ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election ground report by Raghav Sharma Nidle: ಎನ್‌ಡಿಎಗೆ ಗಜಬಲ, ʼಇಂಡಿʼ ವಿಲವಿಲ

ಬಿಹಾರದಲ್ಲಿ ಈ ಸಲ ಮತ ಪ್ರಮಾಣ ಶೇ.66ರಷ್ಟು ದಾಖಲಾದ ಹೊಸ ಇತಿಹಾಸ ನಿರ್ಮಾಣವಾಗಿತ್ತು. ಇದಕ್ಕೆ ಪೂರಕವಾಗಿ, ಬಿಜೆಪಿ-ಜೆಡಿಯು-ಎಲ್‌ಜೆಪಿ- ಆರ್‌ಎಲ್ಎಂ-ಎಚ್‌ಎಎಂ ಒಳಗೊಂಡ ಬಲಿಷ್ಠ ಎನ್ ಡಿಎ ಮೈತ್ರಿಕೂಟ 200ಕ್ಕೂ ಹೆಚ್ಚು ಸೀಟುಗಳಲ್ಲಿ ದಿಗ್ವಿಜಯ ಸಾಧಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಹಲವು ಇತಿಹಾಸ, ದಾಖಲೆ ಗಳ ಸೃಷ್ಟಿಗೂ ಈ ಚುನಾವಣೆ ನಾಂದಿ ಹಾಡಿದೆ.

ಇಡೀ ದೇಶ ಕುತೂಹಲದಿಂದ ಎದುರು ನೋಡುತ್ತಿದ್ದ ಬಿಹಾರ ವಿಧಾನಸಭೆ ಚುನಾ ವಣೆಯಲ್ಲಿ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ವಿಶ್ಲೇಷಕರ ಊಹೆ, ನಿರೀಕ್ಷೆ ಗಳನ್ನೂ ಮೀರಿದ ಫಲಿತಾಂಶ ಹೊರ ಬಿದ್ದಿದ್ದು, ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟ 200ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವ ಮೂಲಕ ಪ್ರಚಂಡ ಗೆಲುವು ಸಾಧಿಸಿದೆ.

2010ರಲ್ಲಿ ಸಿಎಂ ನಿತೀಶ್ ಕುಮಾರ್ ಮತ್ತು ಬಿಜೆಪಿಯ ದಿವಂಗತ ಸುಶೀಲ್ ಕುಮಾರ್ ಮೋದಿ ಜೋಡಿ 206 ಸೀಟುಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಈ ಬಾರಿ ನಿತೀಶ್-ನರೇಂದ್ರ ಮೋದಿ ಜೋಡಿ, 2010ರ ಫಲಿತಾಂಶ ನೆನಪಿಸುವ ಅಮೋಘ ಸಾಧನೆ ಮಾಡಿದೆ. ಬಿಹಾರಿಗರು ನಿತೀಶ್-ಮೋದಿ ಜೋಡಿಯನ್ನು ಬಿಗದಪ್ಪಿಕೊಂಡಿದ್ದರೆ, ತೇಜಸ್ವಿ- ರಾಹುಲ್ ಗಾಂಧಿ ಜೋಡಿಯನ್ನು ತಿರಸ್ಕರಿಸಿದ್ದಾರೆ.

ಬಿಹಾರದಲ್ಲಿ ಈ ಸಲ ಮತ ಪ್ರಮಾಣ ಶೇ.66ರಷ್ಟು ದಾಖಲಾದ ಹೊಸ ಇತಿಹಾಸ ನಿರ್ಮಾಣವಾಗಿತ್ತು. ಇದಕ್ಕೆ ಪೂರಕವಾಗಿ, ಬಿಜೆಪಿ-ಜೆಡಿಯು-ಎಲ್‌ಜೆಪಿ- ಆರ್‌ಎಲ್ಎಂ-ಎಚ್‌ಎಎಂ ಒಳಗೊಂಡ ಬಲಿಷ್ಠ ಎನ್ ಡಿಎ ಮೈತ್ರಿಕೂಟ 200ಕ್ಕೂ ಹೆಚ್ಚು ಸೀಟುಗಳಲ್ಲಿ ದಿಗ್ವಿಜಯ ಸಾಧಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಹಲವು ಇತಿಹಾಸ, ದಾಖಲೆ ಗಳ ಸೃಷ್ಟಿಗೂ ಈ ಚುನಾವಣೆ ನಾಂದಿ ಹಾಡಿದೆ.

