ವೀರೇಶ ಎಸ್.ಕೆಂಭಾವಿ ಯಾದಗಿರಿ
ಕೈ ಕೊಟ್ಟಿರುವ ಸರ್ವರ್, ಪಡಿತರ ಇ-ಕೆವೈಸಿ ಮುಗಿಸಲಾಗದೇ ಜನರ ಪರದಾಟ
ಕಳೆದ ನಾಲ್ಕೈದು ತಿಂಗಳಿನಿಂದ ಇಡೀ ರಾಜ್ಯದ ಸರಕಾರಿ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ ಎಂಬ ಪದ ಪದೇಪದೇ ಕೇಳಿಬರುತ್ತಿದೆ. ಭೂದಾಖಲೆಗಳನ್ನು ಪಡೆದುಕೊಳ್ಳಲು, ಕೆವೈಸಿ ಮಾಡಿಸಲು, ದಾಖಲೆ ವರ್ಗಾವಣೆ ಮಾಡಲೂ ಇದೇ ಸಮಸ್ಯೆಯನ್ನು ಹೇಳಲಾಗುತ್ತಿದೆ. ಅದಕ್ಕೆ ಸರಿಯಾಗಿ ಯಾದಗಿರಿ ಜಿಲ್ಲೆಯಲ್ಲಿ ಜನ ತಡರಾತ್ರಿಯವರೆಗೆ ಕಾದರೂ ಪಡಿತರ ಚೀಟಿ ಇ-ಕೆವೈಸಿ ಮಾಡಿಸ ಲಾಗದೇ ಪರದಾಡಿದ್ದಾರೆ. ಇದಕ್ಕೆ ಕಾರಣ ಸರ್ವರ್ ಸಮಸ್ಯೆ! ಪಡಿತರ ಚೀಟಿಗೆ ಕಡ್ಡಾಯವಾಗಿರುವ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ ಪಡಿತರದಾರರು ತೀವ್ರ ಸಂಕಷ್ಟ ಎದುರಿಸು ತ್ತಿದ್ದಾರೆ. ಜಿಲ್ಲೆಯ ವಿವಿಧ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತರೂ, ಸರ್ವರ್ ನಿಧಾನಗತಿ ಹಾಗೂ ತಾಂತ್ರಿಕ ದೋಷದಿಂದ ಇ-ಕೆವೈಸಿ ಪೂರ್ಣಗೊಳ್ಳದೆ ಜನರು ಪರದಾಡುತ್ತಿದ್ದಾರೆ.
ಇದನ್ನೂ ಓದಿ: Yadgir News: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಭಾಗ್ಯವಂತಿ ಮಠದ ಪೂಜಾರಿ ವಿರುದ್ಧ ಪೋಕ್ಸೋ ಕೇಸ್ ದಾಖಲು
ದೂರದ ಊರುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಒಂದು ದಿನದ ರಜೆ ಪಡೆದು ಊರಿಗೆ ಬಂದರೂ ಕೆಲಸ ಮುಗಿಸಿಕೊಳ್ಳಲಾಗದೆ ಮತ್ತೆ ರಜೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ವಿದ್ಯಾರ್ಥಿಗಳೂ ಶಾಲಾಕಾಲೇಜು ಬಿಟ್ಟು ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಇತ್ತ ಉತ್ತರ ಕರ್ನಾಟಕದಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗಿರುವ ಸಮಯ. ಕಳೆ ತೆಗೆಯುವುದು, ಔಷಧ ಸಿಂಪಡಣೆ, ಗೊಬ್ಬರ ಹಾಕುವುದು ಸೇರಿದಂತೆ ಕೃಷಿ ಕೆಲಸಗಳಲ್ಲಿ ತೊಡಗಿರುವ ರೈತರು ಹಾಗೂ ಕೂಲಿ ಕಾರ್ಮಿಕರು ಇ-ಕೆವೈಸಿಗಾಗಿ ಕೆಲಸ ಬಿಟ್ಟು ಬರಬೇಕಾಗಿದೆ. ಇದರಿಂದ ದಿನದ ದುಡಿಮೆಯೂ ಕೈತಪ್ಪುತ್ತಿದೆ. ಇ-ಕೆವೈಸಿ ಪ್ರಕ್ರಿಯೆಯನ್ನು ಬೇಸಿಗೆ ರಜೆ ಅಥವಾ ಶಾಲಾ ರಜೆ ಅವಽಯಲ್ಲೇ ಕೈಗೊಳ್ಳಬೇಕಿತ್ತು. ಈಗ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ವರ್ ಸಮಸ್ಯೆ ಮತ್ತಷ್ಟು ಜನರನ್ನು ಕಾಡುತ್ತಿದೆ. ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಪಡಿತರ ಚೀಟಿಗೆ ತೊಂದರೆ ಯಾಗುವ ಆತಂಕವೂ ಪಡಿತರದಾರರಲ್ಲಿ ಮನೆಮಾಡಿದೆ.
