ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

International Pineapple Day: ಇಂದು ಅಂತಾರಾಷ್ಟ್ರೀಯ ಅನಾನಸ್ ದಿನ

ಪ್ರತಿವರ್ಷ ಜೂ.27ರಂದು ಆಚರಿಸಲಾಗುವ ‘ಅಂತಾರಾಷ್ಟ್ರೀಯ ಅನಾನಸ್ ದಿನ"ವು ಈ ಜನಪ್ರಿಯ ಹಣ್ಣಿನ ಸಾಂಸ್ಕೃತಿಕ, ಆರ್ಥಿಕ ಮತ್ತು ಪೌಷ್ಟಿಕಾಂಶದ ಮಹತ್ವವನ್ನು ಸಾರುವ ವಿಶೇಷ ದಿನವಾಗಿದೆ. ಕೇವಲ ಸಿಹಿ ಮತ್ತು ಹುಳಿಯ ಸಮತೋಲನ ಹೊಂದಿರುವ ರುಚಿಕರ ಹಣ್ಣು ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಅನಾನಸ್ ಅಪಾರ ಪ್ರಯೋಜನಗಳನ್ನು ಹೊಂದಿದೆ. ಈ ಹಣ್ಣಿನ ಮೂಲ ದಕ್ಷಿಣ ಅಮೆರಿಕಾಗಳಾಗಿದ್ದು, ಅಲ್ಲಿಂದ ಇದು ಜಗತ್ತಿನಾದ್ಯಂತ ಹರಡಿ, ಉಷ್ಣವಲಯದ ದೇಶಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆದಿದೆ.

ವಿನುತಾ ಹೆಗಡೆ ಶಿರಸಿ

ಆಧುನಿಕ ರೈತನ ಅನಾನಸ್ ಕೃಷಿ

ಅಡಕೆ ತೋಟದ ಮಧ್ಯೆ ತೈವಾನ್‌ನ 'ಸ್ನೆಂಕ್ ವೆಂಡಿ' ಅನಾನಸ್

ಪ್ರತಿವರ್ಷ ಜೂ.27ರಂದು ಆಚರಿಸಲಾಗುವ ‘ಅಂತಾರಾಷ್ಟ್ರೀಯ ಅನಾನಸ್ ದಿನ(International Pineapple Day)"ವು ಈ ಜನಪ್ರಿಯ ಹಣ್ಣಿನ ಸಾಂಸ್ಕೃತಿಕ, ಆರ್ಥಿಕ ಮತ್ತು ಪೌಷ್ಟಿಕಾಂಶದ ಮಹತ್ವ ಸಾರುವ ವಿಶೇಷ ದಿನವಾಗಿದೆ. ಕೇವಲ ಸಿಹಿ ಮತ್ತು ಹುಳಿಯ ಸಮತೋಲನ ಹೊಂದಿರುವ ರುಚಿಕರ ಹಣ್ಣು ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಅನಾನಸ್ ಅಪಾರ ಪ್ರಯೋಜನಗಳನ್ನು ಹೊಂದಿದೆ. ಈ ಹಣ್ಣಿನ ಮೂಲ ದಕ್ಷಿಣ ಅಮೆರಿಕಾಗಳಾಗಿದ್ದು, ಅಲ್ಲಿಂದ ಇದು ಜಗತ್ತಿನಾದ್ಯಂತ ಹರಡಿ, ಉಷ್ಣವಲಯದ ದೇಶಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆದಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಭಾಗಿನಕಟ್ಟಾದ ಪ್ರಗತಿಪರ ರೈತ ಸುಬ್ರಹ್ಮಣ್ಯ ಗೌಂವ್ಕರ್ ಅವರು ಬೆಳೆದಿರುವ ಸ್ನೆಂಕ್ ವೆಂಡಿ ತಳಿಯ ಅನಾನಸ್ ಕೃಷಿಯು ಜಿಲ್ಲೆಯ ಕೃಷಿ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ತೈವಾನ್ ದೇಶದ ಈ ವಿಶೇಷ ತಳಿಯು ತನ್ನ ವಿಶಿಷ್ಟ ಗುಣಮಟ್ಟ, ಅತೀ ಸಿಹಿ ಮತ್ತು ಆಕರ್ಷಕ ಬಣ್ಣಕ್ಕಾಗಿ ಪ್ರಸಿದ್ಧವಾಗಿದೆ.