ಇದನ್ನೂ ಓದಿ: Bihar Election ground report by Raghav Sharma Nidle: ಬಿಹಾರ ಸಮರಕಣದಲ್ಲಿ ನಾನು ಕಂಡದ್ದು...ಕೇಳಿದ್ದು

ಈ ಬಾರಿ ಮತ ಪ್ರಮಾಣ ಹೆಚ್ಚಳ ಬದಲಾವಣೆಗೆ ಮತ ಎಂಬ ವ್ಯಾಖ್ಯಾನವನ್ನು ಬದಲಿಸಿ ದ್ದು, ಇದು ಅಭಿವೃದ್ಧಿ ಮತ್ತು ಜನಪರ ರಾಜಕಾರಣಕ್ಕೆ ಗೆಲುವು ಎಂಬ ಸಂದೇಶವನ್ನು ರವಾನಿಸಿದೆ. ಹಾಗೆ ನೋಡಿದರೆ, ಈ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯ ಲಕ್ಷಣ ಕಂಡುಬಂದಿರಲಿಲ್ಲ. ನಿತೀಶ್ ಆಡಳಿತದ ಬಗ್ಗೆ ಜನರಲ್ಲಿ ಆಕ್ರೋಶ ಕಾಣುತ್ತಿರಲಿಲ್ಲ.

ತೇಜಸ್ವಿಯವರನ್ನು ಬೆಂಬಲಿಸುತ್ತಿದ್ದ ಯಾದವ ಸಮುದಾಯದ ಮಂದಿ ಕೂಡ ನಿತೀಶ್ ಕೆಲಸ ಮಾಡಿzರೆ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದರು ಮತ್ತು ನಿತೀಶ್ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡುತ್ತಿರಲಿಲ್ಲ. ಮುಖ್ಯವಾಗಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಅವರ ಸಾಮಾಜಿಕ ಯೋಜನೆಗಳು ಮತದಾರರ ಹೃದಯ ತಟ್ಟಿವೆ. ಈ ಯೋಜನೆಗಳ ಕುರಿತ ಸದಭಿಪ್ರಾಯಗಳು ಫಲಿತಾಂಶದಲ್ಲಿ ಪ್ರತಿಬಿಂಬಿಸಿವೆ.

ರಾಜ್ಯದಲ್ಲಿ ಹೊಸ ನಾಯಕತ್ವ ಮತ್ತು ಸರಕಾರ ಬೇಕು ಎಂದು ಆರ್‌ಜೆಡಿ-ಕಾಂಗ್ರೆಸ್ ಬೆಂಬಲಿಗರು ಬಲವಾಗಿ ಪ್ರತಿಪಾದಿಸಿದರೂ, ಸದ್ಯದ ಮಟ್ಟಿಗೆ ಬಿಹಾರದಲ್ಲಿ ಎಲ್ಲವೂ ಚೆನ್ನಾಗಿದೆ. ನಾಯಕತ್ವ ಅಥವಾ ಸರ್ಕಾರದ ಬದಲಾವಣೆಯ ಅವಶ್ಯಕತೆ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಬಿಹಾರ ಮತದಾರ ನೀಡಿದ್ದಾನೆ.

ನಿತೀಶ್ ಆಡಳಿತ ವೈಖರಿ, ಮಹಿಳಾ ಪರ ಯೋಜನೆಗಳು, ಸುಧಾರಣಾ ಕ್ರಮಗಳನ್ನು ಅನುಮೋದಿಸಿದ ಮತದಾರರು, ಸರ್ಕಾರ ನಮ್ಮ ಹಿತರಕ್ಷಣೆ ಮಾಡಿದೆ ಎಂಬ ತಮ್ಮ ಭಾವನೆಗಳನ್ನು ಮತದಾನದ ಮೂಲಕ ತೋರಿಸಿದ್ದಾರೆ. ನಿತೀಶ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ, ಅವರಿಗೆ ವಯಸ್ಸಾಗಿದೆ ಎಂಬೆ ವಿಪಕ್ಷಗಳ ವ್ಯಂಗ್ಯೋಕ್ತಿಗಳನ್ನು ಮತದಾರ ಸಾರಸಗಟಾಗಿ ತಿರಸ್ಕರಿಸಿದ್ದಾನೆ.

ಚುನಾವಣೆಯಲ್ಲಿ 885 ರ‍್ಯಾಲಿಗಳನ್ನು ನಡೆಸುವ ಮೂಲಕವೇ ನಿತೀಶ್ ವಿಪಕ್ಷದವರ ಬಾಯಿ ಮುಚ್ಚಿಸಿದ್ದರು. ಈಗ ಬಿಹಾರ ಮತದಾರರೇ ನಿತೀಶ್ ಬಗ್ಗೆ ಇಲ್ಲಸಲ್ಲದ ಮಾತನಾಡ ಬೇಡಿ ಎಂಬ ಕಟು ಸಂದೇಶವನ್ನು ರವಾನೆ ಮಾಡಿದ್ದಾರೆ. ಕಳೆದ ಐದು ದಶಕಗಳಲ್ಲಿ ಬಿಹಾರ ಕೆಲವು ನಿರ್ಣಾಯಕ ಜನಾದೇಶಗಳಿಗೆ ಸಾಕ್ಷಿಯಾಗಿತ್ತು.

