ವೀರೇಶ್ ಎಸ್.ಕೆಂಭಾವಿ
ಯಾದಗಿರಿ: ಪ್ರತಿ ಬಾರಿ ಜಿಲ್ಲೆಯಲ್ಲಿ ಪ್ರವಾಹ ಎದುರಾದಾಗ ಮೊದಲು ಮುನ್ನೆಲೆಗೆ ಬರುವ ಕೊಳ್ಳೂರ (ಎಂ) ಸೇತುವೆ ಮಾತ್ರ ಉಳಿದ ಸಮಯದಲ್ಲಿ ಜನಪ್ರತಿನಿಧಿಗಳ ನೆನಪಿಗೆ ಬಾರದೇ ಹೋಗುತ್ತಿರುವ ಪರಿಣಾಮ ಅಲ್ಲಿ ಹರಿಯುವ ಕೃಷ್ಣೆಯ ಶಾಪಕ್ಕೆ ರೈತರು, ಪ್ರಯಾಣಿಕರು ಒಳಗಾಗು ತ್ತಿದ್ದಾರೆ.
ಸದ್ಯ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದು ಬಸವ ಸಾಗರ ಜಲಾಶಯದಿಂದ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಇದರಿಂದ ಶಹಾಪುರ ತಾಲೂಕಿನ ಕೊಳ್ಳೂರ ( ಎಂ) ಗ್ರಾಮದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಮೇಲೆ ನೀರು ಬಂದು ಜಿಲ್ಲೆಗಳಿಂದ ಮತ್ತೊಂದು ಜಿಲ್ಲೆಯಲ್ಲಿನ ಸಂಪರ್ಕ ಸಂಪೂರ್ಣ ಕಡಿತ ವಾಗಿದುವುದರ ಜತೆಗೆ ಭಾರೀ ಪ್ರಮಾಣದಲ್ಲಿ ಹೊಲಗಳಿಗೂ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟ ಸಹ ಸಂಭವಿಸಿದೆ.
ಹಾಗಾಗಿ ಇದೀಗ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಶಹಾಪುರ-ದೇವದುರ್ಗ ರಾಜ್ಯ ಹೆದ್ದಾರಿಯ ರಸ್ತೆ ಸಂಚಾರವನ್ನು ನಿರ್ಬಂಧಿಸಿದೆ. ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರಕ್ಕೆ ನಿರ್ಬಂಧಿ ಸಿ, ಒಬ್ಬ ಪೊಲೀಸ್ ಸಿಬ್ಬಂದಿ ಸಹ ನಿಯೋಜನೆ ಮಾಡಲಾಗಿದೆ. ಸೇತುವೆ ಮುಳುಗಡೆಯಾಗಿರುವ ಪರಿಣಾಮ ತಮ್ಮ ದಿನನಿತ್ಯದ ಕಾರ್ಯಗಳಿಗೆ ರಾಯಚೂರು, ದೇವದುರ್ಗಗಳತ್ತ ಪ್ರಯಾಣಿಸಲು ಸುತ್ತಿ ಬಳಸಿ ಪ್ರಯಾಣಿಸಿಬೇಕಾದ ಅನಿವಾರ್ಯತೆ ಇದೀಗ ಎದುರಾಗಿದೆ.
ಇದನ್ನೂ ಓದಿ: Dr T N Vasudevamurthy Column: ದಸರಾ ಉದ್ಘಾಟನೆಗೆ ಮಾನದಂಡವೇನು ?
ಪ್ರತಿ ಬಾರಿ ಮಳೆಗಾಲ ಬಂದಾಗೊಮ್ಮೆ ಸೇತುವೆ ಮುಳುಗಡೆಯಾಗುವುದು ಕೃಷ್ಣೆಯ ಶಾಪವಾಗಿದೆ. ಇದರಿಂದ ಜನ, ವಾಹನಗಳ ಸಂಚಾರ ಆಯೋಮಯವಾಗುವುದು ಕಾಯಂ ಗೋಳಾಗಿದೆ. ಹೊಸ ಸೇತುವೆ ನಿರ್ಮಿಸಿ ಇಲ್ಲವೇ ಬಲಪಡಿಸಿ ಎಂಬ ಸ್ಥಳೀಯರ ಆಗ್ರಹಗಳು ಇನ್ನೂ ಕೂಡಾ ಸರಕಾರಕ್ಕೆ ಮುಟ್ಟಿಲ್ಲ. ಶಾಶ್ವತ ಪರಿಹಾರ ಒದಗಿಸಿ ಸದಾ ಸಂಚಾರಮುಕ್ತ ಮಾಡಬೇಕಾಗಿರುವ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಎಂದಿಗೂ ಕಾಡುತ್ತಿದೆ.
