ಶಿವರೆಡ್ಡಿ ಜಗಾಪುರ
ಶಾಸಕ ಅಶೋಕ ಪಟ್ಟಣ ನಿರಂತರ ಪ್ರಯತ್ನ
ಬಡವರ ಪಾಲಿಗೆ ಸಂಜೀವಿನಿಯಾದ ಆಸ್ಪತ್ರೆ
ರಾಮದುರ್ಗ: ಸ್ಥಳೀಯ ಶಾಸಕರ ನಿರಂತರ ಪ್ರಯತ್ನ ಹಾಗೂ ಕ್ಷೇತ್ರ ವೈದ್ಯಾಧಿಕಾರಿ ಕಾಯಕಲ್ಪದ ಫಲವಾಗಿ ರಾಮದುರ್ಗ ತಾಲೂಕು ಆಸ್ಪತ್ರೆಗೆ ಹೊಸ ದಿಕ್ಕು ಸಿಕ್ಕಂತಾಗಿದೆ. ಬಡವರ ಪಾಲಿಗೆ ಸಂಜೀವಿನಿಯಾಗಿರುವ ತಾಲೂಕು ಆಸ್ಪತ್ರೆಯಲ್ಲಿ ಸದ್ಯ ಅಭಿವೃದ್ಧಿ ಕಾರ್ಯಗಳಿಗೂ ವೇಗ ಪಡೆದುಕೊಂಡಿವೆ.
ರಾಮದುರ್ಗ ತಾಲೂಕು ವೈದ್ಯಾಧಿಕಾರಿ ಡಾ.ನವೀನ ಕಾಶಿನಾಥ ನಿಜಗುಲಿ ಅವರು ಶಾಸಕ ಅಶೋಕ ಪಟ್ಟಣ ಅವರ ಮಾರ್ಗದರ್ಶನಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಮೇಲಾಧಿಕಾರಿಗಳು. ಸಿಬ್ಬಂದಿಗಳ ಸಹಕಾರದೊಂದಿಗೆ ಬಡ ರೋಗಿಗಳಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಜತೆಗೆ ಹಳೆ ಆಸ್ಪತ್ರೆಗೆ ಹೊಸ ದಿಕ್ಕು ನೀಡುವ ನಿಟ್ಟಿನಲ್ಲಿ ಶಾಸಕರ ಪ್ರಯತ್ನದಿಂದ ಅನುಷ್ಠಾನಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ವಿನಿಯೋಗ ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಹೊಸ ಕಟ್ಟಡ ಭೂಮಿಪೂಜೆ: ಹಳೆಯದಾದ ರಾಮದುರ್ಗ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಅಂದಾಜು 33 ಕೋಟಿ ರು. ವೆಚ್ಚದಲ್ಲಿ ಹೊಸ ಕಟ್ಟಡದ ಭೂಮಿ ಪೂಜೆ ನೆರವೇರಿಸಲಾಗಿದೆ. ಇದರಿಂದ ಮೂಲ ಸೌಕರ್ಯಗಳನ್ನು ಜನರಿಗೆ ನೀಡಲು ಹೊಸ ಕಟ್ಟಡ ಸಹಕಾರಿಯಾಗಲಿದೆ.
ಇದನ್ನೂ ಓದಿ: Ramadurga News: ವ್ಹಿಬಿ-ಜಿ-ರಾಮ್‌ಜಿ ಯೋಜನೆ ಜಾಗೃತಿ ಅಭಿಯಾನ: ಡಾ.ಕೆ.ವ್ಹಿ.ಪಾಟೀಲ
ರಾಮದುರ್ಗ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಇಲ್ಲಿಯವರಿಗೆ ಸ್ವಂತ ಕಟ್ಟಡ ಇರಲಿಲ್ಲ. ಈಗ ಅಂದಾಜು 50 ಲಕ್ಷ ರು. ವೆಚ್ಚದಲ್ಲಿ ಹೊಸ ಕಟ್ಟಡ ಸಿದ್ಧವಾಗುತ್ತಿದೆ. ಅಷ್ಟೇ ಅಲ್ಲದೆ ಕಡಕೋಳ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು ತುಂಬಾ ಹಳೆಯದಾಗಿದ್ದು ಸರಕಾರದಿಂದ ಅಂದಾಜು 3 ಕೋಟಿ 50 ಲಕ್ಷ ರೂಪಾಯಿಗಳಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಲು ಹಣ ಮಂಜೂರಾಗಿದೆ.
