ಮಂಜು ಕಲಾಲ ವಿಜಯಪುರ
ಜೀವ ಭಯದಲ್ಲಿಯೇ ಶಾಲೆಗೆ ಸಂಚರಿಸುತ್ತಿರುವ ಮಕ್ಕಳು
ಪಾಲಿಕೆ ಅಧಿಕಾರಿಗಳ ವಿರುದ್ಧ ನಿವಾಸಿಗಳ ಹಿಡಿಶಾಪ
ನಗರದ ಶಾಸ್ತ್ರಿ ನಗರ, ವಿದ್ಯಾನಗರ, ರಹೀಂ ನಗರ, ಹೂಗಾರ್ ಪ್ಲಾಟ್ಸ್, ಕೌಜಲಗಿ ಬಡಾವಣೆ, ಇಬ್ರಾಹಿಂ ರೋಜಾ ಹಿಂಭಾಗ ಸೇರಿದಂತೆ ಸುತ್ತಮತ್ತಲಿನ ಬಡಾವಣೆಯ ರಾಜ ಕಾಲುವೆಯ ಕೊಳಚೆ ನೀರು ದೊಡ್ಡ ನಾಲೆಯಂತೆ ಹರಿಯುತ್ತಿದ್ದು ಗಬ್ಬು ವಾಸನೆಯಿಂದ ನಿವಾಸಿಗಳು ಪಾಲಿಕೆ ಅಧಿಕಾರಿ ಗಳ ವಿರುದ್ದ ಹಿಡಿಶಾಪ ಹಾಕುವಂತಾಗಿದೆ.
1 ಕಿ.ಮೀ. ಉದ್ದಕ್ಕೂ ವ್ಯಾಪಿಸಿರುವ ಈ ತೆರೆದ ರಾಜಕಾಲುವೆ ಅಪಾಯಕ್ಕೂ ಆಹ್ವಾನ ನೀಡುವ ಜೊತೆಗೆ ಸಾಂಕ್ರಾಮಿಕ ರೋಗಗಳನ್ನು ಹರಡುತ್ತಿದೆ. ಈ ರಾಜಕಾಲುವೆಗೆ ಮುಚ್ಚಿಗೆ (ಸ್ಲ್ಯಾಬ್) ಹಾಕದ ಕಾರಣ ಚಿಕ್ಕಮಕ್ಕಳು ಅದರಲ್ಲಿ ಬೀಳುವ ಅಪಾಯವೂ ಇದೆ, ಅದರ ಪಕ್ಕದಲ್ಲೇ ಶಾಲೆ ಸಹ ಇದ್ದು ಪಾಲಕರು ಮಕ್ಕಳನ್ನು ಜೀವ ಭಯದಲ್ಲಿಯೇ ಶಾಲೆಗೆ ಕಳಿಸುವಂತಾಗಿದೆ.
ಇನ್ನೂ ಈ ಭಾಗದಲ್ಲಿ ಮನೆ ಮಾಡಿಕೊಂಡಿರುವವರು ಕಿಟಕಿ, ಬಾಗಿಲು ಹಾಕಿ ಮೂಗು ಮುಚ್ಚಿ ಕೊಂಡು ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಗೆ ಬರುವ ಬಂಧು-ಬಾಂಧವರು ಈ ಕಾಲುವೆಯಿಂದ ಸೂಸುವ ಗಬ್ಬು ವಾಸನೆಗೆ ಬೇಸತ್ತು ಇನ್ನೊಮ್ಮೆ ಇತ್ತ ಭೇಟಿ ನೀಡುವ ಗೋಜಿಗೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವ್ಯಾಪಕ ಪ್ರಮಾಣದಲ್ಲಿ ಗಬ್ಬು ವಾಸನೆಯಿಂದಾಗಿ ನಿವಾಸಿಗಳು ಹೊರಗೆ ಬಾರಲು ಸಹ ಸಾಧ್ಯ ವಾಗದ ಪರಿಸ್ಥಿತಿ ಇದೆ. 1 ಕಿ.ಮೀ. ಉದ್ದಕ್ಕೂ ತ್ಯಾಜ್ಯಗಳಿಂದ ತುಂಬಿಕೊಂಡಿರುವ ಈ ರಾಜ ಕಾಲುವೆಯ ಗಬ್ಬು ವಾಸನೆಯ ನರಕ ಯಾತನೆಯೂ ನಿವಾಸಿಗಳನ್ನು ಹೈರಾಣಾಗಿಸಿದ್ದು, ಈ ರಾಜಕಾಲುವೆಗೆ ಸ್ಲ್ಯಾಬ್ ಇಲ್ಲದೇ ಕಸದ ತೊಟ್ಟಿಯೂ ಆಗಿದೆ.
