ಮುನಿರಾಜು ಎಂ. ಅರಿಕೆರೆ
ಚಿಕ್ಕಬಳ್ಳಾಪುರ: ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ನೆರವು ಹಾಗೂ ಮಾರ್ಗ ದರ್ಶನ ನೀಡಬೇಕಾದ ಜಿಲ್ಲಾ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವೇ ಮೂಲ ಸೌಕರ್ಯ ಗಳ ಕೊರತೆ ಹಾಗೂ ಅವ್ಯವಸ್ಥೆಯಿಂದ ಬಳಲುತ್ತಿರುವುದು ವಿಪರ್ಯಾಸವಾಗಿದೆ.
ನಗರದ ಹೃದಯ ಭಾಗದಲ್ಲಿರುವ ನಗರಸಭೆ ಕಟ್ಟಡದ ಪಕ್ಕದಲ್ಲೇ ಇರುವ ಈ ಕೇಂದ್ರಕ್ಕೆ ತಮ್ಮ ನೋವು-ದುಮ್ಮಾನಗಳನ್ನು ಹೇಳಿಕೊಳ್ಳಲು ಬರುವ ಹಿರಿಯ ನಾಗರಿಕರಿಗೆ ಕನಿಷ್ಠ ಅಗತ್ಯ ಸೌಲಭ್ಯ ಗಳೂ ಇಲ್ಲದಂತಾಗಿದೆ.
ಹಿಂದೆ ಟೌನ್ ಪೊಲೀಸ್ ಠಾಣೆಯಾಗಿ ಬಳಕೆಯಾಗುತ್ತಿದ್ದ ಹಳೆಯ ಕಟ್ಟಡದಲ್ಲಿ ಪ್ರಸ್ತುತ ಜಿಲ್ಲಾ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.
ಆದರೆ, ಇಲ್ಲಿಗೆ ಆಗಮಿಸುವ ಹಿರಿಯ ನಾಗರಿಕರು ನೆಮ್ಮದಿಯಿಂದ ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆಯಿಲ್ಲ. ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛ ಮತ್ತು ನೈರ್ಮಲ್ಯದಿಂದ ಕೂಡಿರುವ ಶೌಚಾಲಯದ ಸೌಲಭ್ಯವೂ ಇಲ್ಲವಾಗಿದೆ.
ಕೇಂದ್ರದಲ್ಲಿರುವ ಶೌಚಾಲಯದ ಸ್ಥಿತಿ ಮತ್ತಷ್ಟು ಶೋಚನೀಯವಾಗಿದ್ದು, ಬಳಸಲೂ ಆಗದಷ್ಟು ಗಬ್ಬೆದ್ದು ನಾರುತ್ತಿದೆ. ಹಿರಿಯ ನಾಗರಿಕರ ಅನುಕೂಲಕ್ಕಾಗಿ ಇರಬೇಕಾದ ಶೌಚಾಲಯವೇ ಸ್ವಚ್ಛತೆ ಯ ಕೊರತೆಯಿಂದ ಬಳಲುತ್ತಿರುವುದು ಕೇಂದ್ರದ ನಿರ್ವಹಣೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.
ಕೇಂದ್ರದ ಎದುರು ಇರುವ ನೀರಿನ ಸಂಪಿಗೆ ಮುಚ್ಚಳವೇ ಇಲ್ಲದ ಸ್ಥಿತಿಯಲ್ಲಿದೆ. ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ಓಡಾಡುವ ಪ್ರದೇಶದಲ್ಲಿರುವ ಈ ತೆರೆದ ಸಂಪಿಗೆ ಆಯತಪ್ಪಿ ಯಾರಾ ದರೂ ಬಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಿದ್ದರೂ ಸುರಕ್ಷತಾ ಕ್ರಮ ಕೈಗೊಳ್ಳದಿರು ವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಇದೇ ಪರಿಸರದಲ್ಲಿ ಹಿರಿಯ ನಾಗರಿಕರು ಸೇರಿದಂತೆ ಸ್ತಂಭ ಆಂಜನೇಯ ದೇವಸ್ಥಾನಕ್ಕೆ ಆಗಮಿಸು ವವರು ಓಡಾಡುವ ಸ್ಥಳದಲ್ಲೇ ಒಣಗಿದ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದೆ. ಶಿಥಿಲಾವಸ್ಥೆ ಯಲ್ಲಿರುವ ಈ ಮರ ಯಾವ ಸಂದರ್ಭದಲ್ಲಿ ನೆಲಕ್ಕುರುಳಿ ಅಪಾಯ ತಂದೊಡ್ಡುತ್ತದೆಯೋ ಎಂಬ ಆತಂಕವಿದ್ದು, ಅದನ್ನು ತೆರವುಗೊಳಿಸುವ ಅಥವಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಪ್ರಯತ್ನ ನಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇನ್ನು, ಹಳೆಯ ಪೊಲೀಸ್ ಠಾಣೆಯ ಕಟ್ಟಡವೂ ಶಿಥಿಲಾವಸ್ಥೆ ತಲುಪಿದೆ. ದುರಸ್ತಿ ಕಾರ್ಯ ಕೈಗೊಳ್ಳುವುದಿರಲಿ, ಕನಿಷ್ಠ ಸುಣ್ಣ-ಬಣ್ಣವನ್ನೂ ಕಾಣದೆ ಕಟ್ಟಡವು ನಿರ್ಲಕ್ಷ್ಯಕ್ಕೆ ಒಳಗಾದಂತಿದೆ. ಕೊಠಡಿಗಳಲ್ಲಿ ಹಳೆಯ ವಸ್ತುಗಳನ್ನು ದಾಸ್ತಾನು ಮಾಡಲಾಗಿದ್ದು, ಕೆಲವು ಕಿಟಕಿಗಳು ಕಿತ್ತು ಬಂದಿರುವ ಸ್ಥಿತಿಯಲ್ಲಿವೆ.
