ಜಿತೇಂದ್ರ ಕುಂದೇಶ್ವರ ಮಂಗಳೂರು
ಕರಾವಳಿಯನ್ನು ತಲ್ಲಣಗೊಳಿಸಿದ್ದ ಹಿಂದಿನ ಬುರುಡೆ ಪ್ರಕರಣ ಮತ್ತು ಇಂದಿನ ಸೌಜನ್ಯ ಪ್ರಕರಣದ ಮರು ತನಿಖೆಯ ಹೆಜ್ಜೆಗಳನ್ನು ಅಕ್ಕಪಕ್ಕವಿಟ್ಟು ವಿಶ್ಲೇಷಿಸಿದರೆ, ಎರಡೂ ಪ್ರಸಂಗಗಳ ನಡುವಿನ ಕಾರ್ಯ ತಂತ್ರದ ಸಾಮ್ಯತೆಗಳು ಎದ್ದು ಕಾಣುತ್ತಿವೆ. ಅಂದು ಅನಾಮಧೇಯ ಪತ್ರ ಮತ್ತು ಕಟ್ಟುಕತೆಗಳ ಮೂಲಕ ತನಿಖಾ ಅಸ್ತ್ರ ಸೃಷ್ಟಿಸಿದ ಅದೇ ವ್ಯಕ್ತಿಗಳು, ಇಂದು ಮರು ತನಿಖೆಯ ಹೊಸ್ತಿಲಲ್ಲೂ ಸಂಭ್ರಮಿಸುತ್ತಿರುವ ಹಳೆಯ ಕಾರ್ಯ ತಂತ್ರದ ಸಾಮ್ಯತೆ ಕಾಣುತ್ತಿದೆ.
ಎಸ್‌ಐಟಿ ರಚನೆಯಾದಾಗ ಬೀದಿಗಿಳಿದು ವಿಜಯೋತ್ಸವ ಆಚರಿಸಿದ್ದ ಈ ತಂಡ ತನಿಖೆ ಮುಕ್ತಾಯ ಗೊಂಡು ವಾಸ್ತವಗಳು ದಾಖಲಾದಾಗ ಅದೇ ತನಿಖಾ ಬಲೆಯಲ್ಲಿ ಸಿಲುಕಿತ್ತು. ಇದೀಗ ಸುಪ್ರೀಂ ಕೋರ್ಟ್ ನಿರ್ದೇಶನದ ಹೊಸ ತನಿಖೆಯಲ್ಲಿ ಈ ತಂಡದ ಪಾತ್ರವೇನು ಎಂದು ಕಾದು ನೋಡಬೇಕಿದೆ.
ಬುರುಡೆ ಪ್ರಕರಣದಲ್ಲಿ ಸಾಕ್ಷಿ ರಕ್ಷಣಾ ಕಾಯ್ದೆಯ ಹೆಸರಿನಲ್ಲಿ ಚಿನ್ನಯ್ಯ ಎಂಬಾತನಿಗೆ ಮುಖಕ್ಕೆ ಮುಸುಕು ಹಾಕಿ ಮಾಸ್ಕ್ ಮ್ಯಾನ್ ರೂಪದಲ್ಲಿ ತಂದು ನಿಲ್ಲಿಸಲಾಗಿತ್ತು. ಆತನ ಬೆನ್ನಿಗೆ ವಕೀಲರ ಪಡೆ ಹಾಗೂ ಹತ್ತಾರು ಕಾನೂನು ರಕ್ಷಾ ಕವಚಗಳನ್ನು ಕಟ್ಟಿ, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿ, ತನಿಖೆಯ ವೇಳೆ ರಕ್ಷಣಾ ಆಯುಧ ವನ್ನಾಗಿ ಬಳಸಲಾಯಿತು. ಇಂದಿನ ಸೌಜನ್ಯ ಪ್ರಕರಣ ದಲ್ಲೂ ಅದೇ ಮಾದರಿಯ ಕಾನೂನಾತ್ಮಕ ಕವಚಗಳು ತನಿಖಾ ಸಂಸ್ಥೆಗೆ ದೊಡ್ಡ ತೊಡಕಾಗಿ ಪರಿಣಮಿಸಿವೆ.
