ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ: ವೇದಿಕೆಗಳ ಬೆಳಕಿನಿಂದ ದೂರ, ಪ್ರಚಾರದ ಹಂಗಿಲ್ಲದೆ, ತಾತ-ತಂದೆಯಿಂದ ಬಳುವಳಿಯಾಗಿ ಬಂದ ಅಪರೂಪದ ಮುಖವೀಣೆ ಕಲೆಯನ್ನು ಎಂಟು ದಶಕಗಳಿಂದ ಎದೆಗಪ್ಪಿ ಕೊಂಡು ಸಾಗುತ್ತಿರುವ ಹಿರಿಯ ಜಾನಪದ ಕಲಾವಿದ ಮುಖವೀಣೆ ಅಂಜನಪ್ಪ ಅವರ ಬದುಕು, ಒಂದು ಕಲಾವಿದನ ಸಾಧನೆಯಷ್ಟೇ ಅಲ್ಲ; ಅಳಿವಿನಂಚಿನಲ್ಲಿರುವ ಜಾನಪದ ಕಲಾ ಪರಂಪರೆಯ ಜೀವಂತ ಇತಿಹಾಸವಾಗಿದೆ.
86ರ ಇಳಿವಯಸ್ಸಿನಲ್ಲೂ ಉಸಿರನ್ನು ಬಿಗಿಹಿಡಿದು ಮುಖವೀಣೆ ನುಡಿಸುವ ಅವರು, “ನನ್ನೊಂದಿಗೆ ಈ ಕಲೆ ನಶಿಸಬಾರದು. ಕಲಿಯಲು ಯಾರಾದರೂ ಮುಂದೆ ಬಂದರೆ ಉಚಿತವಾಗಿ ಕಲಿಸಲು ನಾನು ಸಿದ್ಧ” ಎಂದು ಕಳಕಳಿಯಿಂದ ಹೇಳಿರುವುದು ಜಾನಪದ ಕಲೆಯ ಭವಿಷ್ಯದ ಬಗ್ಗೆ ಚಿಂತನೆ ಹುಟ್ಟಿಸಿದೆ.
ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯ ಕ್ರಮದಲ್ಲಿ ತಮ್ಮ ಕಲಾ ಬದುಕನ್ನು ತೆರೆದಿಟ್ಟ ಅಂಜನಪ್ಪ, ಕೇವಲ ಎರಡನೇ ತರಗತಿಯವರೆಗೆ ಓದಿದ್ದರೂ ಸಂಗೀತವನ್ನೇ ತನ್ನ ಬದುಕಿನ ಪಾಠಶಾಲೆಯನ್ನಾಗಿ ಮಾಡಿಕೊಂಡ ಕಥೆ ಹೇಳಿಕೊಂಡರು.
ಇದನ್ನೂ ಓದಿ: Chikkaballapur News: ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯಿತಿಗಳೊಂದಿಗೆ ಸಾರ್ವಜನಿಕರು ಸಹಕರಿಸಬೇಕು: ಸಿಇಒ ಡಾ.ವೈ.ನವೀನ್ ಭಟ್
“ಒಂಬತ್ತನೇ ವಯಸ್ಸಿನಲ್ಲೇ ತಂದೆಯಿಂದ ಮುಖವೀಣೆ ಕಲಿತೆ. ತಾತ ತಂದೆ ಭಿಕ್ಷಾಟನೆಗೆ ಹೋಗು ವಾಗಲೂ ಮುಖವೀಣೆ ನುಡಿಸುತ್ತಿದ್ದರು. ಅಲ್ಲಿಂದ ಈ ಕಲೆ ನನ್ನ ಬದುಕಿನ ಭಾಗವಾಯಿತು.
ಕಲೆ ಕಲಿಯಬಹುದೇ ವಿನಃ ಕದಿಯಲು ಸಾಧ್ಯವಿಲ್ಲ. ತಾಳ ಮತ್ತು ಶೃತಿ ಸಂಗೀತದ ತಾಯಿ-ತಂದೆ ಯಿದ್ದಂತೆ” ಎಂದು ತಮ್ಮ ಕಲಿಕೆಯ ದಿನಗಳನ್ನು ನೆನಪಿಸಿಕೊಂಡರು.
ಮುಖವೀಣೆ ನುಡಿಸುವುದು ಸಾಮಾನ್ಯ ಸಂಗೀತ ವಾದ್ಯ ನುಡಿಸುವಷ್ಟು ಸುಲಭವಲ್ಲ. ಉಸಿರನ್ನು ಬಿಗಿಯಾಗಿ ಹಿಡಿದು, ಮೂಗಿನ ಮೂಲಕ ವಾದ್ಯ ನುಡಿಸುವ ಈ ಕಲೆಯಲ್ಲಿ ನಿರಂತರ ಅಭ್ಯಾಸ, ಉಸಿರಿನ ನಿಯಂತ್ರಣ ಮತ್ತು ತಾಳ-ಶೃತಿಯ ಜ್ಞಾನ ಅಗತ್ಯ. ಇದೇ ಕಾರಣಕ್ಕೆ ಹೊಸ ತಲೆಮಾರಿ ನವರು ಈ ಕಠಿಣ ಕಲಿಕೆಯತ್ತ ಆಸಕ್ತಿ ತೋರುತ್ತಿಲ್ಲ ಎಂಬುದು ಅಂಜನಪ್ಪ ಅವರ ನೋವು.
ಭಾಷೆ ಗೊತ್ತಿಲ್ಲ; ಸಂಗೀತ ಗೊತ್ತಿತ್ತು!
ತಮ್ಮ ಬದುಕಿನ ಬಹುಪಾಲನ್ನು ಕಲಾ ಪ್ರದರ್ಶನಕ್ಕಾಗಿ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿದ ಅಂಜನಪ್ಪ, ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾ ರಾಷ್ಟ್ರದಲ್ಲೂ ಮುಖವೀಣೆ ನುಡಿಸಿದ್ದಾರೆ.
“14ನೇ ವಯಸ್ಸಿನಲ್ಲಿ ಧರ್ಮಸ್ಥಳದ ಕಡೆಗೆ ದೇಶಾಂತರ ಹೋದೆ. ಅಲ್ಲಿನ ಭಾಷೆ, ವೇಷ ಎಲ್ಲವೂ ಹೊಸದಾಗಿತ್ತು. ಕೊಂಕಣಿ ಕಲಿತೆ. ನಂತರ ಕಾಸರಗೋಡಿಗೆ ಹೋಗಿ ಮಲಯಾಳ ಕಲಿತೆ. ಕಾಶಿ, ರಾಮೇಶ್ವರ ಸುತ್ತಿ ತಮಿಳುನಾಡಿಗೂ ಹೋದೆ. ತಮಿಳು ಕಲಿಯುವುದು ಕಷ್ಟವಾಯಿತು. ಆದರೆ ಹಾಡುಗಳನ್ನು ಕೇಳುತ್ತಾ, ಸಿನಿಮಾ ನೋಡುತ್ತಾ ಭಾಷೆಗಿಂತ ಸಂಗೀತವನ್ನು ಕಲಿತೆ” ಎಂದು ತಮ್ಮ ವಿಶಿಷ್ಟ ಕಲಿಕೆಯ ಪಯಣವನ್ನು ವಿವರಿಸಿದರು.
“ಜನುಮದ ಜೋಡಿ, ಜೋಗಿ ಸಿನಿಮಾಗಳ ಹಾಡುಗಳನ್ನು ಜನ ಬಯಸಿದಾಗ ಸಿನಿಮಾ ನೋಡಿ, ಕೇಳಿ ಮುಖವೀಣೆಯಲ್ಲಿ ನುಡಿಸಿದ್ದೇನೆ. ಯಾವ ಭಾಷೆಯಲ್ಲೂ ಪಾಂಡಿತ್ಯ ಇರಲಿಲ್ಲ. ಆದರೆ ಸಂಗೀತಕ್ಕೆ ಭಾಷೆಯ ಗಡಿ ಇಲ್ಲ. ಲಯ ಮತ್ತು ತಾಳವನ್ನು ಸಂಗೀತವೇ ಕಲಿಸಿತು” ಎಂದರು.
