ಗ್ರೌಂಡ್ ರಿಪೋರ್ಟ್
ವಿಶ್ವವಾಣಿ ಬಂಗಾಳ ಚುನಾವಣಾ ಯಾತ್ರೆ
ಕರ್ಸೆಯಾಂಗ್ (ಡಾರ್ಜಿಲಿಂಗ್): ಬ್ರಿಟಿಷ್, ನೇಪಾಳ, ಭೂತಾನ್, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಇತಿಹಾಸದೊಂದಿಗೆ ಹೆಣೆದುಕೊಂಡಿರುವ ಉತ್ತರ ಬಂಗಾಳದ ಡಾರ್ಜಿಲಿಂಗ್ ಪಟ್ಟಣ ಪ್ರವಾಸಿಗರ ನೆಚ್ಚಿನ ತಾಣ. ಭಾರತದ ‘ಚಿಕನ್ ನೆಕ್’ ಎಂದೇ ಪ್ರಸಿದ್ಧಿಯಾಗಿರುವ ಸಿಲಿಗುರಿ ಕಾರಿಡಾರ್ ವ್ಯಾಪ್ತಿಯ ಡಾರ್ಜಿಲಿಂಗ್ ಹಾಗೂ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳನ್ನು ಪಶ್ಚಿಮ ಬಂಗಾಳದಿಂದ ಬೇರ್ಪಡಿಸಿ ಪ್ರತ್ಯೇಕ ಗೋರ್ಖಾಲ್ಯಾಂಡ್ ಎಂಬುದಾಗಿ ಘೋಷಿಸಬೇಕು ಎನ್ನುವುದು ಇಲ್ಲಿನ ಜನರ ಹಲವು ದಶಕಗಳ ಹಳೆಯ ಬೇಡಿಕೆ.
ಗೋರ್ಖಾಲ್ಯಾಂಡ್ ಬಗ್ಗೆ 1907ರಿಂದಲೇ ಇಂಥದ್ದೊಂದು ಒತ್ತಾಯ ಈ ಭಾಗದಲ್ಲಿ ಕೇಳಿ ಬಂದಿತ್ತು. ಕಳೆದ ನಾಲ್ಕೈದು ದಶಕಗಳಿಂದ ಪ್ರತ್ಯೇಕ ಗೋರ್ಖಾಲ್ಯಾಂಡ್‌ಗಾಗಿ ಪ್ರತಿಭಟನೆ, ಹಿಂಸಾಚಾರ, ರಕ್ತಪಾತಗಳು ನಡೆದು, ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಮತ್ತು ಸ್ಥಳೀಯರ ಕಣ್ಣಲ್ಲಿ ಹುತಾತ್ಮ ರಾಗಿದ್ದಾರೆ. 1986, 2007 ಮತ್ತು 2017ರಲ್ಲಿ ಒಟ್ಟು ಮೂರು ದೊಡ್ಡ ಪ್ರಮಾಣದ ಹೋರಾಟಗಳಿಗೆ ಸಾಕ್ಷಿಯಾಗಿದ್ದ ಡಾರ್ಜಿಲಿಂಗ್, ಪ್ರತ್ಯೇಕ ಗುರುತು ಹಾಗೂ ಸ್ವಾಯತ್ತತೆಯ ಬೇಡಿಕೆಯನ್ನು ಸರಕಾರ ಗಳ ಮುಂದೆ ಇಡುತ್ತಲೇ ಇದೆ.
ಕಳೆದ ಮೂರ್ನಾಲ್ಕು ದಶಕಗಳಿಂದ ಗೋರ್ಖಾಲ್ಯಾಂಡ್ ಹೋರಾಟವನ್ನು ಕಣ್ಣಾರೆ ಕಂಡಿದ್ದ ಈ ಪ್ರವಾಸಿ ಪಟ್ಟಣದಲ್ಲಿ ಹೋಟೆಲ್ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಆನಂದ್ ಗುರುಂಗ್, ಡಾರ್ಜಿಲಿಂಗ್ ರೈಲ್ವೆ ನಿಲ್ದಾಣದಲ್ಲಿ ಮಾತಿಗೆ ಸಿಕ್ಕರು. ಸಿಲಿಗುರಿ- ಡಾರ್ಜಿಲಿಂಗ್ ಮಧ್ಯೆ ಪ್ರವಾಸಿ ಗರಿಗೆಂದೇ ಟಾಯ್ ಟ್ರೇನ್‌ಗಳಿದ್ದು, 18ನೇ ಶತಮಾನದ ಬ್ರಿಟಿಷರ ಕಾಲದ ಇದು ನಿರ್ಮಾಣ ಗೊಂಡಿತ್ತು. ಬ್ರಿಟಿಷ್ ಕಾಲದ ಸಣ್ಣ ಟ್ರ್ಯಾಕ್‌ಗಳನ್ನೊಳ ಗೊಂಡ ರೈಲ್ವೆ ನಿಲ್ದಾಣವೂ ಕಣ್ಸೆಳೆಯು ತ್ತದೆ.
