ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿರುವ 400 ಕೋಟಿ ರು. ದರೋಡೆ ಪ್ರಕರಣ
ಜೋಡಿ ಕಂಟೇನರ್ ಹೈಜಾಕ್ ಪ್ರಕರಣದ ಮೂಲ ಹುಡುಕುವುದೇ ಪೊಲೀಸರಿಗೆ ಸವಾಲು
ಬೆಳಗಾವಿ: 400 ಕೋಟಿ ರು. ದರೋಡೆ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಕೊಳ್ಳುತ್ತಿದೆ. ಮಹಾರಾಷ್ಟ್ರದ ಎಸ್‌ಐಟಿ ತಂಡ ನಡೆಸುತ್ತಿರುವ ನಿಧಾನಗತಿ ತನಿಖೆಗೆ ಬೇಸತ್ತ ದೂರು ದಾರ ಸಂದೀಪ್ ಪಾಟೀಲ ಕರ್ನಾಟಕದಲ್ಲಿ ದರೋಡೆ ಪ್ರಕರಣ ದಾಖಲಿಸಲು ತಯಾರಿ ನಡೆಸಿದ್ದಾರೆ. ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರು. ತುಂಬಿದ್ದ ಎರಡು ಕಂಟೇನರ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹಣಕ್ಕೆ ಒಳಗಾಗಿ ಕಿರುಕುಳ ಅನುಭವಿಸಿದ್ದ ಸಂದೀಪ್ ಪಾಟೀಲ ಮಹಾರಾಷ್ಟ್ರದಲ್ಲಿ ಪ್ರಕರಣ ದಾಖಲಿಸಿದ್ದರು.
ಆದರೆ ಪ್ರಕರಣದ ತನಿಖೆಯು ನಿರೀಕ್ಷಿಸಿದಷ್ಟು ವೇಗದಲ್ಲಿ ನಡೆಯದ ಹಿನ್ನೆಲೆಯಲ್ಲಿ ಕರ್ನಾಟಕ ದಲ್ಲಿ ಪ್ರಕರಣ ದಾಖಲಿಸಲು ದೂರುದಾರ ಮುಂದಾಗಿದ್ದಾರೆ.
400 ಕೋಟಿ ರು. ಹಣ ಇದ್ದ ಜೋಡಿ ಕಂಟೇನರ್ ಹೈಜಾಕ್ ಪ್ರಕರಣದ ಮೂಲ ಹುಡುಕುವುದೇ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಚೋರ್ಲಾ ಘಾಟ್‌ನಲ್ಲಿ ದರೋಡೆ ಆಗಿದ್ದು ಒಂದು ಭಾಗ ವಾಗಿದ್ದರೆ ಕಂಟೇನರ್‌ನಲ್ಲಿ ಹಣವನ್ನು ಯಾವ ಜಾಗದಲ್ಲಿ ತುಂಬಿಸಲಾಯಿತು ಎಂಬುವುದೇ ಯಕ್ಷಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ, 2025ರ ಸಪ್ಟೆಂಬರ್‌ನಲ್ಲಿ ಗೋವಾದಲ್ಲಿ ಎರಡು ಕಂಟೇನರ್‌ನಲ್ಲಿ 2 ಸಾವಿರ ಮುಖಬೆಲೆಯ ನೋಟು ತುಂಬಿಸಲಾಗಿದೆ.
ಇದನ್ನೂ ಓದಿ: Vinayaka Mathapathy Column: ಬದಲಾಗುವುದೇ ಮಹಾರಾಷ್ಟ್ರ ರಾಜಕೀಯ ಸಮೀಕರಣ ?
