ಅಪರ್ಣಾ ಎ.ಎಸ್ ಬೆಂಗಳೂರು
ಬೈಯಪ್ಪನಹಳ್ಳಿ ವಿಭಾಗದಲ್ಲಿ ಹಿರಿಯ ಅಧಿಕಾರಿಗಳ ಕಿರುಕುಳ ಆರೋಪ
ಎಂಡಿಗೆ ದೂರು ಸಲ್ಲಿಸಿರುವ ಸಿಬ್ಬಂದಿ
ರಾಜಧಾನಿ ಬೆಂಗಳೂರಿಗರ ಸಂಚಾರದಲ್ಲಿ ಪ್ರಮುಖ ಪಾತ್ರ ವಹಿಸುವ ನಮ್ಮ ಮೆಟ್ರೋದಲ್ಲಿ ಅಧಿಕಾರಿಗಳ ನಡುವಿನ ಕಿತ್ತಾಟದಿಂದಾಗಿ, ಸೂಕ್ತ ಸಮಯದಲ್ಲಿ ಕಾಮಗಾರಿ ನಡೆಯದೇ, ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ನಮ್ಮ ಮೆಟ್ರೋದ ಪ್ರಮುಖ ತಾಣವಾಗಿರುವ ಬೈಯಪ್ಪಹಳ್ಳಿ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಕಾಯಂ ಅಧಿಕಾರಿಗಳ ನಡುವಿನ ಕಿತ್ತಾಟದಿಂದಾಗಿ, ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಸಿಬ್ಬಂದಿ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡುವ ಹಂತಕ್ಕೆ ಬಂದಿದೆ.
ಗುತ್ತಿಗೆ ಆಧಾರದಲ್ಲಿ ಮ್ಯಾನೇಜರ್ ಹಾಗೂ ಉಪಮ್ಯಾನೇಜರ್ ಹುದ್ದೆಗೆ ನೇಮಕವಾಗಿರುವ ಕೆಲ ಅಧಿಕಾರಿಗಳು, ಇತರೆ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸದೇ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತಿದ್ದಾರೆ.
ಕೇಂದ್ರ ಸರಕಾರದಿಂದ ನೇಮಕವಾಗಿರುವ ಕಾರಣಕ್ಕೆ, ಇಲ್ಲಿನ ನಿಯಮಗಳನ್ನು ಪಾಲಿಸುವ ಅಗತ್ಯವಿಲ್ಲವೆಂದು ಮೆಟ್ರೋ ನಿಯಮಗಳನ್ನು ಮೀರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಒಟ್ಟಾರೆ ಕಾರ್ಯಚರಣೆಗೆ ಸಮಸ್ಯೆಯಾಗಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ಇದನ್ನೂ ಓದಿ: Namma Metro: ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್, ನಮ್ಮ ಮೆಟ್ರೋ ಸಂಚಾರ ವಿಸ್ತರಣೆ
ಅರ್ಹತೆ ಇಲ್ಲದಿದ್ದರೂ ನೇಮಕ?: ಮೂಲಗಳ ಪ್ರಕಾರ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಕೆಲ ಅಧಿಕಾರಿಗಳಿಗೆ, ಯಾವುದೇ ತಾಂತ್ರಿಕ ಅರ್ಹತೆ ಹೊಂದಿಲ್ಲ. ಆದರೆ ಪ್ರಭಾವವನ್ನು ಬಳಸಿ ಕೊಂಡು, ಬೈಯಪ್ಪನಹಳ್ಳಿ ವಿಭಾಗದ ಉನ್ನತ ಹುದ್ದೆಗೆ ನೇಮಕಗೊಂಡಿದ್ದಾರೆ. ಕೆಲಸಕ್ಕೆ ಸೇರಿದ ಬಳಿಕ, ರಾಜ್ಯ ಸರಕಾರದ ಅಧೀನಕ್ಕೊಳಪಡದ ಹಿನ್ನೆಲೆ ಮೆಟ್ರೋದ ನಿಯಮಗಳು ಅನ್ವಯಿಸುವು ದಿಲ್ಲ. ಕೇಂದ್ರ ಸರಕಾರದ ಅಧೀನದಲ್ಲಿ ಬರುತ್ತೇವೆ ಎಂದು ಹೇಳಿ ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆಯಾಗುವಂತೆ ಹಾಗೂ ಕಾನೂನು ಉಲ್ಲಂಘನೆಯಾಗುವಂತೆ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದೆ.