ಇದನ್ನೂ ಓದಿ: West Bengal Election ground report by Raghava Sharma Nidle: ಚಹಾ ತೋಟದ ಆದಿವಾಸಿಗಳ ಚಿತ್ತ ಕೇಸರಿಯತ್ತ ?
“ನಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಆದರೆ, ಪಶ್ಚಿಮ ಬಂಗಾಳ ವನ್ನು ನಮ್ಮೊಂದಿಗೆ ಜೋಡಿಸಿದರೆ ಹೇಗೆ? ನಾವು ಅವರಿಂದ ಪ್ರತ್ಯೇಕವಾದ ಗುರುತನ್ನು ಹೊಂದಿದ್ದೇವೆ. ಡಾರ್ಜಿಲಿಂಗ್ ಅಭಿವೃದ್ಧಿಗೆ ಸರಕಾರ ಪ್ರಾಶಸ್ತ್ಯ ನೀಡಿದ್ದರೆ, ಪ್ರವಾಸಿ ತಾಣವೊಂದು ಹೀಗೆ ಇರುತ್ತಿತ್ತಾ? ಇಲ್ಲಿ ಯಾವಾಗಲೂ ನೀರಿನ ಸಮಸ್ಯೆ. ಕಡಿದಾದ ರಸ್ತೆಗಳಿಂದ ಸಂಚಾರ ದಟ್ಟಣೆ ಹೆಚ್ಚಾಗಿ, ಗಂಟೆಗಟ್ಟಲೆ ಪ್ರವಾಸಿಗರು ರಸ್ತೆಯ ಸಮಯ ಕಳೆಯಬೇಕಾಗುತ್ತದೆ.
ಪಾರ್ಕಿಂಗ್‌ಗೂ ಸೂಕ್ತ ವ್ಯವಸ್ಥೆಗಳಿಲ್ಲ. ಹೀಗಾಗಿ, ನಮಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಇರಬೇಕು. ಪ್ರತ್ಯೇಕ ಗೋರ್ಖಾಲ್ಯಾಂಡ್ ಬೇಕು. ನಮ್ಮ ಸಮಸ್ಯೆಗಳಿಗೆ ನಾವು ಪರಿಹಾರ ಕಂಡುಕೊಳ್ಳುತ್ತೇವೆ. ಇಲ್ಲದಿದ್ದರೆ, ಅದಕ್ಕೆ ಸಮಾನವಾದ ಸಾಂವಿಧಾನಿಕ ವ್ಯವಸ್ಥೆಯನ್ನಾದರೂ ನೀಡಬೇಕಲ್ಲವೇ?" ಎಂದರು ಗುರುಂಗ್.
