ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಮುಂಬರುವ ಮಂತ್ರಿಗಳಿಗೆ ಆರಂಭಿಕ ಅಡ್ಡಿ, ಏನಿದ್ದರೂ ಸಿಎಂಗೆ ಅರ್ಜಿ ಕೊಡಿ
ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಅಧಿಕಾರ ಸ್ವೀಕರಿಸಲಿರುವ ನೂತನ ಸಚಿವರು ರಾಜ್ಯ ಸರಕಾರದ ಸಾರ್ವಜನಿಕ ವರ್ಗಾವಣೆಯಿಂದ ವಂಚಿತವಾಗಿದ್ದಾರೆ ಹೌದು, ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಶುರುವಾಗಿದ್ದು, ಶೀಘ್ರವೇ ನೂತನ ಸಚಿವರು ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ಅವರಿಗೆ ಆರಂಭಿಕ ಸಮಸ್ಯೆ ಎನ್ನುವಂತೆ ವರ್ಗಾವಣೆ ಅವಕಾಶ ಕೈತಪ್ಪಿ ಹೋಗಿದೆ.
ನೂತನ ಸಚಿವರು ಅಧಿಕಾರ ಆರಂಭಿಸಿದರೂ ತಮ್ಮ ವಿವೇಚನೆಯಂತೆ ತಮ್ಮ ಇಲಾಖೆ ವ್ಯಾಪ್ತಿಯ ಸಿಬ್ಬಂದಿ ಯನ್ನು ಇಚ್ಚಿಸಿದಂತೆ ವರ್ಗಾವಣೆ ಮಾಡಲಾಗದು, ಕಾರಣ ಅದಕ್ಕಾಗಿ ನಿಗದಿ ಮಾಡಿದ್ದ ಅವಧಿ ಮುಕ್ತಾಯಗೊಂಡಿದ್ದು, ಸಚಿವರಾಗಿ ಬರುವವರು ಯಾವುದೇ ಸಿಬ್ಬಂದಿಯ ವರ್ಗಾವಣೆಗೂ ಮುಂತ್ರಿಗಳಿಗೆ ಮನವಿ ಸಲ್ಲಿಸಿ ಅವರಿಂದ ಅನುಮೋದನೆ ಪಡೆದು ವರ್ಗಾವಣೆ ಮಾಡಿಸಿಕೊಳ್ಳ ಬೇಕಾಗಿದೆ.
ಒಂದು ವೇಳೆ ಕೆಲವು ಸಿಬ್ಬಂದಿ ಈಗಾಗಲೇ ವರ್ಗಾವಣೆಯಾಗಿದ್ದರೆ ಅವರನ್ನು ಸಚಿವರು ಕೂಡ ಬದಲಿಸುವುದು ಕಷ್ಟ. ಈಗಾಗಲೇ ವರ್ಗಾವಣೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಮುಖ್ಯ ಮಂತ್ರಿಗಳ ಆದೇಶದ ಮೂಲಕ ಮತ್ತೆ ವರ್ಗಾವಣೆ ಮಾಡಿಸದೆ ಅಂಥ ಸಿಬ್ಬಂದಿ ತಮ್ಮ ವಿರುದ್ಧದ ವರ್ಗಾವಣೆ ಆದೇಶವನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: Bangalore News: ಜಂತರ್ – ಮಂತರ್ ಯುವ ಸಂಗ್ರಾಮದಿಂದ ಮೋದಿ ಸರ್ಕಾರ ಪತನ ಸನ್ನಿಹಿತ: ಡಾ.ಆನಂದ ಕುಮಾರ್
ಹೀಗಾಗಿ ನೂತನ ಸಚಿವರು ವರ್ಗಾವಣೆಯಿಂದ ವಂಚಿತರಾಗಿದ್ದಾರೆ. ಒಂದು ವೇಳೆ ಸಂಪುಟದಲ್ಲಿ ಇದರ ಬಗ್ಗೆ ನಿರ್ಧರಿಸಿ ಮತ್ತೆ ವರ್ಗಾವಣೆ ಆದೇಶ ಮಾಡಬಹುದು. ಆದರೆ ಬಹುತೇಕ ಸರಕಾರಿ ಅಧಿಕಾರಿ ಮತ್ತು ನೌಕರರು ಈಗಾಗಲೇ ಮಕ್ಕಳ ಶಾಲಾ, ಕಾಲೇಜು ಹಾಗೂ ವಸತಿ ಗೃಹಗಳ ಸೌಲಭ್ಯ ಆಧರಿಸಿ ವರ್ಗಾವಣೆ ಗೊಂಡಿರುವ ಕಾರಣ ಅವರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ, ಆದರೆ ಕೌಶಲ್ಯಾಭಿವೃದ್ಧಿ, ಅರಣ್ಯ, ಇಂಧನ ಇಲಾಖೆ ಸೇರಿದಂತೆ ಅನೇಕ ಕಡೆ ಕಳೆದ 8 ವರ್ಷಗಳಿಂದಲೂ ಒಂದೇ ಸ್ಥಳದಲ್ಲಿ ಜಾಂಡಾ ಹೂಡಿರುವ ಅಧಿಕಾರಿಗಳಿಗೆ ವರದಾನವಾಗಿದೆ. ಇಂಥವರು ಬೆಸ್ಕಾಂ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದು ಸರಕಾರದ ಗಮನಕ್ಕೆ ಬಂದಿಲ್ಲ ಎಂದು ನೌಕರರ ಸಂಘ ಹೇಳಿದೆ.
