ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

BDCC Bank: 120 ಕೋಟಿ ಸಾಲದ ಸುತ್ತ ಅನುಮಾನದ ಹುತ್ತ

ಗುತ್ತಿಗೆದಾರ ಜಯಶೀಲ ಶೆಟ್ಟಿ ಎಂಬುವವರಿಗೆ ಸೇರಿದ್ದ ಬೆಳಗಾವಿ ಹೃದಯಭಾಗ ಶ್ರೀನಗರ ದಲ್ಲಿರುವ 5.1 ಎಕರೆ ಜಮೀನಿನ ಪೈಕಿ 4 ಎಕರೆಗೆ ಬಿಡಿಸಿಸಿ ಬ್ಯಾಂಕ್ 120 ಕೋಟಿ ರು.ಸಾಲ ನೀಡಿದೆ. ಆದರೆ ಬ್ಯಾಂಕ್ ಆಡಳಿತ ಮಂಡಳಿ ಸಮರ್ಪಕ ದಾಖಲೆ ಪರಿಶೀಲನೆ ನಡೆಸದೆ ದೊಡ್ಡ ಮೊತ್ತದಲ್ಲಿ ಸಾಲ ನೀಡಲಾಗಿದೆ ಎಂದು ಕೆಲ ಮುಖಂಡರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ವಿನಾಯಕ ಮಠಪತಿ ಬೆಳಗಾವಿ

ಬೆಳಗಾವಿ ಡಿಸಿಸಿ ಬ್ಯಾಂಕ್ ವಿರುದ್ಧ ಗಂಭೀರ ಆರೋಪ

ಸರಕಾರಿ ಜಮೀನು ವಾಪಸ್ಸಾತಿಗೆ ಲೋಕಾಯುಕ್ತಕ್ಕೆ ದೂರು

4 ಎಕರೆ ಜಮೀನು ಅಡವಿಟ್ಟುಕೊಂಡು ಸುಮಾರು 120 ಕೋಟಿ ಸಾಲ ಕೊಟ್ಟ ಬೆಳಗಾವಿ ಡಿಸಿಸಿ ಬ್ಯಾಂಕ್ ನಡೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಸಾಲ ಕೊಟ್ಟ ಜಮೀನು ಸರಕಾರಕ್ಕೆ ಸೇರಿದ್ದು, ಖಾಸಗಿ ವ್ಯಕ್ತಿ ಪರಭಾರೆ ಮಾಡಿಕೊಂಡು ಅಕ್ರಮವೆಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಗುತ್ತಿಗೆದಾರ ಜಯಶೀಲ ಶೆಟ್ಟಿ ಎಂಬುವವರಿಗೆ ಸೇರಿದ್ದ ಬೆಳಗಾವಿ ಹೃದಯಭಾಗ ಶ್ರೀನಗರ ದಲ್ಲಿರುವ 5.1 ಎಕರೆ ಜಮೀನಿನ ಪೈಕಿ 4 ಎಕರೆಗೆ ಬಿಡಿಸಿಸಿ ಬ್ಯಾಂಕ್ 120 ಕೋಟಿ ರು.ಸಾಲ ನೀಡಿದೆ. ಆದರೆ ಬ್ಯಾಂಕ್ ಆಡಳಿತ ಮಂಡಳಿ ಸಮರ್ಪಕ ದಾಖಲೆ ಪರಿಶೀಲನೆ ನಡೆಸದೆ ದೊಡ್ಡ ಮೊತ್ತದಲ್ಲಿ ಸಾಲ ನೀಡಲಾಗಿದೆ ಎಂದು ಕೆಲ ಮುಖಂಡರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಆದರೆ ಬ್ಯಾಂಕ್ ಆಡಳಿತ ಮಂಡಳಿ ಮಾತ್ರ ಕಾನೂನು ರೀತಿಯಲ್ಲೇ ಸಾಲ ನೀಡಿದ್ದು ಸಮರ್ಪಕವಾಗಿ ಬಡ್ಡಿ ವಸೂಲಿ ಮಾಡಲಾಗಿದೆ ಎಂದು ತಿಳಿಸಿದೆ.