ಚುನಾವಣೆಗಳು ಬಂದಾಗಲೇ ಪ್ರತ್ಯೇಕ ಗೋರ್ಖಾಲ್ಯಾಂಡ್ ಕುರಿತ ಚರ್ಚೆಗಳು ಇಲ್ಲಿ ಗರಿಗೆದರುತ್ತವೆ. ಆದರೆ, ನೇಪಾಳ, ಭೂತಾನ್‌ನೊಂದಿಗೆ ಗಡಿ ಹಂಚಿಕೊಂಡಿರುವ ಇಲ್ಲಿನ ಗುಡ್ಡಗಾಡು ಪ್ರದೇಶ ಗಳನ್ನು ಭದ್ರತೆ ಕಾರಣಗಳಾಗಿ ಪಶ್ಚಿಮ ಬಂಗಾಳದಿಂದ ಪ್ರತ್ಯೇಕಗೊಳಿಸಲು ಸ್ಥಳೀಯ ಸರಕಾರ ವಾಗಲೀ, ಕೇಂದ್ರ ಸರಕಾರವಾಗಲೀ ಮನಸ್ಸು ಮಾಡಿಲ್ಲ. ಪ್ರತ್ಯೇಕ ಗೋರ್ಖಾಲ್ಯಾಂಡ್ ಸಾಧ್ಯವಿಲ್ಲ ಎಂದು 2017ರ ಕೇಂದ್ರ ಸರಕಾರ ಸ್ಪಷ್ಟಪಡಿಸಿತ್ತು. ಈಗ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, “ಗೋರ್ಖಾ ಜನಾಂಗದ ಬೇಡಿಕೆಗೆ ಸಂಬಂಧಿಸಿ ಶಾಶ್ವತ ಸಾಂವಿಧಾನಿಕ ಪರಿಹಾರ ಕಂಡುಕೊಳ್ಳಲು ನಮ್ಮ ಸರಕಾರ ಕಟಿಬದ್ಧವಾಗಿದೆ" ಎಂದು ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
1835ರಲ್ಲಿ ಸಿಕ್ಕಿಂ ಸಾಮ್ರಾಜ್ಯದಿಂದ ಡಾರ್ಜಿಲಿಂಗ್ ಪ್ರದೇಶವನ್ನು ಬ್ರಿಟಿಷರು ವಶಪಡಿಸಿಕೊಂಡ ನಂತರ 19ನೇ ಶತಮಾನದ ಮಧ್ಯಭಾಗದಲ್ಲಿ ಡಾರ್ಜಿಲಿಂಗ್ ಪ್ರಮುಖ ಗಿರಿಧಾಮವಾಗಿ ಗುರುತಿಸಿ ಕೊಂಡಿತು. ತಂಪಾದ ಹವಾಮಾನ, ಪೂರಕ ಹಸಿರು ಪರಿಸರ ಇದ್ದುದರಿಂದ ಬ್ರಿಟಿಷರು ಇಲ್ಲಿ ಚಹಾ ತೋಟಗಳನ್ನು ನಿರ್ಮಾಣ ಮಾಡಿದರು. ನಂತರದಲ್ಲಿ ಡಾರ್ಜಿಲಿಂಗ್ ಆಡಳಿತಾತ್ಮಕ ಮತ್ತು ವ್ಯಾಪಾರ ಕೇಂದ್ರವಾಗಿ ಬದಲಾಯಿತು.
ಕಲ್ಕತ್ತಾದ ಬೇಸಗೆಯಿಂದ ಪಾರಾಗಲು ಬ್ರಿಟಿಷ್ ಅರಸು ಮನೆತನದವರು ಇಲ್ಲಿಗೇ ಬರುತ್ತಿದ್ದರು. 18ರ ಶತಮಾನದಲ್ಲಿ ಇಲ್ಲಿ ರೈಲ್ವೇ ಸಂಪರ್ಕವನ್ನೂ ಸ್ಥಾಪಿಸಲಾಯಿತು. ಕಾಲಾಂತರದಲ್ಲಿ ನೇಪಾಳ ದಿಂದಲೂ ಜನ ವಲಸೆ ಬರಲು ಶುರುಮಾಡಿದ್ದರು. 1947ರ ಸ್ವಾತಂತ್ರ್ಯದ ನಂತರ ಡಾರ್ಜಿಲಿಂಗ್‌ನ ನೇಪಾಳಿ ಭಾಷಿಕರಿಗೆ (ಮೂಲ ನೇಪಾಳ ದೇಶದವರಲ್ಲ) ತಮ್ಮ ಗುರುತಿನ ಬಿಕ್ಕಟ್ಟು ಹೆಚ್ಚಾಗ ತೊಡಗಿತು.
ಇದೇ ಕಾರಣಕ್ಕೆ ಡಾರ್ಜಿಲಿಂಗ್ ಹಾಗೂ ಸುತ್ತಮುತ್ತಲಿನ ಮೂಲ ನಿವಾಸಿಗಳನ್ನು ‘ಗೋರ್ಖಾ’ ಎಂದು ಕರೆಸಿಕೊಳ್ಳಲೇ ಅವರು ಬಯಸಿದರು. ಪರಿಣಾಮವಾಗಿ ಪ್ರತ್ಯೇಕ ಗೋರ್ಖಾಲ್ಯಾಂಡ್ ಪ್ರದೇಶದ ಬೇಡಿಕೆ ಹುಟ್ಟಿಕೊಂಡಿತ್ತು. ಗೋರ್ಖಾ ನೇಪಾಳಿ ಮೂಲದ ಹೆಸರಾಗಿದ್ದರೂ, ಅದು ಬ್ರಿಟಿಷ್-ಭಾರತ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ದಿಟ್ಟ ಸಮರ ಸಂಪ್ರದಾಯದ ಗೋರ್ಖಾ ಸೈನಿಕ ರನ್ನು ಬಿಂಬಿಸುತ್ತದೆ.
