ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Congress: ಕೈ ನಾಯಕರ ಜಾಣಮೌನ, ಬಣ ರಾಜಕಾರಣ ಉಲ್ಬಣ

ನಾಯಕತ್ವ ಗೊಂದಲಕ್ಕೆ ಪಕ್ಷ ವರಿಷ್ಠರು ಹಿಂದೆಯೇ ತೆರೆ ಎಳೆಯಬೇಕಿತ್ತು. ನಾಯಕತ್ವ ವಿಚಾರ ದಲ್ಲಿ ನಿಜಕ್ಕೂ ಮಾತುಕತೆ ಆಗಿಯೇ ಇಲ್ಲವೇ ಎನ್ನುವುದನ್ನು ಹೇಳಬೇಕಿತ್ತು, ಈ ವಿಚಾರ ಚರ್ಚೆಗೆ ಬಾರದಂತೆ ಮಾಡಬೇಕಿತ್ತು. ಆದರೆ ವರಿಷ್ಠರು ಗರಿಷ್ಠ ನಿರ್ಲಕ್ಷ್ಯ ಮಾಡಿದ್ದ ರಿಂದ ಈಗ ಕನಿಷ್ಠ ಎನ್ನುವ ಸಂದೇಶ ನೀಡಿದೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ನಾಯಕತ್ವ ವಿಚಾರದಲ್ಲಿ ವರಿಷ್ಠರ ಮೌನದ ಆಟ

ಕೇಂದ್ರ ನಾಯಕರ ಉಭಯ ಸಂಕಟ

ರಾಜ್ಯ ಕಾಂಗ್ರೆಸ್‌ನಲ್ಲಿ ಏಕಾಏಕಿ ಎದ್ದಿರುವ ಬಣ ರಾಜಕಾರಣ ಹೈಕಮಾಂಡ್‌ಗೆ ಈಗ ನಿಜಕ್ಕೂ ನಿದ್ದೆಗೆಡಿಸಿದೆ. ಅಷ್ಟೇ ಅಲ್ಲ, ಈ ಬಣ ಬಡಿದಾಟ ಪಕ್ಷದ ಹೈಕಮಾಂಡ್‌ಗೆ ಅಸಹಾಯಕ ಸ್ಥಿತಿಗೆ ನೂಕುತ್ತಿದೆ. ನಾಯಕ್ವತ ವಿಚಾರದಲ್ಲಿ ಪಕ್ಷದ ವರಿಷ್ಠರು ಮಾಡಿದ ಗರಿಷ್ಠ ಪ್ರಮಾದಗಳು ಈಗ ಪಕ್ಷವನ್ನು ರಾಜಕೀಯ ಅಸ್ಪಷ್ಟತೆಗೂ ಹಾಗೂ ಅಸಹಾಯ ಕತೆಗೂ ದೂಡಿದೆ.

ಕಳೆದ ೬ ತಿಂಗಳಿನಿಂದ ಕೆಲವೇ ಶಾಸಕರ ಬಾಯಲ್ಲಿ ಹರಿದಾಡುತ್ತಿದ್ದ ನಾಯಕತ್ವ ಬದಲಾವಣೆ ವಿಚಾರ ಈಗ ಅಕ್ಷರಶಃ ಬೀದಿಗೆ ಬಂದಿದೆ. ಇದೇ ಸ್ಥಿತಿ ಮುಂದುವರಿದರೆ ಬಣ ರಾಜಕಾರಣ ಬೀದಿ ರಂಪಾಟದ ವರೆಗೂ ಹೋದರೆ ಅಚ್ಚರಿ ಇಲ್ಲ ಎನ್ನುತ್ತಾರೆ ಪಕ್ಷದ ಕೆಲವು ನಾಯಕರು.

ನಾಯಕತ್ವ ಗೊಂದಲಕ್ಕೆ ಪಕ್ಷ ವರಿಷ್ಠರು ಹಿಂದೆಯೇ ತೆರೆ ಎಳೆಯಬೇಕಿತ್ತು. ನಾಯಕತ್ವ ವಿಚಾರದಲ್ಲಿ ನಿಜಕ್ಕೂ ಮಾತುಕತೆ ಆಗಿಯೇ ಇಲ್ಲವೇ ಎನ್ನುವುದನ್ನು ಹೇಳಬೇಕಿತ್ತು, ಈ ವಿಚಾರ ಚರ್ಚೆಗೆ ಬಾರದಂತೆ ಮಾಡಬೇಕಿತ್ತು. ಆದರೆ ವರಿಷ್ಠರು ಗರಿಷ್ಠ ನಿರ್ಲಕ್ಷ್ಯ ಮಾಡಿದ್ದ ರಿಂದ ಈಗ ಕನಿಷ್ಠ ಎನ್ನುವ ಸಂದೇಶ ನೀಡಿದೆ.

