ಕೆ.ಜೆ.ಲೋಕೇಶ್ ಬಾಬು, ಮೈಸೂರು
ಕರ್ನಾಟಕದ ಸಾಂಪ್ರದಾಯಿಕ ಖಾದ್ಯದಿಂದ ಆಫ್ರಿಕನ್ ಆಹಾರದವರೆಗೂ ಲಭ್ಯ|
ದಸರಾ ಮಹೋತ್ಸವ ಎಂದರೆ ಅರಮನೆಯ ವೈಭವ, ಜಂಬೂಸವಾರಿ, ಸಾಂಸ್ಕೃತಿಕ ಕಾರ್ಯಕ್ರ ಮಗಳಷ್ಟೇ ಅಲ್ಲ. ಆಹಾರ ಪ್ರಿಯರಿಗೂ ಇದು ರಸದೌತಣ. ಈ ಬಾರಿ ಮೈಸೂರಿನ ದಸರಾ ಆಹಾರ ಮೇಳ ಇನ್ನಷ್ಟು ವೈವಿಧ್ಯಮಯವಾಗಲಿದ್ದು, ಕರ್ನಾಟಕದ ಸಾಂಪ್ರದಾಯಿಕ ಖಾದ್ಯಗಳ ಜತೆಗೆ ದೇಶ-ವಿದೇಶದ ಆಹಾರ ಸಂಸ್ಕೃತಿಯ ರುಚಿಯನ್ನೂ ಪ್ರವಾಸಿಗರಿಗೆ ಪರಿಚಯಿಸಲು ಸಿದ್ಧತೆ ನಡೆ ದಿದೆ. ಪ್ರತಿವರ್ಷ ದಸರಾ ಸಂದರ್ಭದಲ್ಲಿ ನಗರದ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯು ತ್ತಿದ್ದ ಆಹಾರ ಮೇಳವನ್ನು ಈ ಬಾರಿ ಮಹಾರಾಜ ಮೈದಾನದಲ್ಲಿ ಅ.11ರಿಂದ 25ರವರೆಗೆ ವಿಸ್ತೃತ ರೂಪದಲ್ಲಿ ಆಯೋಜಿಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಒಂದೇ ಮೇಳದಲ್ಲಿ ವಿಶ್ವದ ಆಹಾರ ಸಂಸ್ಕೃತಿ: ದಸರಾ ಪ್ರವಾಸಕ್ಕೆ ಮೈಸೂರಿಗೆ ಆಗಮಿಸುವ ಜನರಿಗೆ ವಿವಿಧ ಪ್ರದೇಶಗಳ ಆಹಾರ ಸಂಸ್ಕೃತಿಯನ್ನು ಒಂದೇ ಸ್ಥಳದಲ್ಲಿ ಪರಿಚಯಿಸುವುದು ಈ ಬಾರಿಯ ಮೇಳದ ಪ್ರಮುಖ ಉದ್ದೇಶ. ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಖಾದ್ಯಗಳೊಂದಿಗೆ ಭಾರತದ ವಿವಿಧ ರಾಜ್ಯಗಳ ಪ್ರಸಿದ್ಧ ಆಹಾರಗಳನ್ನು ಸವಿಯುವ ಅವಕಾಶವೂ ಇರಲಿದೆ. ಇದಕ್ಕಿಂತಲೂ ವಿಶೇಷವಾಗಿ ಚೈನೀಸ್, ಇಟಾಲಿಯನ್, ಫ್ರೆಂಚ್, ಟಿಬೆಟಿಯನ್ ಹಾಗೂ ಆಫ್ರಿಕನ್ ಆಹಾರ ಪದ್ಧತಿಗಳ ಖಾದ್ಯಗಳಿಗೂ ಮೇಳದಲ್ಲಿ ಅವಕಾಶ ಕಲ್ಪಿಸುವ ಉದ್ದೇಶವಿದೆ.
ಇದನ್ನೂ ಓದಿ: Mysuru Dasara 2026: ಮೈಸೂರು ದಸರಾ ನಿಶಾನೆ ಆನೆಯಾಗಿ ʼಅಭಿಮನ್ಯುʼ ಆಯ್ಕೆ; ಸುದೀರ್ಘ ಸೇವೆಗೆ ರಾಜ್ಯ ಸರ್ಕಾರದಿಂದ ಗೌರವ
ಹೀಗಾಗಿ ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಮೈಸೂರಿಗೆ ಬರುವ ಪ್ರವಾಸಿಗರಿಗೆ ಅರಮನೆ, ಜಂಬೂಸವಾರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ವಿಶ್ವದ ವಿವಿಧ ಆಹಾರ ಸಂಸ್ಕೃತಿಯ ಪರಿಚಯವೂ ಸಿಗಲಿದೆ. ಒಂದೇ ಸ್ಥಳದಲ್ಲಿ ಇಷ್ಟೊಂದು ವೈವಿಧ್ಯಮಯ ಆಹಾರ ಪದ್ಧತಿಗಳನ್ನು ಪರಿಚಯಿಸುವ ಪ್ರಯತ್ನವೇ ಈ ಬಾರಿಯ ಆಹಾರ ಮೇಳದ ಪ್ರಮುಖ ಆಕರ್ಷಣೆಯಾಗಲಿದೆ.