ಸಿಬ್ಬಂದಿ ಹೇಳುವ ಪ್ರಕಾರ, ನಮ್ಮ ಮೆಟ್ರೋ ಎಂಡಿ ನೀಡುವ ಸೂಚನೆಯನ್ನು ಪಾಲಿಸಲು ಅಡ್ಡಿಯಾಗುತ್ತಿದ್ದಾರೆ. ಇದರೊಂದಿಗೆ ಮೀಟಿಂಗ್ ನೆಪದಲ್ಲಿ ಅಧಿಕಾರಿಗಳನ್ನು ಗಂಟೆಗಟ್ಟಲೆ ತಮ್ಮ ಕೊಠಡಿಯಲ್ಲಿ ಕೂರಿಸಿಕೊಂಡಿರುತ್ತಾರೆ. ಇದರಿಂದ ಕೆಲಸ ಕಾರ್ಯಗಳಿಗೆ ಭಾರಿ ಸಮಸ್ಯೆಯಾಗುತ್ತಿದೆ. ಒಂದು ವೇಳೆ ಸಭೆಗೆ ಹೋಗದಿದ್ದರೆ ಅಶಿಸ್ತು ಮತ್ತು ಕರ್ತವ್ಯ ನಿರ್ವಹಣೆ ವಿಫಲ ಹೆಸರಿನಲ್ಲಿ ಶೋಕಾಸ್ ನೋಟಿಸ್ ನೀಡುವ ಬೆದರಿಕೆ ಹಾಕುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇಬ್ಬರಿಂದ ಇಡೀ ವ್ಯವಸ್ಥೆಗೆ ಸಮಸ್ಯೆ: ಬೈಯಪ್ಪನ ಹಳ್ಳಿ ವಿಭಾಗದಲ್ಲಿ ನಮ್ಮ ಮೆಟ್ರೋ ಕೆಲಸ ಉತ್ತಮ ರೀತಿಯಲ್ಲಿ ನಡೆಯುತ್ತಿತ್ತು. ಆದರೆ ಈ ಅಧಿಕಾರಿಗಳಿಂದ ಭಾರಿ ಸಮಸ್ಯೆಯಾಗಿದೆ. ನಾಲ್ಕೈದು ಬಾರಿ ವಿದ್ಯುತ್ ವ್ಯತ್ಯಯ ಉಂಟಾಗಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೆ, ನಾವು ಹೇಳಿದಂತೆ ಕೆಲಸ ಮಾಡಬೇಕು ಇಲ್ಲವಾದಲ್ಲಿ ಕೇಂದ್ರ ನಗರಾಭಿವೃದ್ಧಿ ಮಂತ್ರಿಗೆ ವರದಿ ನೀಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಸಿಬ್ಬಂದಿಗಳು ಆರೋಪಿಸಿದ್ದಾರೆ.
ರಾತ್ರಿ ವೇಳೆ ತಪಾಸಣೆಗೂ ಅಡ್ಡಿ?
ಈ ಹಿಂದೆ ಮೆಟ್ರೋ ಸಂಚಾರ ಅಂತ್ಯವಾದ ಬಳಿಕ ರಾತ್ರಿ 122ರಿಂದ ನಿರ್ವಹಣೆ ಕಾಮಗಾರಿ ಮತ್ತು ಪರಿಶೀಲನೆ ಮಾಡುವುದು ವಾಡಿಕೆ. ಆದರೆ ಗುತ್ತಿಗೆ ಆಧಾರದಲ್ಲಿ ಬಂದಿರುವ ಈ ಅಧಿಕಾರಿಗಳು, ರಾತ್ರಿ ವೇಳೆ ಪರಿಶೀಲನೆ ಮಾಡುವಂತಿಲ್ಲ ಎನ್ನುವ ಸೂಚನೆ ನೀಡುತ್ತಿದ್ದಾರೆ. ರಾತ್ರಿ ಪರಿಶೀಲನೆ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ತಾಂತ್ರಿಕ ನಿರ್ದೇಶಕರಿಗೂ ಇದು ಗೊತ್ತಿದೆ. ಅವರ ಸೂಚನೆಯಂತೆ ಈ ಪರಿಶೀಲನೆ, ಕಾಮಗಾರಿಗಳು ನಡೆಯುತ್ತಿವೆ ಎಂದು ಸಿಬ್ಬಂದಿ ಹೇಳಿದರೂ, ಅದಕ್ಕೆ ಅವಕಾಶ ನೀಡುತ್ತಿಲ್ಲ. ಎಂಡಿ ಮತ್ತು ತಾಂತ್ರಿಕ ನಿರ್ದೇಶಕರ ಸೂಚನೆಯಂತೆ ಕೆಲಸ ಮಾಡುವುದಾದರೆ ನಿಮಗೆ ಇಲ್ಲಿ ಕೆಲಸವಿಲ್ಲ. ಎರಡು ವರ್ಷ ನಾವು ಹೇಳಿದಂತೆ ಕೇಳಬೇಕು ಇಲ್ಲವಾದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ಆರೋಪವನ್ನು ಪತ್ರದಲ್ಲಿ ಮಾಡಿದ್ದಾರೆ.
ಸಿಬ್ಬಂದಿ ದೂರುಗಳೇನು?
? ಪರಿಶೀಲನೆ ವೇಳೆ ಹಿರಿಯ ಅಧಿಕಾರಿಗಳ ಗೈರು
? ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಿದ್ದು, ಜವಾಬ್ದಾರಿಗಳ ಸ್ಪಷ್ಟತೆ ನೀಡುತ್ತಿಲ್ಲ
? ನೈಜ ಸಮಸ್ಯೆ ಗಮನಕ್ಕೆ ತಂದರೆ ನಕಾರಾತ್ಮಕ ಟಿಪ್ಪಣಿ ಬರೆಯುವ ಬೆದರಿಕೆ
ಸಿಬ್ಬಂದಿಯ ಬೇಡಿಕೆಗಳೇನು?
ಅಧಿಕಾರಿಗಳ ಬಗ್ಗೆ ಸಿಬ್ಬಂದಿಗಳಿಂದ ಗೌಪ್ಯವಾಗಿ ಅಭಿಪ್ರಾಯ ಸಂಗ್ರಹಿಸಿ ಕ್ರಮ ವಹಿಸಿ
ತಾಂತ್ರಿಕ ನೌಪುಣ್ಯತೆ ಇರುವ ಅಧಿಕಾರಿಗಳನ್ನು ಇವರ ಜಾಗಕ್ಕೆ ನೇಮಿಸಬೇಕು
ಕಾರ್ಯಕ್ಷಮತೆ, ಪಾರದರ್ಶಕತೆ ಮತ್ತು ಸಿಬ್ಬಂದಿ ವಿಶ್ವಾಸ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು