ಜಿತೇಂದ್ರ ಕುಂದೇಶ್ವರ, ಮಂಗಳೂರು
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಮೂರು ತಿಂಗಳ ಕಾಲಮಿತಿ ವಿಧಿಸಿ ಆದೇಶ ಹೊರಡಿಸಿ ಈಗಾಗಲೇ ಎಂಟು ದಿನಗಳು ಕಳೆದಿವೆ. ಎಸ್‌ಐಟಿ ರಚಿಸಿ ಆದೇಶ ಹೊರಡಿಸಿ ಐದು ದಿನಗಳು ಕಳೆದಿವೆ. ಆದರೆ ತನಿಖೆ ವೇಗ ಪಡೆದುಕೊಳ್ಳುವ ಮುನ್ನವೇ, ಎಸ್‌ಐಟಿ ಅಧಿಕಾರಿಗಳ ಸುತ್ತ ರಾಜಕೀಯ, ಸಾಮಾಜಿಕ ಹಾಗೂ ಆಡಳಿತಾತ್ಮಕ ಹಂತದಲ್ಲಿ ತೀವ್ರ ಹಗ್ಗ ಜಗ್ಗಾಟ ಆರಂಭವಾಗಿದ್ದು, ತಂಡದಲ್ಲಿ ಮಹತ್ತರ ಬದಲಾವಣೆ ತರಲು ತೆರೆಮರೆಯ ಸಿದ್ಧತೆಗಳು ತೀವ್ರಗೊಂಡಿವೆ.
ಗೃಹ ಇಲಾಖೆ ಸೆಪ್ಟೆಂಬರ್ 24ರಂದು ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಡಾ. ಎಚ್.ಎನ್. ವೆಂಕಟೇಶ್ ಪ್ರಸನ್ನ ಒಳಗೊಂಡ ತಂಡವನ್ನು ರಚಿಸಿತ್ತು. ಆದರೆ, ಈ ಇಬ್ಬರೂ ಅಧಿಕಾರಿಗಳ ವಿರುದ್ಧ ಸೌಜನ್ಯ ಪರ ಹೋರಾಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇವರ ಬದಲಾವಣೆಗೆ ಆಗ್ರಹಿಸುತ್ತಿದ್ದಾರೆ.
ಕುಸುಮಾವತಿ ಲಿಖಿತ ಆಕ್ಷೇಪ: ಮೃತಳ ತಾಯಿ ಕುಸುಮಾವತಿ ಗೌಡ ಅವರೂ ಲಿಖಿತ ಆಕ್ಷೇಪ ಸಲ್ಲಿಸಿದ್ದರೆ, ಈ ಕುರಿತು ಸುಪ್ರೀಂ ಕೋರ್ಟ್‌ಗೆ ದೂರು ಕೊಂಡೊಯ್ಯಲು ಹೋರಾಟಗಾರರ ಬಣ ಮುಂದಾಗಿದೆ. ಇದೇ ಹೊತ್ತಿನಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕೂಡ ಎಸ್‌ಐಟಿ ಸದಸ್ಯರ ಆಯ್ಕೆ ಕುರಿತು ಬಹಿರಂಗ ಆಕ್ಷೇಪ ಎತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಇನ್ನೊಂದೆಡೆ, ಶಶಿಕುಮಾರ್ ಮತ್ತು ವೆಂಕಟೇಶ್ ಪ್ರಸನ್ನ ಅವರ ನಿಷ್ಠುರ ಕಾರ್ಯವೈಖರಿಗೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲವೂ ವ್ಯಕ್ತವಾಗುತ್ತಿದೆ.
ಜನಸ್ನೇಹಿ ಅಧಿಕಾರಿ ರಾಥೋಡ್ : ಈ ಬೆಳವಣಿಗೆಗಳ ನಡುವೆ, ಶಶಿಕುಮಾರ್ ಬದಲಿಗೆ ಬೆಳಗಾವಿ ಉತ್ತರ ವಲಯದ ಐಜಿಪಿ, ಈ ಹಿಂದೆ ಬೆಂಗಳೂರು ಸೆಂಟ್ರಲ್ ಡಿಸಿಪಿ ಹಾಗೂ ಎಫ್ʼಎಸ್ ಎಲ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಜನಸ್ನೇಹಿ ಅಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರಿಗೆ ಎಸ್‌ಐಟಿ ನೇತೃತ್ವ ವಹಿಸುವ ಬಗ್ಗೆ ಸರಕಾರದ ಉನ್ನತ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆದಿವೆ.