೧೯೭೬ರಲ್ಲಿ ನಿರ್ಮಾಣವಾದ ಸ್ಟ್ರಿಂಗ್ ಸೇತುವೆ: ಗ್ಯಾಮನ್ ಇಂಡಿಯಾ ಕಂಪನಿಯು ೧೯೭೬ರಲ್ಲಿ ಸೇತುವೆಯನ್ನು ನಿರ್ಮಾಣ ಮಾಡಿದ್ದು, ಇದರ ಬುಡದಲ್ಲಿ ಸ್ಟ್ರಿಂಗ್‌ನಿಂದ ಕೂಡಿದ್ದು, ಇದೊಂದು ರೀತಿಯ ತೂಗು ಅಪರೂಪದ ಸೇತುವೆಯಾಗಿದೆ.ಏಷ್ಯಾ ಖಂಡದಲ್ಲಿಯೇ ಪ್ರಸಿದ್ಧಿ ಪಡೆದ ೨ನೇ ದಾಗಿದೆ. ಪ್ರತಿ ಸಲ ಪ್ರವಾಹ ಬಂದಾಗ ಮುಳುಗುವುದರಿಂದ ಈ ಬ್ರಿಡ್ಜ್ ಹೆಚ್ಚು ಸುದ್ದಿಯಲ್ಲಿರುತ್ತದೆ. ಇಲ್ಲಿಯವರೆಗೂ ಚಾರು- ಚೂರು ದುರಸ್ತಿ ಮಾತ್ರ ಕಂಡಿರುವ ಕೊಳ್ಳೂರ ( ಎಂ) ಸೇತುವೆಯ ತಡೆ ಗೋಡೆ ಇತ್ತೀಚೆಗೆ ಕುಸಿದು ದುರಸ್ತಿ ಕಂಡಿದ್ದು ಬಿಟ್ಟರೆ ಮೇಲ್ದರ್ಜೆಗೆ ಏರಿಸುವ ಕೆಲಸ ಮಾತ್ರ ಇಂದಿಗೂ ಆಗಿಲ್ಲ.
ಹುಸಿಯಾದ ಭರವಸೆಗಳು
ಪ್ರವಾಹದಿಂದ ಮುಳುಗಡೆಯಾದಾಗ ಈ ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಬಂದಾಗ ಹಾಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಿಂದೆಯಿದ್ದ ಬಿಜೆಪಿ ಸರಕಾರದ ಜಿಲ್ಲಾ ಉಸ್ತುವಾರಿ ಸಚಿವರುಗಳು ಸೇತುವೆ ಎತ್ತರಿಸುವ ಬಗ್ಗೆ ಪ್ರಸ್ತಾಪ ಮಾಡಿ ಭರವಸೆ ನೀಡುತ್ತಾರೆ. ಆದರೆ, ಅವೆಲ್ಲವೂ ಇಂದಿಗೂ ಹುಸಿಯಾಗಿವೆ. ಪ್ರವಾಹ ಬಂದಾಗೊಮ್ಮೆ ಮುಳುಗುವ ಈ ಸೇತುವೆಗೊಂದು ಶಾಶ್ವತ ಪರಿಹಾರ ಸಿಗುವ ಬಗ್ಗೆ ದಿನನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರು ಕಾಯುತ್ತಿದ್ದಾರೆ.