ಸ್ಥಳೀಯ ತಳಿಗಳಿಗೆ ಹೋಲಿಸಿದರೆ ಸ್ನೆಂಕ್ ವೆಂಡಿ ಪೈನಾಪಲ್ ಹೆಚ್ಚು ಮೃದುವಾಗಿದ್ದು, ಇದರ ತಿರುಳು ಸಹ ಗುಲಾಬಿ ಬಣ್ಣದ ಛಾಯೆಯನ್ನು ಹೊಂದಿರುತ್ತದೆ. ಕೇವಲ ರುಚಿಯಷ್ಟೇ ಅಲ್ಲದೆ, ಇದು ಸೇವಿಸಿದಾಗ ನಾಲಿಗೆಗೆ ತುರಿಕೆ ಉಂಟುಮಾಡದಿರುವುದು ಈ ತಳಿಯ ಪ್ರಮುಖ ವೈಶಿಷ್ಟ ವಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಸಾಮಾನ್ಯ ಅನಾನಸ್‌ಗಿಂತ ಹೆಚ್ಚಿನ ಬೇಡಿಕೆ ಮತ್ತು ದುಪ್ಪಟ್ಟು ಬೆಲೆ ಈ ತಳಿಗೆ ಲಭ್ಯವಾಗುತ್ತಿದೆ.

ಇದನ್ನೂ ಓದಿ: 12th International Yoga Day: ಯೋಗವು ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡುವ ಅತ್ಯುತ್ತಮ ಸಾಧನ : ಯೋಗಗುರು ಶ್ರೀಮತಿ ಸುನೀತಾ

ಸುಬ್ರಹ್ಮಣ್ಯ ಗೌಂವ್ಕರ್‌ ಅವರು ಅತೀ ಕಡಿಮೆ ಜಾಗದಲ್ಲಿ ಅತ್ಯಾಧುನಿಕ ಬೇಸಾಯ ಪದ್ಧತಿಯನ್ನು ಅನುಸರಿಸಿ ಈ ಸ್ನೆಂಕ್ ವೆಂಡಿ ಅನಾನಸ್ ಅನ್ನು ಬೆಳೆದಿದ್ದಾರೆ. ಅಡಿಕೆ ತೋಟದ ಮಧ್ಯೆ ಲಭ್ಯ ವಿರುವ ಜಾಗವನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಅವರು, ವೈಜ್ಞಾನಿಕ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಈ ತಳಿಯು ಕಡಿಮೆ ಅವಧಿಯಲ್ಲಿ ಫಸಲಿಗೆ ಬರುವ ಗುಣವನ್ನು ಹೊಂದಿದ್ದು, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಅವರು ಸಾವಯವ ಪದ್ಧತಿಯನ್ನೇ ಹೆಚ್ಚಿನ ಆದ್ಯತೆಯಾಗಿ ಬಳಸುತ್ತಿದ್ದಾರೆ.

ರಾಸಾಯನಿಕಗಳ ಅತಿಯಾದ ಬಳಕೆಯಿಲ್ಲದೆ, ಸಮತೋಲಿತ ಪೋಷಕಾಂಶಗಳ ನಿರ್ವಹಣೆಯ ಮೂಲಕ ಅವರು ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯುತ್ತಿದ್ದಾರೆ. ಸ್ನೆಂಕ್ ವೆಂಡಿ ಪೈನಾಪಲ್ ಕೃಷಿಯಲ್ಲಿ ಸುಬ್ರಹ್ಮಣ್ಯ ಗೌಂವ್ಕರ್ ಅವರ ಈ ಯಶಸ್ಸು ಜಿಲ್ಲೆಯ ಇತರ ರೈತರಿಗೆ ಒಂದು ಮಾದರಿಯಾಗಿದೆ. ಸ್ಥಳೀಯ ಹವಾಮಾನದಲ್ಲಿ ವಿದೇಶಿ ತಳಿಗಳನ್ನು ಯಶಸ್ವಿಯಾಗಿ ಬೆಳೆಯಬಹುದು ಎಂಬುದಕ್ಕೆ ಅವರ ತೋಟವು ಸಾಕ್ಷಿಯಾಗಿದೆ.

ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕಂಡುಕೊಂಡರೆ, ಇಂತಹ ವಿದೇಶಿ ತಳಿಗಳ ಕೃಷಿಯು ರೈತರಿಗೆ ಸಾಂಪ್ರದಾಯಿಕ ಬೆಳೆಗಳಿಗಿಂತ ಹೆಚ್ಚಿನ ಲಾಭ ತಂದುಕೊಡಬಲ್ಲದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕೃಷಿಯಲ್ಲಿ ನಿರಂತರ ಪ್ರಯೋಗಶೀಲತೆ ಮತ್ತು ಆಸಕ್ತಿ ಇದ್ದರೆ, ಹೊಸ ಬಗೆಯ ಬೆಳೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಎಂಬುದಕ್ಕೆ ಗೌಂವ್ಕರ್ಅವರ ಈ ಸ್ನೆಂಕ್ ವೆಂಡಿ ಪೈನಾಪಲ್ ಕೃಷಿಯೇ ಉತ್ತಮ ನಿದರ್ಶನವಾಗಿದೆ.

ಅನಾನಸ್ ತನ್ನಲ್ಲಿರುವ ‘ಬ್ರೊಮೆಲೈನ್’ ಎಂಬ ವಿಶಿಷ್ಟ ಕಿಣ್ವದಿಂದಾಗಿ ಗಮನಾರ್ಹವಾಗಿದೆ. ಇದು ಪ್ರೋಟೀನ್ ಅನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುವುದಲ್ಲದೆ, ದೇಹದಲ್ಲಿನ ಉರಿಯೂತ ವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳ ಆಗರವಾಗಿರುವ ಅನಾನಸ್, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಂತ ಪರಿಣಾಮಕಾರಿಯಾಗಿದೆ. ಚರ್ಮದ ಕಾಂತಿಯನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹ ಇದು ಸಹಕಾರಿ.

ಆರ್ಥಿಕವಾಗಿ ನೋಡುವುದಾದರೆ, ಅನಾನಸ್ ಕೃಷಿಯು ಅನೇಕ ಉಷ್ಣವಲಯದ ದೇಶಗಳ ಬೆನ್ನೆಲುಬಾಗಿದೆ. ಈ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳಾದ ಜ್ಯೂಸ್, ಜಾಮ್, ಕ್ಯಾನ್ಡ್ ಸ್ಲೈಸ್‌ಗಳು ಮತ್ತು ಒಣಗಿದ ಹಣ್ಣುಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಬೇಡಿಕೆಯಿದೆ. ಈ ದಿನವನ್ನು ಆಚರಿಸುವ ಉದ್ದೇಶವು ಅನಾನಸ್ ರೈತರ ಶ್ರಮವನ್ನು ಗುರುತಿಸುವುದು, ಈ ಹಣ್ಣಿನ ಬಳಕೆಯನ್ನು ಪ್ರೋತ್ಸಾಹಿಸುವುದು ಮತ್ತು ಅದರ ಉತ್ಪಾದನೆಯಲ್ಲಿನ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಜಾಗೃತಿ ಮೂಡಿಸುವುದಾಗಿದೆ.