ಕುಟುಂಬದ ಜವಾಬ್ದಾರಿಗಳ ನಡುವೆಯೂ ಕಲೆಯನ್ನು ಬಿಡದ ಅವರು, ಕೆಲವೊಮ್ಮೆ ಎರಡು-ಮೂರು ತಿಂಗಳು ಕುಟುಂಬವನ್ನು ಬಿಟ್ಟು ಕಲಾ ಪ್ರದರ್ಶನಕ್ಕೆ ತೆರಳುತ್ತಿದ್ದ ದಿನಗಳನ್ನು ನೆನಪಿಸಿ ಕೊಂಡರು.
ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂಚರಿಸಿ ಕಲಾ ಪ್ರದರ್ಶನ ನೀಡಿದ್ದಾರೆ. ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನ ಪಡೆದಿದ್ದರೂ, ತಮ್ಮ ಕಲೆಗೆ ಮುಂದಿನ ವಾರಸುದಾರರು ಸಿಗದಿರುವುದೇ ಅವರ ದೊಡ್ಡ ಕೊರಗು.
‘ಯಾರಾದರೂ ಬನ್ನಿ; ನಾನು ಕಲಿಸುತ್ತೇನೆ’
“ನನ್ನೊಂದಿಗೆ ಕಲೆ ನಾಶವಾಗುವುದು ನನಗೂ ಇಷ್ಟವಿಲ್ಲ. ಯಾರಾದರೂ ಕಲಿಯಲು ಮುಂದೆ ಬಂದರೆ ಕಲಿಸಲು ಸಿದ್ಧನಿದ್ದೇನೆ. ಹಾವೇರಿ ಜಾನಪದ ವಿಶ್ವವಿದ್ಯಾಲಯದಲ್ಲಿಯೂ ಕಲಿಸಲು ಪ್ರಯತ್ನ ಮಾಡಿದ್ದೆ. ಒಬ್ಬಿಬ್ಬರು ಆಸಕ್ತಿ ತೋರಿದರು. ಆದರೆ ಮೂಗಿನಿಂದ ಇಟ್ಟು ನುಡಿಸಬೇಕಾದ ವಾದ್ಯವಾದ್ದರಿಂದ ಜೀವಕ್ಕೆ ಅಪಾಯವಾಗಬಹುದು ಎಂಬ ಭಯದಿಂದ ಹಿಂದೆ ಸರಿದರು.
ಹಂಪಿ ವಿಶ್ವವಿದ್ಯಾಲಯದಲ್ಲೂ ಪ್ರಯತ್ನ ನಡೆದಿತ್ತು. ಆದರೆ ಕಲಿಯುವವರು ಮುಂದೆ ಬರಲಿಲ್ಲ” ಎಂದು ಅಂಜನಪ್ಪ ವಿಷಾದಿಸಿದರು.
ಪಂಚವಾದ್ಯ ನುಡಿಸುವ ಸಂದರ್ಭದಲ್ಲಿ ಒಂದು ಮೂಗಿನಿಂದ ನೀರು ತುಂಬಿಕೊಂಡು ಮತ್ತೊಂದು ಮೂಗಿನಿಂದ ಹೊರಹಾಕುತ್ತಾ ಉಸಿರಿನ ನಿಯಂತ್ರಣ ಸಾಧಿಸುವಂತಹ ಕಠಿಣ ತಂತ್ರಗಳೂ ಇವೆ. ಹೀಗಾಗಿ ಮುಖವೀಣೆ ಕಲಿಯಲು ನಿರಂತರ ಸಾಧನೆ ಅಗತ್ಯ ಎಂದು ಅವರು ವಿವರಿಸಿದರು.