ಹಿಂದೆ ಒಮ್ಮೆ ತಡೆಗೋಡೆ ಕುಸಿತ
ಪ್ರವಾಹದ ನೀರಿನ ಸೆಳೆತ ಹಾಗೂ ಹೆಚ್ಚು ನೀರು ನಿಲುಗಡೆಯಿಂದ ೨೦೨೧ರಲ್ಲಿ ಸುಮಾರು ಐದಾರು ಫೀಟಿನಷ್ಟು ಕಲ್ಲಿನಿಂದ ನಿರ್ಮಿಸಿದ ಗೋಡೆ ಕುಸಿತವಾಗಿತ್ತು. ಸೇತುವೆಗೆ ಹೊಂದಿಕೊಂಡಿದ್ದ ತಡೆಗೋಡೆ ಕುಸಿತದಿಂದ ಜನರಲ್ಲಿ ಆತಂಕ ಮನೆ ಮಾಡಿತ್ತು. ಇದಾದ ಹಲವು ದಿನಗಳ ಬಳಿಕ ತಾತ್ಕಾಲಿಕ ದುರಸ್ತಿ ಮಾಡಿ ಅಧಿಕಾರಿಗಳು ಕೈತೊಳೆದು ಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿ ದ್ದಾರೆ. ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗೆ ಹೊಂದಿಕೊಂಡಿರುವ ತಡೆಗೋಡೆ ಕುಸಿತದಿದೆ. ಪ್ರವಾಹದ ನೀರಿನ ಸೆಳೆತ ಹಾಗೂ ಹೆಚ್ಚು ನೀರು ನಿಲುಗಡೆಯಿಂದ ಸುಮಾರು ಐದಾರು ಫೀಟಿನಷ್ಟು ಕಲ್ಲಿನಿಂದ ನಿರ್ಮಿಸಿದ ಗೋಡೆ ಕುಸಿತವಾಗಿ ಹಲವು ದಿನಗಳು ಆಗಿದ್ದರೂ, ಒಬ್ಬ ಅಧಿಕಾರಿ ಆಗಮಿಸಿ ಗಮನಿಸಿ ದುರಸ್ತಿ ಕಾರ್ಯಕ್ಕೆ ಮುಂದಾ ಗಿಲ್ಲ.
*
ಸೇತುವೆ ಜಲಾವೃತವಾಗುವುದರಿಂದ ರಾಯಚೂರು, ಯಾದಗಿರಿ ಜಿಲ್ಲೆಗಳ ಜನರು ಸಂಚರಿಸಲು ತೊಂದರೆಯಾಗುತ್ತಿದೆ. ಇಲ್ಲಿ ಸಂಪರ್ಕ ಕಡಿತಗೊಂಡರೆ ಸುಮಾರು 80 ಕಿ.ಲೋ ಮೀಟರ್ ಸುತ್ತ ಬೇಕಾಗುತ್ತದೆ ಹೀಗಾಗಿ ರೈತರು, ವಿದ್ಯಾರ್ಥಿಗಳು, ಜನ ಸಾಮಾನ್ಯರಿಗೆ ಸಮಯ ಹಾಗೂ ಹಣ ವ್ಯತ್ಯಯ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನಾದರೂ ಕೊಳ್ಳೂರು ಸೇತುವೆಯನ್ನು ಮೇಲ್ದರ್ಜೆಗೇರಿಸಿ ಸದಾ ಸಂಚಾರಮುಕ್ತ ಮಾಡಬೇಕು.
-ಟಿ.ಎನ್. ಭೀಮುನಾಯಕ, ಕರವೇ, ಜಿಲ್ಲಾಧ್ಯಕ್ಷ
*
ಕೊಳ್ಳೂರ ( ಎಂ) ಗ್ರಾಮದ ಬಳಿ 1976ರಲ್ಲಿಯೇ ನಿರ್ಮಿಸಿದ ಸೇತುವೆ
ಮೂರು ಜಿಲ್ಲೆಗಳ ಸಂಪರ್ಕದ ಕೊಂಡಿಯಾಗಿರುವ ಬ್ರಿಡ್ಜ್
ನಾರಾಯಣಪುರ ಡ್ಯಾಮ್ ನಿಂದ ನದಿಗೆ ೨ ಲಕ್ಷಕ್ಕಿಂತ ಹೆಚ್ಚು ಕ್ಯುಸೆಕ್ ನೀರು ಬಿಟ್ಟರೆ ಮುಳುಗುವುದು ಖಚಿತ
ಸೇತುವೆ ಮೇಲ್ದರ್ಜೆಗೆ ಜನಪ್ರತಿನಿಧಿಗಳಲ್ಲಿ ಮೂಡದ ಇಚ್ಛಾಶಕ್ತಿ