ಶ್ರೀಕಾಂತ ಬೆಟಗೇರಿ, ಧಾರವಾಡ
ಹು-ಧಾ ಪಾಲಿಕೆ ಕಾಂಗ್ರೆಸ್ ಸದಸ್ಯರು ಹೋರಾಟಕ್ಕೆ ಸಜ್ಜು
ಏಕಪಕ್ಷೀಯ ನಿರ್ಣಯಕ್ಕೆ ಆಕ್ರೋಶ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆ ವಿಷಯ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೋರಾಟಕ್ಕೂ ಧಾರವಾಡ ಸನ್ನದ್ಧವಾಗುತ್ತಿದೆ. ಬೃಹತ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನಾಗಿಸಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಏಕಪಕ್ಷಿಯವಾಗಿ ತೆಗೆದುಕೊಂಡ ನಿರ್ಣಯಕ್ಕೆ ತೀವ್ರ ಆಕ್ರೋಶ ಧಾರವಾಡದಲ್ಲಿ ವ್ಯಕ್ತವಾಗುತ್ತಿದೆ. ಅಲ್ಲದೇ ಈಗಾಗಲೇ ಹೋರಾಟದ ರೂಪುರೇಷೆ ಸಹ ಸಿದ್ಧಗೊಳ್ಳುತ್ತಿವೆ.
ಈಗಾಗಲೇ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸದಸ್ಯರು ಈಗ ಬೀದಿಗೆ ಇಳಿಯಲು ಸಜ್ಜಾಗಿದ್ದಾರೆ. ಕಳೆದ ಒಂದು ವಾರದಿಂದ ನಡೆದ ಬೆಳವಣಿಗೆ ಕುರಿತು ಪಾಲಿಕೆ ಕಾಂಗ್ರೆಸ್ಸಿನ ಸದಸ್ಯರು ಪತ್ರಿಕಾಗೋಷ್ಠಿಯ ಮೂಲಕ ತಮ್ಮ ನಿಲುವು ಹಂಚಿಕೊಂಡಿದ್ದು, ಮುಂದಿನ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಮುಖವಾಗಿ ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕವಾಗಬೇಕೆಂದು ಹಲವಾರು ರೀತಿ ಹೋರಾಟ ನಡೆಸಿಕೊಂಡು ಬಂದಿದ್ದ ಹಲವು ಹಿರಿಯರ ಸಂಘಟನೆ ಈಗ ಮೌನಕ್ಕೆ ಸರಿದಿದ್ದು ಯಾಕೆ ಎಂಬ ಪ್ರಶ್ನೆ ಇತರೆ ಹೋರಾಟಗಾರರನ್ನು ಕಾಡುತ್ತಿದೆ. ಕಳೆದ ಒಂದು ವಾರದಿಂದ ಸಾಕಷ್ಟು ಬೆಳವಣಿಗೆಯಾದರೂ ಕೂಡಾ ಅವರಲ್ಲಿ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂಬ ಮಾತು ಕೇಳುತ್ತಿವೆ.
ಇದನ್ನೂ ಓದಿ: Dr N Someshwar Column: ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದ ಗ್ರೆಗರ್ ಮೆಂಡಲ್
ಮಹಾನಗರ ಪಾಲಿಕೆ ವಿಭಜನೆ ವಿಷಯ ಕುರಿತಂತೆ ಪಾಲಿಕೆ ವ್ಯಾಪ್ತಿಯ ಶಾಸಕರು ವಿಭಿನ್ನವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲ ಶಾಸಕರನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಅಭಿವೃದ್ಧಿ ವಿಷಯವಾಗಿ ಒಂದಾದರೆ ಒಳ್ಳೆಯದು ಎಂಬ ಅಭಿಪ್ರಾಯ ಶಾಸಕರಿಂದ ಕೇಳಿ ಬಂದವು. ಶಾಸಕರ ಅಭಿಪ್ರಾಯ ಬಹಳ ಮುಖ್ಯ. ಶಾಸಕರ ನಿಲುವು ಸಾರ್ವ ಜನಿಕವಾಗಿ ವ್ಯಕ್ತವಾಗಬೇಕು ಎಂಬ ಆಗ್ರಹದ ನುಡಿ ಪ್ರಜ್ಞಾವಂತರಿಂದ ಕೇಳಿ ಬಂದವು.
ಇಂದು ಸ್ವಾಭಿಮಾನಿಗಳ ಚಿಂತನಾ ಸಭೆ
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಮೇ 6ರಂದು ಬೆಳಿಗ್ಗೆ 11 ಗಂಟೆಗೆ ಸ್ವಾಭಿಮಾನಿಗಳ ಚಿಂತನಾ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಅವಳಿ ನಗರದ ಪ್ರಮುಖರು ಭಾಗ ವಹಿಸಲಿದ್ದಾರೆ. ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕವಾಗುವಂತೆ ಮಾಡಲು ಸಲಹೆ ಸೂಚನೆ ಪಡೆದುಕೊಂಡು ಮುಂದಿನ ಹೋರಾಟ ರೂಪಿಸಲು ಸಜ್ಜಾಗುತ್ತಿದ್ದಾರೆ.
