ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೃನ್ಮನ ಸೆಳೆದ ಜಂಬೂ ಸವಾರಿ

ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ಲಕ್ಷಾಂತರ ಭಕ್ತರು ಶಿರಬಾಗಿದರೆ, ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಪ್ರಶಾಂತ ನೇತೃತ್ವದ ಗಜಪಡೆಯ ಠೀವಿಗೆ ಜನಸ್ತೋಮ ಮಂತ್ರಮುಗ್ಧವಾಯಿತು. ಈ ಮೂಲಕ 2026ನೇ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾ ಮಹೋ ತ್ಸವದ ಕಿರೀಟಪ್ರಾಯ ವಿಜಯದಶಮಿ ಜಂಬೂ ಸವಾರಿ ವೈಭವೋಪೇತವಾಗಿ ಸಂಪನ್ನಗೊಂಡು ಇತಿಹಾಸದ ಪುಟಗಳಲ್ಲಿ ದಾಖಲಾಯಿತು.

ಕೆ.ಜೆ. ಲೋಕೇಶ್ ಬಾಬು ಮೈಸೂರು

ಲಕ್ಷೋಪಲಕ್ಷ ಜನರ ಸಾಂಸ್ಕೃತಿಕ ಮನಸ್ಸುಗಳಲ್ಲಿ ಭಕ್ತಿಯ ಭಾವ ತಂತಿ ಮೀಟಿದ ಕ್ಷಣವದು. ರಾಜ ವೈಭವದ ಗತವೈಭವಕ್ಕೆ ವರ್ತಮಾನದ ಸಾಂಸ್ಕೃತಿಕ ಶ್ರೀಮಂತಿಕೆ ಬೆರೆತ ಅಪೂರ್ವ ಗಳಿಗೆಯದು. ಪರಂಪರೆಯ ಘನತೆ, ಬಹುತ್ವದ ಸೊಬಗು, ಜನಮನದ ಭಕ್ತಿ ಹಾಗೂ ಕಲಾ ವೈವಿಧ್ಯದ ಅನಾ ವರಣಕ್ಕೆ ಸಾಕ್ಷಿಯಾದ ಮೈಸೂರು, ಮತ್ತೊಮ್ಮೆ ಜಗತ್ತಿನ ಸಾಂಸ್ಕೃತಿಕ ಭೂಪಟದಲ್ಲಿ ತನ್ನ ಅಸ್ಮಿತೆಯನ್ನು ಅಚ್ಚಳಿಯದಂತೆ ಮೂಡಿಸಿತು.

ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ಲಕ್ಷಾಂತರ ಭಕ್ತರು ಶಿರಬಾಗಿದರೆ, ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಪ್ರಶಾಂತ ನೇತೃತ್ವದ ಗಜಪಡೆಯ ಠೀವಿಗೆ ಜನಸ್ತೋಮ ಮಂತ್ರಮುಗ್ಧವಾಯಿತು. ಈ ಮೂಲಕ 2026ನೇ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾ ಮಹೋ ತ್ಸವದ ಕಿರೀಟಪ್ರಾಯ ವಿಜಯದಶಮಿ ಜಂಬೂ ಸವಾರಿ ವೈಭವೋಪೇತವಾಗಿ ಸಂಪನ್ನಗೊಂಡು ಇತಿಹಾಸದ ಪುಟಗಳಲ್ಲಿ ದಾಖಲಾಯಿತು.

ಇದೇ ಮೊದಲ ಬಾರಿಗೆ ನೆರೆ ರಾಜ್ಯದ ಇಬ್ಬರು ಮುಖ್ಯಮಂತ್ರಿಗಳು ಮತ್ತು ನಾನಾ ದೇಶಗಳ ರಾಯಭಾರಿ ಗಳು ಜಂಬೂ ಸವಾರಿಗೆ ಸಾಕ್ಷಿಯಾಗುವ ಮೂಲಕ ಮೈಸೂರು ದಸರೆಯ ವೈಭವಕ್ಕೆ ಮತ್ತೊಂದು ಗರಿ ಸೇರಿದೆ.