2010ರ ಜೆಡಿಯು-ಬಿಜೆಪಿ ಪ್ರಚಂಡ ಬಹುಮತ, 1985ರಲ್ಲಿ ಕಾಂಗ್ರೆಸ್‌ನ ಮಂಡಲ್ ಪೂರ್ವ ರಾಜಕೀಯ ಪ್ರಾಬಲ್ಯ, 1977ರ ತುರ್ತು ಪರಿಸ್ಥಿತಿಯ ನಂತರದ ಜನತಾ ಪಕ್ಷದ ರಾಜಕೀಯ ಏರುಗತಿ ಮತ್ತು 2015ರ ಮಹಾಘಟಬಂಧನ್ ಬಲವರ್ಧನೆಗಳನ್ನು ಬಿಹಾರ ನೋಡಿತ್ತು. ಈ ಬಾರಿ ಅಂಥದ್ದೇ ಮಾದರಿಯ ಮತ್ತೊಂದು ಫಲಿತಾಂಶ ಬಿಹಾರದಲ್ಲಿ ಕಂಡು ಬಂದಿದೆ. ಎನ್‌ಡಿಎ ಗೆಲುವಿನ ಗಾತ್ರ ಹಾಗೂ ಪ್ರಮಾಣ ವಿಪಕ್ಷಗಳನ್ನು ಧ್ವನಿಯನ್ನೇ ಅಡಗಿಸಿಬಿಟ್ಟಿದೆ.

ರು. ೧೦ ಸಾವಿರದ ಲಾಭ: ಮುಖ್ಯಮಂತ್ರಿ ಮಹಿಳಾ ರೋಜಗಾರ್ ಯೋಜನೆ ಅಡಿಯಲ್ಲಿ ೧.೨೦ ಕೋಟಿ ಜೀವಿಕಾ ದೀದಿಗಳಿಗೆ (ಅಲ್ಲಿನ ಸ್ವಸಹಾಯ ಸಂಘದ ಮಹಿಳಾ ಸದಸ್ಯರನ್ನು ಜೀವಿಕಾ ದೀದಿ ಎನ್ನುತ್ತಾರೆ) ತಲಾ ರು. 10000 ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡಿರುವುದು ಈ ಚುನಾವಣೆಯಲ್ಲಿ ಬಹುದೊಡ್ಡ ಮ್ಯಾಜಿಕ್ ಮಾಡಿದೆ. ಬಿಹಾರದ ಪ್ರತಿ ಮನೆ-ಮನೆಗಳಲ್ಲಿ ಜೀವಿಕಾ ಸ್ಕೀಮ್ ರು. ೧೦ ಸಾವಿರದ ಬಗ್ಗೆ ಪಾಸಿಟಿವ್ ಚರ್ಚೆಗಳಾಗಿತ್ತು ಮತ್ತು ಮುಂದೆ ನಮಗೂ ರು. ೧೦ ಸಾವಿರ ಸಿಗಲಿದೆ ಎಂಬ ಭಾವನೆ ಉಳಿದ ಮಹಿಳೆಯ ರಲ್ಲೂ ಸೃಷ್ಟಿಯಾಗಿತ್ತು. ಬಹುಶಃ ಈ ಭರವಸೆ ಉಳಿದ ಮಹಿಳೆಯರು ಹಾಗೂ ಅವರ ಕುಟುಂಬದ ಸದಸ್ಯರನ್ನು ಎನ್‌ಡಿಎ ಮೈತ್ರಿ ಕೂಟವನ್ನು ಬೆಂಬಲಿಸುವಂತೆ ಮಾಡಿದೆ.

ರು. ೧೦ ಸಾವಿರ ಸಿಗದ ಮಹಿಳೆಯರು, ನಿತೀಶ್ ಮತ್ತೆ ಅಧಿಕಾರಕ್ಕೆ ಬಂದರೆ ನಮಗೂ ನಮ್ಮ ಉದ್ಯಮಗಳ ವಿಸ್ತರಣೆಗಾಗಿ ಹಣ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ರು. ೧೦ ಸಾವಿರ ಹಣವನ್ನು ಖಾತೆಗೆ ಹಾಕಿದ್ದರ ಪರಿಣಾಮವಾಗಿ, ಮತದಾರ ಮಹಾಪ್ರಭು ಇಷ್ಟೊಂದು ದೊಡ್ಡ ಉಡುಗೊರೆ ನೀಡುತ್ತಾನೆ ಕಲ್ಪನೆಯೂ ಎನ್‌ಡಿಎ ಪಕ್ಷಗಳಿಗೆ ಇರಲಿಲ್ಲ. ಆದರೆ, ನಿತೀಶರ ಕ್ರಮಗಳ ಕುರಿತ ಬಿಹಾರ ಮನೆ-ಮನಗಳಲ್ಲಿ ಧ್ವನಿಸುತ್ತಿದ್ದ ಪಾಸಿಟಿವ್ ಮಾತು ಗಳು, ಎನ್‌ಡಿಎ ಮೈತ್ರಿಕೂಟದ ಅದ್ವಿತೀಯ ಸಾಧನೆಗೆ ಕನ್ನಡಿ ಹಿಡಿದಿವೆ.