ಇದನ್ನೂ ಓದಿ: Sowjanya Case: ವೈರುಧ್ಯದ ಹೇಳಿಕೆಗಳು: ಸೌಜನ್ಯ ಪ್ರಕರಣ: 8 ಸುಳ್ಳುಗಳು, ದಿಢೀರ್ ಹುಟ್ಟಿದ 20 ಸಾಕ್ಷಿಗಳು
ಈ ಹಿಂದೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ವಿಚಾರಣೆ ಎದುರಿಸಿ ದೋಷ ಮುಕ್ತಗೊಂಡಿದ್ದು, ಭಾರತೀಯ ಸಂವಿಧಾನದ 20(2)ನೇ ವಿಧಿ ಹಾಗೂ ಸಿಆರ್‌ಪಿಸಿ ಸೆಕ್ಷನ್ 300ರ ಅಡಿ ಆತನಿಗೆ ‘ಡಬಲ್ ಜಿಯೋಪಾರ್ಡಿ’ ರಕ್ಷಣೆ ಲಭ್ಯವಾಗಿದೆ. ಅಂದರೆ, ಕಾನೂನಿನ ಪ್ರಕಾರ ಒಮ್ಮೆ ವಿಚಾರಣೆ ಮುಗಿದು ಖುಲಾಸೆ ಗೊಂಡಿರುವ ವ್ಯಕ್ತಿಯನ್ನು ಅದೇ ಪ್ರಕರಣದಲ್ಲಿ ಮತ್ತೆ ವಿಚಾರಣೆ ಗೊಳಪಡಿಸಲು ಬರುವುದಿಲ್ಲ.
ಈ ತಡೆಗೋಡೆಯೇ ಈಗ ಹೊಸ ಎಸ್‌ಐಟಿ ತನಿಖೆಗೆ ಎದುರಾಗಿರುವ ಅತಿ ಕಠಿಣ ಸವಾಲು. ಅಂದು ಚಿನ್ನಯ್ಯನಿಗೆ ಎಷ್ಟೇ ಕಾನೂನು ರಕ್ಷಣೆಗಳಿದ್ದರೂ ತಿಂಗಳುಗಳ ಕಾಲ ತನಿಖೆ ನಡೆಸಿದ ಎಸ್‌ಐಟಿ, ಕೊನೆಗೆ ಕಾನೂನಿನ ಅಸ್ತ್ರದ ಮೂಲಕವೇ ಆ ರಕ್ಷಾ ಕವಚವನ್ನು ಒಡೆದು ಆತನನ್ನು ಬಂಧಿಸಿತ್ತು. ಆದರೆ ಈ ಬಾರಿ ಪ್ರಾಸಿಕ್ಯೂಷನ್ ಮುಂದಿಟ್ಟ ಆರೋಪಿಯನ್ನು ವಿಚಾರಣೆಗೂ ಒಳಪಡಿಸದೆ ಹೊಸ ಆರೋಪಿಗಳಿಗಾಗಿ ಎಸ್‌ಐಟಿ ಹುಡುಕಾಟ ನಡೆಸಬೇಕಾಗಿದೆ.
ಎರಡೂ ಎಸ್‌ಐಟಿ ಪ್ರಸಂಗ: ಈ ಹಿಂದೆ ಎಸ್‌ಐಟಿ ರಚನೆಯಾದ ಪ್ರಸಂಗ, ತನಿಖೆಯ ಮೇಲೆ ಷರತ್ತುಗಳನ್ನು ಹೇರಿದ ಮಾದರಿ ಮತ್ತು ಈಗಿನ ತನಿಖಾ ತಂಡ ರಚನೆಯಾದ ಸಂದರ್ಭಗಳಲ್ಲಿ ಸ್ಪಷ್ಟ ಏಕರೂಪತೆ ಯಿದೆ. ಅಂದು ಸ್ಥಳೀಯ ಪೊಲೀಸ್ ವ್ಯವಸ್ಥೆಯ ಮೇಲೆ ಅವಿಶ್ವಾಸ ವ್ಯಕ್ತಪಡಿಸಿ, ಹೊರರಾಜ್ಯದ ಪೊಲೀಸರೇ ಬೇಕು, ತಮಗೆ ಬೇಕಾದ ಅಧಿಕಾರಿಗಳೇ ತಂಡದಲ್ಲಿರಬೇಕೆಂದು ಪೂರ್ವ ಷರತ್ತು ವಿಧಿಸಲಾಗಿತ್ತು.
