ರಂಗನಾಥ ಕೆ. ಹೊನ್ನಮರಡಿ ತುಮಕೂರು
ಜಿಲ್ಲೆಯಾದ್ಯಂತ ಒಟ್ಟು 10223 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆ
ಸಾಮಾನ್ಯವಾಗಿ ತೆಂಗು ಮತ್ತು ಅಡಿಕೆಗೆ ಹೆಸರಾದ ಕಲ್ಪತರು ನಾಡು ತುಮಕೂರು ಈಗ ರೇಷ್ಮೆ ಕೃಷಿಯಲ್ಲೂ ರಾಜ್ಯಕ್ಕೆ ಮಾದರಿಯಾಗಿ ಹೊರಹೊಮ್ಮಿದೆ. 2025-26ನೇ ಸಾಲಿನ ರೇಷ್ಮೆ ಇಲಾಖೆಯ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ರೇಷ್ಮೆ ಗೂಡು ಉತ್ಪಾದನೆಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದು ಹೊಸ ದಾಖಲೆ ಬರೆದಿದೆ.
ಮಾ 2020ರ ಅಂತ್ಯಕ್ಕೆ ಲಭ್ಯವಿರುವ ದತ್ತಾಂಶಗಳ ಪ್ರಕಾರ, ಜಿಲ್ಲೆಯ ರೈತರು ರೇಷ್ಮೆ ಕೃಷಿಯನ್ನು ಒಂದು ಲಾಭದಾಯಕ ಉದ್ದಿಮೆಯಾಗಿ ಸ್ವೀಕರಿಸಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 10223 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯುವ ಗುರಿಯನ್ನು ತಲುಪಲಾಗಿದ್ದು, ಹಸಿರು ಹೊದಿಕೆಯಂತೆ ಕಾಡುತ್ತಿರುವ ಹಿಪ್ಪುನೇರಳೆ ತೋಟಗಳು ಜಿಲ್ಲೆಯ ಆರ್ಥಿಕತೆಗೆ ಬಲ ತುಂಬುತ್ತಿವೆ.
ಇದನ್ನೂ ಓದಿ: Mysore silk saree: ಮೈಸೂರು ರೇಷ್ಮೆ ಸೀರೆಗಳಿಗೆ ಭಾರಿ ಡಿಮ್ಯಾಂಡ್, ಆನ್‌ಲೈನ್ ಮಾರಾಟಕ್ಕೆ ಬ್ರೇಕ್
ತಾಲೂಕುಗಳ ನಡುವೆ ರೇಷ್ಮೆ ಪೈಪೋಟಿ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರೇಷ್ಮೆ ಕೃಷಿ ಸಮೃದ್ಧವಾಗಿ ಬೆಳೆದಿದೆ, ಸಿರಾ ಮತ್ತು ಪಾವಗಡದ ಭಾಗಗಳಲ್ಲಿ ನೀರಿನ ಮಿತಬಳಕೆಯೊಂದಿಗೆ ರೇಷ್ಮೆ ಕೃಷಿ ಕ್ರಾಂತಿ ಮಾಡಲಾಗಿದೆ. ಸಿರಾ ತಾಲೂಕು 1921 ಹೆಕ್ಟೇರ್ ಹಾಗೂ ಪಾವಗಡ 1845 ಹೆಕ್ಟೇರ್ ವಿಸ್ತೀರ್ಣದೊಂದಿಗೆ ಜಿಲ್ಲೆಯ ಪ್ರಮುಖ ರೇಷ್ಮೆ ಕೇಂದ್ರಗಳಾಗಿ ಹೊರಹೊಮ್ಮಿವೆ. ಜಿಲ್ಲೆಯ ಒಟ್ಟು ಸಾಧನೆಯಲ್ಲಿ ಕುಣಿಗಲ್ ಬಿತ್ತನೆ ವಲಯದ ಪಾಲು ಅತಿ ದೊಡ್ಡದಾಗಿದ್ದು ಬರೊಬ್ಬರಿ 2209 ಹೆಕ್ಟೇರ್ ವಿಸ್ತೀರ್ಣದಲ್ಲಿ ಸಾಧನೆ ಮಾಡಿರುವ ಈ ವಲಯ, ಜಿಲ್ಲೆಯ ರೇಷ್ಮೆ ಕೃಷಿಯ ಬೆನ್ನೆಲುಬಾಗಿ ನಿಂತಿದೆ.