ಸುಧೀರ್ ಹೆಗ್ಡೆ ಹೆಸರು ಪ್ರಸ್ತಾಪ: ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ಅವರ ಜಾಗಕ್ಕೆ ಲೋಕಾಯುಕ್ತ ಎಸ್‌ಐಟಿ ಹಾಗೂ ಎಸಿಬಿಯಲ್ಲಿ ಕರ್ತವ್ಯ ನಿರ್ವಹಿಸಿದ ದಕ್ಷ ಅಧಿಕಾರಿ, ಪ್ರಸ್ತುತ ಮಾನವ ಹಕ್ಕುಗಳ ಆಯೋಗದ ಡಿವೈಎಸ್‌ಪಿ ಸುಧೀರ್ ಎಂ. ಹೆಗ್ಡೆ ಅವರ ಹೆಸರು ಪ್ರಸ್ತಾಪವಾಗಿದೆ. ಆದರೆ, ಅತ್ಯಂತ ಸೂಕ್ಷ್ಮ ಹಾಗೂ ವಿವಾದಾತ್ಮಕವಾಗಿರುವ ಈ ಪ್ರಕರಣದ ಹೊಣೆ ಹೊರಲು ಹೆಗ್ಡೆ ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.
ತನಿಖೆಗೆ ಇಳಿದು ಇಲ್ಲಸಲ್ಲದ ಆರೋಪಗಳನ್ನು ಮೈಮೇಲೆ ಎಳೆದುಕೊಳ್ಳುವುದು, ಕೊನೆಗೆ ಕುಟುಂಬದವರ ಮೇಲೂ ಅಪಪ್ರಚಾರ ಬರುವ ವಾತಾವರಣದಲ್ಲಿ ವೃತ್ತಿಜೀವನಕ್ಕೆ ಕಳಂಕ ತಂದುಕೊಳ್ಳಲು ಇಷ್ಟವಿಲ್ಲ ಎಂದು ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ . ವೆಂಕಟೇಶ್ ಪ್ರಸನ್ನ ಅವರು ಮೇಲಾಧಿಕಾರಿಗಳನ್ನು ಭೇಟಿಯಾಗಿ ತಾನು ಈ ಎಸ್ಐಟಿ ತಂಡದ ಭಾಗವಾಗಲು ಬಯಸುವುದಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದಾರೆ.
ಅಧಿಕಾರಿಗಳ ಆಯ್ಕೆ ಕಗ್ಗಂಟು: ಕಳೆದ ಬಾರಿಯ ಎಸ್‌ಐಟಿ ರಚನೆ ಸಂದರ್ಭದಲ್ಲೂ ಇದೇ ರೀತಿಯ ಒತ್ತಡ ತಂತ್ರಗಳು ನಡೆದು, ತಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಂಡಿದ್ದ ಇತಿಹಾಸವಿದೆ. ಈಗಲೂ ಅಂಥದ್ದೇ ಒತ್ತಡಗಳಿಗೆ ಸರಕಾರ ಮಣಿಯುತ್ತಿದೆಯೇ ಎಂಬ ಸಂಶಯ ಮೂಡಿದೆ. ಕಾಲಮಿ ತಿಯ ಒಳಗೆ ಸತ್ಯ ಹೊರಬರಬೇಕಾದ ಮಹತ್ವದ ಹಂತದಲ್ಲಿ, ಅಽಕಾರಿಗಳ ಆಯ್ಕೆಯ ಈ ಕಗ್ಗಂಟೇ ತನಿಖೆಯ ದಿಕ್ಕು ತಪ್ಪಿಸಲು ಕಾರಣವಾಗಲಿದೆಯೇ? ಎಂಬ ಆತಂಕ ಸಾರ್ವಜನಿಕರಲ್ಲಿ ದಟ್ಟವಾಗಿದೆ