Commercial Crop: ಹೆಸರುಕಾಳು, ಕಡ್ಳೆಬೇಳೆ ಬೆಲೆ ಗಗನಮುಖಿ
ಬೆಂಗಳೂರು ಎಪಿಎಂಸಿಯಲ್ಲಿ ಹೆಸರುಕಾಳಿನ ಸಗಟು ದರ ಸರಾಸರಿ ಕೆ.ಜಿ.ಗೆ 118-120 ರು.ಇದ್ದು, ಚಿಲ್ಲರೆ ದರ ೧೩೦-೧೩೮ ರು., ಹೆಸರುಬೇಳೆ ಸಗಟು ೧೦೫-೧೧೫ ರು. ಇದ್ದು ಚಿಲ್ಲರೆ ಬೆಲೆ ೧೨೫-೧೩೦ ರು.ಗೆ ಮಾರಾಟವಾಗುತ್ತಿದೆ. ಕಡ್ಲೆಬೇಳೆ ಸಗಟು ೮೦-೯೦ ರು. ಇದ್ದು, ಚಿಲ್ಲರೆ ದರ ೧೧೦-೧೨೫ ರು.ಗೆ ಇದೆ.


ಹೂವಪ್ಪ ಐ.ಎಚ್.
ಬಯಲುಸೀಮೆಯ ವಾಣಿಜ್ಯ ಬೆಳೆಗಾರರಲ್ಲಿ ಹರುಷ
ಬೆಲೆ ಏರಿಕೆಯಿಂದ ಗ್ರಾಹಕರಲ್ಲಿ ಆತಂಕ
ಬೆಂಗಳೂರು: ಉತ್ತರ ಕರ್ನಾಟಕದ ಬಯಲು ಸೀಮೆಯ ವಾಣಿಜ್ಯ ಬೆಳೆ ಹೆಸರುಕಾಳಿನ ಸುಗ್ಗಿ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆರಂಭವಾಗಿಲ್ಲ, ಆದರೂ ಗದಗ ಎಪಿಎಂಸಿ ಯಲ್ಲಿ ಕಳೆದ ವಾರದಲ್ಲಿ ಕ್ವಿಂಟಲ್ಗೆ 10 ಸಾವಿರ ರು.ಗೆ ಹೆಸರುಕಾಳು ಮಾರಾಟವಾಗಿರುವುದು ಬೆಳೆಗಾರರಿಗೆ ಹರುಷ ತಂದಿದೆ.
ಆದರೆ ಈ ಬೆಲೆ ಏರಿಕೆಯಿಂದ ಗ್ರಾಹಕರು ಆತಂಕದಲ್ಲಿದ್ದಾರೆ. ಸಾಲುಸಲು ಹಬ್ಬಗಳು ಆರಂಭ ವಾಗಿವೆ. ಹೆಸರುಬೇಳೆ ಪಾಯಸ, ಕೋಸಂಬರಿ, ಕಾಳು ಪಲ್ಲೆ ಹೀಗೆ ತರವಾರಿ ಖಾದ್ಯಗಳು ಮಾಡಿ ಹಬ್ಬ ಆಚರಣೆ ಹೇಗೆ ಮಾಡುವುದು ಎಂಬ ಚಿಂತೆ ಗ್ರಾಹಕರದ್ದಾಗಿದೆ. ಇದರ ಜತೆ ಹಬ್ಬದ ಕಾರಣ ದಿಂದಾಗಿ ಕಡ್ಲೆಬೇಳೆ ಬೆಲೆ ಕೂಡಾ ಏರಿಕೆಯಾಗಿದೆ.
ಬೆಂಗಳೂರು ಎಪಿಎಂಸಿಯಲ್ಲಿ ಹೆಸರುಕಾಳಿನ ಸಗಟು ದರ ಸರಾಸರಿ ಕೆ.ಜಿ.ಗೆ 118-120 ರು.ಇದ್ದು, ಚಿಲ್ಲರೆ ದರ ೧೩೦-೧೩೮ ರು., ಹೆಸರುಬೇಳೆ ಸಗಟು ೧೦೫-೧೧೫ ರು. ಇದ್ದು ಚಿಲ್ಲರೆ ಬೆಲೆ ೧೨೫-೧೩೦ ರು.ಗೆ ಮಾರಾಟವಾಗುತ್ತಿದೆ. ಕಡ್ಲೆಬೇಳೆ ಸಗಟು ೮೦-೯೦ ರು. ಇದ್ದು, ಚಿಲ್ಲರೆ ದರ ೧೧೦-೧೨೫ ರು.ಗೆ ಇದೆ. ಹಬ್ಬಗಳು ಇರುವುದರಿಂದ ಬೇಳೆಕಾಳುಗಳಿಗೆ ಪ್ರತೀ ವರ್ಷ ಹೆಚ್ಚಿನ ಬೇಡಿಕೆ ಇದ್ದೇ ಇರುತ್ತದೆ ಎನ್ನುತ್ತಾರೆ ಬೆಂಗಳೂರು ಇಂಡಿಯಾ ಪುಡ್ಸ್ನ ಎನ್ ಶಿವಕುಮಾರ್.
ಇದನ್ನೂ ಓದಿ: Stock Market: ಸೆನ್ಸೆಕ್ಸ್ 370 ಅಂಕ ಏರಿಕೆ, 24,937 ಪಾಯಿಂಟ್ಗೆ ಜಿಗಿದ ನಿಫ್ಟಿ; ಕಾರಣವೇನು?
