ಹೂವಪ್ಪ ಐ ಹೆಚ್. ಬೆಂಗಳೂರು
ತೊಗರಿ ದರ ಕುಸಿತದಿಂದಾಗಿ ಕಂಗಾಲಾಗಿದ್ದ ಸಾವಿರಾರು ರೈತರು
ಈ ಸಲ 12.60 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ
ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ತೊಗರಿಯೂ ಸೇರಿದಂತೆ ಮುಂಗಾರು ಬೆಳೆಗಳು ಹಾನಿ ಗೊಳಗಾಗಿದ್ದು, ಅವೆಲ್ಲವುಗಳ ಪರಿಹಾರ ಇನ್ನೂ ರೈತರ ಕೈಗೆ ಬಂದಿಲ್ಲ. ಈಗ ಅಳಿದುಳಿದ ತೊಗರಿ ಬೆಳೆ ಕಟಾವಿಗೆ ಬಂದಿದ್ದು, ರಾಶಿ ಮಾಡಲು ಶುರು ಮಾಡಿದ್ದಾರೆ. ಮಾರುಕಟ್ಟೆಗೆ ಆವಕ ಜಾಸ್ತಿ ಆದಂತೆ ಬೆಲೆ ಕಡಿಮೆಯಾಗುತ್ತದೆ ಎಂದು ಭಾವಿಸಿ ನಾ ಮುಂದೆ ತಾ ಮುಂದೆ ಎನ್ನುವಂತೆ ರೈತರು ಮಾರುಕಟ್ಟೆಗೆ ತೊಗರಿ ತರಲಾರಂಭಿಸಿದ್ದು, ಮುಕ್ತ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿರುವುದು ಕಂಡ ರೈತರಿಗೆ ಆತಂಕವಾಗತೊಡಗಿತ್ತು.
ನಮ್ಮ ರಾಜ್ಯವು ದೇಶದ ಪ್ರಮುಖ ತೊಗರಿ ಉತ್ಪಾದಕ ರಾಜ್ಯವಾಗಿದ್ದು, 2025-26ರ ಖಾರಿ- ಋತುವಿನಲ್ಲಿ ಅಂದಾಜು ತೊಗರಿ 16.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ, 12.60 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಆಗಿದೆ. ಮಾರುಕಟ್ಟೆಯಲ್ಲಿ ತೊಗರಿ ಕ್ವಿಂಟಾಲ್‌ಗೆ 5830ರಿಂದ 6700 ರು. ಮಾತ್ರ ಬೆಲೆ ದೊರೆಯುತ್ತಿತ್ತು. ಆದರೆ ಈಗ ಕೇಂದ್ರ ಸರಕಾರ 2025-26ರ ಕನಿಷ್ಟ ಬೆಂಬಲ ಬೆಲೆಯನ್ನು ರು. 8000 ಎಂದು ಘೋಷಿಸಿದೆ.
ಹಾಗಾಗಿ ರೈತರಲ್ಲಿ ಸ್ವಲ್ಪ ನೆಮ್ಮದಿ ಕಾಣತೊಡಗಿದೆ, ಆದರೆ ಸರಕಾರ ತಕ್ಷಣ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಸಿ ರೈತರ ನೆರವಿಗೆ ಧಾವಿಸಬೇಕೆಂದು ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕು ರೈತ ಸಂಗಮೇಶ್ ಅವರ ಮನವಿಯಾಗಿದೆ.
ಈ ಬಾರಿ ತೊಗರಿ ಇಳುವರಿ ಕೂಡ ಕಡಿಮೆಯಾಗಿದೆ. ಪ್ರವಾಹ, ಅತಿವೃಷ್ಟಿಯ ಹೊಡೆತದ ನಡುವೆ ಉಳಿದ ಒಂದಿಷ್ಟು ತೊಗರಿ ಬೆಳೆಯ ಫಸಲು ಕೊಯ್ಲಿಗೆ ಬಂದಿದ್ದು, ಸದ್ಯ ಒಕ್ಕಣೆ ಶುರುವಾಗಿದೆ. ಬೆಳೆಗೆ ಮಾಡಿದ್ದ ಸಾಲ ತೀರಿಸಲೂ ಸೇರಿದಂತೆ ವಿವಿಧ ಕಾರಣಕ್ಕಾಗಿ ರೈತರು ತೊಗರಿಯನ್ನು ಮಾರಾಟ ಮಾಡಲಾರಂಭಿಸಿದ್ದಾರೆ.
ಇದನ್ನೂ ಓದಿ: Toor Dal: ತೊಗರಿ ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ; 450 ರೂ. ಪ್ರೋತ್ಸಾಹ ಧನ
ನಮ್ಮ ರಾಜ್ಯದ ಗುಲ್ಬರ್ಗ, ಯಾದಗಿರಿ, ವಿಜಾಪುರ, ಬಾಗಲಕೋಟೆ, ಬೀದರ್ ಜಿಲ್ಲೆಗಳಲ್ಲಿ ಹೆಚ್ಚು ತೊಗರಿ ಬೆಳೆಯಲಾಗುತ್ತದೆ. ಇಲ್ಲಿಯವರಿಗೆ ಸಿಕ್ಕ ಅಂದಾಜು ಅಂಕಿ-ಅಂಶ ಪ್ರಕಾರ 58,319 ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿದೆ, ಉತ್ತರದ ಒಟ್ಟು ೧೦ ಜಿಲ್ಲೆಗಳಲ್ಲಿ ಅತಿವೃಷ್ಟಿ ಎದುರಾಗಿದ್ದರಿಂದ ಬಹತೇಕ ಎಲ್ಲ ಬೆಳೆಗಳೂ ಈ ಸಲ ಹಾನಿಯಾಗಿದೆ.
