ಮಂಜು ಕಲಾಲ್
ವಿವಿಧ ಭಾಗದಿಂದ ಆಗಮಿಸಿದ ಸ್ಪರ್ಧಿಗಳು
ಸಾಹಸಿಗಳ ಸಂಗ್ರಾಣಿ ಕಲ್ಲು ಕಸರತ್ತು
ಸಿದ್ದೇಶ್ವರ ಸಂಸ್ಥೆಯಿಂದ ಬಹುಮಾನ ಪಾರಿತೋಷಕ
ವಿಜಯಪುರ: ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣ ದಲ್ಲಿ ಜರುಗಿದ ಭಾರ ಎತ್ತುವ ಸ್ಪರ್ಧೆ ಕಸರತ್ತಿನ ಸ್ಪರ್ಧೆ ನೋಡುಗರನ್ನು ರೋಮಾಂಚನ ಗೊಳಿಸಿತು. ಪ್ರತಿ ವರ್ಷ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆಯುವ ಈ ಅದ್ಭುತ ಭಾರ ಎತ್ತುವ ಸ್ಪರ್ಧೆ ಜಾತ್ರೆಯ ಆಕರ್ಷಣೆಯ ಕೇಂದ್ರ ಬಿಂದು. ಸ್ಪರ್ಧೆಯಲ್ಲಿ ಕೆಜಿ ಸಂಗ್ರಾಣಿ ಕಲ್ಲು ಎತ್ತುವುದು, ಗುಂಡಕಲ್ಲು ಎತ್ತುವುದು, ಉಸುಕಿನ ಚೀಲ ಎತ್ತುವುದು, ಮೀಸೆಯಿಂದ ಕಬ್ಬಿಣದ ಸಲಾಕೆ ಎತ್ತುವುದು, ಹೀಗೆ ವಿವಿಧ ಕಸರತ್ತಿನ ಸ್ಪರ್ಧೆಗಳು ಜರುಗಿದವು.
ಇನ್ನೂ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಜಟ್ಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕಸರತ್ತನ್ನು ಪ್ರದರ್ಶಿಸಿರುವುದು ವಿಶೇಷವಾಗಿತ್ತು.
ಗಮನ ಸೆಳೆದ ಜಟ್ಟಿಗಳು: ಪೈಗಂಬರ ಮಮದಾಪೂರ ಎಂಬ ಜಟ್ಟಿ 80ಕ್ಕೂ ಹೆಚ್ಚು ಕಿಲೋ ಭಾರದ ಸಂಗ್ರಾಣಿ ಕಲ್ಲನ್ನು ಸರಳವಾಗಿ ಎತ್ತಿ ಸಾಹಸ ಪ್ರದರ್ಶಿಸಿದರೆ, ಶಂಕ್ರಪ್ಪ ಭಾವಿ ತನ್ನ ಮೀಸೆ ಯಿಂದ 75 ಕೆಜಿ ಭಾರತದ ಕಲ್ಲನ್ನು ಎತ್ತಿದ, ಜೈ ಹನುಮಾನ ಪಾದಗಟ್ಟಿ 300 ಕೆಜಿಯಷ್ಟು ಉಸುಕಿನ ಚೀಲವನ್ನು ಹತ್ತಾರು ಬಾರಿ ಎತ್ತಿದೆ, ರಮೇಶ ಪಾಟೀಲ 50 ಕೆಜಿ ಭಾರದ ಸಂಗ್ರಾಣಿ ಕಲ್ಲನ್ನು ಹಲ್ಲಿನಿಂದ ಎತ್ತಿದರು, ಕಾಂತಪ್ಪ ಯರಗಲ್ 75 ಕೆಜಿ ಸಂಗ್ರಾಣಿ ಕಲ್ಲನ್ನು ಗಡ್ಡಕ್ಕೆ ಹಗ್ಗ ಕಟ್ಟಿಕೊಂಡು ಎಳೆದದ್ದು ನೋಡುಗರನ್ನು ರೋಮಾಂಚನವಾಗಿಸಿತು.