ರು. 2500 ಒಪ್ಪಲಿಲ್ಲ: ನಿತೀಶ್ ಸರ್ಕಾರ ಬಿಹಾರದ ವಿಧವೆಯರಿಗೆ ತಿಂಗಳಿಗೆ ರು. 400 ಪಿಂಚಣಿ ಹಣ ನೀಡುತ್ತಿತ್ತು. ಇದನ್ನು ರೂ. 2500ಕ್ಕೆ ಏರಿಸುತ್ತೇವೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭರವಸೆ ಕೊಟ್ಟಿದ್ದರು. ಇದರಿಂದ ಎಚ್ಚೆತ್ತುಕೊಂಡ ನಿತೀಶ್ ಸರ್ಕಾರ, ಪಿಂಚಣಿ ಹಣವನ್ನು ರು. 1100ಕ್ಕೆ ಹೆಚ್ಚಳ ಮಾಡಿತ್ತು ಮತ್ತು ರು. 700 ಏರಿಕೆ ವಿಧವೆಯರ ಕುಟುಂಬದಲ್ಲೂ ಸಂತಸದ ಅಲೆ ಎಬ್ಬಿಸಿತು.

ತೇಜಸ್ವಿಯರು ನೀಡುತ್ತೇವೆ ಎನ್ನುವುದಕ್ಕಿಂತ, ನಿತೀಶರು ಕೈಗೆ ಹಣ ನೀಡಿರುವುದು ಚುನಾ ವಣೆಯಲ್ಲಿ ಕೆಲಸ ಮಾಡಿದೆ. ಬಿಹಾರದ ಪ್ರತಿ ಕುಟುಂಬಕ್ಕೆ ೧ ಸರಕಾರಿ ನೌಕರಿ ಎಂಬಂತೆ ೩ ಕೋಟಿ ಸರ್ಕಾರಿ ಉದ್ಯೋಗ ನೀಡಲಿದ್ದೇವೆ ಎಂದೂ ಮಹಾಘಟ ಬಂಧನದ ಪಕ್ಷಗಳು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದವು. ಆದರೆ, ಬಿಹಾರದಂತಹ ರಾಜ್ಯದಲ್ಲಿ ೩ ಕೋಟಿ ಸರ್ಕಾರಿ ಸೃಷ್ಟಿ ವಾಸ್ತವದಲ್ಲಿ ಸಾಧ್ಯ ಇಲ್ಲ ಎಂಬುದು ಮತದಾರರ ಅರಿವಿಗೂ ಬಂದಿದೆ.

ಸಂಪನ್ಮೂಲ ಕ್ರೋಢೀಕರಣಕ್ಕೆ ನಿಮ್ಮ ಚಿಂತೆನಗಳೇನು ಎಂಬ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡದ ಮಹಾಘಟ ಬಂಧನದ ಸದಸ್ಯರು, ಈ ವಿಷಯದ ಬಗ್ಗೆ ಜನರ ಮನವೊಲಿಸುವಲ್ಲಿ ಸೋತರು. ಎನ್‌ಡಿಎ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ೧ ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ತಿಳಿಸಿದೆಯೇ ವಿನಃ ಸರಕಾರಿ ನೌಕರಿ ನೀಡುತ್ತೇವೆ ಎಂದು ಹೇಳಲಿಲ್ಲ.

ಉದ್ಯೋಗ ಸೃಷ್ಟಿಗೆ ಪೂರಕ ಕೌಶಲ್ಯ ಯೋಜನೆ ಹಾಗೂ ತರಬೇತಿ ಶಿಬಿರಗಳನ್ನು ನಡೆಸುವ ಭರವಸೆ ನೀಡಿತು. ಬಹುಶಃ ಈ ಯೋಜನೆ ತಕ್ಕಮಟ್ಟಿಗೆ ತರ್ಕ ಬದ್ಧವಾಗಿದೆ ಎಂದೂ ಬಿಹಾರ ಮತದಾರ ಭಾವಿಸಿದಂತಿದೆ.

ಗರೀಬ್ ಕಲ್ಯಾಣ್ ಅಕ್ಕಿಯ ಋಣ: ಕೊರೊನಾ ಸಾಂಕ್ರಾಮಿಕ ಬಂದ ನಂತರದಲ್ಲಿ ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಬಡವರಿಗೆ ೫ ಕಿಲೋ ಅಕ್ಕಿ-ದವಸ ಧಾನ್ಯಗಳನ್ನು ನೀಡಿರುವುದು ಬಿಹಾರದಂತಹ ಹಿಂದುಳಿದ ರಾಜ್ಯದಲ್ಲಿ ಬಡ ಕುಟುಂಬಗಳಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಿದೆ.