1980ರ ದಶಕದಲ್ಲಿ ಗೋರ್ಖಾ ನ್ಯಾಷನಲ್ ಲಿಬರೇಷನ್ ಫ್ರಂಟ್ ನಾಯಕರು, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಾಗೂ ನಂತರದಲ್ಲಿ ರಾಜೀವ್ ಗಾಂಧಿಗೆ ಪತ್ರ ಬರೆದು ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿದ್ದರು. ಕೇಂದ್ರದಿಂದ ಸೂಕ್ತ ಪ್ರತಿಸ್ಪಂದನೆ ಸಿಗದ ಕಾರಣ, ಸಿಂಗ್ ನೇತೃತ್ವದಲ್ಲಿ 1986-87ರಲ್ಲಿ ಸುಮಾರು 200 ದಿನಗಳ ಕಾಲ ಆಂದೋಲನ ನಡೆದು, ನಂತರ ಸರಕಾರಗಳು ಸಿಂಗ್ ಜತೆ ಸಂಧಾನ ನಡೆಸಿದವು.
ಡಾರ್ಜಿಲಿಂಗ್ ಗೋರ್ಖಾ ಹಿಲ್ ಕೌನ್ಸಿಲ್ ಸ್ಥಾಪನೆಗೆ ಸರಕಾರ ಒಪ್ಪಿಗೆ ನೀಡಿತು. ಸಿಂಗ್ ಪ್ರತ್ಯೇಕ ರಾಜ್ಯದ ಬೇಡಿಕೆ ಕೈಬಿಟ್ಟರು. ಹಲವು ವರ್ಷಗಳ ಕಾಲ ಈ ಕೌನ್ಸಿಲ್‌ಗೆ ಸಿಂಗ್ ಅಧ್ಯಕ್ಷರಾಗಿದ್ದರು. ಆದರೆ, ಸಿಂಗ್ ಸರ್ವಾಧಿಕಾರದಿಂದ ಆಕ್ರೋಶಗೊಂಡಿದ್ದ ಅವರ ಆಪ್ತ ಬಿಮಲ್ ಗುರುಂಗ, ಪ್ರತ್ಯೇಕ ‘ಗೋರ್ಖಾ ಜನಮುಕ್ತಿ ಮೋರ್ಚಾ’ ಸ್ಥಾಪಿಸಿ, ಪ್ರತ್ಯೇಕ ಗುರುತು, ಸ್ವಾಯತ್ತತೆಯ ಹೋರಾಟ ಮುಂದುವರಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಇದೇ ಗೋರ್ಖಾ ಜನಮುಕ್ತಿ ಮೋರ್ಚಾದೊಂದಿಗೆ (ಜಿಜೆಎಂ) ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಡಾರ್ಜಿಲಿಂಗ್ ವಿಧಾನಸಭೆಯಿಂದ ಜಿಜೆಎಂನ ನಮನ್ ರಾಯ್ ಅವರು ಬಿಜೆಪಿ ಚಿಹ್ನೆಯಿಂದ ಸ್ಪರ್ಧಿಸುತ್ತಿದ್ದಾರೆ.
ವಿಶೇಷ ಎಂದರೆ, ಡಾರ್ಜಿಲಿಂಗ್ ಸುತ್ತಮುತ್ತಲಿನ ಮೂರು ಸೀಟುಗಳಲ್ಲಿ ಟಿಎಂಸಿ ಒಂದರಲ್ಲೂ ಸ್ಪಽಸುತ್ತಿಲ್ಲ. ಅನಿತ್ ಥಾಪಾ ನೇತೃತ್ವದ ಮಿತ್ರಪಕ್ಷ ‘ಭಾರತೀಯ ಗೋರ್ಖಾ ಪ್ರಜಾತಾಂತ್ರಿಕ್ ಮೋರ್ಚಾ’ಗೆ (ಬಿಜಿಪಿಎಂ) ಡಾರ್ಜಿಲಿಂಗ್, ಕರ್ಸೆಯಾಂಗ್ ಮತ್ತು ಕಲಿಂಪಾಂಗ್ ಸೀಟುಗಳನ್ನು ಬಿಟ್ಟುಕೊಟ್ಟಿದೆ.
