ಕೆ.ಜೆ. ಲೋಕೇಶ್ ಬಾಬು ಮೈಸೂರು
ಮೈಸೂರು ದಸರೆಯ ಸಂಭ್ರಮಕ್ಕೆ ತುಳು(Tulu) ನಾಡಿನ ಮಣ್ಣಿನ ಸೊಗಡು, ಭಾಷೆಯ ಕಂಪು, ಪರಂಪರೆ ಯ ಶ್ರೀಮಂತಿಕೆ ಹಾಗೂ ಗ್ರಾಮೀಣ ಬದುಕಿನ ವೈಭವ ಬೆರೆಯಲಿದೆ. ವಿಜಯದಶಮಿ ಜೋಡುಕೆರೆ ಕಂಬಳದ ಕ್ರೀಡಾ ಸಂಭ್ರಮದ ನಡುವೆಯೇ ಮೈಸೂರಿನ ನೆಲದಲ್ಲಿ ತುಳುನಾಡಿನ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ಸಾಧನೆಯ ಕಿರೀಟ ತೊಡಿಸುವ ವಿಶಿಷ್ಟ ಸಾಂಸ್ಕೃತಿಕ ಲೋಕ ವೊಂದು ಅನಾವರಣಗೊಳ್ಳಲಿದೆ.
ತುಳುನಾಡಿನ ಬದುಕಿನ ಕಥೆ ಹೇಳುವ ಪ್ರಾಚೀನ ವಸ್ತುಗಳು, ಕಾಲದ ಪಯಣಕ್ಕೆ ಸಾಕ್ಷಿಯಾಗಿರುವ ಹಳೆಯ ನಾಣ್ಯಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಛಾಪು ಮೂಡಿಸಿರುವ 25 ಮಂದಿ ಸಾಧಕರಿಗೆ ಗೌರವ ಸನ್ಮಾನ ಹಾಗೂ ಕನ್ನಡತುಳು ಭಾಷೆಗಳ ಸಂಗೀತ ಸಂಭ್ರಮ ಹೀಗೆ ನಾಲ್ಕು ವಿಶಿಷ್ಟ ಆಯಾಮಗಳಲ್ಲಿ ರೂಪುಗೊಂಡಿ ರುವ ಈ ಸಾಂಸ್ಕೃತಿಕ ಹಬ್ಬವು ಅ.18 ಮತ್ತು 19ರಂದು ಕಂಬಳದ ಸಮೀಪದ ಸಾಂಸ್ಕೃತಿಕ ವೇದಿಕೆಯಲ್ಲಿ ಜನಮನ ಸೆಳೆಯಲಿದೆ.
ಪುತ್ತೂರಿನ ಪಜಿರ್ತುಳು ಅಧ್ಯಯನ ಕೇಂದ್ರ ಆಯೋಜಿಸಿರುವ ಈ ಕಾರ್ಯ ಕ್ರಮವು ಕೇವಲ ಸಾಂಸ್ಕೃತಿಕ ಪ್ರದರ್ಶನ ವಲ್ಲ; ಬದಲಾಗಿ, ಒಂದು ನೆಲದ ನೆನಪುಗಳನ್ನು ಮತ್ತೊಂದು ನೆಲದ ಜನರಿಗೆ ಪರಿಚಯಿಸುವ, ತಲೆಮಾರುಗಳ ನಡುವಿನ ಸಾಂಸ್ಕೃತಿಕ ಕೊಂಡಿಯನ್ನು ಗಟ್ಟಿಗೊಳಿಸುವ ವಿಶಿಷ್ಟ ಪ್ರಯತ್ನವಾಗಿದೆ.
ಪರಪ್ಪು ವಸ್ತುಗಳಲ್ಲ, ತುಳುನಾಡಿನ ಬದುಕಿನ ಜೀವಂತ ಇತಿಹಾಸ: ಇಂದು ಆಧುನಿಕತೆಯ ವೇಗದಲ್ಲಿ ಮರೆಯಾಗು ತ್ತಿರುವ ಗ್ರಾಮೀಣ ಬದುಕಿನ ನೆನಪುಗಳಿಗೆ ಮತ್ತೆ ಜೀವ ತುಂಬುವ ಪ್ರಯತ್ನವೇ ಪರಪ್ಪು. ಹಿಂದಿನ ತಲೆಮಾರುಗಳು ದೈನಂದಿನ ಬದುಕಿನಲ್ಲಿ ಬಳಸುತ್ತಿದ್ದ ಪ್ರಾಚೀನ ವಸ್ತುಗಳು, ಕೃಷಿ ಉಪಕರಣ ಗಳು, ಸಾಂಪ್ರದಾಯಿಕ ಗೃಹೋಪಯೋಗಿ ಸಾಮಗ್ರಿಗಳು ಹಾಗೂ ಗ್ರಾಮೀಣ ಜೀವನಶೈಲಿಯ ಅಪರೂಪದ ಪರಿಕರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಇಂದಿಗೂ ಕೆಲವು ಮನೆಗಳಲ್ಲಿ ಬಳಕೆಯಲ್ಲಿರುವ ಸಾಂಪ್ರದಾಯಿಕ ವಸ್ತುಗಳಿಗೂ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಮೈಸೂರಿನ ಪ್ರಾಚೀನ ವಸ್ತುಗಳೂ ಪ್ರದರ್ಶನದ ಭಾಗವಾಗಲಿವೆ.
