ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅವ್ಯವಸ್ಥೆಯ ಆಗರವಾದ ಕುಷ್ಟಗಿಯ ತಾಯಿ-ಮಕ್ಕಳ ಆಸ್ಪತ್ರೆ: ಹೊಸ ಕಟ್ಟಡದಲ್ಲೂ ಅದೇ ಹಳೇ ಸಮಸ್ಯೆ

ಒಟ್ಟು 100 ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹೊಸ ಕಟ್ಟಡದಲ್ಲೇ ಮೂಲ ಸೌಲಭ್ಯ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕನಿಷ್ಠ ಸೌಲಭ್ಯಗಳಾದ ಶುದ್ಧ ಕುಡಿವ ನೀರು, ಬಾಣಂತಿರಿಗೆ ಬೇಕಾದ ಬಿಸಿ ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲ. ಆಸ್ಪತ್ರೆ ಮೇಲ್ಚಾವಣಿ ಮೇಲೆ ಅಳವಡಿಸಿರುವ ಸೋಲಾರ್‌ವಾಟರ್ ಹೀಟರ್‌ನ ಟೂಬ್ ಗಳು ಹಾಳಾಗಿವೆ.

ಪವಾಡೆಪ್ಪ ಚೌಡ್ಕಿ, ಕುಷ್ಟಗಿ

ಪಟ್ಟಣದಲ್ಲಿ ಇತ್ತೀಚೆಗಷ್ಟೇ ಲೋಕಾರ್ಪಣೆ ಆಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅದೇ ಹಳೇ ಸಮಸ್ಯೆಗಳ ದರ್ಬಾರ್‌ಮುಂದುವರೆದಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯ ಸುಮಾರು 27 ಕೋಟಿ ರು. ಅನುದಾನದಲ್ಲಿ ಕಟ್ಟಡ ನಿರ್ಮಾಣವಾಗಿದ್ದು, ಕಾಮಗಾರಿ ಪೂರ್ಣ ಗೊಳ್ಳುವ ಮೊದಲೇ ಆಸ್ಪತ್ರೆ ಕಾರ್ಯಾಚರಣೆ ಮಾಡಿದ್ದು ವ್ಯಾಪಕ ಟೀಕೆಗೆ ಎಡೆ ಮಾಡಿದೆ.

ಒಟ್ಟು 100 ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹೊಸ ಕಟ್ಟಡದಲ್ಲೇ ಮೂಲ ಸೌಲಭ್ಯ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕನಿಷ್ಠ ಸೌಲಭ್ಯಗಳಾದ ಶುದ್ಧ ಕುಡಿವ ನೀರು, ಬಾಣಂತಿರಿಗೆ ಬೇಕಾದ ಬಿಸಿ ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲ. ಆಸ್ಪತ್ರೆ ಮೇಲ್ಚಾವಣಿ ಮೇಲೆ ಅಳವಡಿಸಿರುವ ಸೋಲಾರ್‌ವಾಟರ್ ಹೀಟರ್‌ನ ಟೂಬ್ ಗಳು ಹಾಳಾಗಿವೆ. ಇದರಿಂದ ಗರ್ಭಿಣಿ ಯರು, ಬಾಣಂತಿಯರು ಹಾಗೂ ನವಜಾತ ಶಿಶುಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ಕಷ್ಟಸಾಧ್ಯವಾಗಿದೆ.