ಬಿಜೆಪಿ ಜತೆಗಿನ ಮೈತ್ರಿಕೂಟದ ಭಾಗವಾಗಿರುವ ಬಿಮಲ್ ಗುರುಂಗ್ ಮತ್ತವರ ಜಿಜೆಎಂ 2017ರಲ್ಲಿ ಬಹುದೊಡ್ಡ ಪ್ರತ್ಯೇಕ ಗೋರ್ಖಾಲ್ಯಾಂಡ್ ಆಂದೋಲನ ನಡೆಸಿದ್ದರು. ಅದು ಕೂಡ ಹಿಂಸಾ ಸ್ವರೂಪ ಪಡೆದುಕೊಂಡಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳ ಶಾಲೆಗಳಲ್ಲಿ ಬಂಗಾಳಿ ಭಾಷೆ ಕಡ್ಡಾಯ ಗೊಳಿಸುವ ಪಶ್ಚಿಮ ಬಂಗಾಳ ಸರಕಾರದ ತೀರ್ಮಾನವನ್ನು ಖಂಡಿಸಿ, ಬೆಟ್ಟದಲ್ಲಿ ಶುರುವಾದ ಆಂದೋಲನದಿಂದ ಅಶಾಂತಿ ನಿರ್ಮಾಣವಾಗಿ ಇಡೀ ಪ್ರದೇಶ ಸಂಪೂರ್ಣ ನಲುಗಿ ಹೋಗಿತ್ತು.
1986ರಲ್ಲಿ ಸುಭಾಷ್ ಸಿಂಗ್ ನೇತೃತ್ವದಲ್ಲಿ ಆಂದೋಲನ ನಡೆದಿzಗ ಸುಮಾರು 1200 ಜನರು ಸಾವನ್ನಪ್ಪಿದ್ದರು. ಆ ಪ್ರಮಾಣದಲ್ಲಿ ಸಾವುಗಳು ಉಂಟಾಗದಿದ್ದರೂ, ಸಿಂಗ್ ಹೋರಾಟವನ್ನು 2017ರ ಹೋರಾಟ ನೆನಪಿಸಿತ್ತು. ಡಾರ್ಜಿಲಿಂಗ್ ಮಾಲ್ ರೋಡ್ ಪಕ್ಕದಲ್ಲಿ ಬೆಳಗಿನ ಚುಮುಚುಮು ಚಳಿಯ ನಡುವೆಯೂ ಚಹಾ ಮಾರುತ್ತಿದ್ದ, 50 ವರ್ಷಗಳ ಹಿಂದೆ ಬಿಹಾರದ ಪಟನಾದಿಂದ ಡಾರ್ಜಿಲಿಂಗ್‌ಗೆ ವಲಸೆ ಬಂದು ಸ್ಥಳೀಯ ನಿವಾಸಿಯಾಗಿ ಬದಲಾಗಿರುವ ಸುರೇಂದ್ರ ಕುಮಾರ್, “2017ರ ಹೋರಾಟದಲ್ಲಿ ಸಾವು-ನೋವುಗಳು ಉಂಟಾದಾಗ ಮಮತಾ ದೀದಿ ಇಲ್ಲಿಗೆ ಬಂದು ಜನರಿಗೆ ಸಾಂತ್ವನ ಹೇಳಿದ್ದರು. ಆದರೆ, ಕೇಂದ್ರದ ಬಿಜೆಪಿ ಸರಕಾರ ಏನು ಮಾಡಿತು? ನಮ್ಮವರ ಸಂಕಟ ಕೇಳಿತೇ? ಈಗ ಜಿಜೆಎಂ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರಬಹುದು. ಆದರೆ, ಬಿಜೆಪಿ ಯಿಂದ ನಮಗೆ ಯಾವುದೇ ಭರವಸೆ ಇಲ್ಲ" ಎಂದು ಅನಿತ್ ಥಾಪಾ ನೇತೃತ್ವದ ಪಕ್ಷಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.
