ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ನಿಷೇಧಿತ ಜಾಗದಲ್ಲಿ 80 ಎಕರೆ ಬಡಾವಣೆಗೆ ಎಂಡಿಎ ನಿರ್ಣಯ
ಅಧಿಕಾರಿಗಳ ಆಟ
ಕತ್ತಲೆಯಲ್ಲಿ ಸರಕಾರ
ನಾಡಿನ ಅದಿ ದೇವತೆ, ವಿಶ್ವ ವಿಖ್ಯಾತ ಚಾಮುಂಡಿ ಬೆಟ್ಟದ ರಕ್ಷಣೆಗಾಗಿ ಮೀಸಲಾದ ವಿಶೇಷ ಸೂಕ್ಷ್ಮ ಪರಿಸರ ವಲಯದ ಸಾವಿರಾರು ಕೋಟ್ಯಾಂತರ ರು. ಮೌಲ್ಯದ ಜಾಗಕ್ಕೆ ಕನ್ನ ಹಾಕಲಾಗುತ್ತಿದೆ.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಭಿವೃದ್ಧಿ ನಿಷೇಧಿತ ವಿಶೇಷ ಸೂಕ್ಷ್ಮ ಪರಿಸರ ವಲಯದಲ್ಲಿ ಸುಮಾರು 80 ಎಕರೆ ಜಾಗವನ್ನು ಬಡಾವಣೆ ಮಾಡಿ ರಿಯಲ್ ಎಸ್ಟೇಟ್ ನಡೆಸಲು (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಎಂಡಿಎ ಒಪ್ಪಿಗೆ ನೀಡಿದೆ.
ಪ್ರಾಧಿಕಾರ ಮಾಡಿರುವ ಈ ನಿರ್ಧಾರ ಮತ್ತು ಶಿಫಾರಸು ಈಗ ಸರಕಾರಕ್ಕೆ ಸಲ್ಲಿಕೆಯಾಗಿದ್ದು, ಇದಕ್ಕೆ ಅನುಮತಿ ನೀಡಿದರೆ ಸರಕಾರ ಕಣ್ಣೆದುರೇ ಅಕ್ರಮ ನಡೆಯಲು ಅವಕಾಶ ನೀಡಿದಂತಾಗುತ್ತದೆ ಎಂದು ಪರಿಸರವಾದಿಗಳು ಹೇಳಿದ್ದಾರೆ.
ಅಚ್ಚರಿ ಎಂದರೆ ಎಂಡಿಎ ಅಧಿಕಾರಿಗಳ ಈ ಅಕ್ರಮದ ವಿಚಾರ ಜಿಲ್ಲಾ ಉಸ್ತುವಾರಿ ಸಚಿವರಿಗಾಗಲಿ, ನಗರಾಭಿವೃದ್ಧಿ ಸಚಿವರಿಗಾಗಲಿ ಗಮನಕ್ಕೆ ಬಂದಿಲ್ಲ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದರ ಬಗ್ಗೆ ಗೊತ್ತೇ ಆಗಿಲ್ಲ. ಅಷ್ಟೇ ಏಕೆ, ಬಹುತೇಕ ಪ್ರಾಧಿಕಾರದ ಸದಸ್ಯರಿಗೇ ಇದರ ಮಾಹಿತಿ ಪ್ರಾಧಿಕಾರದ ಸದಸ್ಯರಿಗೂ ಸರಿಯಾಗಿ ಸಿಕ್ಕಿಲ್ಲ ಎನ್ನಲಾಗಿದೆ. ಈ ನಿರ್ಣಯವಾಗಿದ್ದ ಅಂದಿನ ಸಭೆಯಲ್ಲಿ 19 ಮಂದಿ ಸದಸ್ಯರ ಬದಲು 9 ಮಂದಿ ಮಾತ್ರ ಇದ್ದ ಕಾರಣ ಉಳಿದವರಿಗೆ ಇದರ ಒಳಮರ್ಮ ತಿಳಿದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Shashank Muduri Column: ಪರಿಸರ ರಕ್ಷಣೆಯ ʼಹರಿಕಾರʼ !
ಹೀಗಾಗಿ ಬೆಟ್ಟದ ತಪ್ಪಲಲ್ಲಿರುವ ಅರಣ್ಯ ಹಾಗೂ ಕೃಷಿ ಭೂಮಿಯಲ್ಲಿ ಯಾವುದೇ ನಿರ್ಮಾಣ ಗಳನ್ನು ಮಾಡದಂತೆ 15 ವರ್ಷಗಳ ಹಿಂದೆಯೇ ಮಾಸ್ಟರ್ ಪ್ಲಾನ್‌ನಲ್ಲಿ ರೂಪಿಸಲಾಗಿದ್ದ ಕಾನೂ ನನ್ನು ಪ್ರಭಾರ ಆಯುಕ್ತರು ಹಾಗೂ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳೇ ಉಲ್ಲಂಘಿಸಿದ್ದಾರೆ ಎನ್ನುತ್ತವೆ ದಾಖಲೆಗಳು. ಈ ಅಕ್ರಮದ ಮೂಲಕ ಹಿರಿಯ ಅಧಿಕಾರಿಗಳು ತಮ್ಮ ಸಂಸ್ಥೆಯ ಕಾನೂನುಗಳನ್ನು ತಾವೇ ಉಲ್ಲಂಘಿಸಿ ಪರಿಸರ ವಿರೋಧಿ ನಿರ್ಣಯ ಕೈಗೊಂಡಿದ್ದಾರೆ ಎಂದಿದ್ದಾರೆ ಪರಿಸರವಾದಿಗಳು.
