ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಂಸದರ ಶೃಂಗಸಭೆ: 10 ಕೋಟಿ ಟೆಂಡರ್ ಅಕ್ರಮದ ಸದ್ದು

ವಿಧಾನಸಭೆ ಪ್ರಸ್ತಾಪದೊಂದಿಗೆ ನಡೆಯುತ್ತಿರುವ ಈ ಸಮ್ಮೇಳನಕ್ಕೆ ಹಣಕಾಸು ಇಲಾಖೆ ಅನುದಾನ ಒದಗಿಸಿದ್ದು, ಈ ಹಣದಲ್ಲಿ ಸುಮಾರು 10 ಕೋಟಿ ರು.ಗಳನ್ನು ಯಾವುದೇ ಟೆಂಡರ್ ನಡೆಸದೆ ಪಾರದರ್ಶಕ ಕಾಯ್ದೆಯಡಿ ವಿನಾಯಿತಿ ನೀಡಿದೆ. ಅಂದರೆ ಇದನ್ನು ಪ್ರಕೃತಿ ವಿಕೋಪಗಳ ಪರಿಣಾಮ ನಡೆಸುವ ತುರ್ತು ಕಾಮಗಾರಿಗಳಂತೆ ಪರಿಗಣಿಸಿ ಟೆಂಡರ್ ಇಲ್ಲದೆ ಕೈಗೊಳ್ಳುವಂತೆ ಹಣಕಾಸು ಇಲಾಖೆ ಅಧಿಕಾರಿಗಳು ವಿನಾಯಿತಿ ನೀಡಿದ್ದಾರೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ರಾಜ್ಯ ವಿಧಾನಮಂಡಲ ನಡೆಸುತ್ತಿರುವ ಮಹಿಳಾ ಸಂಸದರ ಶೃಂಗ ಸಭೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದಕ್ಕಾಗಿ ವೆಚ್ಚ ಮಾಡುತ್ತಿರುವ ಹಣದ ಬಗ್ಗೆ ತೀವ್ರ ಅಸಮಾಧಾನ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ನ.17 ಮತ್ತು 18ರಂದು ವಿಧಾನಸೌಧದಲ್ಲಿ ಕಾಮನ್‌ವೆಲ್ತ್ ರಾಷ್ಟ್ರಗಳ ಮಹಿಳಾ ಸಂಸದರ ಶೃಂಗ ಸಭೆ ನಡೆಸುತ್ತಿದ್ದು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ವಿವಿಧ ರಾಷ್ಟ್ರ, ರಾಜ್ಯಗಳ ಸಂಸದರು, ಮಹಿಳಾ ಸಂಸದರು ಸೇರಿ 150ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಆದರೆ ಇದಕ್ಕೆ ಸುಮಾರು 20 ಕೋಟಿ ರು. ವೆಚ್ಚವಾಗಬಹುದು ಎನ್ನಲಾಗುವ ಈ ಸಮ್ಮೇಳನದ ಕಾಮಗಾರಿ ಗಳ ಬಗ್ಗೆ ಅನುಮಾನಗಳು ಸುಳಿದಾಡಲಾರಂಭಿಸಿದೆ.

