ದೇವೇಂದ್ರ ಜಾಡಿ ಕಲಬುರಗಿ
ಶೀಘ್ರದಲ್ಲೇ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆ
ಬೆಂಗಳೂರು ಮತ್ತು ಮುಂಬೈ ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಕಲಬುರಗಿ ಮಾರ್ಗದಲ್ಲಿ ಸಂಚರಿಸುವುದು ಖಚಿತಗೊಂಡಿದೆ. ರೈಲ್ವೆ ಮಂಡಳಿ, ರೈಲು ಸಂಖ್ಯೆ, ಮಾರ್ಗ, ನಿಲುಗಡೆ ಹಾಗೂ ಸಂಚಾರದ ದಿನಗಳನ್ನು ಒಳಗೊಂಡ ವೇಳಾಪಟ್ಟಿ ಸಿದ್ಧಪಡಿಸಿದ್ದು, ಕಲ್ಯಾಣ ಕರ್ನಾಟಕದ ರೈಲು ಸಂಪರ್ಕಕ್ಕೆ ಮಹತ್ವದ ಸೇರ್ಪಡೆಯಾಗಿದೆ. 27652 ಸಂಖ್ಯೆಯ ರೈಲು ಕೆಎಸ್‌ಆರ್ ಬೆಂಗಳೂರಿ ನಿಂದ ರಾತ್ರಿ 10 ಗಂಟೆಗೆ ಹೊರಟು ಮರುದಿನ ಮಧ್ಯಾಹ್ನ 1.50ಕ್ಕೆ ಮುಂಬೈ ಸಿಎಸ್‌ಎಂಟಿ ತಲುಪಲಿದೆ.
ಪ್ರತಿಯಾಗಿ 27651 ಸಂಖ್ಯೆ ರೈಲು ಮುಂಬೈನಿಂದ ರಾತ್ರಿ 10.30ಕ್ಕೆ ಹೊರಟು ಮರುದಿನ ಮಧ್ಯಾಹ್ನ 2.50ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ರಾತ್ರಿ ಪ್ರಯಾಣಕ್ಕೆ ಆದ್ಯತೆ ನೀಡುವವರಿಗೆ ಈ ಸೇವೆ ಹೊಸ ಆಯ್ಕೆಯಾಗಲಿದೆ. ರೈಲಿನ ಮಾರ್ಗದಲ್ಲಿ ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೋಲಾಪುರ, ಪುಣೆ ಹಾಗೂ ಕಲ್ಯಾಣ ವಾಣಿಜ್ಯ ನಿಲುಗಡೆಗಳಾಗಿವೆ. ಧರ್ಮಾವರಂ ಹಾಗೂ ವಾಡಿ ಮಾರ್ಗವಾಗಿಯೂ ರೈಲು ಸಾಗಲಿದೆ. ಹೀಗಾಗಿ ಬೆಂಗಳೂರು ಕಡೆಯಿಂದ ಹೊರಡುವ ಸೇವೆ ಉತ್ತರ ಕರ್ನಾಟಕದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಿ ಮಹಾರಾಷ್ಟ್ರ ಪ್ರವೇಶಿಸಲಿದೆ.
ಕಲಬುರಗಿಗೆ ನೇರ ಸಂಪರ್ಕ: ನಿಲುಗಡೆ ಪಟ್ಟಿಯಲ್ಲಿ ಕಲಬುರಗಿ ಸೇರ್ಪಡೆಯಾಗಿರುವುದು ಜಿಲ್ಲೆಯ ಪಾಲಿಗೆ ಪ್ರಮುಖ ಬೆಳವಣಿಗೆ. ಬೆಂಗಳೂರು ಹಾಗೂ ಮುಂಬೈಗೆ ತೆರಳುವ ಪ್ರಯಾಣಿಕರಿಗೆ ಜಿಲ್ಲೆಯಲ್ಲೇ ರೈಲು ಹತ್ತುವ ಅವಕಾಶ ಸಿಗಲಿದೆ. ಕಲಬುರಗಿ ಜತೆಗೆ ಯಾದಗಿರಿ, ರಾಯಚೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರೂ ಈ ಸೇವೆಯ ಪ್ರಯೋಜನ ಪಡೆಯಬಹು ದಾಗಿದೆ. ಉದ್ಯೋಗ, ವ್ಯಾಪಾರ, ಶಿಕ್ಷಣ ಹಾಗೂ ವೈದ್ಯಕೀಯ ಉದ್ದೇಶಗಳಿಗಾಗಿ ಮಹಾನಗರಗಳಿಗೆ ತೆರಳುವವರಿಗೆ ರಾತ್ರಿ ಸಂಚಾರದ ಆಯ್ಕೆ ಲಭ್ಯವಾಗಲಿದೆ.
