5.02 ಮೀಟರ್ ಕುಸಿತ, 600 ಅಡಿ ಕೊರೆದರೂ ನೀರಿಲ್ಲ, 10 ಸಾವಿರ ಹೆಕ್ಟೇರ್‌ಗೂ ಅಧಿಕ ಶುಂಠಿ ಬೆಳೆ ಆತಂಕದಲ್ಲಿ, ಬತ್ತಿದ ಬಹುತೇಕ ಕೊಳವೆ ಬಾವಿಗಳು
ಕೆ.ಜೆ.ಲೋಕೇಶ್ ಬಾಬು ಮೈಸೂರು
ಮಳೆ ಬರಬೇಕಾದ ಕಾಲದಲ್ಲೇ ಮಳೆ ಕೈಕೊಟ್ಟಿದೆ. ಕೆರೆ-ಕಟ್ಟೆಗಳು ತುಂಬಿಲ್ಲ. ಜಲಾಶಯಗಳಿಗೆ ನಿರೀಕ್ಷಿತ ಒಳಹರಿವು ಇಲ್ಲ. ಕೊಳವೆಬಾವಿಗಳು ರೀಚಾರ್ಜ್ ಆಗಿಲ್ಲ. ಪರಿಣಾಮ, ಮೈಸೂರು ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಆತಂಕಕಾರಿ ಪ್ರಮಾಣದಲ್ಲಿ ಕುಸಿದಿದ್ದು, ಕೃಷಿ ಮತ್ತು ಗ್ರಾಮೀಣ ಬದುಕಿನ ಮೇಲೆ ನೀರಿನ ಬಿಕ್ಕಟ್ಟಿನ ಕರಿನೆರಳು ಆವರಿಸಿದೆ.
ಕಳೆದ ವರ್ಷ ಆಗಸ್ಟ್ ಅಂತ್ಯದಲ್ಲಿ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟ 8.46 ಮೀಟರ್ ಇದ್ದರೆ, ಈ ವರ್ಷ ಅದು 13.48 ಮೀಟರ್‌ಗೆ ಕುಸಿದಿದೆ. ಅಂದರೆ ಒಂದೇ ವರ್ಷದಲ್ಲಿ ಸರಾಸರಿ 5.02 ಮೀಟರ್ ಕುಸಿತ ದಾಖಲಾಗಿದೆ. ಮಳೆ ಕೊರತೆ, ಕೆರೆ-ಕಟ್ಟೆಗಳ ಭರ್ತಿಯಾಗದಿರುವುದು, ಜಲಾಶಯಗಳಿಗೆ ಕಡಿಮೆ ಒಳಹರಿವು, ಕಾಲುವೆಗಳಿಗೆ ನೀರು ಹರಿಯದಿರುವುದು ಹಾಗೂ ಅಂತರ್ಜಲದ ಮೇಲಿನ ಹೆಚ್ಚುತ್ತಿರುವ ಅವಲಂಬನೆ ಇವೆಲ್ಲವೂ ಸೇರಿ ಜಿಲ್ಲೆಯ ಭೂಮಿಯೊಳಗಿನ ನೀರಿನ ಸಂಗ್ರಹಕ್ಕೆ ದೊಡ್ಡ ಹೊಡೆತ ನೀಡಿವೆ.
ಆಕಾಶದತ್ತ ಮುಖ ಮಾಡಿದ ಅನ್ನದಾತ: ಒಂದು ಕಾಲದಲ್ಲಿ ಮಳೆ ಬಂದರೆ ಕೆರೆ ತುಂಬುತ್ತಿತ್ತು, ಕೆರೆ ತುಂಬಿದರೆ ಕೊಳವೆಬಾವಿ ರೀಚಾರ್ಜ್ ಆಗುತ್ತಿತ್ತು, ನೀರು ಸಿಕ್ಕರೆ ಹೊಲ ಹಸಿರಾಗುತ್ತಿತ್ತು. ಈಗ ಆ ಸರಪಳಿ ತುಂಡಾಗುತ್ತಿದೆ. ಮಳೆಗಾಲದಲ್ಲೇ ಕೊಳವೆಬಾವಿಗಳು ಬತ್ತುತ್ತಿರುವುದು, 500-600 ಅಡಿ ಕೊರೆದರೂ ನೀರು ಸಿಗದಿರುವುದು ಹಾಗೂ ಕೈಗೆ ಬಂದ ಬೆಳೆಗೂ ನೀರು ಒದಗಿಸಲಾಗದ ಪರಿಸ್ಥಿತಿ ಇವೆಲ್ಲವೂ ಮುಂದಿನ ದಿನಗಳಲ್ಲಿ ನೀರಿನ ನಿರ್ವಹಣೆಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿವೆ.