ಇದಕ್ಕೆ ಕಾರಣ ಸಮ್ಮೇಳನಕ್ಕಾಗಿ ಅಧಿಕೃತವಾಗಿ 10 ಕೋಟಿ ರು. ವೆಚ್ಚ ಮಾಡುತ್ತಿರುವ ಬಗ್ಗೆ ಅಸಮಾಧಾನ ಎದ್ದಿದೆ. ಅಂದರೆ ಸಮ್ಮೇಳನದ ಕಾಮಗಾರಿ ಗಳನ್ನು ಯಾವುದೇ ಟೆಂಡರ್ ನಡೆಸದೆ ಕೈಗೊಳ್ಳುತ್ತಿ ರುವ ಬಗ್ಗೆ ರಾಜ್ಯದ ಅನೇಕ ಸಂಸದರು, ಶಾಸಕರು ಮತ್ತು ಪರಿಷತ್ ಸದಸ್ಯರು ವಿರೋಧಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಧಾನಸಭೆ ಪ್ರಸ್ತಾಪದೊಂದಿಗೆ ನಡೆಯುತ್ತಿರುವ ಈ ಸಮ್ಮೇಳನಕ್ಕೆ ಹಣಕಾಸು ಇಲಾಖೆ ಅನುದಾನ ಒದಗಿಸಿದ್ದು, ಈ ಹಣದಲ್ಲಿ ಸುಮಾರು 10 ಕೋಟಿ ರು.ಗಳನ್ನು ಯಾವುದೇ ಟೆಂಡರ್ ನಡೆಸದೆ ಪಾರದರ್ಶಕ ಕಾಯ್ದೆಯಡಿ ವಿನಾಯಿತಿ ನೀಡಿದೆ. ಅಂದರೆ ಇದನ್ನು ಪ್ರಕೃತಿ ವಿಕೋಪಗಳ ಪರಿಣಾಮ ನಡೆಸುವ ತುರ್ತು ಕಾಮಗಾರಿಗಳಂತೆ ಪರಿಗಣಿಸಿ ಟೆಂಡರ್ ಇಲ್ಲದೆ ಕೈಗೊಳ್ಳುವಂತೆ ಹಣಕಾಸು ಇಲಾಖೆ ಅಧಿಕಾರಿಗಳು ವಿನಾಯಿತಿ ನೀಡಿದ್ದಾರೆ. ಇದರಿಂದ ಪ್ರಭಾವಿ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗೆ ಅನುಕೂಲವಾಗುತ್ತಿದೆ ಎಂದು ಹೇಳಲಾಗುತ್ತಿದೆ. ‌

ಇದನ್ನೂ ಓದಿ: Women's Reservation Bill: ಎಲ್ಲಾ ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿ ಪರವಾಗಿವೆ: ಸಿಎಂ ಡಿ.ಕೆ.ಶಿವಕುಮಾರ್

ಇದರಿಂದ ಕೆರಳಿರುವ ಕೆಲವು ಸಂಸದರು ಮತ್ತು ಶಾಸಕರು, ಈ ಸಮ್ಮೇಳನಕ್ಕೆ ಇಷ್ಟು ಭಾರೀ ಮೊತ್ತದ ಅಗತ್ಯವಿದೆಯೇ, ಅದರಲ್ಲೂ 10 ಕೋಟಿ ರು.ಗಳ ಕೆಲಸವನ್ನು ಟೆಂಡರ್ ಇಲ್ಲದೆ ನಡೆಸುವ ಅನಿವಾರ್ಯ ವೇನಿದೆ. ಇದೆ ಎರಡು ತಿಂಗಳ ಹಿಂದೆಯೇ ಚರ್ಚೆಯಾಗಿದ್ದರಿಂದ ಇದಕ್ಕಾಗಿ ಟೆಂಡರ್ ನಡೆಸಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಮಹಿಳಾ ಸಂಸದರ ಸಮ್ಮೇಳನದ ಬಗ್ಗೆ ಎಷ್ಟು ಮೆಚ್ಚುಗೆ ಇದೆಯೇ ಅಷ್ಟೇ ಅಕ್ರಮಗಳ ನಡೆಯಬಹುದಾದ ಅನುಮಾನಗಳೂ ಇವೆ. ಇದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಲಾಗುವುದು ಎಂದು ಕೆಲವು ಶಾಸಕರು ಹೇಳಿದ್ದಾರೆ.