ಇದನ್ನೂ ಓದಿ: Mysuru Dasara 2026: ಆಕರ್ಷಕ ಪಂಜಿನ ಕವಾಯತಿನೊಂದಿಗೆ ಮೈಸೂರು ದಸರಾಗೆ ಅದ್ಧೂರಿ ತೆರೆ

ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ: ಮಧ್ಯಾಹ್ನ 1.40ಕ್ಕೆ ಸರಿಯಾಗಿ ಮಕರ ಲಗ್ನದಲ್ಲಿ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ನಂದಿಧ್ವಜ ಪೂಜೆಯೊಂದಿಗೆ ವಿಜಯ ದಶಮಿ ಸಂಭ್ರಮದ ವಿಧಿವಿಧಾನಗಳಿಗೆ ಚಾಲನೆ ದೊರೆಯಿತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಇತರ ಸದಸ್ಯರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಬಳಿಕ ಅರಮನೆ ಆವರಣಕ್ಕೆ ಆಗಮಿಸಿ ಮೆರವಣಿಗೆಯ ಮುಂದಿನ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಸಂಪ್ರದಾಯ ದಂತೆ ನೆರ ವೇರಿದ ಪೂಜಾ ಕೈಂಕರ್ಯಗಳು, ಧಾರ್ಮಿಕ ವಿಧಿ ವಿಧಾನಗಳು ಹಾಗೂ ಅರಮನೆಯ ರಾಜಪರಂಪರೆಯ ಸಂಕೇತಗಳು ದಸರಾ ಉತ್ಸವದ ಸಾಂಪ್ರದಾಯಿಕ ಘನತೆಯನ್ನು ಮತ್ತಷ್ಟು ಎತ್ತರಿಸಿದವು.

ಚಾಮುಂಡಿಗೆ ಪುಷ್ಪಾರ್ಚನೆ; ಮೊಳಗಿದ ರಾಷ್ಟ್ರಗೀತೆ: ವಿಜಯದಶಮಿ ಮೆರವಣಿಗೆಯ ಅತ್ಯಂತ ನಿರೀಕ್ಷಿತ ಕ್ಷಣ ಸಂಜೆ 4.29ಕ್ಕೆ ಮೀನ ಲಗ್ನದಲ್ಲಿ ಸಾಕಾರ ಗೊಂಡಿತು.

ಸಿಎಂ ಡಿ.ಕೆ. ಶಿವಕುಮಾರ್(D K Shivakumar), ಪತ್ನಿ ಉಷಾ ಶಿವಕು ಮಾರ್, ಕೇರಳ ಮುಖ್ಯಮಂತ್ರಿ ಸತೀಶನ್(Kerala CM Satheesan), ತೆಲಂ ಗಾಣ ಸಿಎಂ ರೇವಂತ ರೆಡ್ಡಿ(Revantha Reddy), ಸಚಿವರಾದ ಶಿವರಾಜ್ ತಂಗಡಗಿ, ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿ ಗಣ್ಯರು ಪ್ರಶಾಂತನ ಬೆನ್ನೇರಿದ್ದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಅಧಿಕೃತ ಚಾಲನೆ ನೀಡಿದರು.