ಪ್ರತಿಯೊಂದು ವಸ್ತುವಿನ ಹಿಂದೆಯೂ ಒಂದು ಬದುಕಿದೆ: ಪ್ರತಿಯೊಂದು ಪರಿಕರದ ಹಿಂದೆಯೂ ಒಂದು ಕಾಲಘಟ್ಟದ ಕಥೆಯಿದೆ. ಕೃಷಿ ಪದ್ಧತಿ, ಕೌಟುಂಬಿಕ ಜೀವನ, ಗ್ರಾಮೀಣ ಕೌಶಲ, ಸಂಪ್ರದಾಯ ಮತ್ತು ಜನಪದ ಜ್ಞಾನವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಈ ಪ್ರದರ್ಶನವು ಹಿರಿಯರಿಗೆ ನೆನಪುಗಳ ಮರುಕಳಿಕೆಯಾಗಲಿದ್ದು, ಯುವಜನತೆಗೆ ನಮ್ಮ ಪೂರ್ವಜರ ಬದುಕಿನ ಹೊಸ ಕಿಟಕಿಯಾಗಲಿದೆ.
ಪಣವು-ನಾಣ್ಯಗಳ ರೂಪದಲ್ಲಿ ಅನಾವರಣಗೊಳ್ಳುವ ಇತಿಹಾಸದ ಹೆಜ್ಜೆ ಗುರುತು: ನಾಣ್ಯ ವೆಂಬುದು ಕೇವಲ ಹಣ ವಲ್ಲ; ಅದು ಒಂದು ಕಾಲದ ಆರ್ಥಿಕ ವ್ಯವಸ್ಥೆ, ವ್ಯಾಪಾರ ಸಂಬಂಧ, ಆಡಳಿತ ಮತ್ತು ನಾಗರಿಕತೆಯ ಬೆಳವಣಿಗೆಗೆ ಸಾಕ್ಷಿ. ಈ ಐತಿಹಾಸಿಕ ಮಹತ್ವವನ್ನು ಪರಿಚಯಿ ಸುವ ಉದ್ದೇಶದಿಂದ ಪಣವು ಹೆಸರಿನಲ್ಲಿ ಭಾರತದ ವಿವಿಧ ಭಾಗಗಳ ಹಾಗೂ ವಿದೇಶ ಗಳ ಹಳೆಯ ನಾಣ್ಯಗಳ ಸಂಗ್ರಹವನ್ನು ಪ್ರದರ್ಶಿಸಲಾಗುತ್ತದೆ. ವಿವಿಧ ಕಾಲಘಟ್ಟಗಳಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳ ಮೂಲಕ ಹಿಂದಿನ ಕಾಲದ ಆರ್ಥಿಕ ವ್ಯವಹಾರಗಳು, ವ್ಯಾಪಾ ರದ ಸಂಪರ್ಕಗಳು ಮತ್ತು ಇತಿಹಾಸದ ಬೆಳವಣಿಗೆಗಳನ್ನು ಅರಿಯಲು ಈ ಪ್ರದರ್ಶನ ಅವಕಾಶ ಒದಗಿಸಲಿದೆ. ಇತಿಹಾಸಾ ಸಕ್ತರು, ವಿದ್ಯಾರ್ಥಿಗಳು, ಸಂಗ್ರಹ ಕಾರರು ಹಾಗೂ ಅಪರೂಪದ ವಸ್ತುಗಳ ಬಗ್ಗೆ ಕುತೂಹಲ ಹೊಂದಿರುವವರಿಗೆ ಪಣವು ವಿಶೇಷ ಆಕರ್ಷಣೆಯಾಗಲಿದೆ.