ಹಾಗಾದರೆ ಸಿಸಿ ಟಿವಿ ಸಾಕ್ಷ್ಯ ಆಧರಿಸಿ ತನಿಖೆ ನಡೆಸುತ್ತಿದ್ದರೂ ಈವರೆಗೆ ಹಣ ತುಂಬಿದ್ದರ ಮೂಲ ಪೊಲೀಸರಿಗೆ ಸಿಗುತ್ತಿಲ್ಲ. ಚೋರ್ಲಾ ಘಾಟ್‌ನಲ್ಲಿ ಕೋಟ್ಯಂತರ ರು. ದರೋಡೆ ಆಗಿದ್ದು ಆರೋಪಿಗಳ ವಾಟ್ಸಪ್ ಸಂಭಾಷಣೆ ಮೂಲಕ ಬಹಿರಂಗವಾಗಿದ್ದರೂ ಇದರ ಹಿಂದಿನ ಕಥೆ ಪೊಲೀಸರಿಗೆ ತಿಳಿಯು ತ್ತಿಲ್ಲ.
ಪ್ರತ್ಯಕ್ಷ ಸಾಕ್ಷಿಗಳ ಕೊರತೆ
ದರೋಡೆ ಪ್ರಕರಣದಲ್ಲಿ ಸದ್ಯ ಪೊಲೀಸರಿಗೆ ಪ್ರತ್ಯಕ್ಷ ಸಾಕ್ಷಿಗಳು ಸಿಗದಿರುವುದು ತಲೆನೋವು ತರಿಸಿದೆ. ಅಪಹರಣ ಪ್ರಕರಣ ದಾಖಲಿಸಿದ ಸಂದೀಪ್ ಪಾಟೀಲ ದರೋಡೆ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿಲ್ಲ. ಇನ್ನು ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಜಯೇಶ್ ಸೇರಿದಂತೆ ಇನ್ನುಳಿದ ಆರು ಆರೋಪಿಗಳು ಪ್ರತ್ಯಕ್ಷ ಸಾಕ್ಷಿಗಳಾಗಿಲ್ಲ. ಇಷ್ಟೊಂದು ದೊಡ್ಡಮಟ್ಟದ ದರೋಡೆ ಸಂಭವಿಸಿ ದ್ದರೂ ಪೊಲೀಸರಿಗೆ ಪ್ರತ್ಯಕ್ಷ ಸಾಕ್ಷಿಗಳ ಹುಡುಕಾಟವೇ ದೊಡ್ಡ ತಲೆನೋವಾಗಿದೆ.
*
ತಲೆಮರೆಸಿಕೊಂಡ ಮೂಲ ಆರೋಪಿ ಕಿಶೋರ್ ಸೇಠ್
ದರೋಡೆ ಪ್ರಕರಣದ ಮೂಲ ಆರೋಪಿ ಎಂದೇ ಬಿಂಬಿತವಾಗಿರುವ ಮಹಾರಾಷ್ಟ್ರ ಮೂಲದ ಉದ್ಯಮಿ ಕಿಶೋರ್ ಸೇಠ್ ತಲೆಮರೆಸಿಕೊಂಡಿzನೆ. ಸದ್ಯ ಈತನಿಗಾಗಿ ಮಹಾರಾಷ್ಟ್ರ ಪೊಲೀಸರು ಬಲೆ ಬೀಸಿದ್ದರೂ ಆತನ ಸುಳಿವು ಸಿಕ್ಕಿಲ್ಲ. 2 ಸಾವಿರ ಮುಖಬೆಲೆಯ 400 ಕೋಟಿ ಹಣವನ್ನು ಚಲಾವಣೆ ಹಣಕ್ಕೆ ವರ್ಗಾಯಿಸಿ ಕೊಡುವ ಜವಾಬ್ದಾರಿ ಈತನೇ ಹೊತ್ತಿದ್ದ ಎಂದು ಹೇಳಲಾಗುತ್ತಿದೆ. ಆದರೆ ಆರೋಪಿ ಕಿಶೋರ್ ಸೇಠ್ ಪೊಲೀಸರ ಕೈಗೆ ಸಿಗದಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.