ಗ್ರೌಂಡ್ ರಿಪೋರ್ಟ್
ವಿಶ್ವವಾಣಿ ಬಂಗಾಳ ಚುನಾವಣಾ ಯಾತ್ರೆ
2024ರ ಫೆಬ್ರವರಿ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಲಿ ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಹಿಂಸಾಚಾರ, ಅತ್ಯಾಚಾರಗಳಂಥ ಆರೋಪಗಳು ಕೇಳಿ ಬಂದು ಭಯಾನಕ ವಾತಾವರಣ ಸೃಷ್ಟಿಯಾಗಿತ್ತು. ಸಂದೇಶ್‌ಖಲಿ ಭಾಗದ ಶೇಖ್ ಷಾಜಹಾನ್ ಎಂಬ ಟಿಎಂಸಿ ಮುಖಂಡ ರೈತರ ಜಮೀನುಗಳನ್ನು ಕಬ್ಜಾ ಮಾಡಿಕೊಂಡು, ಅಲ್ಲಿ ಅಕ್ರಮವಾಗಿ ತನ್ನ ಮೀನುಗಾ ರಿಕೆ ಉದ್ಯಮ ವಿಸ್ತರಿಸಿದ್ದಲ್ಲದೆ, ಅವನ ಬೆಂಬಲಿಗ ಗೂಂಡಾಗಳು ಮಹಿಳೆಯರನ್ನು ಹಿಂಸಿಸಿ, ಅತ್ಯಾಚಾರ ಮಾಡಿದ ಆರೋಪಗಳು ಬಲವಾಗಿ ಕೇಳಿಬಂದವು.
ರೇಷನ್ ಅಕ್ಕಿ ವಿತರಣೆ ಹಗರಣದಲ್ಲಿ ಶೇಖ್ ಷಾಜಹಾನ್ ವಿರುದ್ಧ ಇ.ಡಿ. ಅಧಿಕಾರಿಗಳು ಆತನ ಮನೆ ಮೇಲೆ ದಾಳಿ ಮಾಡಲು ಬಂದಾಗ ಅವರ ಮೇಲೆಯೇ ಬೆಂಬಲಿಗರು ದಾಳಿ ಮಾಡಿದ್ದರು. ಶೇಖ್ ಷಾಜಹಾನ್ ಹಾಗೂ ಬೆಂಬಲಿಗರಿಂದ ಶೋಷಣೆಗೊಳಗಾದ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಿದ್ದರು. ಇದು ಟಿಎಂಸಿ-ಬಿಜೆಪಿ ನಡುವೆ ಯುದ್ಧಭೂಮಿಯಾಗಿ ಮಾರ್ಪಟ್ಟು, ಶೇಖ್ ಷಾ ಜಹಾನ್ ನಾಪತ್ತೆಯಾಗಿದ್ದ. 55 ದಿನಗಳ ನಂತರ ಆತನನ್ನು ಬಂಧಿಸಲಾಯ್ತು.
ಇಡೀ ಸಂದೇಶ್ಖಲಿಯೇ ತನಗೆ ಸೇರಿದ್ದು ಎಂಬಂತೆ ವರ್ತಿಸುತ್ತಿದ್ದ ಶೇಖ್ ಷಾಜಹಾನ್ ಇನ್ನೂ ಜೈಲಿ ನಿಂದ ಹೊರ ಬಂದಿಲ್ಲ. ಈ ಘಟನಾವಳಿ ನಡೆದು 2 ವರ್ಷ ಕಳೆದಿದ್ದು, ಸಂದೇಶ್‌ಖಲಿಯಲ್ಲಿ ಶಾಂತಿ ಮನೆ ಮಾಡಿದೆ. ಶೇಖ್ ಷಾಜಹಾನ್ ಜೈಲಿನ ಇರಲಿ ಎನ್ನುವುದು ಸಂತ್ರಸ್ತ ಹಿಂದೂ ಕುಟುಂಬಗಳ ಪ್ರಾರ್ಥನೆ ಎನ್ನುತ್ತಾರೆ ಸ್ಥಳೀಯರು.
ಇದನ್ನೂ ಓದಿ: West Bengal Election ground report by Raghava Sharma Nidle: ನೈಜ ಪರಿವರ್ತನೆ ಬೇಡುತ್ತಿದೆ ನಂದಿಗ್ರಾಮ..!