ಈ ವೇಳೆ ಪ್ರಶಾಂತನ ಎಡಬಲದಲ್ಲಿ ಕಾವೇರಿ ಮತ್ತು ರೂಪಾ ಹೆಜ್ಜೆ ಹಾಕಿದವು. ಈ ಶುಭ ಗಳಿಗೆಯಲ್ಲಿ ಏಳು ಕುಶಾಲತೋಪು ಗಳಿಂದ ಮೂರು ಸುತ್ತುಗಳಲ್ಲಿ ಒಟ್ಟು 21 ಬಾರಿ ಸಿಡಿಮದ್ದು ಸಿಡಿಸಲಾಯಿತು. ಇದರ ಬೆನ್ನಲ್ಲೇ ಪೊಲೀಸ್ ಬ್ಯಾಂಡ್ ಸಿಬ್ಬಂದಿ ರಾಷ್ಟ್ರಗೀತೆಯನ್ನು ನುಡಿಸಿದರು. ಅರಮನೆ ಆವರಣ ಹಾಗೂ ಸುತ್ತ ನೆರೆದಿದ್ದ ಸಹಸ್ರಾರು ಮಂದಿ ಎದ್ದುನಿಂತು ರಾಷ್ಟ್ರ ಗೀತೆಗೆ ಗೌರವ ಸಲ್ಲಿಸಿದರು. ದೇಶಭಕ್ತಿ, ದೇವಿಭಕ್ತಿ ಹಾಗೂ ನಾಡಿನ ಪರಂಪರೆಯ ಗೌರವ ಒಂದೇ ಕ್ಷಣದಲ್ಲಿ ಮೇಳೈಸಿದ ಈ ದೃಶ್ಯ ಜಂಬೂ ಸವಾರಿಯ ವೈಭವಕ್ಕೆ ಮತ್ತೊಂದು ಆಯಾಮ ನೀಡಿತು.

ಅಭಿಮನ್ಯು ಗಾಂಭೀರ್ಯಕ್ಕೆ ಪ್ರೇಕ್ಷಕರ ಉದ್ಗಾರ: ನಿಶಾನೆ ಹೊತ್ತ ಅಭಿಮನ್ಯು ಅರಮನೆಯ ಮುಂಭಾಗದ ಆವರಣಕ್ಕೆ ಗಾಂಭೀರ್ಯದ ಹೆಜ್ಜೆಗಳೊಂದಿಗೆ ಆಗಮಿ ಸುತ್ತಿದ್ದಂತೆ ನೆರೆದಿದ್ದ ಜನಸ್ತೋಮದಿಂದ ಹರ್ಷೋದ್ಗಾರ ಮುಗಿಲುಮುಟ್ಟಿತು. ಆನೆಯ ರಾಜಗಾಂಭೀರ್ಯಕ್ಕೆ ಮನಸೋತ ಪ್ರೇಕ್ಷಕರು ಹೋ ಎಂದು ಉದ್ಗರಿಸಿ ಸಂಭ್ರಮಿಸಿದರು. ಗಣ್ಯರ ವೇದಿಕೆಯ ಮುಂಭಾಗಕ್ಕೆ ಬಂದ ಅಭಿಮನ್ಯು ಸೊಂಡಿಲೆತ್ತಿದ ಕ್ಷಣ ಪ್ರೇಕ್ಷಕರ ಉತ್ಸಾಹವನ್ನು ಮತ್ತಷ್ಟು ಇಮ್ಮಡಿಸಿತು. ಈ ವೇಳೆ ಮುಖ್ಯಮಂತ್ರಿ ಹಾಗೂ ಪರಿವಾರದ ಸದಸ್ಯರು ಎಲ್ಲಾ ಆನೆಗಳಿಗೂ ಪುಷ್ಪಾರ್ಚನೆ ಮಾಡಿದರು. ಇದೇ ಮೊದಲ ಬಾರಿಗೆ ಎಲ್ಲಾ ಆನೆಗಳಿಗೂ ಪುಷ್ಪಾರ್ಚನೆ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಯಿತು ನಿಶಾನೆ ಆನೆ ಅಭಿಮನ್ಯುವಿನೊಂದಿಗೆ ನೌಪತ್ ಆನೆ ಗೋಪಿ ಹಾಗೂ ಸಾಲಾನೆಗಳಾಗಿ ಮಹೇಂದ್ರ, ಶ್ರೀಕಂಠ, ಶ್ರೀರಾಮ, ಚೈತ್ರಾ, ಲಕ್ಷ್ಮಿ, ಸುಗ್ರೀವ, ಏಕಲವ್ಯ ಹೆಜ್ಜೆ ಹಾಕಿದವು. ಗಜಪಡೆಯ ಶಿಸ್ತಿನ ನಡಿಗೆ, ಅಲಂಕಾರದ ವೈಭವ ಮತ್ತು ಗಾಂಭೀರ್ಯದ ನೋಟ ಜಂಬೂಸವಾರಿಯ ಆರಂಭಿಕ ಕ್ಷಣಗಳಿಗೇ ರಾಜಮೆರುಗು ತುಂಬಿದವು.