5 ಸಾವಿರ ಮೆಟ್ರಿಕ್ ಟನ್ ಗೂಡು ಉತ್ಪಾದನೆ! ಜಿಲ್ಲೆಯ ರೈತರ ಶ್ರಮದ ಫಲವಾಗಿ ಒಟ್ಟು 5008.746 ಮೆಟ್ರಿಕ್ ಟನ್ ರೇಷ್ಮೆ ಗೂಡು ಉತ್ಪಾದನೆಯಾಗಿದೆ. ಇದರಲ್ಲಿ ಕೇವಲ ಪ್ರಮಾಣ ಮಾತ್ರವಲ್ಲದೆ ಗುಣಮಟ್ಟಕ್ಕೂ ಆದ್ಯತೆ ನೀಡಲಾಗಿದೆ. ಉತ್ತಮ ಗುಣ ಮಟ್ಟದ ದ್ವಿತಳಿ ರೇಷ್ಮೆಯು ಸುಮಾರು 2974.669 ಮೆ.ಟನ್ ಉತ್ಪಾದನೆಯಾ ಗಿದ್ದರೆ, ಮಿಶ್ರ ತಳಿ 1676.371 ಮೆ.ಟನ್ ಹಾಗೂ ಸಾಂಪ್ರದಾಯಿಕ ಮೈಸೂರು ತಳಿ 357.706 ಮೆ.ಟನ್‌ನಷ್ಟು ಉತ್ಪತ್ತಿಯಾಗಿದೆ.
ರಾಜ್ಯದಲ್ಲೇ ಮೊದಲ ಸ್ಥಾನ
ರೇಷ್ಮೆ ಇಲಾಖೆಯ ದಕ್ಷ ಮಾರ್ಗದರ್ಶನ ಮತ್ತು ರೈತರ ಅವಿರತ ಶ್ರಮದಿಂದಾಗಿ ತುಮಕೂರು ಜಿಲ್ಲೆಯು ಇಂದು ಕರ್ನಾಟಕದ ರೇಷ್ಮೆ ಭೂಪಟದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಸುಮಾರು 7607.87 ಲಕ್ಷದಷ್ಟು ಚಾಕಿ ಮೊಟ್ಟೆಗಳ ಪೂರೈಕೆಯು ಜಿಲ್ಲೆಯ ರೇಷ್ಮೆ ಕೃಷಿಯ ವಿಸ್ತಾರವನ್ನು ಎತ್ತಿ ತೋರಿಸುತ್ತದೆ.
![]()
ಬೇರೆ ಕೃಷಿಗಳಿಗೆ ಹೋಲಿಸಿದರೆ ರೇಷ್ಮೆ ನಮಗೆ ಕೈ ಹಿಡಿಯುವ ಬೆಳೆ. ವರ್ಷಪೂರ್ತಿ ಕಷ್ಟಪಟ್ಟು ಕಾಯುವ ಅಗತ್ಯವಿಲ್ಲ, ಕೇವಲ ೨೬ ರಿಂದ ೩೦ ದಿನಗಳಲ್ಲಿ ಒಂದು ಇಳುವರಿ (ಬೆಳೆ) ಕೈಗೆ ಬರುತ್ತದೆ. ವರ್ಷದಲ್ಲಿ ಕನಿಷ್ಠ ೫ ರಿಂದ ೬ ಬಾರಿ ಆದಾಯ ನೋಡಬಹುದು. ಸರಿಯಾಗಿ ನಿರ್ವಹಣೆ ಮಾಡಿ ದರೆ ತಿಂಗಳು ತಿಂಗಳು ಕೈಯಲ್ಲಿ ಹಣ ಓಡಾಡುತ್ತಿರುತ್ತದೆ.
ನಾಗರಾಜು, ಪಾವಗಡ, ರೈತ