ಸುಂದರ್‌ಬನ್ ಮ್ಯಾಂಗ್ರೂವ್ ಕಾಡುಗಳಿಗೆ ಜೋಡಿಸಿಕೊಂಡಿರುವ, ನಾಲ್ಕೂ ದಿಕ್ಕುಗಳು ನೀರಿ ನಿಂದ ಆವರಿಸಿ ದ್ವೀಪದಂತಿರುವ, ಇಂಡೋ- ಬಾಂಗ್ಲಾದೇಶ ಗಡಿಭಾಗದ ಬಸೀರ್‌ಹಾಟ್ ಲೋಕಸಭೆ ವ್ಯಾಪ್ತಿಯ ಸಂದೇಶ್‌ಖಲಿ ಎಸ್‌ಟಿ ಮೀಸಲು ಕ್ಷೇತ್ರ. ದ್ವೀಪ ಕ್ಷೇತ್ರವಾದ ಕಾರಣ ಸುಲಭದಲ್ಲಿ ತಲುಪಲು ಸಾಧ್ಯವಿಲ್ಲ.
ಅಭಿವೃದ್ಧಿಯಲ್ಲಿ ಹಿಂದೆ ಬಿದ್ದು, ಸೀಮಿತ ಸಾರ್ವಜನಿಕ ಸೇವೆಗಳಿರುವ ಈ ವಿಧಾನಸಭಾ ಕ್ಷೇತ್ರ ಈ ಬಾರಿ ಮತ್ತೆ ಗಮನಸೆಳೆದಿದೆ. ಎಡಪಕ್ಷ, ಕಾಂಗ್ರೆಸ್ ಮತ್ತು ಟಿಎಂಸಿ ಅಭ್ಯರ್ಥಿಗಳೇ ಗೆಲ್ಲುತ್ತಿದ್ದ ಕ್ಷೇತ್ರ ದಲ್ಲಿ ಈ ಬಾರಿ ಬಿಜೆಪಿ ಸದ್ದು ಮಾಡಿದೆ. 2024ರ ಹಿಂಸಾಚಾರ ಇಡೀ ರಾಜಕೀಯ ಚಿತ್ರಣ ಬದಲಿಸಿದೆ. ಹಿಂಸಾಚಾರ ಘಟನೆಗಳ ಹೊರತಾಗಿಯೂ, 2024ರ ಲೋಕಸಭೆ ಚುನಾವಣೆಯಲ್ಲಿ ಸಂದೇಶ್‌ಖಲಿ ಒಳಗೊಂಡ ಬಸೀರ್‌ಹಾಟ್ ಲೋಕಸಭಾ ಕ್ಷೇತ್ರದಲ್ಲಿ ಟಿಎಂಸಿಯ ಹಾಜಿ ನೂರುಲ್ ಇಸ್ಲಾಂ ಗೆಲುವು ಸಾಧಿಸಿದ್ದರು.
ಸಂದೇಶ್‌ಖಲಿಯಲ್ಲಿ ಶೇಖ್ ಷಾಜಹಾನ್ ದೌರ್ಜನ್ಯಗಳ ವಿರುದ್ಧ ಪೊಲೀಸ್ ದೂರು ಸಲ್ಲಿಸಿದ ಮೊದಲ ಮಹಿಳೆ ಎಂದು ಗುರುತಿಸಿಕೊಂಡ, ಅಲ್ಲಿನ ಸಂತ್ರಸ್ತ ಮಹಿಳೆಯರ ಪರ ದನಿಯಾಗಿ ಹೋರಾಡಿದ್ದ ರೇಖಾ ಪಾತ್ರ ಎಂಬವರು ಬಿಜೆಪಿಯಿಂದ ಕಣದಲ್ಲಿದ್ದರು.
ಬಸೀರ್‌ಹಾಟ್ ಲೋಕಸಭೆ ಚುನಾವಣೆಯಲ್ಲಿ ಸೋತರೂ, ಸಂದೇಶ್‌ಖಲಿ ವಿಧಾನಸಭೆ ಚುನಾವಣೆ ಯಲ್ಲಿ ಬಿಜೆಪಿ 8000 ಮತಗಳಿಂದ ಮುನ್ನಡೆ ಸಾಧಿಸಿತ್ತು. ರೇಖಾ ಪಾತ್ರ ಸಂದೇಶ್‌ಖಲಿ ಪಕ್ಕದ ಹಿಂಗಲ್‌ಗಂಜ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಸಂದೇಶ್‌ಖಲಿಯಲ್ಲಿ ಬಿಜೆಪಿಯಿಂದ ಬುಡಕಟ್ಟು ಸಮುದಾಯದ ಸನತ್ ಸರ್ದಾರ್ ಕಣದಲ್ಲಿದ್ದರೆ, 3 ಬಾರಿ ಶಾಸಕರಾಗಿದ್ದ ಸುಕುಮಾರ್ ಮಹತೋ ಬದಲಿಗೆ ಝರ್ನಾ ಸರ್ದಾರ್ ಎಂಬ ಮಹಿಳೆಗೆ ಟಿಎಂಸಿಯಿಂದ ಟಿಕೆಟ್ ನೀಡಲಾಗಿದೆ.