2009ರಿಂದ ಬಿಜೆಪಿ
2009ರ ಲೋಕಸಭೆ ಚುನಾವಣೆಯಲ್ಲಿ ಡಾರ್ಜಿಲಿಂಗ್ ಕ್ಷೇತ್ರದಿಂದ ಮಾಜಿ ರಕ್ಷಣಾ ಸಚಿವ ಜಸ್ವಂತ್ ಸಿಂಗ್ ಅವರು ಸ್ಪರ್ಧೆ ಮಾಡಿ ಗೆದ್ದಿದ್ದರು. ನಂತರ, ಎಸ್.ಎಸ್. ಅಹ್ಲುವಾಲಿಯಾ ಅವರು ಇಲ್ಲಿಂದ ಸಂಸದರಾಗಿದ್ದರು. 2019 ಮತ್ತು 2024ರಲ್ಲಿ ರಾಜು ಬಿಸ್ಟಾ ಅವರು ಸಂಸದರಾಗಿ ಆಯ್ಕೆಯಾಗಿದ್ದಾರೆ. 2021ರ ವಿಧಾನಸಭಾ ಚುನಾವಣೆಯಲ್ಲಿ, ಡಾರ್ಜಿಲಿಂಗ್ ಜಿಲ್ಲೆಯ ಏಳು ಸ್ಥಾನ ಗಳಲ್ಲಿ ಬಿಜೆಪಿ 4ನ್ನು ಗೆದ್ದರೆ, ಟಿಎಂಸಿ ಮತ್ತು ಮಿತ್ರಪಕ್ಷ ಬಿಜಿಪಿಎಂ 3ನ್ನು ಗೆದುಕೊಂಡಿತ್ತು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ, ಈ ಏಳು ಕ್ಷೇತ್ರಗಳಲ್ಲಿ 6ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು.
ಈ ತಲೆಮಾರಿನ ಹೊಸ ಚಿಂತನೆ
ಡಾರ್ಜಿಲಿಂಗ್ ಸುತ್ತಮುತ್ತ ಜನರನ್ನು ಮಾತನಾಡಿಸಿದಾಗ ಪ್ರತ್ಯೇಕ ಗೋರ್ಖಾಲ್ಯಾಂಡ್ ಎನ್ನುವುದು ಹಳೆ ತಲೆಮಾರಿಗೆ ಸೀಮಿತಗೊಂಡಿದೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ. ಹಿರಿ ತಲೆಗಳು ಗೋರ್ಖಾ ಗುರುತು, ಸ್ವಾಯತ್ತತೆ ಬಗ್ಗೆ ಮಾತನಾಡಿದರೆ, ಯುವ ತಲೆಮಾರಿನವರು ಉದ್ಯೋಗ, ಅಭಿವೃದ್ಧಿ, ಪ್ರವಾಸೋದ್ಯಮ ಸುಧಾರಣೆ, ರಸ್ತೆ, ಸಮರ್ಪಕ ನೀರಿನ ವ್ಯವಸ್ಥೆಗೆ ಹೆಚ್ಚು ಒತ್ತು ನೀಡುವ ಬಗ್ಗೆ ಮಾತನಾಡುತ್ತಾರೆ. “ಪ್ರವಾಸಿಗರಿಂದಲೇ ನಮ್ಮ ಜೀವನ ಸಾಗುತ್ತದೆ. ಪ್ರವಾಸೋ ದ್ಯಮ ಸುಧಾರಣೆಗೆ ಜನಪ್ರತಿನಿಧಿಗಳು ಯೋಚನೆ ಮಾಡಲಿ. ಡಾರ್ಜಿಲಿಂಗ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಮೂರು ದೇಶಗಳ ಗಡಿ ಭಾಗದಲ್ಲಿರು ವುದರಿಂದ ಭೌಗೋಳಿಕ ಸಮಗ್ರತೆಯ ರಕ್ಷಣೆ ಕಾರಣಕ್ಕಾಗಿ ಸರಕಾರ ಪ್ರತ್ಯೇಕ ಗೋರ್ಖಾಲ್ಯಾಂಡ್‌ಗೆ ಒಪ್ಪುತ್ತಿಲ್ಲ. ಇದು ವಾಸ್ತವವೂ ಹೌದು. 2017ರ ಹೋರಾಟದ ಹಿಂದೆ ಚೀನಿಯರ ಪ್ರಭಾವ ಇತ್ತೆಂದು ಹೇಳುತ್ತಾರೆ.