ಹಿರಿಯ ನಾಗರಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದೆಂಬ ನಿರೀಕ್ಷೆಯಿಂದ ಸಹಾಯವಾಣಿ ಕೇಂದ್ರದ ಮೊರೆ ಬರುತ್ತಾರೆ.
ವೈಯಕ್ತಿಕ ಸಮಸ್ಯೆಗಳು, ಸರ್ಕಾರಿ ಸೌಲಭ್ಯಗಳಿಗೆ ಸಂಬಂಧಿಸಿದ ವಿಚಾರಗಳು ಸೇರಿದಂತೆ ವಿವಿಧ ಅಹವಾಲುಗಳನ್ನು ಹೊತ್ತುಕೊಂಡು ಬರುವವರಿಗೆ ಕೆಲಕಾಲವಾದರೂ ನೆಮ್ಮದಿಯಿಂದ ಕುಳಿತು ಮಾತನಾಡಲು ಅನುಕೂಲಕರ ವಾತಾವರಣ ಇರಬೇಕಾಗಿದೆ.
ಆದರೆ, ಸಮಸ್ಯೆ ಬಗೆಹರಿಸಿಕೊಳ್ಳಲು ಬರುವವರಿಗೇ ಇಲ್ಲಿನ ಅವ್ಯವಸ್ಥೆ ಮತ್ತೊಂದು ಅನಾನುಕೂಲ ಸೃಷ್ಟಿಸುವಂತಾದರೆ, ಕೇಂದ್ರ ಸ್ಥಾಪನೆಯ ಉದ್ದೇಶವೇ ಪ್ರಶ್ನಾರ್ಹವಾಗಲಿದೆ.
“ಎಲ್ಲಿ ಹಿರಿಯರನ್ನು ಗೌರವಿಸುವ ಸಮಾಜ ಇರುತ್ತದೆಯೋ, ಅಂತಹ ಸಮಾಜವೇ ಆರೋಗ್ಯವಂತ ಸಮಾಜ” ಎಂಬ ಮಾತು ನಿಜವಾಗಬೇಕಾದರೆ, ಹಿರಿಯ ನಾಗರಿಕರ ಬಗ್ಗೆ ಕಾಳಜಿ ತೋರಿಸುವುದರ ಜತೆಗೆ ಅವರಿಗಾಗಿ ಕಾರ್ಯನಿರ್ವಹಿಸುವ ಕೇಂದ್ರಗಳಲ್ಲೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಹಿರಿಯರಿಗೆ ಗೌರವ ನೀಡುವುದು ಕೇವಲ ಮಾತಿಗೆ ಸೀಮಿತವಾಗದೆ, ಅವರ ಸೇವೆಗೆ ಇರುವ ವ್ಯವಸ್ಥೆಗಳಲ್ಲೂ ಕಾಣಿಸಬೇಕಾಗಿದೆ.
ಜಿಲ್ಲಾಡಳಿತ, ತಾಲೂಕು ಆಡಳಿತ, ನಗರಸಭೆ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದತ್ತ ತಕ್ಷಣ ಗಮನಹರಿಸಬೇಕು,
ಗಬ್ಬೆದ್ದು ನಾರುತ್ತಿರುವ ಶೌಚಾಲಯದ ಸ್ವಚ್ಛತೆ ಮತ್ತು ನಿರ್ವಹಣೆ, ನೀರಿನ ಸಂಪಿಗೆ ಸುರಕ್ಷಿತ ಮುಚ್ಚಳ ಅಳವಡಿಕೆ, ಅಪಾಯಕಾರಿ ಒಣಮರ ತೆರವು, ಕಟ್ಟಡದ ದುರಸ್ತಿ, ಸುಣ್ಣ-ಬಣ್ಣ, ಶುದ್ಧ ಕುಡಿಯುವ ನೀರು ಹಾಗೂ ಹಿರಿಯರು ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಹಿರಿಯ ನಾಗರಿಕರು ಹಾಗೂ ಪತ್ರಕರ್ತ ಟಿ.ಎಸ್. ನಾಗೇಂದ್ರಬಾಬು ಆಗ್ರಹಿಸಿದ್ದಾರೆ.
ಹಿರಿಯರಿಗಾಗಿ ಕಾರ್ಯ ನಿರ್ವಹಿಸುವ ಈ ಕೇಂದ್ರವು ಅವರಿಗೆ ನೆಮ್ಮದಿ ಮತ್ತು ಭದ್ರತೆಯ ಭಾವನೆ ನೀಡುವಂತಿರಬೇಕೇ ಹೊರತು, ಹೊಸ ಅನಾನುಕೂಲಗಳಿಗೆ ಕಾರಣವಾಗಬಾರದು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡು ಕೇಂದ್ರದ ಸ್ಥಿತಿಗತಿಗಳನ್ನು ಸುಧಾರಿಸಬೇಕಿದೆ.
ಹಿರಿಯರ ಆಶೀರ್ವಾದಕ್ಕೆ ಪಾತ್ರವಾಗುವಂತಹ ಕಾರ್ಯವನ್ನು ಆಡಳಿತ ಕೈಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.