ಪೂರ್ಣ ಗ್ರಾಮೀಣ ಕ್ಷೇತ್ರವಾಗಿರುವ ಸಂದೇಶ್ ಖಲಿಯಲ್ಲಿ 2.4 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಎಸ್‌ಸಿ/ಎಸ್‌ಟಿ ಮತಗಳೇ ಇಲ್ಲಿ ನಿರ್ಣಾಯಕ. ಮುಸ್ಲಿಮರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಮೀನು ರಕ್ಷಣೆ, ಸರಕಾರಿ ಸೌಲಭ್ಯಗಳು, ಉತ್ತಮ ರಸ್ತೆ, ಸೇತುವೆ ನಿರ್ಮಾಣ, ಕಾನೂನು-ಸುವ್ಯವಸ್ಥೆ ಕಾಪಾಡುವ ವಿಷಯಗಳೇ ಚುನಾವಣೆಯಲ್ಲಿ ಚರ್ಚೆಗೆ ಗ್ರಾಸವಾಗುತ್ತಿವೆ.
ಇಲ್ಲಿನ ಶೇಖ್ ಷಾಜಹಾನ್, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿಗೆ ಆಪ್ತನಾಗಿದ್ದ. ಆತನ ವಿರುದ್ಧ ಮಹಿಳೆಯರು ತಿರುಗಿಬಿದ್ದು, ಆರೋಪಗಳು ಗಂಭೀರ ಸ್ವರೂಪ ಪಡೆದ ನಂತರ ಷಾಜಹಾನ್ ಅನ್ನು ಪಕ್ಷದಿಂದ ಅಮಾನತುಗೊಳಿಸಲಾಯಿತು.
ಬಳಿಕ, ಬಸೀರ್‌ಹಾಟ್‌ನಲ್ಲಿ ಕೋಮು ಗಲಭೆ ಎಬ್ಬಿಸುವುದು ಬಿಜೆಪಿ ಹುನ್ನಾರ. ಇದಕ್ಕೆ ಮಹಿಳೆಯ ರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂಬ ಕಥೆಯನ್ನು ಟಿಎಂಸಿ ನಾಯಕರು ಹೆಣೆದಿದ್ದರು. ಫಲವಾಗಿ, 2024ರ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸಿತ್ತು. ಸಂದೇಶ್‌ಖಲಿ ವಿಧಾನಸಭೆ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾಗ ನಜಾತ್ ಎಂಬ ಹಳ್ಳಿಯ ಮನೆ ಎದುರು ಕುಳಿತಿದ್ದ ಮಧ್ಯ ವಯಸ್ಸಿನ ಪ್ರತಿಮಾ ಸರ್ದಾರ್ ಎಂಬ ಬುಡಕಟ್ಟು ಮಹಿಳೆ ಬಳಿ ಮಾತನಾಡಿ, “ಲಕ್ಷ್ಮಿ ಭಂಡಾರ್ ಯೋಜನೆಯ ಮಾಸಿಕ 1500 ರು. ಬರುತ್ತಿದೆಯೇ, ದೀದಿ ಸರಕಾರ ಚೆನ್ನಾಗಿದೆಯೇ?" ಎಂದು ಕೇಳಿದೆ.
“1500 ರು. ಯಾರಿಗೆ ಬೇಕು? ಕೆಲಸ ಬೇಕು, ಸ್ವಾಭಿಮಾನದ, ಶಾಂತಿಯ ಬದುಕು ಬೇಕು. ನನಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಸರಕಾರಿ ಕಾಲೇಜಿನಲ್ಲಿ ಒಬ್ಬಳು ಬಿಎ 2ನೇ ವರ್ಷ ಮತ್ತೊಬ್ಬಳು 3ನೇ ವರ್ಷ ಓದುತ್ತಿದ್ದಾಳೆ. ನಮ್ಮ ಜಿಯಲ್ಲಿ ಉದ್ಯೋಗವೇ ಸಿಗುತ್ತಿಲ್ಲ. ಬಿಎ ಓದಿಸಿ ಕೆಲಸ ಸಿಗದಿದ್ದರೆ ಮದುವೆ ಮಾಡಿಸುತ್ತೇನೆ. ಈಗಿನ ಪರಿಸ್ಥಿತಿ ನೋಡಿದರೆ ಇಲ್ಲಿ ಓದಿದವರಿಗೆ ನೌಕರಿ ಸಿಗುತ್ತಿಲ್ಲ" ಎಂದು ಬೇಸರ ಹೊರಹಾಕಿದಳು.