ಸದ್ಯ ಬಿಡಿಸಿಸಿ ಬ್ಯಾಂಕ್ ಕೊಟ್ಟಿರುವ ಸಾಲದ ಜಮೀನಿನ ಹಕ್ಕು ಸರಕಾರಕ್ಕೆ ಸೇರಿದ್ದು ಎಂಬ ಅಂಶ ಬೆಳಕಿಗೆ ಬಂದಿದೆ. ಪೊಲೀಸ್ ಇಲಾಖೆಗೆ ಸೇರಿರುವ ಕೋಟ್ಯಂತರ ರು. ಮೌಲ್ಯದ ಜಮೀನಿನ ಹಕ್ಕನ್ನು ಗುತ್ತಿಗೆದಾರ ಜಯಶೀಲ ಶೆಟ್ಟಿ ಅನಧಿಕೃತವಾಗಿ ಪಡೆ ದುಕೊಂಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಆರೋಪಿಸಿದ್ದು, ದಾಖಲೆ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ದಿಕ್ಕು ಬದಲಾಗಿದೆ.

ಇದನ್ನೂ ಓದಿ: Vinayaka Mathapathy Column: ಬದಲಾಗುವುದೇ ಮಹಾರಾಷ್ಟ್ರ ರಾಜಕೀಯ ಸಮೀಕರಣ ?

ಬಿಡಿಸಿಸಿ ಬ್ಯಾಂಕ್ ವಿರುದ್ಧ ಸಿಡಿದೆದ್ದ ರೈತರು: ರೈತರ ಕೃಷಿ ಜಮೀನಿಗೆ ೪೦ ಸಾವಿರ ರು. ಸಾಲ ನೀಡಲು ಸತಾಯಿಸುವ ಸಹಕಾರಿ ಬ್ಯಾಂಕ್ ತಮಗೆ ಬೇಕಾದವರಿಗೆ ಕೋಟ್ಯಂತರ ರು.ಸಾಲ ಕೊಟ್ಟು ರೈತರಿಗೆ ಮೊಸ ಎಸಗಿದೆ ಎಂಬ ಗಂಭೀರ ಆರೋಪ ಮಾಡಲಾಗುತ್ತಿದೆ. ಸಮರ್ಪಕ ದಾಖಲೆ ಪರಿಶೀಲನೆ ಮಾಡದೆ ಖಾಸಗಿ ವ್ಯಕ್ತಿಗೆ ಕೋಟ್ಯಂತರ ರು. ಸಾಲ ನೀಡಿದ್ದಾರೆ ಎಂದು ರೈತ ಮುಖಂಡರು ಆರೋಪಿಸುತ್ತಿದ್ದಾರೆ. ರೈತರಿಗೂ ಪ್ರತಿ ಎಕರೆಗೆ ಒಂದು ಲಕ್ಷ ರು. ಕೃಷಿ ಸಾಲ ನೀಡುವಂತೆ ಆಗ್ರಹಿಸಿ ಬಿಡಿಸಿಸಿ ಬ್ಯಾಂಕ್ ವಿರುದ್ಧ ಪ್ರತಿಭಟನೆ ಸಜ್ಜಾಗಿದ್ದಾರೆ.

ಸಾಲದ ಗೌಪ್ಯತೆ ಕಾಪಾಡಲು ಆಡಳಿತ ಮಂಡಳಿ ವಿಫಲ: ಬ್ಯಾಂಕಿನಲ್ಲಿ ಸಾಲ ಪಡೆದವರ ಮಾಹಿತಿ ಗೌಪ್ಯತೆ ಕುರಿತು ಬಿಡಿಸಿಸಿ ಬ್ಯಾಂಕ್ ಎಡವಿದೆಯಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಬ್ಯಾಂಕಿನ ಆಡಳಿತ ವಿಷಯಗಳನ್ನು ಸಾರ್ವಜನಿಕ ವಲಯದಲ್ಲಿ ಚರ್ಚಿಸಿದರೆ ಇದರಿಂದ ಮುಂದಿನ ವ್ಯವಹಾರಗಳಿಗೂ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂಬುದು ಕೆಲವರ ವಾದ.