ಸಾಂಸ್ಖೃತಿಕ ಸುಧೆ

ಆನೆಗಳ ಗಾಂಭೀರ್ಯದ ಬೆನ್ನಲ್ಲೇ ಕಲಾತಂಡ ಗಳ ಮೆರವಣಿಗೆ ವಿದ್ಯುಕ್ತವಾಗಿ ಆರಂಭ ಗೊಂಡಿತು. ರಾಜ್ಯದ ವಿವಿಧ ಭಾಗಗಳ ಕಲೆ, ಸಂಸ್ಕೃತಿ, ಜನಪದ ಪರಂಪರೆ ಹಾಗೂ ಸಾಂಪ್ರ ದಾಯಿಕ ಅಭಿವ್ಯಕ್ತಿಗಳನ್ನು ಹೊತ್ತು ತಂದ 64 ಕಲಾತಂಡಗಳ ಸುಮಾರು 1500 ಕಲಾವಿದರು ಸತತ ಮೂರೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ರಂಜಿಸಿದರು.

ಅಭಿಮನ್ಯುವಿನ ಹೆಜ್ಜೆಯಲ್ಲೇ ಸಾಗಿದ ಪ್ರಶಾಂತ

ಅಭಿಮನ್ಯುವಿನ ಉತ್ತರಾಧಿಕಾರಿಯಾಗಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಪಡೆದ ಪ್ರಶಾಂತ, ತನ್ನ ಹೆಸರಿಗೆ ತಕ್ಕಂತೆ ಸಂಯಮ, ಶಾಂತ ಮುಖಚಿತ್ತದೊಂದಿಗೆ ಅರಮನೆ ಅಂಗಳದಿಂದ ಬನ್ನಿಮಂಟಪದ ತನಕ ಅಂಬಾರಿ ಹೊತ್ತು ಸಾಗುವ ಮೂಲಕ ಗಜಪಡೆಯ ಸಾರಥ್ಯವನ್ನು ಯಶಸ್ವಿ ಯಾಗಿ ನಿಭಾಯಿಸಿದ್ದಾನೆ. ಈ ಮೂಲಕ ದೀರ್ಘಾವಽಗೆ ಅಂಬಾರಿ ಹೊರುವ ವಿಶ್ವಾಸ ಮೂಡಿಸಿದ್ದು ಮೈಸೂರು ದಸರೆ ಗಜಪಡೆಯ ಯಶಸ್ವಿ ನಾಯಕರ ಸಾಲಿಗೆ ಸೇರುವ ಎಲ್ಲ ಲಕ್ಷಣಗಳನ್ನು ಪ್ರದರ್ಶಿಸಿದ್ದಾನೆ.