“ಮೊಬೈಲ್, ಧಾರಾವಾಹಿಗಳ ನಡುವೆ ಸಾಂಪ್ರದಾಯಿಕ ಕಲೆಗಳು ಮರೆಯಾಗುತ್ತಿವೆ. ಕಲೆ ಉಳಿಯ ಬೇಕಾದರೆ ಯಾರಾದರೂ ಅದನ್ನು ಕಲಿಯಬೇಕು. ನನ್ನ ಕೊನೆಯ ಉಸಿರನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಕಳೆಯುತ್ತೇನೆ. ಆದರೆ ನನ್ನೊಂದಿಗೆ ಮುಖವೀಣೆ ಕಲೆ ಮುಗಿಯಬಾರದು” ಎಂಬ ಅಂಜನಪ್ಪ ಅವರ ಮಾತುಗಳು ಸಭಿಕರನ್ನು ಭಾವುಕರನ್ನಾಗಿಸಿದವು.
‘ಅಂಜನಪ್ಪ ನಿಜವಾದ ಸಾಧಕರು’
ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಮುಖವೀಣೆ ಅಂಜನಪ್ಪ ನಿಜವಾದ ಸಾಧಕರು. ಉಸಿರನ್ನು ಬಿಗಿಹಿಡಿದು ನುಡಿಸಬೇಕಾದ ಮುಖವೀಣೆಯಂತಹ ಕಠಿಣ ವಾದ್ಯವನ್ನು ದಶಕಗಳಿಂದ ಜೀವಂತವಾಗಿಟ್ಟಿರುವ ಅವರು ಶ್ರೇಷ್ಠ ಕಲಾವಿದರು. ಜಾನಪದವನ್ನು ಉಸಿರಾಗಿಸಿಕೊಂಡು ಸಮಾಜದ ಸ್ವಾಸ್ಥ್ಯ ಕಾಪಾಡುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸ ಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಛಲವಾದಿ ಮಾತನಾಡಿ, ಅಂಜನಪ್ಪ ಅವರಂತಹ ಹಿರಿಯ ಕಲಾವಿದರ ಅನುಭವ ಮತ್ತು ಕಲಾ ಪರಂಪರೆಯನ್ನು ದಾಖಲಿಸಿ ಯುವ ಪೀಳಿಗೆಗೆ ಪರಿಚಯಿಸುವುದು ಇಲಾಖೆಯ ಜವಾಬ್ದಾರಿಯಾಗಿದೆ. ಮುಖವೀಣೆ ಕಲಿಯಲು ಆಸಕ್ತರು ಮುಂದೆ ಬಂದರೆ ತರಬೇತಿ ಹಾಗೂ ಅಗತ್ಯ ಸಹಕಾರ ನೀಡಲು ಇಲಾಖೆ ಸಿದ್ಧವಿದೆ ಎಂದರು.
ಸಹಾಯಕ ನಿರ್ದೇಶಕ ರವಿಕುಮಾರ್ ಮಾತನಾಡಿ, ಅಳಿವಿನಂಚಿನಲ್ಲಿರುವ ಮುಖವೀಣೆ ಕಲೆ ಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಸಾಧಕರೊಂದಿಗೆ ಸಂವಾದ ಆಯೋಜಿಸಲಾಗಿದೆ. ಆಸಕ್ತರಿಗೆ ತರಬೇತಿ ನೀಡಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮುಖವೀಣೆ ಅಂಜನಪ್ಪ ಹಾಗೂ ಅವರ ಪತ್ನಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು, ಜಾನಪದ ಪ್ರೇಮಿಗಳು ಹಾಗೂ ಸಾರ್ವಜನಿಕರು ಅಂಜನಪ್ಪ ಅವರೊಂದಿಗೆ ಸಂವಾದ ನಡೆಸಿ, ಅಪರೂಪದ ಕಲೆಯೊಂದರ ಜೀವಂತ ಪಯಣಕ್ಕೆ ಸಾಕ್ಷಿಯಾದರು.
ಸಾವಿರಾರು ಮಂದಿ ಸಾಕ್ಷಿಯಲ್ಲಿ ಮುಖವೀಣೆ ಅಂಜಿನಪ್ಪ ಅವರ ಧರ್ಮಪತ್ನಿ ಲಕ್ಷ್ಮಮ್ಮ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ನೂರಾರು ಮಂದಿ ಕಲಾವಿದರು, ಸಾಹಿತ್ತ್ಯಾಭಿಮಾನಿಗಳು ಸಂಗೀತ ಪಾರಂಗತರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಇದ್ದರು.