ಮಂಜು ಕಲಾಲ
ಆಮೆಗತಿಯಲ್ಲಿ ಸಾಗಿದ ವಿಜಯಪುರ-ಇಂಡಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ವಾಹನ ಸವಾರರ ಪರದಾಟ
ವಿಜಯಪುರ: ರಾಷ್ಟ್ರೀಯ ಹೆದ್ದಾರಿ 548 ಬಿ ನಲ್ಲಿ ನೀವು ಸಂಚಾರ ಮಾಡಬೇಕಾದ್ರೆ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕು. ವಿಜಯಪುರದಿಂದ ಇಂಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನ ನೋಡಿದ್ರೆ ಎಂತಹ ರಸ್ತೆ ಇದಪ್ಪಾ ಎಂದು ವಾಹನ ಸವಾರರು ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುವಂತಾಗಿದೆ.
ವಿಜಯಪುರದಿಂದ ಇಂಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 548 ಬಿ ರಸ್ತೆಯ ದುಸ್ಥಿತಿಯಿಂದಾಗ ಜನರು ಹೈರಾಣಾಗಿದ್ದಾರೆ. ಈ ಭಾಗದಲ್ಲಿ 20 ಕಿಲೋ ಮೀಟರ್ ಸಂಚಾರ ಮಾಡಬೇಕಾದ್ರೆ ಎರಡು ಗಂಟೆ ಬೇಕಾಗುತ್ತದೆ. ವಿಜಯಪುರದಿಂದ ನಾಗಠಾಣ ವೆರೆಗೆ ಸಂಚಾರ ಮಾಡೋಕೆ ವಾಹನ ಸವಾರರು ಹರಸಾಹಸ ಮಾಡುವಂತಾಗಿದೆ.
ಈ ಮೊದಲು ಈ ರಸ್ತೆ ರಾಜ್ಯ ಹೆದ್ದಾರಿ ಇದ್ದಾಗಲೂ ಇದೇ ಪರಿಸ್ಥಿತಿ ಇತ್ತು. ಇದೀಗ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿದರು ಇನ್ನೂ ಕಾಮಗಾರಿ ಮುಗಿದಿಲ್ಲ. ಒಂದು ವರ್ಷದಿಂದ ಕಾಮಗಾರಿ ಪ್ರಗತಿಯಲ್ಲಿದ್ದು ಜನ ಸಂಕಷ್ಟ ಪಡುವಂತಾಗಿದೆ.
ಕಳೆದ ಒಂದು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ ಮಾಡಿದ ಮೇಲೂ ಏನು ಪ್ರಯೋಜನ ವಿಲ್ಲ. ಜನರು ಇಂಡಿ ವಿಜಯಪುರ ರಸ್ತೆ ಸಂಚಾರ ಬೇಡವೇ ಬೇಡ ಎನ್ನುತ್ತಿದ್ದಾರೆ. ಅಲ್ಲದೆ ಈ ರಸ್ತೆಯಲ್ಲಿ ಸಂಚಾರ ಮಾಡೋಕು ಆಗದೆ ವಾಹನ ಸವಾರರು ಪರದಾಡುವಂತಾಗಿದೆ. ಪ್ರತಿ ನಿತ್ಯ ಅಪಾರ ಸಂಖ್ಯೆಯ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ, ಇನ್ನೂ ಗರ್ಭಿಣಿಯರಿಗೆ, ರೋಗಿಗಳಿಗೆ ಈ ರಸ್ತೆಯಲ್ಲಿ ಸಂಚಾರ ಮಾಡುವಂತಿಲ್ಲ ಎಂಬಂತಾಗಿದೆ, ಒಂದು ಕಡೆ ಹಾಳಾದ ರಸ್ತೆ.
ಮತ್ತೊಂದು ದೂಳಿನಿಂದ ವಾಹನ ಸವಾರರ ರದಾಡುವಂತಾಗಿದೆ. ಇಲ್ಲಿ ಸಂಚಾರ ಮಾಡು ವಾಗ ಮಾಸ್ಕ್ ಕಡ್ಡಾಯ ಹಾಕಬೇಕು ಎನ್ನುವಂತಾಗಿದೆ. ನಾಗಠಾಣ, ಅಲಿಯಾಬಾದ್, ಅಥರ್ಗ ಸೇರಿದಂತೆ ಹಲವು ಊರಿಗೆ ತೆರಳಲು ಪ್ರತಿನಿತ್ಯ ವಾಹನ ಸವಾರರು ಹರಸಾಹಸ ಪಡುವಂತಾಗಿದೆ.