ಕುಟುಂಬದ ಇತರೆ ಸಮಸ್ಯೆಗಳಿಗೆ ಹಣ ಹೊಂದಿಸಲು ಕಷ್ಟವಾಗಿರುವ ಸಂದರ್ಭದಲ್ಲಿ ಅಕ್ಕಿ-ಧಾನ್ಯಗಳನ್ನು ಅಂಗಡಿಗೆ ಹೋಗಿ ಖರೀದಿಸಬೇಕಿಲ್ಲ. ಸರ್ಕಾರ ನಮ್ಮ ಸಂಕಷ್ಟಕ್ಕೆ ನೆರವಾಗಿದೆ ಎಂದು ಬಿಹಾರ ಪ್ರವಾಸ ಮಾಡಿದ ಸಂದರ್ಭದಲ್ಲಿ ಅನೇಕರು ನನ್ನೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದರು.

ಹೀಗಾಗಿ, ಇದು ಗರೀಬ್ ಕಲ್ಯಾಣ್ ಯೋಜನೆಯ ಅಕ್ಕಿ-ಧಾನ್ಯ ಗಳಿಗೂ ಹಾಕಿದ ಮತವಾ ಗಿದೆ. ನಮಗೆ ಎನ್‌ಡಿಎ ಸರ್ಕಾರದ ಮೇಲೆ ಅನ್ನದ ಋಣ ಇದೆ ಎಂಬ ಬಡ ಕುಟುಂಬಗಳ ಮಾತುಗಳು ಫಲಿತಾಂಶದಲ್ಲಿ ಕಂಡಿದೆ.

ಎಲ್‌ಜೆಪಿ-ಆರ್‌ಎಲ್‌ಎಂನ ಲಾಭ: 2020ರ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಕೇಂದ್ರ ಸಚಿವ, ಯುವ ದಲಿತ ನಾಯಕ ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿ ಎನ್‌ಡಿಎ ಮೈತ್ರಿಕೂಟದಲ್ಲಿರಲಿಲ್ಲ. ನಿತೀಶ್ ಕುಮಾರ್ ಮೇಲಿನ ಮುನಿಸಿನಿಂದಾಗಿ ಮೈತ್ರಿ ಕೂಟದಿಂದ ಹೊರಗಿದ್ದ ಚಿರಾಗ್ ಪಾಸ್ವಾನ್ ಪ್ರತ್ಯೇಕವಾಗಿ ಸ್ಪರ್ಧಿಸಿ, ಜೆಡಿಯುನ ಸುಮಾರು ೨೮-೩೦ ಸೀಟುಗಳಿಗೆ ಹಾನಿ ಮಾಡಿದ್ದರು. ಇದರಿಂದಾಗಿ 115 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಯು ಕೇವಲ ೪೩ ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು. ಆದರೆ, ಈ ಬಾರಿ ಎಲ್‌ಜೆಪಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿತ್ತು ಮತ್ತು ನಿತೀಶ್ ಕುಮಾರ್ ಜತೆಗಿನ ಮುನಿಸು ಬಗೆಹರಿದಿತ್ತು.

ಮುಖ್ಯವಾಗಿ, ಬಿಹಾರದ ಛಟ್ ಪೂಜೆ ಸಂದರ್ಭದಲ್ಲಿ ಚಿರಾಗ್ ಪಾಸ್ವಾನ್ ಮನೆಗೆ ಖುದ್ದು ತೆರಳಿದ್ದ ಸಿಎಂ ನಿತೀಶ್ ಪೂಜೆಯಲ್ಲಿ ಭಾಗಿಯಾಗಿ ಒಗ್ಗಟ್ಟಿನ ಸಂದೇಶ ರವಾನೆ ಮಾಡಿದ್ದರು. ಹೀಗಾಗಿ, ಜೆಡಿಯು ಮತ್ತು ಎಲ್‌ಜೆಪಿ ಮತಗಳು ವಿಭಜನೆಯಾಗಲಿಲ್ಲ.

ಬದಲಿಗೆ, ಎನ್‌ಡಿಎ ಮೈತ್ರಿ ಕೂಟವನ್ನು ಅದು ಮತ್ತಷ್ಟು ಬಲಿಷ್ಠಗೊಳಿಸಿತು. ಮಾಜಿ ಕೇಂದ್ರ ಸಚಿವ, ಒಬಿಸಿ ಖುಶ್ವಾಹ ಸಮುದಾಯದ ಉಪೇಂದ್ರ ಖುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಕೂಡ ಎನ್‌ಡಿಎ ಮಿತ್ರ ಪಕ್ಷವಾಗಿ ೫ ಕ್ಷೇತ್ರಗಳಿಂದ ಸ್ಪರ್ಧಿಸಿತ್ತು.