ಮೈಸೂರಿನಲ್ಲಿರುವ ತುಳುನಾಡು ಸಾಧಕರಿಗೆ ಗೌರವ: ತಾಯ್ನೆಲ ತುಳುನಾಡು; ಸಾಧನೆಯ ನೆಲೆ ಮೈಸೂರು. ಈ ಎರಡರ ನಡುವಿನ ಭಾವನಾತ್ಮಕ ಸಂಬಂಧಕ್ಕೆ ಗೌರವದ ಮೆರಗು ನೀಡುವ ಕಾರ್ಯ ಕ್ರಮವೇ ತುಳುನಾಡು ಮಾಣಿಕ್ಯ. ತುಳು ನಾಡಿನಿಂದ ಮೈಸೂರಿಗೆ ಬಂದು ನೆಲೆಸಿ, ಶಿಕ್ಷಣ, ಸಾಹಿತ್ಯ, ಕಲೆ, ಸಂಸ್ಕೃತಿ, ಉದ್ಯಮ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ 25 ಮಂದಿಯನ್ನು ಗುರುತಿಸಿ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತಿದೆ. ತಮ್ಮ ಪರಿಶ್ರಮ, ಪ್ರತಿಭೆ, ಸೇವೆ ಹಾಗೂ ಸಾಧನೆಗಳ ಮೂಲಕ ಮೈಸೂರಿನ ಸಾಮಾ ಜಿಕ ಮತ್ತು ಸಾಂಸ್ಕೃತಿಕ ಬದುಕಿಗೆ ಕೊಡುಗೆ ನೀಡಿರುವ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವುದು ಈ ಗೌರವದ ಮುಖ್ಯ ಉದ್ದೇಶ. ಹುಟ್ಟಿದ ನೆಲದ ಸಂಸ್ಕೃತಿಯ ನಂಟನ್ನು ಉಳಿಸಿಕೊಂಡೇ ನೆಲೆಸಿದ ನೆಲದಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಸಾಧಕರಿಗೆ ಸಲ್ಲಿಸುವ ಈ ಗೌರವವು ಕೇವಲ ಸನ್ಮಾನವಲ್ಲ; ತುಳುನಾಡಿನ ಪ್ರತಿಭೆ ಮತ್ತು ಮೈಸೂರಿನ ಮಣ್ಣಿನ ನಡುವಿನ ಆತ್ಮೀಯ ಬಾಂಧವ್ಯದ ಪ್ರತೀಕವೂ ಹೌದು.
ದಸರೆಯ ವೈಭವಕ್ಕೆ ಕಂಬಳದ ಕಳೆ: ಮೈಸೂರಿನಲ್ಲಿ ಎರಡು ದಿನಗಳ ಕಾಲ ಪರಂಪರೆ, ಪ್ರತಿಭೆ ಮತ್ತು ಭಾಷಾ ಸಾಮರಸ್ಯದ ಅಪೂರ್ವ ಸಂಗಮ ಅನಾವರಣಗೊಳ್ಳಲಿದೆ. ಈ ಕಾರ್ಯಕ್ರಮವು ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ವಿಶಾಲ ಜನಸಮುದಾಯಕ್ಕೆ ಪರಿಚಯಿಸು ವುದರ ಜೊತೆಗೆ ತುಳುನಾಡು ಮತ್ತು ಮೈಸೂರು ನಡುವಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾವನಾತ್ಮಕ ಬಾಂಧವ್ಯ ವನ್ನು ಇನ್ನಷ್ಟು ಗಟ್ಟಿಗೊಳಿಸಲಿ.
ಕಂಬಳ ಸಂಸ್ಕೃತಿಯ ಸೊಬಗು
ಕಂಬಳವೆಂದರೆ ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ. ಅದು ತುಳುನಾಡಿನ ಕೃಷಿ ಸಂಸ್ಕೃತಿ, ಮಣ್ಣಿನೊಂದಿಗಿನ ಸಂಬಂಧ, ಸಾಮೂಹಿಕ ಸಹಕಾರ ಮತ್ತು ತಲೆಮಾರುಗಳಿಂದ ಹರಿದು ಬಂದ ಪರಂಪರೆಯ ಪ್ರತಿಬಿಂಬ. ಇಂತಹ ಕಂಬಳದ ಸಂಭ್ರಮದ ನಡುವೆ ಆಯೋಜಿಸಿರುವ ಈ ಸಾಂಸ್ಕೃತಿಕ ವೇದಿಕೆ, ಕ್ರೀಡೆಯಾಚೆಗೂ ತುಳುನಾಡಿನ ಬದುಕಿನ ಆಳವನ್ನು ಪರಿಚಯಿಸಲಿದೆ. ಪರಪ್ಪು ಹಿಂದಿನ ತಲೆಮಾರುಗಳ ಬದುಕನ್ನು ಕಣ್ಣೆದುರು ತೆರೆದಿಟ್ಟರೆ, ಪಣವು ನಾಣ್ಯಗಳ ಮೂಲಕ ಇತಿಹಾಸದ ಹೆಜ್ಜೆಗುರುತುಗಳನ್ನು ತೋರಿಸಲಿದೆ. ತುಳುನಾಡು ಮಾಣಿಕ್ಯ ಸಾಧನೆಯ ಮೌಲ್ಯವನ್ನು ಸಾರಿದರೆ, ಉರಲ್ ಭಾಷಾ ಸಾಮರಸ್ಯದ ರಾಗವನ್ನು ಮೊಳಗಿಸಲಿದೆ.
ನಾಳೆ ಅದ್ಧೂರಿ ಚಾಲನೆ
ಅ.18ರಂದು ಬೆಳಗ್ಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ. ಖಾದರ್, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ್ ರೈ ಹಾಗೂ ಮೈಸೂರು ಕಂಬಳ ಸಮಿತಿ ಸಂಚಾಲಕ ಮುರಳೀಧರ ರೈ, ಮಠನಂತಬೆಟ್ಟು ಭಾಗವಹಿಸ ಲಿದ್ದಾರೆ. ಅಕ್ಟೋಬರ್ 18ರಂದು ಆರಂಭವಾಗುವ ಈ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಅ.19ರ ಸಂಜೆ ಸಂಪನ್ನಗೊಳ್ಳಲಿವೆ.