ಸರ್ವರ್ ಸಮಸ್ಯೆಯೇನು?
ಕಳೆದ 4-5 ತಿಂಗಳುಗಳಿಂದ ಸರಕಾರಿ ವೆಬ್‌ಸೈಟ್‌ಗಳಿಗೆ ಸರ್ವರ್ ಸಮಸ್ಯೆ
ದಾಖಲೆ ಡೌನ್‌ಲೋಡ್ ಮಾಡಿಕೊಳ್ಳಲು, ಇ-ಕೆವೈಸಿ ಮಾಡಿಸಲು ಕಿರಿಕಿರಿ
ಯಾದಗಿರಿ ಜಿಲ್ಲೆಯಲ್ಲಿ ಸಮಸ್ಯೆ ತೀವ್ರ, ರಾತ್ರಿವರೆಗೂ ಕಾಯುತ್ತಿರುವ ಜನರು
ಸೆ.30ಕ್ಕೆ ಪಡಿತರ ಚೀಟಿ ಇ-ಕೆವೈಸಿ ಮುಗಿಸಲು ಗಡವು, ಜನರಿಗೆ ದಿಗಿಲು
ದೂರದೂರಿಂದ ರಜೆ ಹಾಕಿ ಬಂದ ವಿದ್ಯಾರ್ಥಿಗಳಿಗೂ ರಜೆ ವಿಸ್ತರಿಸ ಬೇಕಾದ ಸಂಕಟ, ರೈತರಿಗೂ ಇಬ್ಬಂದಿ
ಪಡಿತರದಾರರ ಒತ್ತಾಯ
ಸರ್ವರ್ ಸಮಸ್ಯೆಯನ್ನು ತಕ್ಷಣ ಪರಿಹರಿಸಿ, ಇ-ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ದಿನವಿಡೀ ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿಗೆ ಅಂತ್ಯ ಹಾಡಿ, ವಿದ್ಯಾರ್ಥಿಗಳು, ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಅಗತ್ಯ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಪಡಿತರದಾರರ ಒತ್ತಾಯವಾಗಿದೆ.
![]()
ಇದು ನಮ್ಮ ಜಿಲ್ಲೆಯೊಂದರ ಸಮಸ್ಯೆಯಲ್ಲ. ರಾಜ್ಯಾದ್ಯಂತ ಸರ್ವರ್ ತೊಡಕು ಉಂಟಾಗಿದೆ. ಈ ಬಗ್ಗೆ ರಾಜ್ಯದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರ ಪರಿಹಾರ ದೊರಕಲಿದೆ.
-ಸೋಮಶೇಖರ್ ಬಿರಾದಾರ ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
![]()
ಉಡುಪಿಯಿಂದ ಒಂದು ದಿನ ರಜೆ ಪಡೆದು ಬಂದಿದ್ದೇನೆ. ಆದರೆ ಸರ್ವರ್ ಸಮಸ್ಯೆಯಿಂದ ಇ-ಕೆವೈಸಿ ಆಗುತ್ತಿಲ್ಲ. ಮತ್ತೆ ರಜೆ ಪಡೆದು ಬರಬೇಕಾದ ಪರಿಸ್ಥಿತಿ ಬಂದಿದೆ.
-ಇ-ಕೆವೈಸಿ ಮಾಡಲು ಬಂದ ವಿದ್ಯಾರ್ಥಿ