ವಾರದಲ್ಲಿ ಆರು ದಿನ ಕಾರ್ಯಾಚರಣೆ: ವಂದೇ ಭಾರತ್ ಸ್ಲಿಪರ್ ರೈಲು ಸಂಖ್ಯೆ 27652 ಸೋಮ ವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಂಗಳೂರಿನಿಂದ ಸಂಚರಿಸಲಿದೆ. ಮಂಗಳವಾರ ಹೊರತುಪಡಿಸಿ ಇತರ ದಿನಗಳಲ್ಲಿ ರೈಲು ಸಂಖ್ಯೆ 27651 ಮುಂಬೈ ಮೂಲಕ ಕಾರ್ಯ ನಿರ್ವಹಿಸ ಲಿದೆ. ಇದರಿಂದ ಎರಡೂ ದಿಕ್ಕಿನಲ್ಲಿ ವಾರಕ್ಕೆ ಆರು ದಿನಗಳ ರೈಲು ಸಂಪರ್ಕ ದೊರೆಯಲಿದೆ.
ಉದ್ಘಾಟನೆ, ದರದ ಪ್ರಕಟಣೆ ಬಾಕಿ: ಮಾರ್ಗ, ರೈಲು ಸಂಖ್ಯೆ, ನಿಲುಗಡೆ ಮತ್ತು ಸಂಚಾರದ ದಿನಗಳ ಕುರಿತು ವೇಳಾಪಟ್ಟಿ ಸಿದ್ಧವಾಗಿದ್ದರೂ ನಿಯಮಿತ ವಾಣಿಜ್ಯ ಸೇವೆಯ ನಿಖರ ಆರಂಭದ ದಿನಾಂಕ ಇನ್ನೂ ಪ್ರತ್ಯೇಕವಾಗಿ ಪ್ರಕಟವಾಗಬೇಕಿದೆ. ಟಿಕೆಟ್ ದರವೂ ಅಂತಿಮಗೊಂಡಿಲ್ಲ. ರೈಲ್ವೆ ಇಲಾಖೆಯ ಮುಂದಿನ ಪ್ರಕಟಣೆಯಲ್ಲಿ ಉದ್ಘಾಟನಾ ದಿನ, ಬುಕ್ಕಿಂಗ್ ಆರಂಭ ಹಾಗೂ ಪ್ರಯಾಣ ದರದ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.
22-24 ಗಂಟೆಯ ಪ್ರಯಾಣಕ್ಕೆ 16 ಗಂಟೆಯ ಪರ್ಯಾಯ
ಬೆಂಗಳೂರು-ಮುಂಬೈ ನಡುವೆ ಸಂಚರಿಸುವ ಕೆಲವು ಪ್ರಸ್ತುತ ನೇರ ರೈಲುಗಳಿಗೆ 22ರಿಂದ 24 ಗಂಟೆವರೆಗೆ ಪ್ರಯಾಣ ಸಮಯ ಬೇಕಾಗುತ್ತದೆ. ಹೊಸ ಸ್ಲೀಪರ್ ವಂದೇ ಭಾರತ್ ಸುಮಾರು 16 ಗಂಟೆಗಳಲ್ಲಿ ಈ ದೂರ ಕ್ರಮಿಸುವ ಉದ್ದೇಶ ಹೊಂದಿದೆ. ರಾತ್ರಿ ಹೊರಟು ಮರುದಿನ ಮಧ್ಯಾಹ್ನ ಗಮ್ಯಸ್ಥಾನ ತಲುಪುವ ಮಾದರಿ ಇರುವುದರಿಂದ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಿ ಕೊಳ್ಳಲು ಬಯಸುವವರಿಗೆ ಇದು ಮತ್ತೊಂದು ಆಯ್ಕೆಯಾಗಲಿದೆ.