ಈ ನಿರ್ಣಯದಿಂದ ಸುಮಾರು 1200 ಕೋಟಿ ರು.ಗಳಿಗೂ ಹೆಚ್ಚಿನ ಅಕ್ರಮ ನಡೆಯಲು ಅವಕಾಶ ನೀಡಲಾಗಿದೆ ಎನ್ನಲಾಗುತ್ತಿದೆ. ಆದರೆ ವಿಶೇಷ ಸೂಕ್ಷ್ಮ ಪರಿಸರ ವಲಯವಾಗಿರುವ ಕಾರಣ ಆಗಬಹುದಾದ ಪರಿಸರ ಹಾನಿಯನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಹೀಗಾಗಿ ಸರಕಾರ ಇದನ್ನು ತಡೆದು ಪರಿಸರ ಉಳಿಸುವುದು ಸೂಕ್ತ ಎಂದು ನಗರಾಭಿವೃದ್ಧಿ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಸರಕಾರಕ್ಕೆ ಬಂತು ಬೆಟ್ಟ ಕಬಳಿಕೆ ಪ್ರಸ್ತಾಪ
ವಿಶಾಲವಾದ ಅರಣ್ಯ ಮತ್ತು ಕೃಷಿ ಪ್ರದೇಶಗಳಿದ್ದ ಚಾಮುಂಡಿಬೆಟ್ಟದ ಸುತ್ತಲ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ತಲೆ ಎತ್ತುತ್ತಿದ್ದಂತೆ 2011ರಲ್ಲಿ ರೂಪಿಸಲಾಗಿದ್ದ 2011-2031ರ ಮಾಸ್ಟರ್ ಪ್ಲಾನ್‌ನಲ್ಲಿ ಬೆಟ್ಟದ ಸುತ್ತಲೂ ಸುಮಾರು 100 ಪ್ರದೇಶವನ್ನು ವಿಶೇಷ ಪರಿಸರ ಸೂಕ್ಷ್ಮ ಹಾಗೂ ಅಭಿವೃದ್ಧಿ ನಿಷೇಧಿತ ಪ್ರದೇಶ ಎಂದು ನಿರ್ಧರಿಸಲಾಗಿತ್ತು. ಇದನ್ನು ಸರಕಾರವೂ ಅನುಮೋದಿ ಸಿತ್ತು. ಇದಾದ ನಂತರ ಬೆಟ್ಟದ ಸುತ್ತ ನಿಷೇಧಿತ ಪ್ರದೇಶದಲ್ಲಿ ಭೂ ಪರಿವರ್ತನೆಯಾಗಲಿ, ಬಡಾವಣೆ ಮಾಡುವುದ ಕ್ಕಾಗಲಿ ಅನುಮತಿ ನೀಡಿರಲಿಲ್ಲ. ಆದರೆ 2025ರ ಆಗಸ್ಟ್ 8ರಂದು ನಡೆದ ಎಂಡಿಎ ಸಭೆಯಲ್ಲಿ ಈ ಪ್ರದೇಶದಲ್ಲಿ ಬಡಾವಣೆ ನಿರ್ಮಾಣಕ್ಕೆ ಅನುಮತಿ ನಿರ್ಣಯ ಮಾಡಲಾಗಿತ್ತು. 6 ವಿವಿಧ ಪ್ರಕರಣಗಳಲ್ಲಿ ಸುಮಾರು 80 ಎಕರೆಗಳಷ್ಟು ಜಾಗವನ್ನು ಬಡಾವಣೆಗೆಂದು ನೀಡಲು ನಿರ್ಣಯ ಮಾಡಲಾಗಿದೆ. ಹೀಗೆ ಬಡಾವಣೆಗೆಂದು ಅನುಮತಿ ಪಡೆಯುತ್ತಿರುವ ಸಂಸ್ಥೆಗಳಲ್ಲಿ ಕೆಲವರು ರಾಜಕಾರಣಗಳೂ ಪಾಲುದಾರರಿದ್ದಾರೆನ್ನಲಾಗಿದ್ದು, ಅವರು ಎಂಡಿಎ ಅಧಿಕಾರಿಗಳಿಗೆ ಸಂಬಂಧಿಕರೂ ಆಗಿದ್ದಾರೆ ಎಂದೂ ತಿಳಿದುಬಂದಿದೆ.