ಶಿವಮೊಗ್ಗದಲ್ಲಿ ಅಂಬಾರಿ ಆನೆ ರಂಪ: ತಪ್ಪಿದ ದುರಂತ

smg ok

ಶಿವಮೊಗ್ಗ: ಮೈಸೂರಿನಲ್ಲಿ ಪ್ರಶಾಂತ ಆನೆ ಮೊದಲ ಬಾರಿ ಅಂಬಾರಿ ಹೊತ್ತು ಗಜಪಡೆಯನ್ನು ಯಶಸ್ವಿಯಾಗಿ ಮುನ್ನಡೆಸಿದರೆ, ಶಿವಮೊಗ್ಗದಲ್ಲಿ 450 ಕೆಜಿ ಬೆಳ್ಳಿ ಅಂಬಾರಿಯನ್ನು ಹೊತ್ತು ಸಾಗಿದ ಆನೆ ಸೋಮಣ್ಣ, ಅಂಬಾರಿ ಮತ್ತು ಮಾವುತನನ್ನು ಬೀಳಿಸಿ, ದಿಕ್ಕಾಪಾಲಾಗಿ ಓಡಿದ್ದು, ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಶಿವಮೊಗ್ಗದ ಶಿವಪ್ಪ ನಾಯಕ ಅರಮನೆಯಿಂದ ಜಂಬೂ ಸವಾರಿ ಆರಂಭ ವಾಗಿತ್ತು. ಸ್ವಲ್ಪ ದೂರ ಹೋಗುತ್ತಿದ್ದಂತೆ ಕೋಟೆ ರಸ್ತೆ ಸೇರಿ ದಂತೆ ಪ್ರಮುಖ ರಸ್ತೆಗಳಲ್ಲಿ ಸೋಮಣ್ಣ ಆನೆ ಅಡ್ಡಾದಿಡಿಯಾಗಿ ಓಡಿದ್ದು ಅಂಬಾರಿ ಜಾರಿ ಬಿದ್ದು ನಜ್ಜುಗುಜ್ಜಾಗಿದೆ.

ಕೆರಳಿದ ಆನೆ ಕಾರು ಹಾಗೂ ಬೈಕ್ ಸೇರಿದಂತೆ ಹಲವು ವಾಹನಗಳನ್ನು ಜಖಂಗೊಳಿಸಿದೆ. ಆನೆಯ ರೋಷಾವೇಶ ಕಂಡು ನೆರೆದ ಜನ ದಿಕ್ಕಾಪಾಲಾಗಿ ಓಡಿದ್ದು, ಕೆಲವರು ಬಿದ್ದು ಗಾಯಗೊಂಡಿದ್ದಾರೆ. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಆನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಅಂಬಾರಿ ಆನೆ ಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಸದ್ಯ ಆನೆ ನಿಯಂತ್ರಣಕ್ಕೆ ಬಂದಿದ್ದು ಸದ್ಯ ಜಂಬೂ ಸವಾರಿಯನ್ನು ಸ್ಥಗಿತಗೊಳಿಸಲಾಗಿದೆ. ಮೊದಲಿಗೆ ಸಾಗರ್ ಹೆಸರಿನ ಆನೆಗೆ ಅಂಬಾರಿ ಹೊರಲು ತರಬೇತಿ ನೀಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಾಗರ್ ಆನೆಗೆ ಕಾಲು ನೋವು ಕಾಣಿಸಿ ಕೊಂಡಿದ್ದರಿಂದ ಸೋಮಣ್ಣ ಆನೆಗೆ ಮೊದಲ ಬಾರಿಗೆ ಅಂಬಾರಿ ಹೊರಿಸಲು ನಿರ್ಧರಿಸಲಾಗಿದ್ದು ಈ ಅವಘಡಕ್ಕೆ ಕಾರಣವಾಗಿದೆ. ಶಿವಮೊಗ್ಗದಲ್ಲಿ ಅಂಬಾರಿ ಆನೆಯ ಮೆರವಣಿಗೆ ಆರಂಭವಾದ ಬಳಿಕ ನಾಲ್ಕನೇ ಬಾರಿಗೆ ಕಾರ‍್ಯಕ್ರಮ ಮೊಟಕಾಗಿದೆ