ಏನಿದು ಸಮಸ್ಯೆ, ಏಕೆ ಹೀಗಾಗಿದೆ?
ರಾಜ್ಯ ಸರಕಾರ ಪ್ರತಿವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ಕಲ್ಪಿಸುತ್ತದೆ. ಹೀಗಾಗಿ ಈ ವರ್ಷ ಏಪ್ರಿಲ್ 13ರಿಂದ ಶೇ.6ರ ಮಿತಿಯಲ್ಲಿ ಸರಕಾರಿ ನೌಕರರ ವರ್ಗಾವಣೆ ನಡೆಸಲು ಆದೇಶ ಹೊರಡಿಸಿತ್ತು, ಆದರೆ ಅಷ್ಟೊತ್ತಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದ್ದರಿಂದ ವರ್ಗಾವಣೆ ಅವಧಿಯನ್ನು ಮತ್ತೊಂದು ತಿಂಗಳ ಕಾಲ ವಿಸ್ತರಿಸಿ ಆದೇಶ ಹೊಡಸಿತ್ತು. ಆಗಲೂ ಸಂಪುಟ ವಿಸ್ತರಣೆಯಾಗದೆ ವರ್ಗಾವಣೆ ಪ್ರಕ್ರಿಯೆ ಪೂರ್ಣ ವಾಗಲಿಲ್ಲ.
ನಂತರ ಮತ್ತೊಂದು ತಿಂಗಳ ಕಾಲಾವಕಾಶ ಕಲ್ಪಿಸಲಾಗಿದೆ. ಹೀಗಾಗಿ ಏಪ್ರಿಲ್ 13ರ ನಂತರ ಸತತ ಅಂದರೆ ಜೂನ್ 14, ಜುಲೈ 17 ಸೇರಿದಂತೆ ಒಟ್ಟು ನಾಲ್ಕು ಆದೇಶಗಳನ್ನು ವರ್ಗಾವಣೆ ಅವಧಿ ವಿಸ್ತರಣೆಗಾಗಿಯೇ ಮಾಡಲಾಗಿದೆ. ಇದರಿಂದ ಸರಕಾರಿ ನೌಕರರು ತೀರಾ ಗೊಂದಲವಾಗಿ ಅನಿಶ್ಚಿತತೆ ಯಲ್ಲಿ ಕೆಲಸ ನಿರ್ವಹಿಸುವಂತಾಗಿದ್ದರಿಂದ ಸರಕಾರ ಜುಲೈ 16ರಂದು ವರ್ಗಾವಣೆಯನ್ನು ಅಂತ್ಯ ಗೊಳಿಸಿ ಹಿಂದಿನ ಆದೇಶವನ್ನು ವಾಪಸ್ ಪಡೆದಿದೆ. ಹೀಗಾಗಿ ಈ ವರ್ಷದ ಸಾರ್ವತ್ರಿಕ ವರ್ಗಾವಣೆ ಅಂತ್ಯಗೊಂಡಂತಾಗಿದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಂತ್ರಿಗಳು ವರ್ಷದವರೆಗೂ ಕಾಯಬೇಕು ಕಾರ್ಮಿಕ ಇಲಾಖೆ, ಆಹಾರ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳ ವರ್ಗಾವಣೆ ಈಗಾಗಲೇ ಮುಕ್ತಾಯವಾಗಿದೆ. ಉಳಿದಂತೆ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಹಾಗೂ ಆರೋಗ್ಯ ಸೇರಿದಂತೆ ಕೆಲವು ಇಲಾಖೆಗಳಲ್ಲಿ ಕೌನ್ಸಿಲಿಂಗ್ ವರ್ಗಾವಣೆ ಇನ್ನೂ ಪೂರ್ಣವಾಗಿಲ್ಲ.
ಒಟ್ಟಾರೆ 5.25 ಲಕ್ಷ ಸರಕಾರಿ ನೌಕರರ ಪೈಕಿ ಶೇ.6 ಅಂದರೆ 30ಸಾವಿರ ನೌಕರರು ವರ್ಗಾವಣೆಯಾಗಿರ ಬಹುದು ಎನ್ನಲಾಗಿದೆ. ಹೀಗಾಗಿ ಇಂಥ ವಿಶೇಷ ಸಂದರ್ಭ ಮತ್ತು ಅವಕಾಶ ಲಭಿಸಲು ನೌಕರರು ಮತ್ತೆ ಒಂದು ವರ್ಷ ಕಾಯಬೇಕಿದೆ, ಅಷ್ಟೇ ಅಲ್ಲ ಹೊಸ ಮಂತ್ರಿಗಳು ಕೂಡ ತಮ್ಮದೇ ವಿವೇಚನಾ ಧಿಕಾರ ಬಳಸಿ ಮಾಡಬಹುದಾದ ಸಾರ್ವತ್ರಿಕ ವರ್ಗಾವಣೆಗೆ ಮುಂದಿನ ಮಾರ್ಚ್ ವರೆಗೂ ಕಾಯ ಬೇಕಾಗುತ್ತದೆ. ಅಷ್ಟೊತ್ತಿಗಾಗಲೇ 2028ರ ಚುನಾವಣೆ ಸಮೀಪಿಸುವ ಕಾರಣ ಅದಕ್ಕೆ ಅಷ್ಟೊಂದು ಮಹತ್ವ ಬರುವ ಸಾಧ್ಯತೆ ಕಡಿಮೆ ಎಂದು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.