ಇದನ್ನೂ ಓದಿ: Shishir Hegde Column: ನಾವೇಕೆ ಎಲ್ಲದಕ್ಕೂ ಈ ಪರಿ ಹೆಸರಿಡುತ್ತೇವೆ ?

ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅದರಲ್ಲೂ ಬಿಹಾರ ಚುನಾವಣೆಯ ನಂತರ ಪಕ್ಷದ ಸ್ಥಿತಿ ತೀರಾ ಸಂಕಷ್ಟ ಅನುಭವಿಸುವಂತಾಗಿದ್ದು ಇದೀಗ ರಾಜ್ಯ ಬಣ ರಾಜಕಾರಣ ಹೈಕಮಾಂಡ್‌ನ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಪಕ್ಷದ ವರಿಷ್ಠರು ರಾಜ್ಯ ದಲ್ಲಿ ದೇವರಾಜ ಅರಸು ನಂತರ ಪ್ರಶ್ನಾತೀತ ಹಿಂದುಳಿದ ನಾಯಕ ಎನ್ನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕಾಏಕಿ ಕೈ ಬಿಡುವಂತಿಲ್ಲ.

ಹಾಗಂತ ಪಕ್ಷ ಅಧಿಕಾರಕ್ಕೆ ತರುವಲ್ಲಿ ಹಗಲಿರುಳು ಶ್ರಮಿಸಿ, ಪಕ್ಷಕ್ಕೆ ಸಕಲ ಬಲ ತುಂಬಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೂ ಅಲಕ್ಷ್ಯ ಮಾಡುವಂತಿಲ್ಲ ಎನ್ನು ವಂತಾಗಿದೆ.

ಇವರಿಬ್ಬರನ್ನೂ ಒಪ್ಪಿಸಿ ಅಥವಾ ನಿಯಂತ್ರಿಸಲು ರಾಜ್ಯದಲ್ಲಿ ದಿಢೀರ್ ದಲಿತ ನಾಯಕತ್ವ ಹೇರುವುದು ಕೂಡ ಅಷ್ಟು ಸುಲಭವಲ್ಲ. ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್ ಈಗ ತನ್ನ ಕಮಾಂಡ್ ಬಳಸಿದರೂ ಕಷ್ಟ, ಬಳಸದೇ ಇದ್ದರೂ ಕಷ್ಟ. ಹೀಗಾಗಿ ಬಣ ರಾಜಕಾರಣ ಸ್ಫೋಟಗೊಂಡು ದೆಹಲಿ ತಲುಪಿದರೂ ಪಕ್ಷ ಹೈಕಮಾಂಡ್ ಮೌನ ಮುರಿಯುತ್ತಿಲ್ಲ.

ಹಾಗಂತ ಪಕ್ಷದ ವರಿಷ್ಟರ ಮೌನ ಇದೇ ರೀತಿ ಮುಂದುವರಿದರೆ ಬಣ ರಾಜಕಾರಣ ಇನ್ನೂ ತೀವ್ರಗೊಂಡು ಪಕ್ಷದ ನಿಯಂತ್ರಣ ಇನ್ನೂ ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.