ರಸ್ತೆ ಹಾಳಾಗಿರುವ ಕಾರಣ ಸೋಲಾಪುರ ಹೆದ್ದಾರಿ ಅಥವಾ ಕವಲಗಿ ಮಾರ್ಗವಾಗಿ ಜನರು ವಿಜಯಪುರಕ್ಕೆ ಸಂಚಾರ ಮಾಡಬೇಕಾಗಿದೆ. ಇನ್ನಾದರೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಗಳು ಇತ್ತ ಕಡೆ ಗಮನ ಹರಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಜನರ ಪರದಾಟ ತಪ್ಪಿಸಬೇಕು, ಸರಕಾರ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿಗಾಗಿ ಕೋಟಿ ಕೋಟಿ ಅನುದಾನ ನೀಡುತ್ತದೆ ಆದರೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ಸರಕಾರದ ಮಹತ್ವಾ ಕಾಂಕ್ಷೆಯ ಯೋಜನೆಗಳು ಹಳ್ಳ ಹಿಡಿಯುವಂತಾಗಿವೆ ಇನ್ನಾದರೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಎಚ್ಚೆತ್ತು ರಸ್ತೆಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.
![]()
ವಿಜಯಪುರದಿಂದ ನಾಗಠಾಣ ಮೂಲಕ ಇಂಡಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ರಸ್ತೆ ಸಂಪೂರ್ಣ ಹದಗೆಟ್ಟಿದ ಈ ಮಾರ್ಗದಲ್ಲಿ ಸಂಚರಿಸಲು ಭಯ ವಾಗುತ್ತದೆ, ಯಾವಾಗ ಎಲ್ಲಿ ಅಪಘಾತ ಸಂಭವಿಸುತ್ತದೆ ಎಂದು ತಿಳಿಯದಂತಾಗಿದೆ, ಈಗಾಗಲೇ ಈ ರಸ್ತೆಯಲ್ಲಿ ಸಾಕಷ್ಟು ಜನ ಬೈಕ್ ಸವಾರರು ಬಿದ್ದು ಗಾಯಗಳನ್ನ ಮಾಡಿಕೊಂಡಿದ್ದಾರೆ, ಸದ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಭಂದಿಸಿದಂತೆ ರವಿ ಇನಾಸ್ಟಕ್ಚರ್ ಎಂಬುವರಿಗೆ ಟೆಂಡರ್ ಆಗಿದೆ ಎನ್ನಲಾಗಿದೆ, ಆದರೆ ಕಾಮಗಾರಿ ಆಮೆಗತಿ ಯಲ್ಲಿ ಸಾಗಿದೆ, ಈ ಕುರಿತು ಸಂಬಂಧಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳು ಗಮನ ಹರಿಸಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವ ಜನಿಕರಿಗೆ ಅನುಕೂಲ ಕಲ್ಪಿಸಬೇಕು.
-ರೇವಣಸಿದ್ದಗೌಡ ಗೋಢಕೆ, ಸ್ಥಳೀಯರು.
![]()
ಐತಿಹಾಸಿಕ ವಿಜಯಪುರದಿಂದ ಇಂಡಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಾಗಠಾಣದಿಂದ ವಿಜಯಪುರವರೆಗೆ ರಸ್ತೆಯಲ್ಲಿ ಎಲ್ಲಂದರಲ್ಲಿ ತಗ್ಗು ಗುಂಡಿ ಬಿದ್ದು ರಸ್ತೆ ಸಂಪೂರ್ಣ ಹದ ಗೆಟ್ಟಿದೆ, ವಿಜಯಪುರದಿಂದ ಕಲವೇ ಕಿಮೀ ಗಳ ಅಂತರದಲ್ಲಿರುವ ನಾಗಠಾಣಕ್ಕೆ ಗಂಟೆಗಳ ಕಾಲ ಸಂಚರಿಸಬೇಕಾಗುತ್ತಿದೆ, ಈ ಕೂಡಲೇ ಜಿಲ್ಲಾಡಳಿತ ಇತ್ತ ಕಡೆ ಗಮನ ಹರಿಸಿ ರಸ್ತೆ ದುರಸ್ಥಿ ಮಾಡಬೇಕು ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕು.
-ಸುರೇಶ ಬಿಜಾಪುರ, ಸ್ಥಳೀಯರು.