ಇದನ್ನೂ ಓದಿ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ: ಸಿಎಂ ಭರವಸೆ
ಸಂಗ್ರಾಣಿ ಕಲ್ಲು ಎತ್ತುವ ವಿಭಾಗ: ಪೈಗಂಬರ ಮಮದಾಪೂರ (80 ಕೆಜಿ ಸಂಗ್ರಾಣಿ ಕಲ್ಲು ನಾಲ್ಕು ಬಾರಿ ಎತ್ತುವ ಮೂಲಕ ಪ್ರಥಮ, ರಮಜಾನ್ ಮುಜಾವರ 3 ಬಾರಿ ಕಲ್ಲು ಎತ್ತುವ ಮೂಲಕ ದ್ವಿತೀಯ ಹಾಗೂ ಪ್ರಕಾಶ ಭೋಸಲೆ ಒಂದು ಬಾರಿ ಕಲ್ಲು ಎತ್ತುವ ಮೂಲಕ ತೃತೀಯ ಸ್ಥಾನ ಬಾಚಿಕೊಂಡರು.
102 ಕೆಜಿ ಒತ್ತು ಕಲ್ಲು ಸ್ಪರ್ಧೆ : 102 ಕೆಜಿಯ ಒತ್ತುಕಲ್ಲನ್ನು 8 ಬಾರಿ ಎತ್ತುವ ಮೂಲಕ ವಿಠ್ಠಲ ಮನ್ನಕಟ್ಟಿ ಪ್ರಥಮ, 2 ಬಾರಿ ಎತ್ತುವ ಮೂಲಕ ಮುತ್ತು ನಾಗೂರ ದ್ವಿತೀಯ ಹಾಗೂ ಒಂದು ಬಾರಿ ಎತ್ತುವ ಮೂಲಕ ಗೌಡಪ್ಪ ಪೂಜಾರಿ ತೃತೀಯ ಸ್ಥಾನ ಪಡೆದುಕೊಂಡರು.
ಮೀಸೆಯಿಂದ ಭಾರ : 75 ಕೆಜಿ ಹಾರಿಯನ್ನು ಮೀಸೆಗೆ ಹಗ್ಗ ಕಟ್ಟಿಕೊಂಡು ಎತ್ತುವ ಮೂಲಕ ಶಂಕ್ರಪ್ಪ ಬಾವಿ ಪ್ರಥಮ, 65 ಕೆಜಿಯ ಹಾರಿಯನ್ನು ಮೀಸೆಗೆ ಹಗ್ಗ ಕಟ್ಟಿಕೊಂಡು ಎತ್ತಿದ ರಾಮಣ್ಣ ಚೌಡಕಿ ದ್ವಿತೀಯ ಸ್ಥಾನಕ್ಕೆ ಭಾಜನರಾದರು.
300 ಕೆಜಿ ಉಸುಕಿನ ಚೀಲ ಎತ್ತುವ ಸ್ಪರ್ಧೆ : 300 ಕೆಜಿ ಉಸುಕಿನ ಚೀಲವನ್ನು 10 ಬಾರಿ ಎತ್ತಿದ ಜೈಹನುಮಾನ ಪಾದಗಟ್ಟಿ ಪ್ರಥಮ, ಆರು ಬಾರಿ ಎತ್ತುವ ಮೂಲಕ ವಿಠ್ಠಲ ಗೋನಾಳ, ಒಂದು ಬಾರಿ ಉಸುಕಿನ ಚೀಲ ಎತ್ತುವ ಮೂಲಕ ಪ್ರವೀಣ ಶಿರೂರ ತೃತೀಯ ಸ್ಥಾನ ಪಡೆದುಕೊಂಡರು.
