾಯಿತು. ಪಟ್ಟದ ಕತ್ತಿ, ಪಟ್ಟದ ಹಸು, ರಾಜಲಾಂಛನ ಹಾಗೂ ಚಿನ್ನದ ಪಲ್ಲಕ್ಕಿಗೂ ವಿಶೇಷ ಪೂಜೆ ನೆರವೇರಿಸಲಾಯಿತು. ರಾಜಮನೆತನದಲ್ಲಿ ಆಯುಧಗಳು ಕೇವಲ ಯುದ್ಧೋ ಪಕರಣಗಳಲ್ಲ; ಅವು ಶೌರ್ಯ, ಅಧಿಕಾರ, ಕರ್ತವ್ಯ ಹಾಗೂ ಪರಂಪರೆಯ ಸಂಕೇತಗಳಾಗಿವೆ. ಹೀಗಾಗಿ ಆಯುಧ ಪೂಜೆಯು ಅರಮನೆಯ ಆಚರಣೆಗಳಲ್ಲಿ ವಿಶೇಷ ಮಹತ್ವ ಪಡೆದಿದೆ.

ಅರಮನೆ ಆನೆಗಳಿಗೂ ಪೂಜೆಯ ಗೌರವ: ಆಯುಧ ಪೂಜೆಯ ಮತ್ತೊಂದು ಆಕರ್ಷಣೆ ಅರಮನೆಯ ಆನೆಗಳಿಗೆ ಸಲ್ಲಿಸಿದ ವಿಶೇಷ ಪೂಜೆ. ಅರಮನೆಯ ಆನೆಗಳಾದ ಪ್ರೀತಿ ಮತ್ತು ಚಂಚಲ್ ಸೇರಿದಂತೆ ಗಜಪಡೆಗೆ ಯದುವೀರ್ ಅವರು ಪೂಜೆ ಸಲ್ಲಿಸಿದರು. ಬಳಿಕ ತಾವು ಬಳಸುವ ಖಾಸಗಿ ವಾಹನಗಳಿಗೂ ಪೂಜೆ ನೆರವೇರಿಸಿದರು. ಇದೇ ವೇಳೆ ಅರಣ್ಯ ಇಲಾಖೆ ವತಿಯಿಂದ ಗಜಪಡೆಗೆ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕ್ಯಾಪ್ಟನ್ ಪ್ರಶಾಂತ, ಕಾವೇರಿ, ಲಕ್ಷ್ಮಿ, ರೂಪ, ಏಕಲವ್ಯ, ಮಹೇಂದ್ರ ಹಾಗೂ ಧನಂಜಯ ಸೇರಿದಂತೆ ಆನೆಗಳನ್ನು ಸಾಲಾಗಿ ನಿಲ್ಲಿಸಿ ಪಾದಗಳನ್ನು ತೊಳೆದು, ಅರಿಶಿಣ-ಕುಂಕುಮ ಹಚ್ಚಿ, ಹೂವಿನ ಹಾರಗಳನ್ನು ತೊಡಿಸಲಾಯಿತು.

ಪುರೋಹಿತ ಪ್ರಹ್ಲಾದ ರಾವ್ ಅವರ ಮಂತ್ರ ಘೋಷದೊಂದಿಗೆ ಗಣೇಶನ ಮಂತ್ರಗಳನ್ನು ಪಠಿಸಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಮಾವುತರು ಮತ್ತು ಕಾವಾಡಿಗಳು ತಮ್ಮ ಆರೈಕೆಯಲ್ಲಿರುವ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಆನೆಗಳನ್ನು ನಿಯಂತ್ರಿಸಲು ಬಳಸುವ ಅಂಕುಶ ಹಾಗೂ ಇತರ ಆಯುಧಗಳಿಗೂ ಪೂಜೆ ಸಲ್ಲಿಸುವ ಮೂಲಕ ಕರ್ತವ್ಯಕ್ಕೆ ಸಹಕರಿಸುವ ಪ್ರಾಣಿಗಳಿಗೂ ಗೌರವ ಸಮರ್ಪಿಸಲಾಯಿತು. ಅರಮನೆಯ ಆಯುಧ ಪೂಜೆಯಲ್ಲಿ ಪಟ್ಟದಾನೆ ಯಾಗಿ ಭಾಗವಹಿಸಿದ್ದ ಶ್ರೀಕಂಠ ಮತ್ತು ಏಕಲವ್ಯ ಆನೆಗಳು ಅರಣ್ಯ ಇಲಾಖೆಯ ಪೂಜೆಯಲ್ಲಿ ಭಾಗವಹಿಸಲಿಲ್ಲ.