ಇದನ್ನೂ ಓದಿ: PM Narendra Modi in Mysuru: ವಿಜ್ಞಾನ ಕ್ಷೇತ್ರದಲ್ಲಿ ಭಾರತ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ: ಪ್ರಧಾನಿ ಮೋದಿ
ಮಳೆ ಬರುವುದನ್ನು ಕಾಯುವು ದಷ್ಟೇ ಪರಿಹಾರವಲ್ಲ; ಬಿದ್ದ ಪ್ರತಿಯೊಂದು ಹನಿ ನೀರನ್ನು ಉಳಿಸಿ, ಭೂಮಿಯೊಳಗೆ ಇಳಿಸುವ ವ್ಯವಸ್ಥೆ ನಿರ್ಮಿಸುವುದೇ ಈಗಿನ ತುರ್ತು ಅಗತ್ಯ. ಇಲ್ಲವಾದರೆ, ಇಂದು ಹೊಲದಲ್ಲಿ ಕಾಣುತ್ತಿರುವ ನೀರಿನ ಕೊರತೆ ನಾಳೆ ಗ್ರಾಮೀಣ ಬದುಕಿನ ಅಸ್ತಿತ್ವದ ಪ್ರಶ್ನೆಯಾಗುವ ಅಪಾಯವಿದೆ.
ಮಳೆಗಾಲದಲ್ಲೇ ಬತ್ತಿದ ಕೊಳವೆಬಾವಿಗಳು: ಸಾಮಾನ್ಯವಾಗಿ ಮಳೆಗಾಲದಲ್ಲಿ ಕೊಳವೆ ಬಾವಿಗಳಿಗೆ ನೀರು ಮರುಪೂರಣವಾಗಬೇಕಿತ್ತು. ಆದರೆ ಈ ಬಾರಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಮಳೆ ಕೊರತೆಯಿಂದ ಭೂಮಿ ಯೊಳಗೆ ನೀರು ಇಳಿಯುವ ಪ್ರಮಾಣ ಕಡಿಮೆಯಾಗಿದ್ದು, ಈಗಾಗಲೇ ನೀರಿನ ಮಟ್ಟ ಕಡಿಮೆಯಿದ್ದ ಪ್ರದೇಶಗಳಲ್ಲಿ ಕೊಳವೆಬಾವಿಗಳು ಬತ್ತಲಾರಂಭಿಸಿವೆ. ಅಂತರ್ಜಲ ವನ್ನೇ ನಂಬಿಕೊಂಡಿರುವ ರೈತರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಳೆಯ ಬೋರ್ ವೆಲ್‌ಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಹೊಸ ಕೊಳವೆಬಾವಿ ಕೊರೆಯಿಸುವ ಅನಿವಾರ್ಯತೆ ಎದುರಾಗಿದೆ. ಆದರೆ, ಹಲವೆಡೆ ೫೦೦ರಿಂದ ೬೦೦ ಅಡಿ ಆಳದವರೆಗೆ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಬೋರ್‌ವೆಲ್ ಕೊರೆಯಿಸುವ ವೆಚ್ಚವೂ ಏರಿಕೆಯಾಗಿದೆ.
ಯಂತ್ರಗಳ ಬಾಡಿಗೆ ಪ್ರತಿ ಅಡಿಗೆ ಸುಮಾರು ?
80-90ರಿಂದ 100-110ರವರೆಗೆ ಏರಿಕೆಯಾಗಿದೆ. ಪೈಪ್, ಕೇಬಲ್ ಸೇರಿದಂತೆ ಇತರ ಪರಿಕರಗಳ ದರವೂ ಹೆಚ್ಚಿರುವುದರಿಂದ ರೈತರ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ.
ವಾಣಿಜ್ಯ ಬೆಳೆ ಬೆಳೆದ ರೈತರಿಗೆ ನೀರಿನ ಸಂಕಷ್ಟ: ಅಂತರ್ಜಲದ ಮೇಲೆ ಅವಲಂಬಿತ ಆಗಿರುವ ರೈತರಲ್ಲಿ ದೊಡ್ಡ ಪ್ರಮಾಣದವರು ಈಗ ನೀರಿನ ಕೊರತೆಯ ಆತಂಕದಲ್ಲಿದ್ದಾರೆ. ರಾಗಿ, ಶೇಂಗಾ, ದ್ವಿದಳ ಧಾನ್ಯಗಳಂತಹ ಸಾಂಪ್ರದಾಯಿಕ ಬೆಳೆಗಳ ಬದಲಿಗೆ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿ ಬಾಳೆ, ಶುಂಠಿ, ಹೊಗೆಸೊಪ್ಪು ಸೇರಿದಂತೆ ವಾಣಿಜ್ಯ ಬೆಳೆಗಳತ್ತ ರೈತರು ಮುಖ ಮಾಡಿದ್ದಾರೆ. ಆದರೆ, ಈ ಬೆಳೆಗಳಿಗೆ ಹೆಚ್ಚಿನ ಪ್ರಮಾಣದ ನೀರಿನ ಅವಶ್ಯಕತೆ ಇರುವುದರಿಂದ ಮಳೆ ಕೈಕೊಟ್ಟಾಗ ಸಂಕಷ್ಟವೂ ತೀವ್ರವಾಗುತ್ತಿದೆ.