ಆಹಾರ ಸಂಸ್ಕೃತಿಯಲ್ಲಿ ಅನಾನಸ್ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಸಿಹಿತಿಂಡಿಗಳು, ಸಲಾಡ್‌ಗಳು, ಪಾನೀಯಗಳು ಮತ್ತು ಅಡುಗೆಗಳಲ್ಲಿಯೂ ಇದನ್ನು ಬಳಸಲಾಗುತ್ತದೆ. ಆರೋಗ್ಯ ಪ್ರಜ್ಞೆಯುಳ್ಳ ಗ್ರಾಹಕರು ನೈಸರ್ಗಿಕ ಸಿಹಿಕಾರಕವಾಗಿ ಮತ್ತು ಪೌಷ್ಟಿಕ ಲಘು ಆಹಾರವಾಗಿ ಅನಾನಸ್ ಅನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಅಂತಾರಾಷ್ಟ್ರೀಯ ಅನಾನಸ್ ದಿನದ ಅಂಗವಾಗಿ, ಈ ಹಣ್ಣಿನ ಮಹತ್ವವನ್ನು ಸಾರುವ ಕಾರ್ಯಕ್ರಮಗಳು, ಕೃಷಿ ಪ್ರದರ್ಶನಗಳು ಮತ್ತು ವಿಶೇಷ ಅಡುಗೆ ಪಾಕವಿಧಾನಗಳ ಹಂಚಿಕೆಯು ಜಗತ್ತಿನಾದ್ಯಂತ ನಡೆಯುತ್ತದೆ. ಅನಾನಸ್ ಕೇವಲ ರುಚಿಯ ಹಣ್ಣಲ್ಲ, ಅದು ಪ್ರಕೃತಿಯು ಮಾನವನಿಗೆ ನೀಡಿರುವ ಒಂದು ಆರೋಗ್ಯಕರ ಕಾಣಿಕೆಯಾಗಿದೆ.

image

ನಮ್ಮ ಅಡಕೆ ತೋಟದ ಮಧ್ಯದಲ್ಲೇ ಈ ಅನಾನಸ್ ಬೆಳೆದಿದ್ದೇನೆ. ಹೊರದೇಶದಲ್ಲಿಯ ಹಣ್ಣಾದರೂ ಇಲ್ಲಿ ಅಲ್ಲಿಯಂತೆಯೇ ಬೆಳೆದಿದೆ. ನಮ್ಮ ಭಾಗದಲ್ಲಿ ಈ ತರದ ಅನಾನಸ್ ಬೆಳೆಯುವವರ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ನಾನು ಬೆಳೆದ ಈ ಅನಾನಸ್ ಬೇಡಿಕೆ ಹೆಚ್ಚಿಸಿಕೊಂಡಿದ್ದಲ್ಲದೇ ಲಾಭವನ್ನೂ ನೀಡಿದೆ. ಸಾಮಾನ್ಯವಾಗಿ ಕೃಷಿ ಭೂಮಿಯಲ್ಲಿ ಮಿಶ್ರ ಬೇಸಾಯ ಅಗತ್ಯ. ಒಂದು ಬೆಳೆ ಕೈ ಕೊಟ್ಟರೆ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಅನಾನಸ್, ಡ್ರ್ಯಾಗನ್ ಎಲ್ಲವೂ ನನಗೆ ಲಾಭವನ್ನೇ ನೀಡಿದ್ದು, ಈ ಅನಾನಸ್ ನೋಡಲೂ ಆಕರ್ಷಕವಾಗಿದ್ದು ತಿನ್ನಲೂ ಸಹ ರುಚಿಯಾಗಿದೆ.

- ಸುಬ್ರಹ್ಮಣ್ಯ ಗೌಂವ್ಕರ್, ಭಾಗಿನಕಟ್ಟಾ, ಪ್ರಗತಿಪರ ಕೃಷಿಕ