“ಲಕ್ಷ್ಮಿ ಭಂಡಾರ್ ಹಣದ ಬಗ್ಗೆ ಅನೇಕ ಬಡ ಮಹಿಳೆಯರಿಗೆ ಖುಷಿ ಇರುವಾಗ, ನೀವೇಕೆ ವಿರೋಧಿ ಸುತ್ತೀರಿ?" ಎಂದು ನಾನು ಪ್ರಶ್ನಿಸಿದ್ದಕ್ಕೆ, “ನನ್ನ ಮೂವರು ಮಕ್ಕಳು ಸಣ್ಣವರಿದ್ದಾಗಲೇ ಗಂಡ ಬಿಟ್ಟು ಬೇರೊಬ್ಬಳೊಂದಿಗೆ ಹೋದ. ನಾನು ಕೃಷಿ ಭೂಮಿಯಲ್ಲಿ ಕೂಲಿ ಮಾಡಿ, ದಿನಕ್ಕೆ 200-300 ರು. ಸಂಪಾದಿಸಿ ಮಕ್ಕಳನ್ನು ಬೆಳೆಸುತ್ತಿದ್ದೇನೆ. ಮಕ್ಕಳು ಪಡೆಯುವ ಶಿಕ್ಷಣಕ್ಕೆ ಬೆಲೆ ಬೇಕು. ಸರಕಾರ ಕೊಡುವ ಉಚಿತ ದುಡ್ಡು ಬೇಕಾಗಿಲ್ಲ" ಎಂದು ಸ್ವಾಭಿಮಾನ ದಿಂದ ನುಡಿದು, “ಸಂದೇಶ್ ಖಲಿಯಲ್ಲಿ ಶಾಂತಿ ಬೇಕು. ಹಿಂಸೆ, ಬಡಿದಾಟದಿಂದ ರೋಸಿ ಹೋಗಿದ್ದೇವೆ. 2011ರಿಂದ ದೀದಿಗೆ ಬೆಂಬಲಿಸಿz. ಆದರೆ ಈ ಬಾರಿ ಬದಲಾವಣೆಗೆ ಮತ" ಎಂದು ಖಚಿತಪಡಿಸಿದಳು.
ಸಂದೇಶ್‌ಖಲಿಯ ಘೋಸ್‌ಪುರ್, ಚೋಟಾ ಸೆಹೆರ್, ನಿತ್ಯಬೇನಿಯಾ, ಭೋಲಾಕಾಲಿ, ಕಾಳಿ ನಗರ, ಘೋಟಿಯಾರಾ, ಬೆದ್ರಮಾಡಿ ಸೇರಿ ವಿವಿಧ ಗ್ರಾಮಗಳು ದ್ವೀಪಗಳಾಗಿರುವುದರಿಂದ ಅಲ್ಲಿಗೆ ಬೋಟ್ ಮೂಲಕವೇ ಸಾಗಬೇಕು. ನಜಾತ್‌ನಿಂದ ನಾನು ಘೋಸ್‌ಪುರಕ್ಕೆ ಬೋಟ್ ಮೂಲಕ ಸಾಗಿ, ಕಾಳಿ ನಗರದಲ್ಲಿದ್ದ ಫ್ಯಾನ್ಸಿ ಅಂಗಡಿ ಮಾಲೀಕ ದಿಲೀಪ್ ಘೋಷ್ ಜತೆ ಮಾತಿಗಿಳಿದೆ.
ನಾನು ಯಾರೆಂದು ಮಾಹಿತಿ ನೀಡದೆ, ಚುನಾವಣೆ ಬಗ್ಗೆ ಮಾತನಾಡಿದೆ. “15 ವರ್ಷಗಳಿಂದ ಒಂದೇ ಸರಕಾರ ವಿದ್ದು, ಬದಲಾವಣೆ ಆಗಬೇಕು. ಸಂದೇಶ್‌ಖಲಿಯಲ್ಲೂ ಅಭಿವೃದ್ಧಿಯಾಗಿಲ್ಲ. ಯುವಕರಿಗೆ ಉದ್ಯೋಗವಿಲ್ಲ" ಎಂದು ಅವರು ಅಸಮಾಧಾನ ಹೊರ ಹಾಕಿದರು.