ಇಂದು ಸೌಜನ್ಯ ಮರುತನಿಖೆಯ ಎಸ್ ಐಟಿ ಆದೇಶದಲ್ಲೂ ಷರತ್ತು ಮತ್ತು ಆಕ್ಷೇಪಗಳ ಚೌಕಟ್ಟಿದೆ. ಅಷ್ಟೇ ಅಲ್ಲದೆ, ಈ ಎಸ್‌ಐಟಿ ರಚನೆಗೆ ಸ್ವತಃ ಸಂತ್ರಸ್ತೆಯ ತಾಯಿ ಕುಸುಮಾವತಿ ಅವರೇ ಬಹಿರಂಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ, ಬಟ್ಟೆ ಮೇಲಿನ ಕೂದಲಿನ ಎಳೆ ಇಟ್ಟು ಕೊಂಡು ತನಿಖೆಗೆ ಸೂಚಿಸಿರುವ ಔಚಿತ್ಯವೇ ಅಪರಾಧ ತನಿಖಾ ಶಾಸ್ತ್ರದ ಚೌಕಟ್ಟಿನಲ್ಲಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಂದು ಅತ್ಯಾಚಾರ ಆರೋಪಿಯಾಗಿದ್ದ ಸಂತೋಷ್ ರಾವ್ ಬಟ್ಟೆ ಮೇಲಿದ್ದ ಆರು ಕೂದಲುಗಳ ಪೈಕಿ ಐದು ಕೂದಲುಗಳು ಸ್ವತಃ ಆತನದ್ದೇ ಆಗಿದ್ದು, ಒಂದು ಮಾತ್ರ ಅಪರಿಚಿತ ಕೂದಲು ಎಂಬುದು ದಾಖಲೆಯಲ್ಲಿದೆ.
ನ್ಯಾಯಾಲಯದ ವಿಚಾರಣೆಯ ಅಂತ್ಯದಲ್ಲಿ ಸಂತೋಷ್ ರಾವ್ ದೋಷಮುಕ್ತನಾಗಿ, ಆತನ ಐದು ಕೂದಲುಗಳು ನಿರಪರಾಧಿಯಾಗಿರುವಾಗ, ಅದೇ ಬಟ್ಟೆಯ ಮೇಲಿದ್ದ ಕೇವಲ ಒಂದೇ ಒಂದು ಅಪರಿಚಿತ ಕೂದಲು ಅಪರಾಧಕ್ಕೆ ಸಾಕ್ಷಿಯಾಗಲು ಹೇಗೆ ಸಾಧ್ಯ? ಸೌಜನ್ಯ ಮೃತ ದೇಹದ ಬಟ್ಟೆ ಗಳಲ್ಲಿ ಯಾವುದೇ ಪುರುಷರ ಡಿಎನ್‌ಎ ಪತ್ತೆಯಾಗಿರಲಿಲ್ಲ. ಆದರೆ ಈಗಾಗಲೇ ಖುಲಾಸೆಯಾದ ವ್ಯಕ್ತಿಯ ಬಟ್ಟೆಯನ್ನು ಇಟ್ಟುಕೊಂಡು, ಇಷ್ಟು ವರ್ಷಗಳ ನಂತರ ಅದರ ಮೇಲಿನ ಏಕೈಕ ಕೂದಲಿನ ಮೂಲ ಹುಡುಕಲು ಹೊರಟಿರುವುದು ಎಷ್ಟು ಸರಿ ಎಂಬ ತಾರ್ಕಿಕ ಜಿಜ್ಞಾಸೆ ಎದುರಾಗಿದೆ.
ಮರೆ ಮಾಚುವ ಕಸರತ್ತು: ಅಂದು ಬುರುಡೆ ಪ್ರಕರಣದಲ್ಲಿ ಕಾಲ್ಪನಿಕ ಕತೆಗಳನ್ನು ಮುಂದಿಟ್ಟು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದಂತೆಯೇ, ಇಂದು ಈ ಅಪರಿಚಿತ ಕೂದಲಿನ ತನಿಖೆಯನ್ನು ಮುಂದಿಟ್ಟು ಕೊಂಡು ವಾಸ್ತವಗಳನ್ನು ಮರೆ ಮಾಚುವ ಕಸರತ್ತು ನಡೆಯಲಿದೆಯೇ ಎಂಬ ಅನುಮಾನ ಕಾಡುತ್ತಿದೆ. ಅಂದು ಕಾಲ್ಪನಿಕ ಅನನ್ಯ ಭಟ್, ಅತ್ಯಾಚಾರ-ಕೊಲೆಯ ಸೃಷ್ಟಿಕತೆ ಹಾಗೂ ಸುಜಾತಾ ಭಟ್ ಹೆಣೆದ ಸುಳ್ಳು ಸಾಕ್ಷಿಗಳು ಎಸ್‌ಐಟಿ ತನಿಖೆಯ ಸಾಕ್ಷ್ಯಾಧಾರಗಳ ಎದುರು ಕಳಚಿಬಿದ್ದವು.
