ವೈಭವ ಸಿ.ಕೊಳ್ಳಿ ಬೆಂಗಳೂರು
ಯುದ್ಧದ ಎಫೆಕ್ಟ್ , ಮಾವು ರಫ್ತಿನಲ್ಲಿ ಇಳಿಕೆ
ಶೇ.15-20ರಷ್ಟು ಬೆಲೆ ಕುಸಿತ
ರೈತರಿಗೆ ಆತಂಕ, ಗ್ರಾಹಕರಿಗೆ ಖುಷಿ
ಹಣ್ಣುಗಳ ರಾಜ ಎಂದೇ ಕರೆಯಲಾಗುವ ಮಾವಿನ ಹಣ್ಣಿನ ಬೆಲೆ ರಾಜ್ಯದ ವಿವಿಧ ಮಾರು ಕಟ್ಟೆಗಳಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಗಣನೀಯವಾಗಿ ಇಳಿಕೆಯಾಗಿದೆ. ಈ ಬೆಳವಣಿಗೆ ಗ್ರಾಹಕರಿಗೆ ಸಂತಸ ತಂದರೆ ರೈತರು ಹಾಗೂ ವ್ಯಾಪಾರಿಗಳಿಗೆ ಆತಂಕ ಉಂಟು ಮಾಡಿದೆ. ಮಾರುಕಟ್ಟೆ ದತ್ತಾಂಶಗಳ ಪ್ರಕಾರ ಕಳೆದ ಒಂದು ವಾರದಲ್ಲಿ ಮಾವಿನ ಸರಾಸರಿ ಹೋಲ್ ಸೆಲ್ ಬೆಲೆಯಲ್ಲಿ ಸುಮಾರು ಶೇ.15ರಿಂದ 20 ವರೆಗೆ ಕುಸಿತ ದಾಖಲಾಗಿದೆ.
ನಗರದ ಎಪಿಎಂಸಿ ಹಾಗೂ ಹಣ್ಣು ಮಾರುಕಟ್ಟೆಗಳಲ್ಲಿ ಮೇ ಮೊದಲ ವಾರದಲ್ಲಿ ಪ್ರತಿ ಕ್ವಿಂಟಲ್‌ಗೆ ಸುಮಾರು 2200 ರು.ಕ್ಕಿಂತ ಹೆಚ್ಚು ದರ ಸಿಗುತ್ತಿದ್ದ ಮಾವು, ಇದೀಗ 1850 ರಿಂದ 1900ರು. ಮಟ್ಟಕ್ಕೆ ಕುಸಿದಿದೆ. ವಿಶೇಷವಾಗಿ ರಸಪುರಿ, ಬಾದಾಮಿ ಹಾಗೂ ತೋತಾಪುರಿ, ಸೇಂದೂರು, ಮಲ್ಲಿಕಾ, ಬೇಗಪಲ್ಲಿ ತಳಿಗಳಲ್ಲಿ ಬೆಲೆ ಇಳಿಕೆ ಹೆಚ್ಚು ಕಾಣಿಸಿಕೊಂಡಿದೆ.
ಇದನ್ನೂ ಓದಿ: Mango Festival: ಅದ್ಧೂರಿ ಮಾವಿನ ಹಣ್ಣಿನ ಉತ್ಸವ
ಸಾಮಾನ್ಯ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣಿನ ದರದಲ್ಲಿ ಇಳಿಕೆ ಕಂಡುಬಂದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ವಾರ ಪ್ರತಿ ಕಿ.ಲೋ ಗೆ 130ರಿಂದ 150 ರು. ರವರೆಗೆ ಸಿಗುತ್ತಿದ್ದ ಮಾವು ಇದೀಗ 35 ರಿಂದ 40 ರುಪಾಯಿಗೆ ಕುಸಿದಿದೆ. ರೈತರಿಗೆ ಈಗ ಕೇವಲ 20 ರಿಂದ 25ರವರೆಗೆ ಮಾತ್ರ ಲಾಭ ಸಿಗುತ್ತಿದ್ದು, ಬೆಳೆ ವೆಚ್ಚವೂ ವಾಪಸ್ ಬರುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರು, ರಾಮನಗರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗಗಳಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣು ಆಗಮಿಸುತ್ತಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಈ ಸಲ ಹವಾಮಾನದಲ್ಲಿ ಉಂಟಾದ ವ್ಯತ್ಯಾಸದಿಂದ ಹಣ್ಣುಗಳು ಬೇಗನೆ ಹಣ್ಣಾಗಿದ್ದು, ರೈತರು ಒಂದೇ ಸಮಯದಲ್ಲಿ ಮಾರುಕಟ್ಟೆಗೆ ತರುತ್ತಿದ್ದಾರೆ.