![]()
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಕುರಿತಂತೆ ಶಾಸಕ ಅರವಿಂದ ಬೆಲ್ಲದ ಅವರ ನ್ನೇ ಕೇಳಿ. ನಾವು ಈಗ ಯಾವುದೇ ಸಕ್ರಿಯ ರಾಜಕೀಯದಲ್ಲಿ ಇಲ್ಲ. ಈ ವಿಷಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಭಾಗವಹಿಸುವುದಿಲ್ಲ.
-ಚಂದ್ರಕಾಂತ ಬೆಲ್ಲದ, ಮಾಜಿ ಶಾಸಕರು, ವಿದ್ಯಾವರ್ಧಕ ಸಂಘದ ಅಧ್ಯಕ್ಷರು
![]()
ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸುವುದಿಲ್ಲ. ಇದಕ್ಕೆ ಸಾಕ್ಷಿಯಂತೆ ಅನೇಕ ಉದಾಹರಣೆಗಳು ಇವೆ. ಇದಕ್ಕೆ ವಿಳಂಬ ಧೋರಣೆ ತೋರಿಸುತ್ತಾರೆ. ಧಾರವಾಡಕ್ಕೆ ಸಾಕಷ್ಟು ರೀತಿ ಅನ್ಯಾಯ ಮಾಡುತ್ತಾ ಬರಲಾಗಿದೆ. ಪ್ರತ್ಯೇಕವಾಗಬೇಕು ಎಂದು ಸರಕಾರದ ಅನುಮೋದನೆ ಪಡೆದು ರಾಜ್ಯಪಾಲ ಸಹಿಗೆ ಹೋಗಿದೆ. ಆದರೆ, ಈಗ ತಮ್ಮಷ್ಟಕ್ಕೇ ತಾವು ನಿರ್ಣಯ ಪಾಸು ಮಾಡಿಕೊಂಡರೆ ಅದು ಒಪ್ಪಿಗೆಯಲ್ಲ. ಇದು ಬಿಜೆಪಿ ಅಜಂಡಾ ಎನ್ನುವಂತಿದೆ. ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯಾಗುವುದು ಖಂಡಿತ.
-ಶೀವಲೀಲಾ ಕುಲಕರ್ಣಿ, (ಮಾಜಿ ಸಚಿವ ವಿ. ಕುಲಕರ್ಣಿ ಪತ್ನಿ)
![]()
ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕವಾಗುವುದು ಸೂಕ್ತ. ಅವಳಿ ನಗರದ ಪರಿಸ್ಥಿತಿ ಗಮನಿ ಸಿದರೆ ಆದಷ್ಟು ಬೇಗನೆಯಾಗಬೇಕು. ಇದಕ್ಕಾಗಿ ಹಲವಾರು ವರ್ಷಗಳಿಂದ ಧಾರವಾಡದವರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆಯಾ ಪಾಲಿಕೆಗೆ ತಕ್ಕಂತೆ ಅನುದಾನ ಬರುತ್ತದೆ. ಬೃಹತ್ ಮಹಾನಗರ ಪಾಲಿಕೆಯಾದರೆ ಕೇಂದ್ರದಿಂದ ಹೆಚ್ಚಿನ ಅನುದಾನ ಬರುತ್ತದೆ ಎನ್ನುವ ನಂಬಿಕೆ ಇಲ್ಲ ನಮಗೆ.
-ಪ್ರಸಾದ ಅಬ್ಬಯ್ಯ, ಶಾಸಕರು
![]()
ಬೃಹತ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಾಗುವುದರಿಂದ ಅನೇಕ ಮಹತ್ವದ ಯೋಜನೆಗಳು ಬರಲು ಸಾಧ್ಯವಾಗಲಿವೆ. ಧಾರವಾಡಕ್ಕೆ ಯಾವುದೇ ರೀತಿ ಅನ್ಯಾಯವಾಗಲು ಬಿಡುವುದಿಲ್ಲ. ಇಷ್ಟು ವರ್ಷಗಳ ಕಾಲ ಒಂದಾಗಿ ಹೋಗಿದ್ದೇವೆ. ಅವಳಿ ನಗರ ಬೇರ್ಪಡಿಸುವುದು ಯಾಕೋ ಮನಸ್ಸು ಒಪ್ಪುತ್ತಿಲ್ಲ. ಮುಂದೆ ಯಾವ ತೀರ್ಮಾನ ಆಗುತ್ತದೆ ನೋಡೋಣ.
-ಮಹೇಶ ಟೆಂಗಿನಕಾಯಿ, ಶಾಸಕರು