ಬಹುಮಾನ ವಿತರಣೆ
ಸಂಸ್ಥೆಯ ಚೇರಮನ್ ಬಸಯ್ಯ ಎಸ್. ಹಿರೇಮಠ ಕಾರ್ಯದರ್ಶಿ ಸದಾನಂದ ದೇಸಾಯಿ, ಬಿ. ಎಸ್. ಸುಗೂರ ಕೋಶಾಧ್ಯಕ್ಷರಾದ ಶಿವಾನಂದ ನೀಲಾ, ಜಾತ್ರಾ ಸಮಿತಿಯ ಅಧ್ಯಕ್ಷರಾದ ಗುರು ಎಸ್. ಗಚ್ಚಿನಮಠ ಸಂಸ್ಥೆಯ ನಿರ್ದೇಶಕರಾದ ಎನ್. ಎಮ್. ಗೋಲಾಯಿ, ನಾಗಪ್ಪ ಗುಗ್ಗರಿ, ಎಸ್.ಎಸ್. ಗುಡ್ಡೋಡಗಿ, ಸುಧೀರ ಚಿಂಚಲಿ, ಭಾರ ಎತ್ತುವ ಜಾತ್ರಾ ಸಮಿತಿಯ ಗೌರವಾಧ್ಯಕ್ಷರಾದ ಮಹಾದೇವ ಜಂಗಮಶೇಟ್ಟಿ ಬಬಲೇಶ್ವರ, ಮುತ್ತಪ್ಪ ಹಳ್ಳಿ, ನಿಂಗಯ್ಯ ಮಠ, ರಾಜು ಕೊಪ್ಪದ, ಚನ್ನಪ್ಪ ಈರ್ಪಾನಗೊಳ ಬಬಲೇಶ್ವರ, ರಾಜು ಕೊಪ್ಪದ, ಎಸ್. ಎಂ. ಪಾಟೀಲ ಬಬಲಾದಿ, ಶ್ರೀಮಂತ ಜಂಬಗಿ, ಈರಣ್ಣ ಪಾಟೀಲ, ಬಾಗಪ್ಪ ಕನ್ನೋಳ್ಳಿ, ಬಸವರಾಜ ಬೆಲ್ಲದ, ಶ್ರೀಶೈಲ ಗಡಗಿ ಮೊದಲಾದ ಗಣ್ಯರ ಸಮ್ಮುಖದಲ್ಲಿ ಪಾರಿತೋಷಕ ವಿತರಿಸಲಾಯಿತು.
ಹಲ್ಲಿನಿಂದ ಕಲ್ಲು ಎತ್ತಿದ ಸಾಹಸಿಗರು
ಹಲ್ಲಿನಿಂದ ಕಲ್ಲು ಎತ್ತುವ ಅದ್ಭುತ ಸಾಹಸ ಪ್ರದರ್ಶನದಲ್ಲಿ ರಮೇಶ ಪಾಟೀಲ ೫೦ ಕೆಜಿ ಭಾರದ ಸಂಗ್ರಾಣಿ ಕಲ್ಲನ್ನು ಎತ್ತಿ ಪ್ರಥಮ ಹಾಗೂ ಗಡ್ಡಕ್ಕೆ ಹಗ್ಗ ಕಟ್ಟಿಕೊಂಡು ೫೦ ಕೆಜಿ ಹಾರಿಯನ್ನು ಎತ್ತುವ ಮೂಲಕ ಗಾಲೆಪ್ಪ ಮಣೂರ ದ್ವಿತೀಯ ಸ್ಥಾನ ಪಡೆದುಕೊಂಡರು. ಗಡ್ಡಕ್ಕೆ ಹಗ್ಗ ಕಟ್ಟಿಕೊಂಡು 75 ಕೆಜಿ ಸಂಗ್ರಾಣಿ ಕಲ್ಲು ಎತ್ತಿದ ಕಾಂತಪ್ಪ ಯರಗಲ್ ಪ್ರಥಮ ಹಾಗೂ 50 ಕೆಜಿ ಸಂಗ್ರಾಣಿ ಕಲ್ಲನ್ನು ಗಡ್ಡಕ್ಕೆ ಹಗ್ಗ ಕಟ್ಟಿಕೊಂಡು ಎತ್ತಿದ ಪರಶುರಾಮ ಹೂಗಾರ ದ್ವಿತೀಯ ಸ್ಥಾನ ಪಡೆದುಕೊಂಡರು.