ರಾಮದುರ್ಗ ನಗರದಲ್ಲಿ ಎರಡು ಹೊಸದಾಗಿ ನಮ್ಮ ಕ್ಲಿನಿಕ್ ಪ್ರಾರಂಭವಾಗಿವೆ. ಜತೆಗೆ ತಾಲೂಕಿನಲ್ಲಿ ಒಟ್ಟು 6 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೆಲಸ ಮಾಡುತ್ತಿದ್ದು ಇನ್ನೂ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು ಅಧಿಕಾರಿ ವರ್ಗ ಹಾಗೂ ಶಾಸಕರು ಸರಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಜೊತೆ ಖಾಲಿ ಇರುವ ತಜ್ಞ ವೈದ್ಯರ ನೇಮಕವಾದರೆ ಜನರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಉಪಯೋಗವಾಗುತ್ತದೆ.
ನೂರರ ಗಡಿ ದಾಟಿದ ಹೆರಿಗೆಗಳು
ಉತ್ತಮ ಹೆರಿಗೆ ಸೌಲಭ್ಯದ ಹಿನ್ನಲೆಯಲ್ಲಿ ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಗಳ ಸಂಖ್ಯೆ ಹೆಚ್ಚಳವಾಗಿವೆ. ಈ ಹಿಂದೆ ಕೇವಲ 50 ರಿಂದ 69 ಹೆರಿಗೆಯಾಗುತ್ತಿದ್ದ ಜಾಗದಲ್ಲಿ ಸದ್ಯ ಹೆರಿಗೆ ಸಂಖ್ಯೆ ನೂರರ ಗಡಿ ದಾಟಿದೆ. 110ಕ್ಕೂ ಹೆಚ್ಚಿನ ಹೆರಿಗೆಯಾಗುತ್ತಿದ್ದು ವೈದ್ಯರ ನಿರಂತರ ಪರಿಶ್ರಮಕ್ಕೆ ಬೆಂಬಕ ಲಭಿಸಿದೆ.
ಊಟ, ಉಪಾಹಾರ ವ್ಯವಸ್ಥೆ
ಈಗಾಗಲೇ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಉಪಹಾರ ಹಾಗೂ ಊಟ ನೀಡಲಾಗುತ್ತಿದೆ. ಗುಣಮಟ್ಟದ ಆಹಾರ ತಯಾರಿಕೆಗೆ ಹೆಚ್ಚಿನ ಒತ್ತು ನೀಡಿದ್ದು ಇದರಿಂದ ಬಡ ರೋಗಿಗಳಿಗೆ ಸಾಕಷ್ಟು ಅನುಕೂಲವಾಗಿದೆ. ಗುಣಮಟ್ಟದದ ಚಿಕಿತ್ಸೆ ನೀಡುತ್ತಿರುವ ಕಾರಣಕ್ಕೆ ಒಳ ಮತ್ತು ಹೊರ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಗ್ರಾಮೀಣ ಭಾಗದ ಜನರಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ಜೊತೆಗೆ ಸಮರ್ಪಕ ಸೌಲಭ್ಯ ನೀಡುತ್ತಿರುವ ಫಲವಾಗಿ ಈ ಬೆಳವಣಿಗೆ ಸಾಧ್ಯವಾಗಿದೆ.
![]()
ಶಾಸಕ ಅಶೋಕ್ ಪಟ್ಟಣ ಅವರ ಪ್ರಯತ್ನದ ಫಲವಾಗಿ ತಾಲೂಕು ಆಸ್ಪತ್ರೆಗೆ ಸರಕಾರ ದಿಂದ ಸಾಕಷ್ಟು ಅನುದಾನ ಒದಗಿಬಂದಿದೆ. ಸಮರ್ಪಕವಾಗಿ ಅನುದಾನ ಬಳಸಿಕೊಂಡು ಆಸ್ಪತ್ರೆ ಅಭಿವೃದ್ಧಿಗೆ ಕಾಯಕಲ್ಪ ರೂಪಿಸಲಾಗಿದೆ. ಮೊದಲಿಗೆ ಹೋಲಿಕೆ ಮಾಡಿದರೆ ನಮ್ಮ ಆಸ್ಪತ್ರೆಯಲ್ಲಿ ಹೆರಿಗೆ ಸಂಖ್ಯೆ ದುಪ್ಪಟ್ಟಾಗಿದ್ದು 100ರ ಗಡಿ ದಾಟಿದೆ. ಜತೆಗೆ ಒಳ ಹಾಗೂ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸಮರ್ಪಕ ಸೇವೆ ಒದಗಿಸುವ ನಿಟ್ಟಿನಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ವೈದ್ಯರು, ಸಿಬ್ಬಂದಿ ಗಳ ಪರಿಶ್ರಮ ಶ್ಲಾಘನೀಯ.
-ಡಾ.ನವೀನ ಕಾಶಿನಾಥ ನಿಜಗುಲಿ, ತಾಲೂಕು ವೈದ್ಯಾಧಿಕಾರಿ, ರಾಮದುರ್ಗ