ರಾಜ್ಯದೆಡೆ ಹಬ್ಬಿರುವ ಖುಶ್ವಾಹ ಮತದಾರರು ಕೂಡ ಎನ್‌ಡಿಎ ಬೆಂಬಲಿಸಿ ದರು. ಮಾಜಿ ಸಿಎಂ, ಹಿಂದುಸ್ತಾನಿ ಅವಾಮಿ ಮೋರ್ಚಾದ ಮತ್ತು ಮಾಂಜಿ ಸಮುದಾಯದ ನಾಯಕ ಜೀತನ್ ರಾಮ್ ಮಾಂಜಿ ಕೂಡ ಎನ್‌ಡಿಎ ತೆಕ್ಕೆಯಲ್ಲಿದ್ದುದರಿಂದ ಒಟ್ಟಾರೆ ಜಾತಿ ಸಮೀ ಕರಣವೂ ಮೈತ್ರಿಕೂಟದ ಬಲವನ್ನು ದ್ವಿಗುಣಗೊಳಿಸಿತ್ತು.

ನರೇಟಿವ್ ಇರಲಿಲ್ಲ: ಎನ್‌ಡಿಎ ಸರ್ಕಾರದ ವಿರುದ್ಧ ಪ್ರಬಲ ರಾಜಕೀಯ ನರೇಟಿವ್ ರೂಪಿಸುವಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಸಂಪೂರ್ಣ ವಿಫಲವಾದವು. ನಿತೀಶ್ ವಿರುದ್ಧ ಸ್ವಜನಪಕ್ಷಪಾತ, ಭ್ರಷ್ಟಾಚಾರ, ಕುಟುಂಬ ರಾಜಕಾರಣ ಅಥವಾ ಅರಾಜಕ ಆಡಳಿತದ ಬಗ್ಗೆ ಆರೋಪ ಮಾಡುವ ಸನ್ನಿವೇಶವೇ ಬಿಹಾರದಲ್ಲಿ ಇರಲಿಲ್ಲ. ಆಗಿಂದಾಗ್ಯೆ ತಮ್ಮ ಮಿತ್ರ ರನ್ನು ಬದಲಿಸಿದರೂ, ಕ್ಲೀನ್ ಇಮೇಜ್ ಉಳಿಸಿಕೊಳ್ಳುವಲ್ಲಿ ನಿತೀಶ್ ಯಶಸ್ವಿಯಾದರು.

ನಿತೀಶ್ ಪುತ್ರ ನಿಶಾಂತ್ ಕುಮಾರ್‌ಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ಬೆಂಬಲಿಗರು ದುಂಬಾಲು ಬಿದ್ದರೂ, ನಿಶಾಂತ್ ಕುಮಾರ್‌ರನ್ನು ಪಕ್ಷ ರಾಜಕಾರಣಕ್ಕೆ ತರುವ ಕೆಲಸವನ್ನು ನಿತೀಶ್ ಮಾಡಲಿಲ್ಲ. ಇದೇ ವಿಚಾರವನ್ನು ಲಾಲೂ ಕುಟುಂಬಕ್ಕೆ ಹೋಲಿಸಿದರೆ, ಅಲ್ಲಿ ಬಹುತೇಕ ಎಲ್ಲರೂ ಅಧಿಕಾರ ರಾಜಕಾರಣದ ಹಿಂದೆ ಬಿದ್ದವರೇ ಆಗಿದ್ದಾರೆ. ನಿತೀಶರ ಈ ಪಾಸಿಟಿವ್ ಇಮೇಜ್ ಜನರನ್ನು ಆಕರ್ಷಿಸಿತು ಮತ್ತು ತೇಜಸ್ವಿ ಯಾದವ್‌ಗೆ ಲಾಲೂ ಪ್ರಸಾದ್ ಯಾದವ್ ಆಡಳಿತದಲ್ಲಿದ್ದ ಜಂಗಲ್‌ರಾಜ್ ಕಳಂಕ ಮತ್ತೆ ಹಾನಿ ಮಾಡಿತು.

ಯಾದವರು ಅಧಿಕಾರಕ್ಕೆ ಬಂದರೆ ಮತ್ತೆ ನಾವು ಕರಾಳ ದಿನಗಳತ್ತ ಹೋಗುತ್ತೇವೆ ಎಂಬ ಸಣ್ಣ-ಸಣ್ಣ ಹಿಂದುಳಿದ ಸಮುದಾಯಗಳ ಭಯ ಕೂಡ ಎನ್‌ಡಿಎ ಗೆಲುವಿನಲ್ಲಿ ಪಾತ್ರ ವಹಿಸಿದೆ.