ದರ ಕುಸಿತದ ಹೊಡೆತ: ರೈತರು ತೊಗರಿಯನ್ನು ಮಾರುಕಟ್ಟೆಗೆ ತರಲಾರಂಭಿಸುತ್ತಿದ್ದಂತೆ ವರ್ತಕರು ದರ ಇಳಿಸಿದ್ದಾರೆ. ವಾರದ ಹಿಂದೆ ಮುಕ್ತ ಮಾರುಕಟ್ಟೆಯಲ್ಲಿ 7000 ರು. ಬೆಲೆ ಇತ್ತು. ಆದರೀಗ 5500-6500 ರು.ಗೆ ಇಳಿದಿದೆ. ರೈತರ ಅನಿವಾರ್ಯತೆಯ ಲಾಭ ಪಡೆಯುವ ತಂತ್ರ ಅನುಸರಿಸಿದ ವರ್ತಕರು ತೊಗರಿಯ ಬೆಲೆಯನ್ನು ಇಳಿಸಿದ್ದಾರೆ. ಈ ಬಗ್ಗೆ ರೈತರು ಪ್ರಶ್ನಿಸಿದರೆ ತೊಗರಿ ಇನ್ನೂ ಒಣಗಿಲ್ಲ, ತೇವಾಂಶ ಹೆಚ್ಚಿದೆ ಎಂದು ನೆಪ ಹೇಳುತ್ತಾರೆ. ವರ್ತಕರೆಲ್ಲರೂ ಮಾತಾಡಿ ಕೊಂಡು ದರ ಇಳಿಸುತ್ತಾರೆ ಎಂದು ಹಲವಾರು ರೈತ ಮುಖಂಡರು ದೂರುತ್ತಾರೆ.
ರೈತರಿಗೆ ಸಂತಸದ ವಿಷಯ: ಮಳೆ ಹೊಡೆತ, ಉತ್ಪಾದನಾ ವೆಚ್ಚದ ಏರಿಕೆ ಮತ್ತು ಮಾರುಕಟ್ಟೆ ಯಲ್ಲಿ ಬೆಲೆ ಕುಸಿತದ ಸಂಕಷ್ಟದಲ್ಲಿ ಸಿಲುಕಿದ್ದ ಕರ್ನಾಟಕದ ತೊಗರಿ ಬೆಳೆಗಾರರಿಗೆ ಕೇಂದ್ರ ಸರಕಾರ ದಿಂದ ಸಂತಸದ ಸುದ್ದಿ ಬಂದಿದೆ. ರಾಜ್ಯ ಸರಕಾರ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಿಂದ ಬಂದ ನಿರಂತರ ಮನವಿಗೆ ಸ್ಪಂದಿಸಿದ ಕೇಂದ್ರ ಸರಕಾರದ ಕೃಷಿ ಸಚಿವರು, ನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅಡಿಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಒಟ್ಟು
9.67 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ನಫೆಡ್ ಮತ್ತು ಎನ್ಸಿಸಿಎಫ್ ಮುಖಾಂತರ ಖರೀದಿಸಲು ಹಸಿರು ನಿಶಾನೆ ತೋರಿಸಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರಕಾರ ತೊಗರಿ ಕ್ವಿಂಟಲ್ ಗೆ 8000 ರು.ಗೆ ಖರೀದಿಸಬೇಕೆಂದು ಅನುಮೋದನೆ ಕೊಟ್ಟ ಹಿನ್ನೆಲೆಯಲ್ಲಿ ಈಗಾಗಲೇ ಮುಕ್ತ ಮಾರುಕಟ್ಟೆ ಯಲ್ಲಿ ತೊಗರಿ ಕ್ವಿಂಟಲ್‌ಗೆ 200-300 ರು.ನಷ್ಟು ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಸ್ವಲ್ಪ ಏರಿಕೆಯಾಗಬಹುದು.
ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್
ರಾಜ್ಯದಲ್ಲಿ ಕೃಷಿಕರ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರು ಪ್ರಧಾನಿ ಮೋದಿಗೆ ಪತ್ರ ಬರೆದು, ಎಂಎಸ್‌ಪಿ ಅಡಿಯಲ್ಲಿ ತೊಗರಿ ಖರೀದಿಯ ಅವಽಯನ್ನು ಬದಲಿಸಿ ಶೀಘ್ರ ಖರೀದಿ ಆರಂಭಿಸುವಂತೆ ವಿನಂತಿಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಈ ಕುರಿತಾಗಿ ತುರ್ತು ಮನವಿ ಮಾಡಿಕೊಂಡಿದ್ದರು. ಅವರಿಬ್ಬರ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರು ಕೆಲವೇ ದಿನಗಳಲ್ಲಿ, ಅಂದರೆ ಡಿ.12ರಂದು ಅದಕ್ಕೆ ಅನುಮೋದನೆ ನೀಡಿದ್ದಾರೆ.
*
ತೊಗರಿ ಖರೀದಿಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ. ರಾಜ್ಯ ಸರಕಾರ ತಕ್ಷಣ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ಆರಂಭಿಸಿ ರೈತರ ನೆರವಿಗೆ ಧಾವಿಸಬೇಕು
-ರಮೇಶ್ಚಂದ್ರ ಲಾಹೋಟಿ ಎಫ್ಕೆಸಿಸಿ ಮಾಜಿ ಅಧ್ಯಕ್ಷರು