ನನ್ನ ಪರಿಚಯ ಮಾಡಿಕೊಂಡೆ. ಪತ್ರಕರ್ತ ಎಂದು ಹೇಳಿದೆ. ಕೂಡಲೇ ಉಲ್ಟಾ ಹೊಡೆದ ದಿಲೀಪ್ ಘೋಷ್, “ದೀದಿ ಆಡಳಿತ ಚೆನ್ನಾಗಿದೆ. ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಬಡವರ ಕಷ್ಟಕ್ಕೆ ನೆರವಾಗುತ್ತಿದ್ದಾರೆ" ಎಂದು ನಿಲುವು ಬದಲಿಸಿದ. ಬಂಗಾಳದಲ್ಲಿ ಜನರು ಟಿಎಂಸಿ ವಿರುದ್ಧ ಮಾತನಾಡಲು ಹೆದರುತ್ತಾರೆ. ಅದ ಕ್ಕೊಂದು ಉದಾಹರಣೆಯಾಗಿದ್ದ ದಿಲೀಪ್ ಘೋಷ್. ಚಂಡಿತಾಲಾ ಗ್ರಾಮದಲ್ಲಿ ಒಂದಿಷ್ಟು ಯುವಕರು ಬಸ್ ಸ್ಟ್ಯಾಂಡ್ ಒಳಗೆ ಕುಳಿತು ಮೊಬೈಲ್ ರೀಲ್ಸ್ ನೋಡುತ್ತಿದ್ದರೆ, ಮತ್ತೆ ಕೆಲವರು ಗೇಮ್ಸ್ ಆಡುತ್ತಿದ್ದರು.
“ನೀವೆ ಕೆಲಸಕ್ಕೆ ಹೋಗುವುದಿಲ್ಲವೇ, ಇನು ಮಾಡುತ್ತೀರಿ?" ಎಂದು ಕೇಳಿದೆ. “ನಾವು ಬೆಂಗಳೂರಿನಲ್ಲಿ ಕೆಲಸಕ್ಕೆ ರಜೆ ಹಾಕಿ, ವೋಟಿಗಾಗಿ ಬಂದಿದ್ದೇವೆ" ಎಂದರು.
ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿರುವ ಈ ಯುವಕರು ತಿಂಗಳಿಗೆ 15-20 ಸಾವಿರ ರು. ದುಡಿಯು ತ್ತಿದ್ದಾರಂತೆ. “ಬಂಗಾಳದಲ್ಲಿ ನೌಕರಿ ಸಿಗುತ್ತಿದ್ದರೆ ನಾವು ಬೆಂಗಳೂರಿಗೆ ಏಕೆ ಹೋಗುತ್ತಿದ್ದೆವು. ಡಿಗ್ರಿ ಮಾಡಿದರೂ ಸರಿಯಾಗಿ ಕೆಲಸ ಸಿಗುವುದಿಲ್ಲ. ಬಂಗಾಳದಲ್ಲಿ ಏನಾಗುತ್ತದೋ ಗೊತ್ತಿಲ್ಲ.
ಸಂದೇಶ್‌ಖಲಿಯಲ್ಲಂತೂ ಬದಲಾವಣೆ ಮಾಡಲಿದ್ದೇವೆ" ಎಂಬ ಬಿಸ್ವತ್ ಸರ್ದಾರ್ ಮಾತಿಗೆ ವಿಜಯ್ ಸರ್ದಾರ್, ಅಯಾನ್ ಸರ್ದಾರ್, ನಿರ್ಮಲ್ ಸರ್ದಾರ್, ರಂಜನ್, ಸುಕ್ರಾ ಸರ್ದಾರ್, ಸುರ್ಜಿತ್ ಸರ್ದಾರ್ ದನಿಗೂಡಿಸಿದರು. ನಜಾತ್ ಗ್ರಾಮದಲ್ಲಿ ಸಿಕ್ಕ ಯುವಕರಾದ ನಿತ್ಯಾನಂದ ಕರಣ, ರಾಜೀವ ಪ್ರಮಾಣಿಕ್, ರಂಜಿತ್ ಮಂಡಲ, ಸಂಜಿತ್ ಬಿಸ್ವಾಸ್ ತಮಿಳುನಾಡಿನ ಚೆನ್ನೈನಲ್ಲಿ ಗುತ್ತಿಗೆ ಕೆಲಸಗಳಿಗೆ ರಜೆ ಹಾಕಿ ವೋಟ್ ಹಾಕಲೆಂದೇ ಸಂದೇಶ್‌ಖಲಿಗೆ ಬಂದಿದ್ದರು.
“ಶೇಖ್ ಷಾಜಹಾನ್ ಅಟ್ಟಹಾಸದ ವಿರುದ್ಧ ನಮ್ಮ ಮತ. ಇಂಥವರನ್ನು ಬೆಳೆಸಿದ ಸರಕಾರ, ಯುವಕರನ್ನು ಊರು ಬಿಟ್ಟು ಬೇರೆ ಕಡೆ ಹೋಗಿ ಕೆಲಸ ಮಾಡುವಂತೆ ಮಾಡಿದೆ. ಈ ಸರಕಾರ ನಮಗೆ ಬೇಕಿಲ್ಲ" ಎನ್ನುವುದು ಯುವಕರ ಮಾತಾಗಿತ್ತು. ಅಲ್ಲಿಂದ ಕೊಂಚ ದೂರದಲ್ಲಿ ಟಿಎಂಸಿ ಮಹಿಳಾ ಅಭ್ಯರ್ಥಿಯ ಬೆಂಬಲಿಗರು ಸಭೆ ನಡೆಸುತ್ತಿದ್ದುದನ್ನು ನೋಡಿದೆ. “ಬಂಗಾಳಿ ಅಸ್ಮಿತೆ ಉಳಿಸಲು, ರಾಜ್ಯದ ಜನರನ್ನು ರಕ್ಷಿಸಲು ಮತ್ತೆ ಮಮತಾ ದೀದಿಗೆ ಮತ ಹಾಕಿ" ಎಂದು ಬಂಗಾಳಿ ಭಾಷೆಯಲ್ಲಿ ಧ್ವನಿವರ್ಧಕದ ಮೂಲಕ ಮನವಿ ಮಾಡುತ್ತಿದ್ದರೂ, ಈ ಯುವಕರು ಕಿವಿಗೊಡುತ್ತಿರ ಲಿಲ್ಲ.