೫೫ ದಿನ ಎಲ್ಲಿದ್ದರು?: ಆಗಸ್ಟ್/ಸೆಪ್ಟೆಂಬರ್‌ನಲ್ಲಿ 16 ದಿನಗಳ ಮತ ಅಧಿಕಾರ ಯಾತ್ರೆ ಕೈಗೊಂಡು ಹವಾ ಎಬ್ಬಿಸಿದ್ದ ರಾಹುಲ್ ಗಾಂಧಿ, ನಂತರದ 55 ದಿನಗಳ ಕಾಲ ಬಿಹಾರ ದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಚುನಾವಣೆ ಹೊಸ್ತಿಲಲ್ಲಿದ್ದ ರಾಜ್ಯದಲ್ಲಿ ರಾಹುಲ್ ಹೆಚ್ಚು ಕಾಣಿಸಿಕೊಳ್ಳಬೇಕಿತ್ತು. ಆದರೆ, ಮೊದಲನೇ ಹಂತದ ಮತದಾನ ಇರುವ ಮೂರ್ನಾ ಲ್ಕು ದಿನಗಳಿಗೆ ಮುನ್ನ ಕಾಣಿಸಿಕೊಂಡ ರಾಹುಲ್, ಮತ್ತೆ ಬಿಹಾರದಲ್ಲಿ ಮತಕಳವಿನ ಬಗ್ಗೆ ಘರ್ಜಿಸತೊಡಗಿದರು. ಆದರೆ ಈ ಘರ್ಜನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಸ್ಥಿತಿ ಯಲ್ಲಿ ಬಿಹಾರ ಮತದಾರ ಇರಲಿಲ್ಲ. ‌

ಹಠಾತ್ ಹವಾ ಎಬ್ಬಿಸಿ, ನಂತರ ಒಂದಿಷ್ಟು ದಿನಗಳ ಕಾಲ ಗಾಯಬ್ (ಮಾಯ) ಆಗುವ ರಾಹುಲ್ ನಡೆ ಕಾಂಗ್ರೆಸ್ಸಿಗರಲ್ಲಿ ತೀವ್ರ ಅಸಮಾಧಾನ ಉಂಟು ಮಾಡುತ್ತಿದೆ. ಬಿಹಾರ ಚುನಾವಣೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇಂತಹಾ ಅಸಮಾಧಾನ, ಬೇಸರ ಎದ್ದು ಕಾಣುತ್ತಿತ್ತು.

ಆರ್‌ಜೆಡಿ-ಕಾಂಗ್ರೆಸ್ ಮನಸ್ಸು ಸೇರಿರಲಿಲ್ಲ: ತೇಜಸ್ವಿ ಯಾದವ್ರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲು ಕಾಂಗ್ರೆಸ್ಸಿಗೆ ಮನಸ್ಸಿರಲಿಲ್ಲ. ಆದರೆ, ಲಾಲೂ ಯಾದವ್ ಹಸ್ತಕ್ಷೇಪದ ಬಳಿಕ ಈ ಘೋಷಣೆ ಯಾಯಿತು. ಕಾಂಗ್ರೆಸ್ ಪಕ್ಷದ ಈ ಹಿಂಜರಿಕೆಗಳು ತೇಜಸ್ವಿ ಯಾದವ್ ಅಸಮಾಧಾನ ಹೆಚ್ಚಿಸಿತ್ತು. ಜನರ ಎದುರಿಗೆ ನಮ್ಮದು ಒಗ್ಗಟ್ಟಿನ ಮಿತ್ರಕೂಟ ಎಂದು ತೋರಿಸಿಕೊಂಡರೂ, ಮನಃಪೂರ್ವಕವಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಾ ಗಿರಲಿಲ್ಲ. ಟಿಕೆಟ್ ಹಂಚಿಕೆಯಲ್ಲೂ ಅನೇಕ ಗೊಂದಲಗಳಾಗಿ ಕಾಂಗ್ರೆಸ್ಸಿನ ಕೆಲ ದಿಲ್ಲಿ ನಾಯಕರು ಬಿಹಾರ ಕೈ ಕಾರ್ಯಕರ್ತರಿಂದ ಧರ್ಮದೇಟು ತಿಂದಿದ್ದರು. ನಾಮಪತ್ರ ಸಲ್ಲಿಕೆಯ ಹಿಂದಿನ ದಿನವೂ ಟಿಕೆಟ್ ಹಂಚಿಕೆ ಬಗ್ಗೆ ಗದ್ದಲ- ಗಲಾಟೆಗಳು ಮುಂದುವರಿ ದಿದ್ದವು. ಆದರೆ, ಜೆಡಿಯು-ಬಿಜೆಪಿ-ಎಲ್ ಜೆಪಿಯಲ್ಲಿ ಈ ಗೊಂದಲ ಕಾಣಿಸಲಿಲ್ಲ. ಕೆಲ ಸೀಟುಗಳ ಬಗ್ಗೆ ಎನ್‌ಡಿಎ ಮಿತ್ರ ಪಕ್ಷಗಳ ಮಧ್ಯೆ ಅಸಮ್ಮತಿ ಇದ್ದರೂ, ಅದು ಬಹಿರಂಗ ಗೊಳ್ಳದಂತೆ ಎಚ್ಚರಿಕೆ ವಹಿಸಿದರು ಮತ್ತು ಜೆಡಿಯು- ಬಿಜೆಪಿ ಸಮಾನವಾಗಿ 101 ಸೀಟು ಗಳನ್ನು ಹಂಚಿ ಕೊಂಡಿದ್ದವು.