ಪರಿಣಾಮವಾಗಿ ಪೂರೈಕೆ ಹೆಚ್ಚಾಗಿದೆ. ಜನವರಿಯಿಂದ ಮಾರ್ಚ್‌ವರೆಗೆ ತೀವ್ರ ಒಣ ಹವಾಮಾನ ಮುಂದುವರಿದಿತ್ತು. ಮಧ್ಯಂತರ ಮಳೆಯ ಕೊರತೆಯಿಂದ ಮಣ್ಣಿನ ತೇವಾಂಶ ಕಡಿಮೆಯಾಗಿ, ಉಷ್ಣಾಂಶ ಹೆಚ್ಚಳದಿಂದ ಹಣ್ಣುಗಳು ಉದುರುವ ಸಮಸ್ಯೆ ಉಂಟಾಯಿತು. ಪರಿಣಾಮ ಸುಮಾರು ಶೇ.60 ಉತ್ಪಾದನೆ ನಷ್ಟವಾಗಿತ್ತು. ಉಳಿದ ಎಲ್ಲಾ ಹಣ್ಣು ಒಂದೇ ಬಾರಿಗೆ ಬಂದಿದೆ. ಜತಗೆ ಗಲ ರಾಷ್ಟ್ರಗಳಿಗೆ ಸಾಗಿಸುತ್ತಿದ್ದ ಮಾವು ಹಾಗೂ ಪಲ್ಪ್ ರಫ್ತು ಕುಂಠಿತಗೊಂಡಿದೆ. ಇದರಿಂದ ಬೆಲೆ ಇಳಿಕೆ ಆಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
![]()
ಗಲ್ಫ್ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯಿಂದ ರಫ್ತು ಪ್ರಮಾಣ ಕುಸಿದಿರು ವುದೂ ದರ ಇಳಿಕೆಗೆ ಕಾರಣವಾಗಿದೆ. ಹಣ್ಣಿನ ಪಲ್ಪ ರಫ್ತು ಕಡಿಮೆಯಾಗಿರುವುದರಿಂದ ಪಲ್ಪಿಂಗ್ ಘಟಕಗಳು ಸಹ ಖರೀದಿ ತಗ್ಗಿಸಿವೆ. ಇದರಿಂದ ಮಾರುಕಟ್ಟೆಯಲ್ಲಿ ಹೆಚ್ಚುವರಿ ಸರಬರಾಜು ಉಂಟಾಗಿ ದರ ಕುಸಿತ ಮತ್ತಷ್ಟು ಹೆಚ್ಚಾಗಿದೆ.
-ವೇದಮೂರ್ತಿ, ವ್ಯವಸ್ಥಾಪಕ ನಿದೇರ್ಶಕ, ರಾಜ್ಯ ಮಾವು ಅಭಿವೃದ್ಧಿ, ಮಾರಾಟ ನಿಗಮ
![]()
ಈ ಬಾರಿ ಮಾವು ಉತ್ಪಾದನೆ ಚೆನ್ನಾಗಿದೆ. ಆದರೆ ದರ ಕುಸಿತದಿಂದ 20- 25 ರು. ಲಾಭದಲ್ಲಿ ಮಾರಬೇಕಾದ ಪರಿಸ್ಥಿತಿ ಬಂದಿದೆ. ಇದರಲ್ಲಿ ಅದರ ಖರ್ಚು ಎಲ್ಲಾ ತಗೆದು ನಮ್ಮಗೆ ಉಳಿಯೋದು 5 ರಿಂದ 7 ರು. ಇನ್ನು ಹೆಚ್ಚು ಲಾಭ ಸಿಗುತ್ತದೆ ಎಂದು ಕುಳಿತರೆ ಈ ಲಾಭ ಸಿಗುವುದು ಸಹ ಕೈ ತಪ್ಪಿ ಹೋಗುತ್ತದೆ.
- ರಮೇಶ್, ರೈತ