ವಿದ್ಯುತ್ ಕಡಿತವೂ ಮತ್ತೊಂದು ಹೊಡೆತ: ಒಂದೆಡೆ ಬೋರ್‌ವೆಲ್‌ಗಳಲ್ಲಿ ನೀರಿಲ್ಲ. ಮತ್ತೊಂದೆ ಡೆ ಕೃಷಿ ಪಂಪ್ ಸೆಟ್‌ಗಳಿಗೆ ನಿಗದಿತ ಅವಧಿಯಲ್ಲಿಯೂ ವಿದ್ಯುತ್ ಪೂರೈಕೆ ವ್ಯತ್ಯಯವಾಗುತ್ತಿದೆ ಎಂಬುದು ರೈತರ ಅಳಲು. ಸಿಕ್ಕಷ್ಟು ಸಮಯದಲ್ಲಿ ಬೆಳೆಗಳಿಗೆ ನೀರು ಹಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ನೀರು ಮತ್ತು ವಿದ್ಯುತ್ ಎರಡೂ ಅನಿಶ್ಚಿತ ವಾಗಿರುವುದರಿಂದ ಬೆಳೆ ಉಳಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ.
ಯಾವ ತಾಲೂಕಿನಲ್ಲಿ ಎಷ್ಟು ಕುಸಿತ?
ಎಚ್.ಡಿ.ಕೋಟೆ- 6.27 ಮೀ., ಹುಣಸೂರು- 7.45 ಮೀ., ಕೆ.ಆರ್. ನಗರ- 5.01 ಮೀ., ನಂಜನಗೂಡು- 5.30 ಮೀ., ಮೈಸೂರು – 2.88 ಮೀ.,ಪಿರಿಯಾಪಟ್ಟಣ – 6.48 ಮೀ., ತಿ.ನರಸೀಪುರ- 1.85 ಮೀ., ಸರಗೂರು – 6.51 ಮೀ., ಸಾಲಿಗ್ರಾಮ – 3.42 ಮೀ., ಜಿಲ್ಲೆಯ ಸರಾಸರಿ- 5.02 ಮೀ., ಲಭ್ಯ ಅಂಕಿಅಂಶಗಳು ಜಿಲ್ಲೆಯಾದ್ಯಂತ ಅಂತರ್ಜಲದ ಸ್ಥಿತಿ ಹೇಗೆ ಬದಲಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಅಂಕಿಅಂಶಗಳ ಪ್ರಕಾರ ಹುಣಸೂರು ತಾಲೂಕಿನಲ್ಲಿ 7.45 ಮೀಟರ್ ನಷ್ಟು ಅತಿ ಹೆಚ್ಚು ಕುಸಿತ ಕಂಡುಬಂದಿದೆ. ಸರಗೂರು 6.51 ಮೀಟರ್, ಪಿರಿಯಾಪಟ್ಟಣ 6.48 ಮೀಟರ್ ಹಾಗೂ ಎಚ್.ಡಿ.ಕೋಟೆ 6.27 ಮೀಟರ್, ತಿ. ನರಸೀಪುರದಲ್ಲಿ 1.85 ಮೀಟರ್ ಹಾಗೂ ಮೈಸೂರು ತಾಲೂಕಿನಲ್ಲಿ 2.88 ಮೀಟರ್ ಕುಸಿತ ದಾಖಲಾಗಿದೆ.
2022ರಲ್ಲಿ ಏರಿಕೆ, ಈಗ ಇಳಿಕೆ
ರಾಜ್ಯದಲ್ಲಿ 2001ರ ನಂತರ ಅಂತರ್ಜಲದ ಬಳಕೆ ಮಿತಿ ಮೀರುತ್ತಾ ಬಂದಿದೆ. 2017ರಲ್ಲಿ ಹಲವು ಜಿಲ್ಲೆಗಳಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದ ಪರಿಣಾಮ ಅನೇಕ ಕೊಳವೆಬಾವಿಗಳು ಬತ್ತಿದ್ದವು. 2022ರಲ್ಲಿ ನಿರೀಕ್ಷೆಗೂ ಮೀರಿ ಮಳೆಯಾದ ಪರಿಣಾಮ ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತ್ತು. ಆದರೆ, 2023ರಲ್ಲಿ ಮಳೆ ಕೈಕೊಟ್ಟ ಬಳಿಕ ಪರಿಸ್ಥಿತಿ ಮತ್ತೆ ಬದಲಾಗತೊಡಗಿತು. 2024 ಮತ್ತು 2025ರಲ್ಲಿ ಉತ್ತಮ ಮಳೆಯಾಗಿದ್ದರೂ, ಪ್ರಸಕ್ತ ವರ್ಷ ಮಳೆ ಕೊರತೆ ಉಂಟಾಗಿರುವುದು ಅಂತರ್ಜಲ ಮರುಪೂರಣದ ಮೇಲೆ ಪರಿಣಾಮ ಬೀರಿದೆ.