ವಿನಾಯಕ ಮಠಪತಿ ಬಾಗಲಕೋಟೆ
ಉಪ ಕಣದಲ್ಲಿ ಸಿಎಂ ಕಮಾಲ್
ಕಾಂಗ್ರೆಸ್ ಕೈ ಹಿಡಿದ ಸಚಿವ ಸತೀಶ್ ಅಹಿಂದ ಅಸ್ತ್ರ
ಒಂದು ಕಡೆ ಆಪ್ತ ಸ್ನೇಹಿತನ ಪುತ್ರ ಚುನಾವಣಾ ಕಣದಲ್ಲಿ ಮತ್ತೊಂದೆಡೆ ತಮ್ಮದೇ ಕುರುಬ ಸಮುದಾಯದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಒತ್ತಡ, ಇವೆರಡನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಸಿಎಂ ಸಿದ್ದರಾಮಯ್ಯನ ತಮ್ಮ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸುವ ಮೂಲಕ ಉಮೇಶ್ ಮೇಟಿ ಅವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜತೆಗೆ ಅಹಿಂದ ವರ್ಗ ತಮ್ಮ ಬೆನ್ನಿಗೆ ಈಗಲೂ ಗಟ್ಟಿಯಾಗಿದೆ ಎಂಬುದನ್ನು ತಮ್ಮ ರಾಜಕೀಯ ಎದುರಾಳಿಗಳಿಗೆ ತಿಳಿಸುವಲ್ಲಿ ಸಿಎಂ ಸಿದ್ದರಾಮಯ್ಯ ಸಫಲರಾಗಿದ್ದಾರೆ. ದಿ.ಎಚ್.ವೈ ಮೇಟಿ ನಿಧನದಿಂದ ತೆರವಾದ ಬಾಗಲಕೋಟೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತ್ತು.
ಆರಂಭದಲ್ಲಿ ಕೈ ಟಿಕೆಟ್ ವಿಚಾರವಾಗಿ ಮೇಟಿ ಕುಟುಂಬದಲ್ಲಿ ಉಂಟಾದ ಗೊಂದಲ ಕಾಂಗ್ರೆಸ್ ಗೆ ಕೊಂಚ ಹಿನ್ನಡೆ ಉಂಟುಮಾಡಿದ್ದರೂ ಕೊನೆಗೆ ಸಿಎಂ ಸಿದ್ದರಾಮಯ್ಯನವರ ಸಂಧಾನದ ಫಲವಾಗಿ ಉಮೇಶ್ ಮೇಟಿಯನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಜತೆಗೆ ಖುದ್ದಾಗಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಮತಕ್ಷೇತ್ರದ ಅಭ್ಯರ್ಥಿ ಪರವಾಗಿ ಹಳ್ಳಿ, ಹಳ್ಳಿಯಲ್ಲೂ ಪ್ರಚಾರ ಮಾಡಿದ್ದರ ಕಾರಣಕ್ಕೆ ಕಾಂಗ್ರೆಸ್ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.
ಇದನ್ನೂ ಓದಿ: Bagalkot By-Election Results 2026: ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಜಯಭೇರಿ
ಇತ್ತ ಬಿಜೆಪಿ ಸಂಘಟಿತ ಪ್ರಯತ್ನ ನಡೆಸಿದರೂ ಆಡಳಿತಾರೂಢ ಪಕ್ಷದ ನಾಯಕರ ವೇಗ ತಡೆಯು ವಲ್ಲಿ ವಿಫಲವಾಗಿದೆ. ರಾಜ್ಯ ಬಿಜೆಪಿ ಘಟಾನುಘಟಿ ನಾಯಕರ ದಂಡು ಬಾಗಲಕೋಟೆ ಯಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದರು. ತಮ್ಮ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸು ವಲ್ಲಿ ಸಫಲವಾಗಿಲ್ಲ. ಜತೆಗೆ ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರದ ಪ್ರಚಾರ ನಡೆಸಿದರೂ ಬಾಗಲಕೋಟೆಯಲ್ಲಿ ಯಾವುದೇ ಪ್ರಯೋಜನವಾಗಿಲ್ಲ.