ಗದಗ ಮಾರುಕಟ್ಟೆಯಲ್ಲಿ ಹೆಸರುಕಾಳು ಆವಕ ಅಂದಾಜು ೧೦೦ ಕ್ವಿಂಟಲ್ರಷ್ಟು ಇತ್ತು. ಜುಲೈ ತಿಂಗಳಲ್ಲಿ ಕ್ವಿಂಟಲ್ಗೆ ಹರಾಜು ಬರೀ ೬,೫೦೦ ರು.ಗೆ. ಆಗಿದೆ. ಜುಲೈ ಕೊನೆಯಲ್ಲಿ ಹೆಸರುಕಾಳು ಬೆಲೆ ಏರಿಕೆಯಲ್ಲಿದ್ದು, ಅದೇ ಹಾದಿಯಲ್ಲಿ ಸಾಗುತ್ತಿದೆ. ಒಂದೇ ವಾರದಲ್ಲಿ ಉತ್ತಮ ದಪ್ಪ ಹೆಸರುಕಾಳು ೧೦ ಸಾವಿರ ರು.ದಾಟಿದೆ.
ಆಗಸ್ಟ್ ೧ರಿಂದ ಅಂದಾಜು ೨೦೭೦ ಕ್ವಿಂಟಲ್ ಆವಕವಾಗಿದ್ದು, ೧೦,೨೨೦ ರು. ಗೆ ಮಾರಾಟವಾಗಿದೆ. ೭೫ರಿಂದ ೮೦ ದಿನಕ್ಕೆ ಹೆಸರುಕಾಳು ಕಟಾವಿಗೆ ಬರುತ್ತದೆ. ಆದರೆ ಈ ಬಾರಿ ಕೃತಿಕಾ ಮಳೆ ಧಾರಾಕಾರ ವಾಗಿ ಸುರಿದ ಹಿನ್ನೆಲೆಯಲ್ಲಿ ಮೇ ಕೊನೆಯ ವಾರದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಕೆಲವೆಡೆ ಹೆಸರು ಕೊಯ್ಲಿಗೆ ಬಂದಿದ್ದು, ಸುಗ್ಗಿ ಆರಂಭವಾಗಿದೆ ಪೂರ್ಣಪ್ರಮಾಣದಲ್ಲಿ ಆರಂಭವಾಗಲು ಇನ್ನು ೫-೬ ದಿನಗಳಾದರೂ ಬೇಕು.
ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ೮೧,೦೮೧ ಹೆಕ್ಟೇರ್ ನಲ್ಲಿ ಹೆಸರು ಬಿತ್ತನೆಯಾಗಿದೆ. ಅಣ್ಣಿಗೇರಿ, ನವಲಗುಂದ, ಕುಂದಗೋಳ ತಾಲೂಕಿನಲ್ಲಿ ಹೆಸರು ನಿರೀಕ್ಷೆಗೂ ಮೀರಿ ಬಿತ್ತನೆಯಾಗಿದೆ. ಬಾಗಲ ಕೋಟ ಜಿಲ್ಲೆಯಲ್ಲಿ ೨೦ ಸಾವಿರ ಹೆಕ್ಟೇರ್ ಭೂಮಿಯಲ್ಲಿ ಹೆಸರುಕಾಳು ಬಿತ್ತನೆಯಾಗಿದೆ. ಕ್ವಿಂಟಲ್ ದರ ಸಣ್ಣಕಾಳಿಗೆ ೯,೬೦೫ ಇದ್ದರೆ, ಉತ್ತಮ ದಪ್ಪ ಹೆಸರುಕಾಳಿನ ದರ ಪ್ರತಿ ಕ್ವಿಂಟಲ್ಗೆ ೧೦,೦೬೦ ಇದೆ. ಕಳೆದ ವರ್ಷ ದರವು ಕ್ವಿಂಟಲ್ಗೆ ೭,೫೦೦ ಇತ್ತು ಇನ್ನುತ್ತಾರೆ ಬಾಗಲಕೋಟೆ ಎಪಿಎಂಸಿ ವರ್ತಕರು.
*
ಎಪಿಎಂಸಿಯಲ್ಲಿ ಹೆಸರುಕಾಳಿಗೆ ಉತ್ತಮ ಬೆಲೆ ಸಿಗುತ್ತಿರುವುದು ಸಂತಸ ತಂದಿದೆ. ಸರಕಾರವು ತಕ್ಷಣವೇ ಬೆಂಬಲ ಬೆಲೆಯಡಿ ಖರೀದಿಸಿದರೆ ಮುಂದೆ ಬೆಲೆ ಕಡಿಮೆಯಾದಾಗ ನಮಗದು ಸಹಕಾರಿ ಯಾದೀತು.
- ಶಿವಕುಮಾರ್, ಶೀರೂರಿನ ರೈತ
ದಿನನಿತ್ಯ ಅಡುಗೆಗೆ ಹೆಸರುಕಾಳು ಅಗತ್ಯ. ಈಗ ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಹೆಸರುಬೇಳೆಗೆ ಬೇಡಿಕೆ ಜಾಸ್ತಿ. ಕೆ.ಜಿ.ಗೆ ಈಗಾಗಲೇ ೧೩೦ ರು. ಇದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಿಜಕ್ಕೂ ಆತಂಕಗೊಂಡಿದ್ದೇನೆ.
- ದೀಪ ಎಂ.ಸಿ, ಗ್ರಾಹಕಿ