ಟಿಸಿ ಪಡೆಯಲು ಹರಸಾಹಸ
ದಾಖಲಾತಿ ಪಡೆಯಲು ಸಮಸ್ಯೆ
ಬಸವರಾಜ ನಾಗಡದಿನ್ನಿ
ರಾಯಚೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಸರಕಾರ ರಚನೆಯಾಗಿ ತಿಂಗಳು ಕಳೆದಿದೆ. ಆದರೆ ಪೂರ್ಣ ಪ್ರಮಾಣ ಸಚಿವ ಸಂಪುಟ ಅಸ್ತಿತ್ವಕ್ಕೆ ಬರದೆ, ಮುಖ್ಯವಾಗಿ ಶಿಕ್ಷಣ ಮತ್ತು ಕೃಷಿ ಸಚಿವರಿಲ್ಲದೆ ಇಲಾಖೆಯ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡು ತಿಂಗಳು ಕಳೆದಿದ್ದು, ಸಕಾಲದಲ್ಲಿ ಪ್ರವೇಶಾತಿ ಸಿಗದೆ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲದಂತಾಗಿದೆ. ಈಗಾಗಲೇ ಶಾಲಾ, ಕಾಲೇಜು ಪ್ರವೇಶಾತಿ ಭರದಿಂದ ಸಾಗಬೇಕಿತ್ತು. ಆದರೆ ರಾಯಚೂರು ಜಿಲ್ಲೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯ ಶಾಲಾ ದಾಖಲಾತಿಗೆ ಬಳಸುವ ಸ್ಯಾಟ್ಸ್ ವೆಬ್ಸೈಟ್ನಲ್ಲಿ ಉಂಟಾಗಿರುವ ಸರ್ವರ್‌ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಾಲೆಗೆ ಸೇರ್ಪಡೆಯಾಗ ಬೇಕಾದರೆ ಹಾಗೂ ಪ್ರೌಢ ಶಿಕ್ಷಣ ಮುಗಿಸಿ ಕಾಲೇಜು ಮೆಟ್ಟಿಲು ಹತ್ತಲು ವರ್ಗಾವಣೆ ಪತ್ರ (ಟಿ ಸಿ) ಮತ್ತು ಇತರೆ ಶಾಲಾ ದಾಖಲಾತಿ ಆನ್ ಲೈನನಲ್ಲಿ ಕಳುಹಿಸಬೇಕಿದೆ.
ಸ್ಯಾಟ್ಸ್ ವೆಬ್ ಸೈಟ್ ಸಮಸ್ಯೆಯಿಂದ ತೊಂದರೆ ಅನುಭವಿಸುವಂತಾಗಿದೆ. ಶಾಲಾ ಮತ್ತು ಕಾಲೇಜು ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ಕಡೆ ಶಾಲಾ ಆಡಳಿತ ಮಂಡಳಿಗಳು, ಮತ್ತೊಂದು ಕಡೆ ಪಾಲಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾ ಗಿದೆ. ಶಾಲಾ ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಗಳು ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇದು ರಾಜ್ಯ ಮಟ್ಟದಲ್ಲಿರುವ ಸರ್ವರ್ ಸಮಸ್ಯೆ, ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ನೀಡುತಿದ್ದು, ಶಿಕ್ಷಣ ಇಲಾಖೆ ಅಸಾಯಕ ಸ್ಥಿತಿಯಲಿದೆ.
ಇದನ್ನೂ ಓದಿ: Raichur News: ದೇವದುರ್ಗದಲ್ಲಿ ಕಟ್ಟಡದ ಮೇಲ್ಚಾವಣಿ ಕುಸಿದು ಇಬ್ಬರ ಸಾವು; ಕಿರುಚಿತ್ರದ ಪೋಸ್ಟರ್ ಅಂಟಿಸುವ ವೇಳೆ ದುರಂತ
ವೆಬ್ಸೈಟ್ ನಿರ್ವಹಣೆಯಲ್ಲಿನ ಕೊರತೆಯೇ ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದ್ದು, ಪಾಲಕರು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಸಮರ್ಪಕ ಆಡಳಿತದ ಕೊರತೆ ಹಾಗೂ ತಾಂತ್ರಿಕ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಸಿಗದಿರುವುದು ಸಾರ್ವಜ ನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಿ, ವಿದ್ಯಾರ್ಥಿಗಳ ದಾಖ ಲಾತಿ ಪ್ರಕ್ರಿಯೆ ಸುಗಮ ಗೊಳಿಸಲು ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪಾಲಕರು ಮತ್ತು ಶಾಲಾ ಆಡಳಿತ ಮಂಡಳಿಗಳು ಆಗ್ರಹಿಸಿವೆ.
ಶಿಕ್ಷಣ ಇಲಾಖೆ ಬಡವಾಗಿದೆ ಸಚಿವ ಸಂಪುಟ ವಿಸ್ತರಣೆಯಾಗದೆ ಇರುವುದರಿಂದ ಮುಖ್ಯಸ್ಥನಿಲ್ಲದೆ ಶಿಕ್ಷಣ ಇಲಾಖೆ ಬಡವಾಗಿದ್ದು, ಸಮಸ್ಯೆಗಳಿಗೆ ಪರಿಹಾರ ಸಿಗದಂತಾಗಿದೆ. ಸರ್ವರ್‌ಸಮಸ್ಯೆಯಿಂದ ವಿದ್ಯಾರ್ಥಿಗಳ ಟಿಸಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೊಸ ಶಾಲೆಗಳಿಗೆ ದಾಖಲಾತಿ ಮಾಡಿಸುವ ಪ್ರಕ್ರಿಯೆಯೂ ಸ್ಥಗಿತ ಗೊಂಡಿದ್ದು, ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆಗೊಂಡ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತವಾಗಿದೆ. ಹಳೆಯ ಶಾಲೆಯಿಂದ ಹೆಸರು ತೆಗೆಯಲಾಗಿದೆ, ಹೊಸ ಶಾಲೆಯಲ್ಲಿ ದಾಖಲಾತಿ ಆಗದೇ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದಾರೆ.
ಸ್ಯಾಟ್ಸ್ ಸಮಸ್ಯೆಯಿಂದ ಶಾಲಾ ವರ್ಗಾವಣೆ ಪತ್ರ ಒಂದು ಶಾಲೆಯಿಂದ ಔಟ್ ಮಾಡಬೇಕಿದ್ದು, ಪ್ರವೇಶ ಪಡೆಯುವ ಶಾಲೆಯಲ್ಲಿ ಇನ್ ಮಾಡಬೇಕಿದೆ. ಆದರೆ ಸರ್ವರ್ ಸಮಸ್ಯೆಯಿಂದ ನಿಗದಿತ ಸಮಯದಲ್ಲಿ ಟಿ ಸಿ ಸಿಗದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಅಡ್ಮಿಷನ್ ಸಿಗದೆ ಭವಿಷ್ಯ ಅತಂತ್ರ ಗೊಳ್ಳುವಂತಾಗಿದೆ. -ಸೈಯ್ಯದ್ ಹಫೀಜುಲ್ಲಾ, ಶಿಕ್ಷಣ ಪ್ರೇಮಿ