16 ಕೋಚ್‌ಗಳ ವಂದೇ ಭಾರತ್ ಸ್ಲೀಪರ್ ರೇಕ್
ಬೆಂಗಳೂರು-ಮುಂಬೈ ಸೇವೆಗೆ 16 ಕೋಚ್‌ಗಳ ವಂದೇ ಭಾರತ್ ಸ್ಲೀಪರ್ ರೇಕ್ ಬಳಸುವ ವ್ಯವಸ್ಥೆ ಮಾಡಲಾಗಿದೆ. ದೀರ್ಘದೂರದ ರಾತ್ರಿ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ಆರಾಮದಾಯಕ ಬರ್ತ್ ಗಳು, ಸ್ವಯಂಚಾಲಿತ ಬಾಗಿಲು, ಸಿಸಿಟಿವಿ, ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ವಿವಿಧ ಸಂವೇದಕಗಳನ್ನು ಒಳಗೊಂಡ ಸೌಲಭ್ಯಗಳನ್ನು ರೈಲಿನಲ್ಲಿ ಅಳವಡಿಸಲಾಗಿದೆ. ಎರಡು ರೇಕ್‌ಗಳ ಮೂಲಕ ನಿಯಮಿತ ಕಾರ್ಯಾಚರಣೆಗೆ ವ್ಯವಸ್ಥೆ ರೂಪಿಸಲಾಗಿದೆ.
![]()
ಕಲಬುರಗಿ ಮೂಲಕ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಅತ್ಯಂತ ಅಗತ್ಯವಾಗಿತ್ತು. ಇದಕ್ಕೆ ಪೂರಕವಾದ ವಿದ್ಯುದೀಕರಣ, ಶಾರ್ಟ್ ಕಟ್ ಮಾರ್ಗ ಹಾಗೂ ವೇಗದ ಸಂಪರ್ಕದಂತಹ ಮೂಲ ಸೌಕರ್ಯಗಳು ಇಲ್ಲಿವೆ. ಈ ವಿಚಾರವನ್ನು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ವಿ. ಸೋಮಣ್ಣ ಅವರು ಅಶ್ವಿನಿ ವೈಷ್ಣವ್ ಅವರಿಗೆ ಮನವರಿಕೆ ಮಾಡಿ, ರೈಲು ಸಂಚಾರಕ್ಕೆ ಶ್ರಮಿಸಿ ದ್ದಾರೆ. ಮೂವರಿಗೂ ಕೆಕೆಸಿಐಐ ಧನ್ಯವಾದ ಅರ್ಪಿಸುತ್ತದೆ.
- ಶರಣಬಸಪ್ಪ ಪಪ್ಪಾ, ಅಧ್ಯಕ್ಷ, ಕೆಕೆಸಿಸಿಐ
![]()
ರಾಯಚೂರು, ಯಾದಗಿರಿ ಮೂಲಕ ಬೆಂಗಳೂರು ಹಾಗೂ ಮುಂಬೈಗೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಉಭಯ ಜಿಲ್ಲೆಯ ಜನರ ವೇಗದ ಹಾಗೂ ಅನುಕೂಲಕರ ರೈಲು ಪ್ರಯಾಣಕ್ಕೆ ಸಹಕಾರಿಯಾಗಲಿದೆ. ದೇಶದ ಎರಡು ಪ್ರಮುಖ ಆರ್ಥಿಕ ನಗರಗಳೊಂದಿಗೆ ರಾಯಚುರಿನ ಸಂಪರ್ಕ ಮತ್ತಷ್ಟು ಬಲಪಡಿಸಲಿದೆ.
- ಜಿ.ಕುಮಾರ ನಾಯಕ್, ಸಂಸದರು, ರಾಯಚೂರು-ಯಾದಗಿರಿ