ಸಂಪ್ರದಾಯ ಉಳಿಸುವುದೇ ರಾಜಪರಂಪರೆಯ ಜೀವಾಳ: ಮೈಸೂರು ಅರಮನೆಯ ನವರಾತ್ರಿ ಆಚರಣೆಗಳು ಇಂದಿಗೂ ಹಿಂದಿನ ರಾಜಪರಂಪರೆಯ ವಿಧಿವಿಧಾನಗಳನ್ನು ಜೀವಂತವಾಗಿಟ್ಟಿವೆ. ಚಂಡಿಕಾ ಹೋಮದಿಂದ ಆಯುಧ ಪೂಜೆಯವರೆಗೆ, ಗಜಪೂಜೆಯಿಂದ ವಿಜಯಯಾತ್ರೆ ಹಾಗೂ ಬನ್ನಿ ಪೂಜೆಯವರೆಗೆ ಪ್ರತಿಯೊಂದು ಆಚರಣೆಯೂ ತನ್ನದೇ ಆದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ವಿಶೇಷವಾಗಿ ಪಟ್ಟದ ಕತ್ತಿ, ರಾಜಲಾಂಛನ, ಚಿನ್ನದ ಪಲ್ಲಕ್ಕಿ ಹಾಗೂ ಪಟ್ಟದ ಆನೆ-ಕುದುರೆ-ಹಸುಗಳ ಭಾಗವಹಿಸುವಿಕೆ ಅರಮನೆಯ ಆಚರಣೆಗಳಿಗೆ ವಿಶಿಷ್ಟ ಮೆರುಗು ನೀಡುತ್ತದೆ.

ನವರಾತ್ರಿಯ ಆರಂಭದಲ್ಲಿ ಕಂಕಣ ಧಾರಣೆಯೊಂದಿಗೆ ಶುರುವಾಗುವ ಧಾರ್ಮಿಕ ಕ್ರಮ, ಆಯುಧ ಪೂಜೆ, ಖಾಸಗಿ ದರ್ಬಾರ್ ಮತ್ತು ವಿಜಯಯಾತ್ರೆಯ ಮೂಲಕ ಪೂರ್ಣಗೊಳ್ಳುತ್ತದೆ. ಹೀಗೆ, ಮೈಸೂರು ಅರಮನೆಯಲ್ಲಿ ನಡೆದ ವಿಜಯಯಾತ್ರೆ ಹಾಗೂ ಬನ್ನಿ ಪೂಜೆ ಕೇವಲ ಧಾರ್ಮಿಕ ವಿಧಿಯಲ್ಲ; ಅದು ತಲೆಮಾರುಗಳಿಂದ ಸಾಗಿಬಂದ ರಾಜಸಂಪ್ರದಾಯದ ನಿರಂತರತೆಗೆ ಸಾಕ್ಷಿ. ವೈಭವದ ಆಚರಣೆಗಳ ನಡುವೆ ಪರಂಪರೆಯ ಬೇರುಗಳನ್ನು ಗಟ್ಟಿಗೊಳಿಸುವ ಮೂಲಕ ಮೈಸೂರು ರಾಜಮನೆತನ ಮತ್ತೊಮ್ಮೆ ನಾಡಹಬ್ಬ ದಸರಾಕ್ಕೆ ತನ್ನದೇ ಆದ ಐತಿಹಾಸಿಕ ಮೆರಗು ನೀಡಿತು.

ಖಾಸಗಿ ದರ್ಬಾರಿಗೆ ಮಂಗಳ

ಆಯುಧ ಪೂಜೆಯ ವಿಧಿವಿಧಾನಗಳ ಬಳಿಕ ಚಿನ್ನದ ಸಿಂಹಾಸನಕ್ಕೆ ಅಳವಡಿಸಿದ್ದ ಸಿಂಹವನ್ನು ವಿಸರ್ಜಿಸಲಾಯಿತು. ನಂತರ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಅವರು ನವರಾತ್ರಿಯ ಮೊದಲ ದಿನ ಧರಿಸಿದ್ದ ಕಂಕಣಗಳನ್ನು ದೇವರ ಮನೆಯಲ್ಲಿ ವಿಸರ್ಜಿಸಿ ದೇವರ ದರ್ಶನ ಪಡೆದರು. ಇದರೊಂದಿಗೆ ಈ ವರ್ಷದ ಖಾಸಗಿ ದರ್ಬಾರ್‌ಗೆ ತೆರೆ ಬಿದ್ದಿತು.