ಪೊಲೀಸರ ಜತೆ ವಾಗ್ವಾದ: ವಜ್ರಮುಷ್ಠಿ ಕಾಳಗ ರದ್ದು

ಮೈಸೂರು: ಅರಮನೆ ಆಡಳಿತ ಹಾಗೂ ಪೊಲೀಸ್ ಇಲಾಖೆ ನಡುವೆ ಸೂಕ್ತ ಸಮನ್ವಯದ ಕೊರತೆ ಮತ್ತು ಪೊಲೀಸ್ ಭದ್ರತೆಯ ಅತಿರೇಕದ ಕಾರಣ ವಿಜಯದಶಮಿಯ ದಿನದಂದು ಮೈಸೂರು ಅರಮನೆ ಆವರಣದಲ್ಲಿ ನಡೆಯಬೇಕಿದ್ದ ಸಾಂಪ್ರದಾಯಿಕ ‘ವಜ್ರಮುಷ್ಟಿ ಕಾಳಗ’ದ ಇದೇ ಮೊದಲ ಬಾರಿ ರದ್ದಾಗಿದೆ. ಮೂಹೂರ್ತ ಪ್ರಕಾರ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಸಾಂಪ್ರದಾಯಿಕ ವಜ್ರಮುಷ್ಟಿ ಕಾಳಗ ನಡೆಯಬೇಕಿತ್ತು. ಬಳಿಕ ರಾಜವಂಶಸ್ಥ ಯದುವೀರ್ ಅವರು ‘ವಿಜಯಯಾತ್ರೆ’ಯನ್ನು ಆರಂಭಿಸಬೇಕಿತ್ತು. ಆದರೆ ರಾಜವಂಶಸ್ಥರು ನೀಡಿರುವ ಅಧಿಕೃತ ಪಾಸ್‌ಗಳನ್ನು ಕೈಯಲ್ಲಿ ಹಿಡಿದು ಕೊಂಡು ಬಂದ ಜೆಟ್ಟಿಗಳು ಹಾಗೂ ಅವರ ಕಡೆಯವರನ್ನು ಪೊಲೀಸರು ಅರಮನೆ ಆವರಣಕ್ಕೆ ಬಿಡದೆ ತಡೆದು ವಿಳಂಬ ಮಾಡಿದರು.

ಕೆಲವರನ್ನು ಮಾತ್ರ ಒಳಗೆ ಬಿಟ್ಟು, ಇನ್ನು ಕೆಲವರನ್ನು ಹೊರಗೆ ತಡೆದು ನಿಲ್ಲಿಸಲಾಯಿತು. ಪ್ರಮುಖ ಪೂಜೆ ನಡೆಯಬೇಕಿದ್ದ ಶ್ವೇತ ವರಾಹ ಸ್ವಾಮಿ ದೇವಾಲಯದ ಬಾಗಿಲನ್ನೂ ಸಮಯಕ್ಕೆ ಸರಿಯಾಗಿ ತೆರೆದಿರಲಿಲ್ಲ. ಶುಭ ಮುಹೂರ್ತ ಮೀರುವ ಆತಂಕದಿಂದ ಅರಮನೆ ಮಂಡಳಿ ಹಾಗೂ ರಾಜವಂಶಸ್ಥರು, ಸಾಂಪ್ರದಾಯಿಕ ಕ್ರಮವನ್ನು ಬದಲಿಸಿ ಮೊದಲು ಯದುವೀರ್ ಅವರ ‘ವಿಜಯಯಾತ್ರೆ’ಯನ್ನು ಆರಂಭಿಸಿದರು. ವಿಜಯಯಾತ್ರೆ ಹಾಗೂ ಬನ್ನಿ ಪೂಜೆ ಪೂರ್ಣಗೊಂಡ ನಂತರ ಮೈಸೂರಿನ ಮಹೇಶ್ ಜಟ್ಟಿ, ಬೆಂಗಳೂರಿನ ಚೇತನ್ ಜಟ್ಟಿ, ಚಾಮರಾಜನಗರದ ಸತೀಶ್ ಜಟ್ಟಿ ಹಾಗೂ ಚನ್ನಪಟ್ಟಣದ ತೇಜಸ್ ನಾಲ್ಕು ಜಟ್ಟಿಗಳು ಯದುವೀರ್ ಸಮ್ಮುಖದಲ್ಲಿ ಕಾಳಗ ನಡೆಸಲು ಸಿದ್ಧರಾಗಿದ್ದರೂ ಸಮಯದ ಅಭಾವ ಮತ್ತು ವಿಳಂಬದಿಂದಾಗಿ ಈ ಸಾಂಪ್ರದಾಯಿಕ ಕುಸ್ತಿಯನ್ನು ಸ್ಥಗಿತಗೊಳಿಸಲಾಯಿತು.