“ನಜಾತ್‌ನಿಂದ ಕಾಳಿನಗರದ ಮಧ್ಯೆ ನದಿಗೆ ಸೇತುವೆ ನಿರ್ಮಾಣಕ್ಕೆ ಸಿಪಿಎಂ ಆಡಳಿತಾವಧಿಯ ಶಿಲಾನ್ಯಾಸ ಮಾಡಲಾಗಿತ್ತು. ಆದರೆ, ಟಿಎಂಸಿ ಅಧಿಕಾರಕ್ಕೆ ಬಂದು 15 ವರ್ಷ ಕಳೆದರೂ ಸೇತುವೆ ನಿರ್ಮಾಣವಾಗಿಲ್ಲ. ಈಗಲೂ ಎರಡೂ ಗ್ರಾಮಗಳ ಮಂದಿ 5 ನಿಮಿಷ ಬೋಟ್ ಪ್ರಯಾಣವನ್ನೇ ನೆಚ್ಚಿಕೊಳ್ಳಬೇಕು.
ಆಸ್ಪ್ರತ್ರೆ, ಶಾಲೆಗಳನ್ನು ‘ನಾಮ್ -ಕೆ-ವಾಸ್ತೆ’ ಎನ್ನುವಂತೆ ನಿರ್ಮಿಸಿದ್ದಾರೆ. ಎರಡೂ ಕಡೆ ಕಳಪೆ ಗುಣಮಟ್ಟ. ಸರಕಾರಕ್ಕೆ ನಮ್ಮ ಬಗ್ಗೆ ಕಾಳಜಿ ಇಲ್ಲ" ಎಂದು ‘ಮಾಮ್ ಅಂಡ್ ಡ್ಯಾಡ್’ ಹೆಸರಿನ ಇಲೆಕ್ಟ್ರಾನಿಕ್ ಶಾಪ್ ಮಾಲೀಕರಾದ ಅಮಿತ್ ಬಿಸ್ವಾಸ್ ಮತ್ತು ಉಜ್ವಲ್ ಬಿಸ್ವಾಸ್ ಕಿಡಿಕಾರಿದರು.
“ಗ್ರಾಮದ ಯುವಕರು ಗುತ್ತಿಗೆ ಕಾರ್ಮಿಕರಾಗಿ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಊರು ಖಾಲಿ ಯಾಗುತ್ತಿದೆ. ನಮಗೆ ವ್ಯಾಪಾರ ಕಡಿಮೆ ಯಾಗಿದೆ. ಇಷ್ಟಾಗಿಯೂ ನಾವು ತಾಳ್ಮೆಯಿಂದ ಇರಬೇಕಾ?" ಎಂಬ ಅವರ ಪ್ರಶ್ನೆಗೆ ನನ್ನಲ್ಲಿ ಉತ್ತರ ಇರಲಿಲ್ಲ.
ವಿಭಿನ್ನ ತಂತ್ರಗಾರಿಕೆ: ಈ ಚುನಾವಣೆಯಲ್ಲಿ ವಿಭಿನ್ನ ತಂತ್ರಗಾರಿಕೆ ಅನುಸರಿಸುತ್ತಿರುವ ಬಿಜೆಪಿ, ಬಂಗಾಳಿ ಅಸ್ಮಿತೆಯನ್ನು ಗೌರವಿಸುವ ಜತೆಗೆ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸುತ್ತಿಲ್ಲ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಕೂಡ ವ್ಯಕ್ತಿಗತವಾಗಿ ಮಮತಾ ಬ್ಯಾನರ್ಜಿ ಅವರನ್ನು ಗುರಿ ಮಾಡಿ ಯಾವುದೇ ಹೇಳಿಕೆ ನೀಡುತ್ತಿಲ್ಲ. ಸರಕಾರ, ಅಕ್ರಮ ನುಸುಳು ಕೋರರು, ಸಿಂಡಿಕೇಟ್ ರಾಜ್ (ಸರಕಾರದ ವಸೂಲಿ ಜಾಲ) ಅನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಬಂಗಾಳೇತರ ಹಿಂದಿ ರಾಜ್ಯಗಳಿಂದ ಬಂದ ಬಿಜೆಪಿ ನಾಯಕರು ಕೂಡ ತಮ್ಮ ಪ್ರಚಾರ ಅಭಿಯಾನ ಗಳನ್ನು ಸೋಷಿಯಲ್ ಮೀಡಿಯಾ ಗಳಲ್ಲಿ ಅಪ್‌ಲೋಡ್ ಮಾಡದೆ, ಸ್ಥಳೀಯ ಮುಖಂಡರು, ಅಭ್ಯರ್ಥಿಗಳನ್ನೇ ಹೈಲೈಟ್ ಮಾಡುತ್ತಿದ್ದಾರೆ.