2010ರಲ್ಲಿ ಏನಾಗಿತ್ತು?: 2010ರಲ್ಲಿ ಜೆಡಿಯು- ಬಿಜೆಪಿ 206 ಸ್ಥಾನಗಳನ್ನು ಗೆದ್ದು, ಏಕಪಕ್ಷೀಯ ವಿಜಯದ ಬಿರುಗಾಳಿ ಎಬ್ಬಿಸಿತ್ತು. ಜೆಡಿಯು 115 ಮತ್ತು ಬಿಜೆಪಿ ೯೧ ಸೀಟುಗಳನ್ನು ಅಂದು ಗೆದ್ದುಕೊಂಡಿತ್ತು. ಬಿಜೆಪಿ ಸ್ಪರ್ಧಿಸಿದ್ದ 102 ಸ್ಥಾನಗಳಲ್ಲಿ ೯೧ ಸ್ಥಾನಗಳನ್ನು ಗೆದ್ದಿತ್ತು. ಜೆಡಿಯು ಸ್ಪರ್ಧಿಸಿದ 141 ಸ್ಥಾನಗಳಲ್ಲಿ 115ನ್ನು ಗೆದ್ದಿತ್ತು. 168 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆರ್‌ಜೆಡಿ ೨೨ ಸ್ಥಾನಗಳಿಗೆ ಕುಸಿದಿತ್ತು. ಕಾಂಗ್ರೆಸ್ ಎಲ್ಲಾ 243 ಕ್ಷೇತ್ರ ಗಳಲ್ಲಿ ಸ್ಪರ್ಧಿಸಿದರೂ, ಕೇವಲ ನಾಲ್ಕು ಸೀಟುಗಳಲ್ಲಷ್ಟೇ ಗೆದ್ದಿತ್ತು.

ವೋಟ್ ಚೋರಿ ಬೊಬ್ಬೆಯಷ್ಟೇ

ಹರ್ಯಾಣದಲ್ಲಾದಂತೆ ಇಲ್ಲೂ ನಿಮ್ಮ ಮತಗಳ ಕಳವಾಗುತ್ತಿದೆ ಎಂಬ ರಾಹುಲ್ ಗಾಂಧಿ ಮಾತುಗಳನ್ನು ಬಿಹಾರದ ಜನ ನಂಬಲಿಲ್ಲ. ಕಾಂಗ್ರೆಸ್ಸಿಗರ ಪ್ರಚಾರದಲ್ಲಿ ವೋಟ್ ಚೋರಿ ಭಾರೀ ಸದ್ದು ಮಾಡಿದರೂ, ಜನರು ಅದನ್ನು ಗಂಭೀರವಾಗಿ ಸ್ವೀಕರಿಸಲಿಲ್ಲ. ವಾಸ್ತವದಲ್ಲಿ ಬಿಹಾರ ಮತದಾರರು ರೋಟಿ- ಕಪ್ಡಾ-ಮಕಾನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆಯೇ ವಿನಃ ವೋಟ್ ಚೋರಿ, ಕ್ರೋನಿ ಕ್ಯಾಪಿಟಲಿಸಂ, ಅದಾನಿ-ಅಂಬಾನಿ ಎಂಬ ರಾಜಕೀಯ ನಿರೂಪಣೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಈ ವಿಷಯ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ಅರ್ಥವಾಗಿತ್ತು. ಆದರೆ, ರಾಹುಲ್ ಗಾಂಧಿ ಮಾತ್ರ ವೋಟ್ ಚೋರಿ ವಿಷಯವನ್ನಿಟ್ಟುಕೊಂಡೇ ಪ್ರಚಾರ ಮಾಡಿದರು. ಫಲಿತಾಂಶ ಮಾತ್ರ ಶೂನ್ಯ. ಅಖಾಡದಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಸ್ಥಳೀಯ ವಿಷಯಗಳ ಬಗ್ಗೆ ಮಾತನಾಡಬೇಕು, ಚರ್ಚಿಸಬೇಕು ಎಂಬ ಇರಾದೆಯಿತ್ತಾದರೂ, ತಮ್ಮ ರಾಷ್ಟ್ರೀಯ ನಾಯಕ ಹೇಳುವ ವಿಷಯಗಳ ಬಗ್ಗೆಯೇ ಮಾತನಾಡುವುದು ಅನಿವಾರ್ಯವಾಗಿ ಬಿಟ್ಟಿತ್ತು. ಅಡಕತ್ತರಿಯಲ್ಲಿ ಸಿಲುಕಿದ ಕಾಂಗ್ರೆಸ್ಸಿಗರು, ಇದರಿಂದಾಗಿ ಬಿಹಾರದಲ್ಲಿ ಒಂದಂಕಿ ಪಾರ್ಟಿ ಯಾಗಿ ಬಿಟ್ಟಿದ್ದಾರೆ.