ಕಲ್ಲು ತೂರಾಟ ಘಟನೆ ಪರಿಣಾಮ ಶೂನ್ಯ: ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣ ಉಪಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುತ್ತದೆ ಎಂಬ ನಿರೀಕ್ಷೆ ಹಲವರಲ್ಲಿತ್ತು. ಇದಕ್ಕೆ ಪೂರಕವೆಂಬತೆ ಘಟನೆ ನಡೆದ ಬಾಗಲಕೋಟೆ ನಗರದ ಪ್ರದೇಶದಲ್ಲಿ ಬಿಜೆಪಿಗೆ ಲೀಟ್ ಸಿಕ್ಕಿದೆ. ಆದರೆ ಬಿಜೆಪಿ ನಾಯಕರು ಅಂದುಕೊಂಡ ಪ್ರಮಾಣದಲ್ಲಿ ಮತದಾರು ಕಮಲದತ್ತ ಒಲವು ತೋರಿಸಿಲ್ಲ. ಜೊತೆಗೆ ಬಾಗಲಕೋಟೆ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಗೆ ಭರ್ಜರಿ ಬೆಂಬಲ ವ್ಯಕ್ತವಾದ ಹಿನ್ನೆಲೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ 21,861 ಮತಗಳ ಬೃಹತ್ ಅಂತರದ ಗೆಲುವು ಸಾಧಿಸಲು ಸಹಕಾರಿಯಾಗಿದೆ.
ಸಿ.ಸಿ.ಪಾಟೀಲ್ ಹೇಳಿಕೆಯಿಂದ ಬಿಜೆಪಿ ಅಭ್ಯರ್ಥಿಗೆ ನಷ್ಟ
ಬಾಗಲಕೋಟೆ ಉಪ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಶಾಸಕ ಸಿ.ಸಿ ಪಾಟೀಲ್ ಅವರು ಕುರುಬ ಹಾಗೂ ಮುಸ್ಲಿಂ ಸಮುದಾಯದ ಕುರಿತು ಅನುಚಿತ ಪದಬಳಕೆ ಮಾಡಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಾಲುಮತ ಮುದಾಯದ ಮುಖಂಡರು ಪ್ರತಿಭಟನೆ ನಡೆಸಿ ಸಿ.ಸಿ. ಪಾಟೀಲ್ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಚುನಾವಣೆ ಸಂದರ್ಭದಲ್ಲಿ ತಮ್ಮ ಹೇಳಿಕೆಯಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದ ಸಿ.ಸಿ ಪಾಟೀಲ್ ಹಾಲುಮತ ಹಾಗೂ ಮುಸ್ಲಿಂ ಸಮುದಾಯದ ಕ್ಷಮೆ ಕೇಳಿದರು. ಆದರೆ ಸಿ.ಸಿ. ಪಾಟೀಲ್ ಹೇಳಿಕೆಯನ್ನು ಪ್ರಚಾರದ ವೇಳೆ ಜನರ ಮುಂದಿಡುವ ಮೂಲಕ ಕಾಂಗ್ರೆಸ್ ನಾಯಕರು ಇದರ ಲಾಭ ಪಡೆಯುವಲ್ಲಿ ಯಶಸ್ವಿಯಾದರು.
ಫಲ ಕೊಟ್ಟ ಗೋಕಾಕ್ ಸಾಹುಕಾರ್ ಅಹಿಂದ ಅಸ್ತ್ರ
ಬಾಗಲಕೋಟೆ ಮತಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಅಹಿಂದ ವರ್ಗದ ಮತದಾರರಿದ್ದು ಭಾಗಶಃ ಇವರನ್ನು ಕಾಂಗ್ರೆಸ್ ನತ್ತ ಸೆಳೆಯುವಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪಾತ್ರ ಬಹುಮುಖ್ಯವಾಗಿದೆ. ಬಾಗಲಕೋಟೆ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿದ್ದ ಸತೀಶ್ ಜಾರಕಿಹೊಳಿ ಬಾಗಲಕೋಟೆ ಮತಕ್ಷೇತ್ರದಲ್ಲಿರುವ ಅಹಿಂದ ವರ್ಗದ ಮುಖಂಡರನ್ನು ಖುzಗಿ ಭೇಟಿ ಮಾಡಿ ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡರು. ಜತೆಗೆ ಎಲ್ಲರಿಗೂ ಸ್ಥಳೀಯ ಮಟ್ಟದಲ್ಲಿ ಜವಾಬ್ದಾರಿ ನೀಡಿ ಪ್ರತಿ ಮತವೂ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ರಣತಂತ್ರ ಹೆಣೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇವರ ಜತೆಗೆ ಸಚಿವರಾದ ಆರ್.ಬಿ.ತಿಮ್ಮಾಪುರ, ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ, ಶಾಸಕ ವಿಜಯಾನಂದ ಕಾಶಪ್ಪನ್ನವರ ಸೇರಿ ಹಲವರು ಈ ಚುನಾವಣೆಯಲ್ಲಿ ಕೆಲಸ ಮಾಡಿದ್ದರ ಪರಿಣಾಮ ಕಾಂಗ್ರೆಸ್ ಇಷ್ಟೊಂದು ಬೃಹತ್ ಅಂತರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.