ಸಿರಿಧಾನ್ಯ, ಸಾವಯವಕ್ಕೆ ಆದ್ಯತೆ: ಆಧುನಿಕ ಆಹಾರ ಪದ್ಧತಿಯಿಂದ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಈ ಬಾರಿ ನೈಸರ್ಗಿಕ ಹಾಗೂ ಸಾವಯವ ಕೃಷಿ ಉತ್ಪನ್ನಗಳು ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ರಾಜ್ಯದ ಸಿರಿಧಾನ್ಯ ಬೆಳೆಗಾರರು, ಸಾವಯವ ಕೃಷಿಕರು, ಹಣ್ಣು-ತರಕಾರಿ ಮಾರಾಟಗಾರರು ಹಾಗೂ ರೈತ ಒಕ್ಕೂಟಗಳಿಗೆ ಮಳಿಗೆ ತೆರೆಯಲು ಅವಕಾಶ ನೀಡಲಾಗುತ್ತಿದೆ. ಇದರ ಮೂಲಕ ಆರೋಗ್ಯಕರ ಆಹಾರ ಪದ್ಧತಿಯ ಮಹತ್ವವನ್ನು ಜನರಿಗೆ ಪರಿಚಯಿಸುವುದರ ಜತೆಗೆ ರೈತರು ಹಾಗೂ ಸ್ಥಳೀಯ ಉತ್ಪಾದಕರಿಗೆ ನೇರ ಮಾರುಕಟ್ಟೆಯನ್ನೂ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ರುಚಿಯ ಹೊಸ ಅನುಭವ: ಪ್ರತಿವರ್ಷ ದಸರಾ ಸಂದರ್ಭದಲ್ಲಿ ಆಹಾರ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಬಾರಿ ಅಂತಾರಾಷ್ಟ್ರೀಯ ಆಹಾರಗಳ ಸೇರ್ಪಡೆ, ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಆದ್ಯತೆ ಹಾಗೂ ದೇಶದ ವಿವಿಧ ಭಾಗಗಳ ಸಾಂಪ್ರದಾ ಯಿಕ ಖಾದ್ಯಗಳ ವೈವಿಧ್ಯ ಮೇಳಕ್ಕೆ ಹೊಸ ಮೆರುಗು ನೀಡಲಿದೆ.
ಕರ್ನಾಟಕದ ಸಾಂಪ್ರದಾಯಿಕ ರುಚಿಯಿಂದ ಆರಂಭಿಸಿ ಭಾರತದ ವಿವಿಧ ರಾಜ್ಯಗಳ ಖಾದ್ಯಗಳ ಮೂಲಕ ಚೀನಾ, ಇಟಲಿ, ಫ್ರಾನ್ಸ್, ಟಿಬೆಟ್ ಹಾಗೂ ಆಫ್ರಿಕಾದ ಆಹಾರ ಸಂಸ್ಕೃತಿಯವರೆಗೆಒಂದೇ ಸ್ಥಳದಲ್ಲಿ ವಿಶ್ವದ ರುಚಿಯನ್ನು ಸವಿಯುವ ಅವಕಾಶ ಈ ಬಾರಿಯ ದಸರಾ ಆಹಾರ ಮೇಳದಲ್ಲಿ ದೊರೆಯಲಿದೆ. ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಈ ಆಹಾರ ಮೇಳ ‘ವಿಶ್ವದ ರುಚಿಯೊಂದಿಗೆ ಮೈಸೂರಿನ ಆತಿಥ್ಯ’ದ ಹೊಸ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ.
ಮೇಳದಲ್ಲಿ ಹೊಸ ರುಚಿಗಳಿಗೂ ವೇದಿಕೆ
ಮೈಸೂರು ಪಾಕ್ ಜಗತ್ತಿನಾದ್ಯಂತ ಮೈಸೂರಿನ ಆಹಾರ ಪರಂಪರೆಯ ಪ್ರತೀಕವಾಗಿ ಗುರುತಿಸಿ ಕೊಂಡಿರುವಂತೆ, ಸ್ಥಳೀಯ ಹಾಗೂ ಹೊರರಾಜ್ಯದ ಆಹಾರ ಉದ್ಯಮಿಗಳು ತಮ್ಮದೇ ಆದ ವಿಶಿಷ್ಟ ಖಾದ್ಯಗಳನ್ನು ಪರಿಚಯಿಸಲು ಈ ಮೇಳ ವೇದಿಕೆಯಾಗಲಿದೆ. ವಿಶಿಷ್ಟ ರುಚಿ, ಗುಣಮಟ್ಟ ಹಾಗೂ ವಿಭಿನ್ನತೆಯನ್ನು ಹೊಂದಿರುವ ಖಾದ್ಯಗಳು ಪ್ರವಾಸಿಗರ ಗಮನ ಸೆಳೆದರೆ, ಅವುಗಳಿಗೆ ದಸರಾ ಮೇಳದ ಮೂಲಕ ಹೊಸ ಮಾರುಕಟ್ಟೆ ಸೃಷ್ಟಿಯಾಗುವ ಸಾಧ್ಯತೆಯೂ ಇದೆ.