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಮಂತ್ರಿಯೇ ಇಲ್ಲ

ಅಂದ ಹಾಗೆ ಮೊದಲ ಬಾರಿಗೆ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಸೈಬರ್ ಅಪರಾಧಗಳ ಜಗದಲ್ಲಿ ಮಹಿಳಾ ಸುರಕ್ಷತೆ, ಸಬಲೀಕರಣ ಹಾಗೂ ಶಾಸನದಲ್ಲಿ ಭಾಗವಹಿಸುವಿಕೆಯೇ ಪ್ರಧಾನ ವಾಗಿ ಚರ್ಚೆಯಾಗಲಿದೆ. ಆದರೆ ಇದಕ್ಕೆ ಅಣಕ ಎನ್ನುವಂತೆ ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಮಂತ್ರಿಯೇ ಇಲ್ಲವಾಗಿದೆ. ಅಷ್ಟೇ ಏಕೆ, ಈ ಸಮ್ಮೇಳನದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಯನ್ನು ಸಂಪೂರ್ಣ ಹೊರಗಿಟ್ಟಿದ್ದು, ನೆಪ ಮಾತ್ರಕ್ಕೆ ಇವರ ಪಾತ್ರ ಕಾಣದಂತಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಮಹಿಳಾ ಸಂಸದರಾದ ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ, ಪ್ರಭಾ ಮಲ್ಲಿಕಾರ್ಜುನ್ ಹಾಗೂ ಬಿಜೆಪಿಯ ಶೋಭಾ ಕರಂದ್ಲಾಜೆ ಅವರೇ ಸದ್ಯ ರಾಜ್ಯವನ್ನು ಪ್ರತಿನಿಧಿಸುವವರಾಗಿದ್ದಾರೆ. ಹೀಗಾಗಿ ಶಾಸಕನ ಸಭೆಯ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಚರ್ಚೆ ವೇಳೆ ಕರ್ನಾಟಕ ಸರಕಾರ ತಮ್ಮ ಮಹಿಳಾ ಮಂತ್ರಿ ಇಲ್ಲದೆ ಮುಜುಗರ ಅನುಭವಿಸುವ ಸಾಧ್ಯತೆಯನ್ನೂ ತಳ್ಳಿ ಹಾಕಲಾಗದು ಎಂದು ಬಿಜೆಪಿ ಸಂಸದರು ಹೇಳಿದ್ದಾರೆ.

10 ಕೋಟಿ ಕಾಮಗಾರಿಗೆ ಟೆಂಡರ್ ಮಾಡಿಲ್ಲ ಏಕೆ?

ಕಳೆದ ಬಾರಿ ಇದೇ ರೀತಿ ಕಾಮನ್‌ವೆಲ್ತ ರಾಷ್ಟ್ರಗಳ ಸಂಸದರ ಸಮ್ಮೇಶನ ನಡೆಸಲಾಗಿತ್ತು. ಪಂಚತಾರಾ ಹೊಟೇಲ್ ಗಳಲ್ಲಿ ನಡೆದಿದ್ದ ಈ ಸಮ್ಮೇಳನಕ್ಕೆ ಸುಮಾರು 20 ಕೋಟಿ ವೆಚ್ಚ ಮಾಡಲಾಗಿತ್ತು. ಆಗಲೂ ಟೆಂಡರ್ ನಡೆಸದೆ ಕಾಮಗಾರಿ ಕೈಗೊಳ್ಳಲಾಗಿತ್ತು. ಅದೇ ಚಾಳಿ ಮುಂದುವರಿ ಸಿರುವ ಹಣಕಾಸು ಇಲಾಖೆ, ವಿಧಾನ ಮಂಡಲ ಅಧಿಕಾರಿಗಳ ಮಾತಿಗೆ ಕಟ್ಟು ಬಿದ್ದು 10 ಕೋಟಿ ರು. ಕಾಮಗಾರಿಗೆ ಟೆಂಡರ್ ವಿನಾಯಿತಿ ನೀಡಿದೆ. ಜತೆಗೆ ಇತರ ಸುಮಾರು 8 ಕೋಟಿ ರು.ಗಳನ್ನು ವಿವಿಧ ರೀತಿಯಲ್ಲಿ ವೆಚ್ಚ ಮಾಡಲಾಗುತ್ತಿದ್ದು, ಇದಕ್ಕೆ ಯಾವುದೇ ವಿನಾಯಿತಿ ನೀಡಿಲ್ಲ. ಆದರೂ ಟೆಂಡರ್ ಇಲ್ಲದೆ ನಡೆಯುತ್ತಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳೇ ಹೇಳಿದ್ದಾರೆ.