ಅಪರ್ಣಾ ಎ.ಎಸ್. ಬೆಂಗಳೂರು
ಕಾರಿಡಾರ್ 2,4ರ ಕಾಮಗಾರಿಗೆ ಸಂಪುಟದಲ್ಲಿ ಇಂದು ತೀರ್ಮಾನ? ಪರಿಷ್ಕೃತ ದರ 16876 ಕೋಟಿಗೆ ಏರಿಕೆ ಸಾಧ್ಯತೆ
ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ಉಪನಗರಗಳೊಂದಿಗಿನ ಸಂಪರ್ಕ ಸೇತುವೆಯನ್ನು ಹೆಚ್ಚಿಸುವ ಮಹತ್ವಕಾಂಕ್ಷೆ ಯೋಜನೆಯಾಗಿರುವ ಬೆಂಗಳೂರು ಸಬ್ಅರ್ಬನ್ ಯೋಜನೆಯ ಮೊತ್ತ ಸುಮಾರು ಸಾವಿರ ಕೋಟಿ ರು. ಹೆಚ್ಚಿಸುವ ಮೂಲಕ 16876 ಕೋಟಿ ರು. ಪರಿಷ್ಕೃತ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲು ಸರಕಾರ ಮುಂದಾಗಿದೆ.
ಬೆಂಗಳೂರು ಉಪನಗರ ಸಾರಿಗೆ ಯೋಜನೆಯ ಕಾರಿಡಾರ್ 2 ಹಾಗೂ 4ರ ಕಾಮಗಾರಿಗೆ 15787 ಕೋಟಿ ರು. ಎಂದು ಅಂದಾಜಿಸಲಾಗಿತ್ತು. ಆದರೀಗ ಪರಿಷ್ಕೃತ ಅಂದಾಜಿನ ಪ್ರಕಾರ ಈ ಮೊತ್ತ 16876 ಕೋಟಿ ರು. ಏರಿಕೆಯಾಗುವ ಸಾಧ್ಯತೆಯಿದ್ದು, ಸಚಿವ ಸಂಪುಟ ಸಭೆಯಲ್ಲಿ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಅನುಮೋದನೆ ಪಡೆಯುವ ಸಾಧ್ಯತೆಯಿದೆ.
25 ಕಿಮೀ ಉದ್ದದ ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ಹಾಗೂ 46 ಕಿಮೀ ಉದ್ದದ ಹೀಲಳಿಗೆ- ರಾಜಾನುಕುಂಟೆ ನಡುವೆ ನಿರ್ಮಾಣವಾಗಲಿರುವ ಮಾರ್ಗಕ್ಕೆ ಹೆಚ್ಚುವರಿ ಅನುದಾನ ಒದಗಿಸಲು ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Vande Bharat Train: ಪಿಎಂ ಮೋದಿ ಉದ್ಘಾಟಿಸಿದ ಬೆಂಗಳೂರು- ಎರ್ನಾಕುಲಂ ವಂದೇ ಭಾರತ್ ರೈಲಿನಿಂದ ಎರಡು ಗಂಟೆ ಉಳಿತಾಯ
ಕೆಲ ದಿನಗಳ ಹಿಂದಷ್ಟೇ ಕಾರಿಡಾರ್ 2 ಇರುವ 25.35 ಕಿ.ಮೀ. ಉದ್ದವಿದ್ದಲ್ಲಿ ಜನನಿಬಿಡ ಪ್ರದೇಶ ದಲ್ಲಿ ಡಬಲ್ ಡೆಕ್ಕರ್ -ಓವರ್ ಮಾಡುವ ತೀರ್ಮಾನವನ್ನು ಅಧಿಕಾರಿಗಳು ಮಾಡಿದ್ದರು. ಮತ್ತಿಕೆರೆ ಯಿಂದ ಹೆಬ್ಬಾಳ ನಡುವೆ ಸುಮಾರು 4.27 ಕಿಮೀ ದೂರ ಡಬಲ್ ಡೆಕ್ಕರ್ -ಓವರ್ ಮಾಡಲು ತೀರ್ಮಾನಿಸಿದ್ದು, ಇದಕ್ಕಾಗಿಯೇ ಸುಮಾರು 150 ಕೋಟಿ ರು. ಹೆಚ್ಚುವರಿ ಅನುದಾನ ಅಗತ್ಯವಿದೆ. ಈ ಅನುದಾನವನ್ನು ಜಿಬಿಎ ಪೂರೈಸುವುದಾಗಿ ಹೇಳಿತ್ತು ಈ ರೀತಿ ಕಾರಿಡಾರ್ 2,4ರಲ್ಲಿನ ಕೆಲ ಬದಲಾವಣೆಯಿಂದ ಯೋಜನಾ ವೆಚ್ಚ ಹೆಚ್ಚಾಗಿದ್ದು, ಅದಕ್ಕಾಗಿಯೇ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆಯಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ 15 ಸಾವಿರ ಕೋಟಿ ನಿಗದಿ
ಸುಮಾರು 148 ಕಿ.ಮೀ. ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆಗೆ 15,767 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಇದಕ್ಕೆ ಕೇಂದ್ರ ಸರಕಾರವೂ ಅನುಮೋದನೆ ನೀಡಿತ್ತು. ಈ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶೇ.20ರಷ್ಟು ಅನುದಾನವನ್ನು ನೀಡಲಿದ್ದು, ಇನ್ನುಳಿದ ಶೇ.60ರಷ್ಟು ಹಣ ಸಾಲದ ಮೂಲಕ ಸಂಗ್ರಹಿಸಲು ತೀರ್ಮಾನಿಸಲಾಗಿತ್ತು. ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಹಾಗೂ ಹೀಲಳಿಗೆ - ರಾಜಾನುಕುಂಟೆ ನಡುವೆ ಸಂಪರ್ಕ ಕಲ್ಪಿಸಲು ರೈಲ್ವೇ ಇಲಾಖೆ ಈಗಾಗಲೇ 242 ಎಕರೆ ಭೂಮಿ ಯನ್ನು ನೀಡಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು.
ಮರುಟೆಂಡರ್ ಕರೆದಿದ್ದಕ್ಕೆ ರೈಡ್
ಈ ಹಿಂದೆ ಎಲ್‌ಆಂಡ್‌ಟಿ ಸಂಸ್ಥೆ ಈ ಯೋಜನೆಯನ್ನು ಮಾಡಲು ಗುತ್ತಿಗೆ ಪಡೆದಿತ್ತು. ಆದರೆ 2025ರ ಮಾರ್ಚ್ನಲ್ಲಿ ಚಿಕ್ಕಬಾಣಾವರ-ಬೆನ್ನಿಗಾನಹಳ್ಳಿ ನಡುವಿನ ಕಾಮಗಾರಿ ಸ್ಥಗಿತಗೊಳಿಸಿತ್ತು. ಆದ್ದರಿಂದ ಮೂರು ಪ್ಯಾಕೇಜ್‌ಗಳಲ್ಲಿ ಮರು ಟೆಂಡರ್ ಕರೆಯಲಾಗಿತ್ತು.
ಕಾರಿಡಾರ್-2ರ ಮಾರ್ಗದಲ್ಲಿ ಒಟ್ಟು ಎಂಟು ಲೆವೆಲ್ ಕ್ರಾಸಿಂಗ್‌ಗಳು ಇರಲಿದೆ. ಮೂರು ಪ್ಯಾಕೇಜ್ ಗಳನ್ನು ಪೂರ್ಣಗೊಳಿಸಲು 18 ತಿಂಗಳ ಅವಧಿಯನ್ನು ನಿಗದಿಪಡಿಸಲಾಗಿತ್ತು.
ಯಾವ ಕಾರಿಡಾರ್ ಎಲ್ಲಿಗೆ?
ಕಾರಿಡಾರ್-1: ಕೆಎಸ್‌ಆರ್
ಬೆಂಗಳೂರು ನಗರ - ದೇವನಹಳ್ಳಿ (41 ಕಿ.ಮೀ.)
ಕಾರಿಡಾರ್-2: ಬೈಯ್ಯಪನಹಳ್ಳಿ -
ಚಿಕ್ಕಬಾಣಾವರ (25 ಕಿ.ಮೀ.)
ಕಾರಿಡಾರ್-3: ಕೆಂಗೇರಿ - ವೈಟ್ ಫೀಲ್ಡ್ (36 ಕಿ.ಮೀ.)
ಕಾರಿಡಾರ್-4: ಹೀಲಳಿಗೆ - ರಾಜಾನುಕುಂಟೆ (46 ಕಿ.ಮೀ.)