ಇದನ್ನೂ ಓದಿ: kalaburagi news: ಕಲಬುರಗಿಯಲ್ಲಿ ರಥದ ಚಕ್ರ ಮೈಮೇಲೆ ಹರಿದು ಭಕ್ತನ ದುರ್ಮರಣ
ಪಾಚಿಗಟ್ಟಿದ ನೀರು, ಕೊಳೆತು ನಾರುತ್ತಿರುವ ತ್ಯಾಜ್ಯಗಳು ಎಲ್ಲವೂ ಸೇರಿ ಹೊರಬರುವ ಗಬ್ಬು ವಾಸನೆಯಿಂದ ಆ ಬಡಾವಣೆಗಳಲ್ಲಿ ನಿಲ್ಲಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಲೀನ ನೀರಿನಲ್ಲಿ ಸೊಳ್ಳೆ, ನೋಣ ಮೊದಲಾದ ಕ್ರಿಮಿಕೀಟಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಬೆಳಗ್ಗೆ ಗಬ್ಬು ವಾಸನೆ ನಿರಂತರ ಆಕ್ರಮಣ ಮಾಡುತ್ತಿರುತ್ತದೆ. ಸಂಜೆಯಾದರೆ ಸಾಕು ಸೊಳ್ಳೆ-ನೊಣಗಳು ಆಕ್ರಮಣ. ಈ ಎಲ್ಲವೂಗಳಿಂದ ಡೆಂಗಿ, ಮಲೇರಿಯಾ, ಚಿಕುನ್ ಗುನ್ಯಾ ಮೊದಲಾದ ಸಾಂಕ್ರಾಮಿಕ ರೋಗಗಳ ಭೀತಿಯೂ ಈ ಬಡಾವಣೆಯಲ್ಲಿ ಅಧಿಕವಾಗಿದೆ.
ಶಾಲೆಯೇ ಮುಂದೆ ರಾಜಕಾಲುವೆ ಇದ್ದು ಅದರ ಪಕ್ಕದಲ್ಲಿಯೇ ವಿದ್ಯಾರ್ಥಿಗಳು ಸಂಚರಿಸು ತ್ತಿರುತ್ತಾರೆ. ಅಪ್ಪಿ ತಪ್ಪಿಯು ಅದರಲ್ಲಿ ಬಿದ್ದರೆ ಅವರ ಜೀವವೇ ಹೋಗುತ್ತದೆ. ಈ ರೀತಿಯ ಅನಾಹುತವಾದರೆ ಯಾರು ಹೊಣೆ? ಗಬ್ಬು ನಾತ ಶಾಲೆ ತುಂಬ ಇರುತ್ತದೆ. ಅದರಲ್ಲಿಯೇ ಮಕ್ಕಳು ಶಾಲೆ ಕಲಿಯುವಂತಾಗಿದೆ. ಸಾಂಕ್ರಾಮಿಕ ರೋಗದ ಭೀತಿಯಿದೆ. ಹಲವು ಬಾರಿ ಪಾಲಿಕೆ ಆಯುಕ್ತರಿಗೆ ಇಲ್ಲಿನ ಪಾಲಿಕೆ ಸದಸ್ಯೆ, ಎಸ್.ಡಿ.ಎಂ.ಸಿ ಸದಸ್ಯರು, ವಾರ್ಡಿನ ಜಮಾತ್ ಸದಸ್ಯರು ಮನವಿ ಮಾಡಿ ದರೂ ಈವರೆಗೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ. 39ರ ಪ್ರಭಾರ ಮುಖ್ಯಶಿಕ್ಷಕ ರಿಯಾಜ್ ಅಹ್ಮದ ತಮದಡ್ಡಿ ತಮ್ಮ ಅಳಲನ್ನು ತೊಡಿ ಕೊಂಡರು.