23ರ ಮೊದಲ ಹಂತದ ಮತದಾನಕ್ಕೆ ಮತದಾರರು ಸುರಕ್ಷಿತವಾಗಿ ಬರುವಂತೆ ನೋಡಿಕೊಳ್ಳಲು ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲಾಗಿದೆ. “ಮತದಾರರ ಹಿಂದೆ ಕಾರ್ಯಕರ್ತರು ಕಾಣಿಸಿ ಕೊಳ್ಳಬೇಡಿ. ಟಿಎಂಸಿಯಿಂದ ಬೆದರಿಕೆ ಬಂದರೆ ವೋಟ್ ಮಾಡಲು ಹಿಂದೇಟು ಹಾಕಬಹುದು. ಹೀಗಾಗಿ, ಬಹಳ ಎಚ್ಚರಿಕೆ ವಹಿಸಬೇಕು" ಎಂದೂ ಪಕ್ಷದ ಹಿರಿಯ ನಾಯಕರು ಜಿಲ್ಲೆ ಹಾಗೂ ಗ್ರಾಮೀಣ ಘಟಕಗಳಿಗೆ ಸಂದೇಶ ರವಾನಿಸಿದ್ದಾರೆ!
ವೋಟ್ ಹಾಕದಿದ್ದರೆ ಕಾರ್ಡು ರದ್ದಾಗುತ್ತದಂತೆ..!
ಬೇರೆ ರಾಜ್ಯಗಳ ಮಹಾನಗರಗಳಿಗೆ ಹೋಗಿ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿರುವ ಬಂಗಾಳದ ವಿವಿಧ ಜಿಲ್ಲೆಗಳ ಬಡಕುಟುಂಬಗಳ ಯುವಕರು, ಭಾರಿ ಸಂಖ್ಯೆ ಯಲ್ಲಿ ರಾಜ್ಯಕ್ಕೆ ವಾಪಸಾಗುತ್ತಿದ್ದಾರೆ. ವೋಟು ಮಾಡ ಲೆಂದೇ ನಾವು ಬರುತ್ತಿದ್ದೇವೆ ಎನ್ನುತ್ತಿರುವ ಅವರಲ್ಲಿ ಮತದಾರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ವಿಚಿತ್ರ ಭಯವೊಂದನ್ನು ಮೂಡಿಸಿಬಿಟ್ಟಿದೆ. ಮುಂಬೈ, ಬೆಂಗಳೂರು, ಚೆನ್ನೈ, ಹೈದರಾ ಬಾದ್ ಸೇರಿ ವಿವಿಧೆಡೆ ಗಳಿಂದ ರೈಲಿನಿಂದ ಬಂದು ಗ್ರಾಮ ಗಳತ್ತ ಧಾವಿಸಿರುವ ಯುವಕರು, “ಮತ ಹಾಕದಿದ್ದರೆ ನಮ್ಮ ವೋಟರ್ ಕಾರ್ಡು, ರೇಷನ್ ಕಾರ್ಡು, ಆಧಾರ್ ಕಾರ್ಡು ಎಲ್ಲವೂ ರzಗಲಿದೆಯಂತೆ. ಸರಕಾರದಿಂದ ಸಿಗುವ ಸವಲತ್ತುಗಳು ಕೂಡ ಸಿಗುವುದಿಲ್ಲ ವಂತೆ. ಹೀಗಾಗಿ, 5-6 ಸಾವಿರ ಖರ್ಚು ಮಾಡಿಕೊಂಡು ಬಂದಿದ್ದೇವೆ" ಎನ್ನುತ್ತಿದ್ದಾರೆ.