ಇದನ್ನೂ ಓದಿ: Kiran Upadhyay Column: ಸಂದೇಶ ಕೊಡುತ್ತ ಸಂದೇಶವೇ ಆದರು

ಲೈಟ್- ಪ್ಯಾನ್ ಇಲ್ಲ: ಆಸ್ಪತ್ರೆಯ ಕಟ್ಟಡ ಹೊಸದಾಗಿದ್ದರೂ ಅನೇಕ ಕೊಠಡಿಯಲ್ಲಿ ವಿದ್ಯುತ್ ಲೈಟ್ ಉರಿಯುತ್ತಿಲ್ಲ. ಫ್ಯಾನ್ ತಿರುಗುತ್ತಿಲ್ಲ. ಇದರಿಂದ ಬಡ ಬಾಣಂತಿಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಾತ್ರಿಯಾದರೆ ಸಾಕು ರೋಗಿಗಳ ಅಟೆಂಡರ್‌ಗಳು ಹಾಗೂ ಬಾಣಂತಿಯರು ಯಾತನೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಿಬ್ಬಂದಿ- ಸಂಪರ್ಕ ಸಮಸ್ಯೆ: ಆಸ್ಪತ್ರೆಯ ಸಾಮರ್ಥ್ಯಕ್ಕೆ ತಕ್ಕಷ್ಟು ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆಯಲ್ಲಿ ಇಲ್ಲ. ಇದು ರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇನ್ನು ಕುಷ್ಟಗಿ ಬಸ್ ನಿಲ್ದಾಣ ದಿಂದ ಸುಮಾರು 2-3 ಕಿ.ಮೀ ದೂರವಿದ್ದು, ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ಗರ್ಭಿಣಿಯರಿಗೆ ಮತ್ತು ಸಾರ್ವಜನಿಕರಿಗೆ ನಡೆದುಕೊಂಡು ಹೋಗಲು ಕಷ್ಟವಾಗುತ್ತಿದೆ.

image

ಆಸ್ಪತ್ರೆ ನಿರ್ಮಾಣ ಕಾರ್ಯ ಪೂರ್ಣ ಆಗುವವರೆಗೆ ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳಬೇಡಿ ಎಂದು ತಾಲೂಕ ವೈದ್ಯಾಧಿಕಾರಿಗೆ ಈ ಹಿಂದೆ ತಿಳಿಸಿದ್ದೆ. ಆದರೆ, ತರಾತುರಿಯಲ್ಲಿ ಸಿಎಂ ಸಿದ್ಧರಾಮ ಯ್ಯ ಅವರಿಂದ ಕೊಪ್ಪಳದಲ್ಲಿ ಉದ್ಘಾಟನೆ ಮಾಡಿಸಿದ್ದಾರೆ. ಕಾಮಗಾರಿ ಸರಿಯಾಗಿ ನಿರ್ವಹಿಸದ ಸಂಬಂಧಪಟ್ಟ ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಆಗಬೇಕು ಎಂದು ಸದನದಲ್ಲಿ ಗಮನ ಸೆಳೆಯುತ್ತೇನೆ.

ದೊಡ್ಡನಗೌಡ ಪಾಟೀಲ್, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ
image

ಸೋಲಾರ್‌ಟೂಬ್ ಹಾಳಾಗಿವೆ. ಶುದ್ದ ಕುಡಿವ ನೀರಿನ ಘಟಕದ ಕೋಣೆಯ ಎರಡೂ ಬಾಗಿಲು ಸಂಪೂರ್ಣ ಕಿತ್ತು ಹೋಗಿವೆ. ಆರೋಗ್ಯ ಇಲಾಖೆಯ ಹಿರಿಯ ಅಽಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ಬಾಕಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಜನರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು.

ಶಿವಕುಮಾರ, ಸ್ಥಳೀಯರು
image

ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕೆಲ ಕೊಠಡಿಯಲ್ಲಿ ವಿದ್ಯುತ್ ಲೈಟ್ ಮತ್ತು ಪ್ಯಾನ್ ಇಲ್ಲ. ಇದ್ದರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇಂಥ ಕಟ್ಟಡದಲ್ಲಿ ಆಸ್ಪತ್ರೆ ಆರಂಭವಾಗಿದೆ. ಆದರೆ, ಗುತ್ತಿಗೆ ಹೊಣೆ ಹೊತ್ತಿರುವ ಗುತ್ತಿಗೆದಾರರು ಅಧಿಕೃತವಾಗಿ ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಿಲ್ಲ. ನಿರ್ಮಾಣ ಕಾಮಗಾರಿ ಪೂರ್ಣ ಆಗುವವರೆಗೂ ಜವಾಬ್ದಾರಿ ತೆಗೆದುಕೊಳ್ಳುವದಿಲ್ಲ. ಸಣ್ಣ ಪುಟ್ಟ ಸಮಸ್ಯೆ ಇದ್ದು ಸರಿ ಮಾಡುವಂತೆ ಹೇಳಿದ್ದೇವೆ.

ಡಾ.ಚಂದ್ರಕಲಾ, ತಾಲೂಕು ವೈದ್ಯಾಧಿಕಾರಿ