ಇನ್ನೂ ಬಡಾವಣೆಯಲ್ಲಿರುವ ಅನೇಕ ಮನೆಗಳಿಗೆ ಸಂಬಂಧಿಕರು, ಬೀಗರು ಬರಲು ಅಕ್ಷರಶಃ ಹಿಂದೇಟು ಹಾಕುತ್ತಿದ್ದಾರೆ. ಅಲ್ಲಿ ಬಾಡಿಗೆ ಮನೆ ಪಡೆದಿರುವ ಬಹುತೇಕ ನಿವಾಸಿಗಳು ಮನೆ ಖಾಲಿ ಮಾಡಿ ಬೇರೆಡೆ ಹೋಗುತ್ತಿದ್ದಾರೆ. ಸ್ವಂತ ಮನೆ ಇರುವವರು ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಭಾಗದಲ್ಲಿ ಮನೆ ಕಟ್ಟಿಸಿ ಬಾಡಿಗೆ ನೀಡುವುದು ಕನಸಿನ ಮಾತೇ, ಅನೇಕ ಬಾಡಿಗೆದಾರರು ಈ ಚರಂಡಿಯ ಸಹವಾಸವೇ ಸಾಕಪ್ಪ ಎಂದು ಮನೆ ಖಾಲಿ ಮಾಡಿ ಹೊರಟಿದ್ದಾರೆ, ಅನೇಕ ಮನೆಗಳು ಖಾಲಿ ಬಿದ್ದಿವೆ, ‘ಮನೆ ಬಾಡಿಗೆಗೆ" ಎಂಬ ಫಲಕ ಮಾತ್ರ ರಾರಾಜಿಸುತ್ತಿವೆ.
![]()
ರಾಜ ಕಾಲುವೆ ತೆರೆದುಕೊಂಡಿರುವುದರಿಂದ ಜನ ಕಸ, ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದು ಬಿಸಾಕು ತ್ತಿರುವುದರಿಂದ ಬ್ಲಾಕ್ ಆಗಿ ತ್ರಾಜ್ಯ ನೀರು ಮುಂದೆ ಹರಿಯದೇ ಅಲ್ಲಿಯೇ ನಿಂತು ಗಬ್ಬು ವಾಸನೆ ಬೀರುತ್ತಿದೆ. ಸೊಳ್ಳೆ ಕಾಟ ಹೆಚ್ಚಾಗಿದೆ. ನೀರು ಮುಂದೆ ಹರಿಯದೇ ಶೇಖರಣೆ ಆಗುತ್ತಿರುವುದರಿಂದ ಈ ಚರಂಡಿಯ ನಾತ ಮನೆಗಳಲ್ಲಿ ಕೊರೆಸಲಾಗಿರುವ ಕೊಳವೆಬಾವಿ ನೀರಿನಲ್ಲಿಯೂ ಬರುತ್ತಿದೆ. ಪಾಲಿಕೆ ಸದಸ್ಯೆ ಹಾಗೂ ಶಾಸಕರ ಗಮನಕ್ಕೆ ತಂದರೂ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತಿಲ್ಲ.
ಪ್ರದೀಪ್ ಹುಬ್ಬಳ್ಳಿ, ಸ್ಥಳೀಯ ನಿವಾಸಿ
![]()
ಈ ಚರಂಡಿಗೆ ಸ್ಲ್ಯಾಬ್ ಹಾಕುವಂತೆ ಅನೇಕ ಬಾರಿ ಮನವಿ ಮಾಡಿಕೊಂಡಿರುವೆ, ಸಾಮಾನ್ಯ ಸಭೆ ಯಲ್ಲಿಯೂ ಧ್ವನಿ ಎತ್ತಿರುವೆ, ಪಕ್ಕದಲ್ಲಿಯೇ ಉರ್ದು ಪ್ರಾಥಮಿಕ ಶಾಲೆಯೂ ಇದೆ ಮಕ್ಕಳು ಇದರ ಪಕ್ಕದ ರಸ್ತೆಯಲ್ಲಿಯೇ ಸಂಚರಿಸುತ್ತಾರೆ, ಅವರ ಜೀವಕ್ಕೆ ಅಪಾಯವಾದರೆ ಯಾರು ಹೊಣೆ? ಈ ಕುರಿತು ಹಲವಾರು ಬಾರಿ ಆಯುಕ್ತರಿಗೂ, ಮಹಾಪೌರರಿಗೂ ಮನವಿ ಮಾಡಿಕೊಂಡಿರುವೆ.
-ಆರತಿ ಶಹಾಪುರ, ಪಾಲಿಕೆ ಸದಸ್ಯೆ.