ಮತ ಹಾಕದಿದ್ದರೆ ಸರಕಾರಿ ದಾಖಲೆಗಳು ರದ್ದಾಗುತ್ತವೆ ಎಂಬ ಸುಳ್ಳುಸುದ್ದಿಗಳು ಈ ಯುವಕರನ್ನು ಹೇಗೆ ತಲುಪಿದವೋ ಗೊತ್ತಿಲ್ಲ. ರಾಜಕೀಯ ಪಕ್ಷಗಳ ಹುನ್ನಾರವೂ ಇರಬಹುದು ಎಂದು ಹೇಳಲಾಗುತ್ತಿದೆ.
ವಿಶ್ವಾಸದಲ್ಲಿ ಶಾ
ಕಳೆದ ಹಲವು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಬೀಡುಬಿಟ್ಟು, ವಿವಿಧೆಡೆ ರ‍್ಯಾಲಿಗಳನ್ನು ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಈ ಬಾರಿ ಗೆಲ್ಲಲಿದೆ ಎಂಬ ವಿಶ್ವಾಸದಲ್ಲಿzರೆ. ಕೋಲ್ಕತ್ತಾದ ನೊವೊಟೆಲ್ ಪಂಚತಾರಾ ಹೋಟೆಲ್‌ನಲ್ಲಿ ಚುನಾವಣಾ ಉಸ್ತುವಾರಿಗಳಾದ ಭೂಪೇಂದ್ರ ಯಾದವ್, ಸುನೀಲ್ ಬನ್ಸಾಲ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಮುಖಂಡರಾದ ಬಿಪ್ಲಬ್ ಕುಮಾರ್ ದೇವ್ ಸೇರಿ ಹಲವರೊಂದಿಗೆ ಮಂಗಳವಾರ ತಡರಾತ್ರಿವರೆಗೆ ಸಭೆ ನಡೆಸಿ, “ಬಿಜೆಪಿ 148ರ ಗಡಿ ದಾಟಲಿದೆ" ಎಂಬ ವಿಶ್ವಾಸದ ಮಾತುಗಳನ್ನಾಡಿzರೆ. ಸಭೆಯಲ್ಲಿ ದಕ್ಷಿಣ 24 ಪರಗಣ ಸೇರಿ ೩೦ಕ್ಕೂ ಹೆಚ್ಚು ಕ್ಷೇತ್ರಗಳ ಉಸ್ತುವಾರಿಯಾಗಿರುವ ರಾಜ್ಯ ಬಿಜೆಪಿ ನಾಯಕ ಸಿ.ಟಿ. ರವಿ ಕೂಡ ಪಾಲ್ಗೊಂಡಿದ್ದರು.
ಹಫ್ತಾ ವಸೂಲಿ
ಶೇಖ್ ಷಾಜಹಾನ್ ಮತ್ತು ಅವರ ಮಾಫಿಯಾ ಗ್ಯಾಂಗ್ ತಮ್ಮ ಜಮೀನುಗಳಲ್ಲಿ ಕೆರೆ ನಿರ್ಮಿಸಿ ಮೀನುಗಾರಿಕೆ ಮಾಡುತ್ತಿದ್ದವರಿಂದ ಹಫ್ತಾ ವಸೂಲಿ ಮಾಡುತ್ತಿದ್ದುದಲ್ಲದೆ, ಆತನೂ ಮೀನುಗಾರಿಕೆ ಯಿಂದ ಕೋಟಿಗಟ್ಟಲೆ ಹಣ ಸಂಪಾದಿಸಿದ್ದ. ರೈತರ ಜಮೀನನ್ನೂ ಅತಿಕ್ರಮಿಸಿ, ಅಲ್ಲಿ ಕೆರೆ ನಿರ್ಮಾಣ ಮಾಡಿ ಮೀನುಗಾರಿಕೆ ಮಾಡಿ ಹಣ ಮಾಡುತ್ತಿದ್ದ. ಈ ಉದ್ಯಮದಿಂದ ಯಾರಾದರೂ 5 ಲಕ್ಷ ರು. ಸಂಪಾದನೆ ಮಾಡಿದರೆ ಅದರಲ್ಲಿ ಕನಿಷ್ಠ 1 ಲಕ್ಷ ರುಪಾಯಿಯನ್ನಾದರೂ ಆತನಿಗೆ ನೀಡಬೇಕಿತ್ತು. ಇ.ಡಿ.ಯವರು ಬಂಧಿಸಿದ್ದರಿಂದ ಇದಕ್ಕೆಲ್ಲ ಕಡಿವಾಣ ಬಿದ್ದಿದೆ. ಈಗ ಇಲ್ಲಿ ಶಾಂತಿ ಮನೆ ಮಾಡಿದೆ ಎಂದು ಸಂದೇಶ್‌ಖಲಿಯ ಬ್ಯಾಟರಿ ರಿಕ್ಷಾ ಚಾಲಕರೊಬ್ಬರು ‘ವಿಶ್ವವಾಣಿ’ ಜತೆ ಮಾಹಿತಿ ಹಂಚಿಕೊಂಡರು.