ವರಿಷ್ಠರು ಹೀಗೆ ಬಲಿಷ್ಠರಾಗಬೇಕಿತ್ತು

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಂದರ್ಭದಲ್ಲೇ ನಾಯಕತ್ವದ ಗುಸು ಗುಸು ಕೇಳಿ ಬಂದಿತ್ತು. ಆನಂತರ ಮೂಲೆ ಸೇರಿತ್ತು. ಆದರೆ ಅನೇಕ ಸಚಿವರು, ಶಾಸಕರು ಇತ್ತೀಚೆಗೆ ತಮ್ಮದೇ ರೀತಿಯಲ್ಲಿ ಹೇಳಿಕೆ ನೀಡುತ್ತಾ, ನಾಯಕತ್ವದ ವಿಚಾರವನ್ನು ಬೀದಿಗೆ ತಂದಿದ್ದಾರೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಕೂಡ ಈ ಚರ್ಚೆಗೆ ಆಗಾಗ ಸ್ಪಷ್ಟನೆ ಕೊಡುತ್ತಾ ಬಂದಿದ್ದಾರೆ. ಆದರೆ ವರಿಷ್ಠರು ಮಾತ್ರ ಈ ಬಗ್ಗೆ ಒಮ್ಮೆಯೂ ತುಟಿ ಬಿಚ್ಚಲಿಲ್ಲ. ಅಷ್ಟೇ ಏಕೆ ? ಮಾಜಿ ಸಚಿವ ರಾಜಣ್ಣ ನವೆಂಬರ್ ಕ್ರಾಂತಿ ಯ ಬಗ್ಗೆ ಮಾತನಾಡಿ ರಾಜೀನಾಮೆ ನೀಡಿದಾಗಲೂ ಹೈಕಮಾಂಡ್ ಸ್ಪಷ್ಟನೆ ನೀಡಲಿಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಪರ ಶಾಸಕರು ನಾಯಕತ್ವ ಬದಲಾವಣೆಯಾಗುತ್ತದೆ ಎಂದರೆ ಸಿದ್ದರಾಮಯ್ಯ ಪರ ಶಾಸಕರು, ಸಚಿವರು, ಸಿಎಂ ಕುರ್ಚಿ ಖಾಲಿ ಇಲ್ಲ ಎನ್ನುತ್ತಾ ಬಂದರು. ಅದೇ ಈಗಲೂ ಮುಂದುವರಿಯುತ್ತಾ ಬೀದಿಗೆ ಬಂದಿದೆ. ಈಗ ಮಾಜಿ ಸಂಸದ ಡಿ.ಕೆ.ಸುರೇಶ್ , ಸಿದ್ದರಾಮಯ್ಯ ನುಡಿದಂತೆ ನಡೆತ್ತಾರೆ. ಅವರಿಗೆ ಜವಾಬ್ದಾರಿ ಇದೆ. ನಾಯಕತ್ವ ಬದಲಾವಣೆಯಾಗುತ್ತದೆ ಎಂದರೆ, ಸಿದ್ದರಾಮಯ್ಯ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಪದೇಪದೇ ಒತ್ತು ಹೇಳುತ್ತಿದ್ದಾರೆ. ಆದರೆ ಇದು ಗೊತ್ತಿದ್ದರೂ ಮೌನ ವಾಗಿರುವ ಪಕ್ಷದ ಅಸಹಾಯಕತೆಯನ್ನು ತೋರಿಸುತ್ತಿದ್ದು, ಬಿಹಾರ ಚುನಾವಣೆ ನಂತರ ಕಾಂಗ್ರೆಸ್ ಇನ್ನಷ್ಟು ದುರ್ಬಲವಾಗಿದೆ ಎನ್ನುವ ಸಂದೇಶ ರವಾನೆ ಆಗುತ್ತಿದೆ. ಇಂಥ ಗೊಂದಲಗಳನ್ನು ತಡೆಯಲು ಕಾಂಗ್ರೆಸ್ ವರಿಷ್ಠರು ಆರಂಭದಲ್ಲೇ ನಾಯಕತ್ವ ವಿಚಾರ ಇದೆ ಅಥವಾ ಇಲ್ಲ ಎಂದು ಹೇಳಬೇಕಿತ್ತು. ಈ ಬಗ್ಗೆ ಒಪ್ಪಂದ ಆಗಿದೆ ಅಥವಾ ಇಲ್ಲ ಎನ್ನುವುದನ್ನು ಸ್ಪಷ್ಪ ಪಡಿಸಬೇಕಿತ್ತು. ಆಗ ವರಿಷ್ಠರು ನಿಜಕ್ಕೂ ಬಲಿಷ್ಠರಾಗುತ್ತಿದ್ದರು.

ಹಾಗಾದರೆ ಮುಂದೆ ಏನಾಗಬಹುದು?

ಸದ್ಯ ತಲೆದೋರಿರುವ ಬಣರಾಜಕಾರಣ ತಡೆಯಲು ರಾಜ್ಯಕ್ಕೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಕರೆದು ಮಾತನಾಡುವ ಸಾಧ್ಯತೆ ಇದೆ. ಹಾಗೆಂದ ಮಾತ್ರಕ್ಕೆ ಈ ಸಮಸ್ಯೆ ಇಲ್ಲೇ ಬಗೆಹರಿಯುತ್ತದೆ ಎಂದು ಹೇಳಲಾಗದು. ಈ ಬಗ್ಗೆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಹತ್ವದ ಸಭೆ ನಡೆಯಲಿದ್ದು ಅಲ್ಲಿ ಕೈಗೊಳ್ಳುವ ತೀರ್ಮಾನವಷ್ಟೇ ನಾಯಕತ್ವ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಅಲ್ಲಿಯವರೆಗೂ ಬಣ ರಾಜಕಾರಣ, ಸಚಿವರು, ಶಾಸಕರ ಹೇಳಿಕೆ ಗೊಂದಲ ಮುಂದುವರೆಯುವುದು ಸಹಜ ಎನ್ನುತ್ತಾರೆ ಪಕ್ಷದ ನಾಯಕರು.