ಮಾನವ ತಲೆಬುರುಡೆಯನ್ನು ತಂದು ಕತೆ ಕಟ್ಟಿದ ವಿಠಲ ಗೌಡ, ಮಹೇಶ್ ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತಿ ಟಿ. ಅಂತಿಮವಾಗಿ ಎಸ್‌ಐಟಿ ತನಿಖೆಯ ಅಂತ್ಯದಲ್ಲಿ ಆಪಾದಿತರ ಸ್ಥಾನದಲ್ಲಿ ನಿಲ್ಲಬೇಕಾಯಿತು; ಬಂಧನದ ಭೀತಿಯಿಂದ ತಲೆಮರೆಸಿ ಕೊಳ್ಳುವ ಪರಿಸ್ಥಿತಿಯೂ ನಿರ್ಮಾಣವಾಯಿತು. ಇಂದು ಸೌಜನ್ಯ ಮರು ತನಿಖೆಯ ಆದೇಶ ಬರುತ್ತಿದ್ದಂತೆಯೇ ಅದೇ ವ್ಯಕ್ತಿಗಳು ಮತ್ತೆ ಮುನ್ನೆಲೆಗೆ ಬಂದು ವಿಜಯೋತ್ಸವ ಆಚರಿಸುತ್ತಿದ್ದಾರೆ.
ಒಂದು ಕೂದಲಿನ ತನಿಖೆ
ಅಂದು ಮಾಸ್ಕ್ ಮ್ಯಾನ್ ಚಿನ್ನಯ್ಯನ ಸಾಕ್ಷಿ ರಕ್ಷಣೆ ಮತ್ತು ಪೂರ್ವಷರತ್ತುಗಳ ಆಸರೆ ಪಡೆದು ರೂಪಿಸಿದ ಸುಳ್ಳು ನಿರೂಪಣೆ ಎಸ್‌ಐಟಿ ತನಿಖೆಯ ಎದುರು ಕಳಚಿಕೊಂಡು ಹೋರಾಟ ಗಾರರೇ ಕಟಕಟೆಯಲ್ಲಿ ನಿಲ್ಲಬೇಕಾಯಿತು. ಇಂದು ಕೂಡ ಡಬಲ್ ಜಿಯೋಪಾರ್ಡಿಯ ಸಾಂವಿಧಾನಿಕ ಅಡ್ಡಿ ಹಾಗೂ ದೋಷ ಮುಕ್ತಗೊಂಡ ವ್ಯಕ್ತಿಯ ಬಟ್ಟೆಯ ಮೇಲಿನ ಒಂದು ಕೂದಲಿನ ತನಿಖೆಯನ್ನು ಮುಂದಿಟ್ಟು ಕೊಂಡು ಅದೇ ಮಹೇಶ್ ಶೆಟ್ಟಿ ತಿಮ್ಮರೋಡಿ ಮತ್ತು ತಂಡ ಹುಸಿ ಸಂಭ್ರಮ ಪ್ರದರ್ಶಿಸುತ್ತಿದೆ.
ಆದರೆ, ಕಾನೂನು ಮತ್ತು ತನಿಖಾ ಸಂಸ್ಥೆಗಳು ಕಟ್ಟುಕತೆಗಳ ಮೇಲಲ್ಲ, ಶಾಸನಬದ್ಧ ನಿಯಮ ಗಳು ಮತ್ತು ವಸ್ತುನಿಷ್ಠ ಸಾಕ್ಷ್ಯಾಧಾರಗಳ ಮೇಲೆ ನಿಲ್ಲುತ್ತವೆ. ಹಿಂದಿನ ಪ್ರಕರಣದಲ್ಲಿ ಕಾನೂನಿನ ಬಲೆಗೆ ಬಿದ್ದು ತಲೆ ಮರೆಸಿಕೊಂಡ ಇತಿಹಾಸ ವಿರುವ ಇದೇ ವ್ಯಕ್ತಿಗಳು, ನಾಳೆ ಈ ಮರು ತನಿಖೆಯ ವಸ್ತುನಿಷ್ಠ ವರದಿ ಬಂದಾ ಗಲೂ ಅದೇ ಫಲಿತಾಂಶವನ್ನು ಎದುರಿಸಿ ಕಟಕಟೆಯಲ್ಲಿ ನಿಲ್ಲುವರೇ..? ಎಸ್‌ಐಟಿ ತನಿಖೆಯಾಗುವವರೆಗೆ ಕಾಯಬೇಕಾಗಿದೆ.