ಸರಕಾರಿ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲು?

ಬೆಳಗಾವಿ ನಗರದಲ್ಲಿರುವ 1316/3 ಸರ್ವೆ ನಂಬರಿನ 5 ಎಕರೆ 34 ಗುಂಟೆ ಜಮೀನು ಮಾಲಿಕತ್ವದ ವಿರುದ್ಧವೇ ಸದ್ಯ ಸಂಶಯ ವ್ಯಕ್ತವಾಗಿದೆ. ಮೂಲತಃ ಈ ಜಮೀನು ಪೊಲೀಸ್ ಇಲಾಖೆಗೆ ಸೇರಿದ್ದು, ಪಹಣಿಯಲ್ಲಿ ಪೊಲೀಸ್ ಗೋಲಿಬಾರ್ ಕಡೆ ಎಂದು ದಾಖಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಖಾಸಗಿ ವ್ಯಕ್ತಿಗಳು ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳುವ ಮೂಲಕ 200 ಕೋಟಿ ಮೌಲ್ಯದ ಸರಕಾರಿ ಜಮೀನು ಕಬಳಿಸುವ ಹುನ್ನಾರ ಮಾಡಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ.

image

ಪೊಲೀಸ್ ಇಲಾಖೆಗೆ ಸೇರಿರುವ 5.34 ಎಕರೆ ಜಮೀನನ್ನು 1975ರಲ್ಲಿ ಇಬ್ರಾಹಿಂ ಮುಜಾ ವರ್ ಎಂಬ ವ್ಯಕ್ತಿ ಅನಧಿಕೃತವಾಗಿ ತಮ್ಮ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಗೋಲಿಬಾರ್ ಕಡೆ ಎಂದು ನಮೂದು ಇದ್ದ ಜಮೀನನ್ನು ಕಬಳಿಸಲಾಗಿದೆ. ಈ ಕುರಿತು ಬೆಳಗಾವಿ ಎಸ್ಪಿ ಅವರೂ ಭೂಮಿ ವಾಪಸ್ ಪಡೆಯಲು 2 ವರ್ಷದಿಂದ ಕಾನೂನು ಹೋರಾಟ ನಡೆಸಿದ್ದಾರೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.

ಭೀಮಪ್ಪ ಗಡಾದ ಆರ್‌ಟಿಐ ಕಾರ್ಯಕರ್ತ
image

ಓರ್ವ ಗುತ್ತಿಗೆದಾರರಿಗೆ ಭದ್ರತೆ ಆಧರಿಸಿ 120 ಕೋಟಿ ಸಾಲ ಕೊಟ್ಟಿದ್ದೇವೆ. ನಾಲ್ಕು ಎಕರೆ ಜಮೀನು ಹಾಗೂ 700 ಕೋಟಿ ಮೌಲ್ಯದ ಆಸ್ತಿ ಪತ್ರಗಳನ್ನು ಭದ್ರತೆಯಾಗಿಟ್ಟುಕೊಂಡು ಸಾಲ ನೀಡಿದ್ದೇವೆ. ಆದರೆ ಕೆಲವರು ಬ್ಯಾಂಕಿನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದು ಅವರ ವಿರುದ್ಧ ಕಾನೂನು ರೀತಿ ಹೋರಾಟ ನಡೆಸುತ್ತೇವೆ.

ಅಣ್ಣಾಸಾಹೆಬ್ ಜೊಲ್ಲೆ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