ಹೀಗಾಗಿ, ಸ್ಥಳೀಯ ಸಂಸ್ಕೃತಿ ಉಳಿಸಿಕೊಂಡು, ಜನಜೀವನ ಸುಧಾರಣೆಗೆ ಪ್ರಾಶಸ್ತ್ಯ ನೀಡಬೇಕು" ಎಂದು ಡಾರ್ಜಿಲಿಂಗ್‌ನ ಮಹಾಕಾಳಿ ದೇವಸ್ಥಾನದಲ್ಲಿ ಸಿಕ್ಕ ಕಾಂಚನ್ ಲಾಮ ಮತ್ತು ಸೌಂದರ್ಯ ಲಾಮ ಅಭಿಪ್ರಾಯ ಪಡುತ್ತಾರೆ. ಡಾರ್ಜಿಲಿಂಗ್‌ನ ಸುಪ್ರಸಿದ್ಧ ಮಹಾಕಾಳಿ ದೇವಸ್ಥಾನ ಹಿಂದೂ-ಬೌದ್ಧ ಧರ್ಮೀಯರ ಸಾಮರಸ್ಯಕ್ಕೆ ಸಾಕ್ಷಿಯಾಗಿ ನಿಂತಿದೆ. ದೇಗುಲದ ಗರ್ಭಗುಡಿಯಲ್ಲಿ ಬುದ್ಧನ ಮೂರ್ತಿಯೂ ಇದ್ದು, ಹಿಂದೂ ಪುರೋಹಿತರ ಪಕ್ಕದ ಬುದ್ಧ ಸನ್ಯಾಸಿಯೂ ಕುಳಿತು ಬುದ್ಧನಿಗೆ ಪ್ರಾರ್ಥನೆ ಮಾಡು ವುದನ್ನೂ ಇಲ್ಲಿ ಕಾಣಬಹುದು.
ಜಿಟಿಎ ಅಧ್ಯಕ್ಷ ಅನಿತ್ ಥಾಪಾ
ಭಾರತೀಯ ಗೋರ್ಖಾ ಪ್ರಜಾತಾಂತ್ರಿಕ್ ಮೋರ್ಚಾದ ನಾಯಕ ಅನಿತ್ ಥಾಪಾ, ಗೋರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್ (ಜಿಟಿಎ) ಸಂಸ್ಥೆಯ ಅಧ್ಯಕ್ಷರೂ ಹೌದು. ಜಿಟಿಎ ಅರೆ-ಸ್ವಾಯತ್ತ ಮಂಡಳಿಯಾಗಿದ್ದು, 2012ರಲ್ಲಿ ಪಶ್ಚಿಮ ಬಂಗಾಳ ಕಾಯ್ದೆಯ ಮೂಲಕ ಇದನ್ನು ಸ್ಥಾಪನೆ ಮಾಡಲಾಯಿತು. ಡಾರ್ಜಿಲಿಂಗ್ ಮತ್ತು ಕಲಿಂಪಾಂಗ್ ಜಿಗಳ ಆಡಳಿತ ಮತ್ತು ಹಣಕಾಸು ವ್ಯವಹಾರಗಳನ್ನು ಇದು ನಿರ್ವಹಿಸುತ್ತಿದೆ. ಸುಭಾಷ್ ಸಿಂಗ್ ಹೋರಾಟದಿಂದ ಸ್ಥಾಪನೆಯಾಗಿದ್ದ ಡಾರ್ಜಿಲಿಂಗ್ ಗೋರ್ಖಾ ಹಿಲ್ ಕೌನ್ಸಿಲ್ ಅನ್ನು ರದ್ದುಗೊಳಿಸಿ, ಗೋರ್ಖಾ ಜನಾಂಗದ ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ಭಾಷೆ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಉತ್ತೇಜಿಸುವ ಸಲುವಾಗಿ, ಜಿಟಿಎ ಅನ್ನು ಸ್ಥಾಪಿಸಲಾಗಿದೆ. ಡಾರ್ಜಿಲಿಂಗ್ ಬೆಟ್ಟ ಪ್ರದೇಶಗಳ ರಾಜಕೀಯ ಜವಾ ಬ್ದಾರಿಯನ್ನು ಟಿಎಂಸಿ ಅನಿತ್ ಥಾಪಾಗೆ ನೀಡಿದೆ.