ದೇಶದಲ್ಲಿ ಕುತೂಹಲಕ್ಕೆ ಕಾರಣವಾಗಿರುವ ಬಿಹಾರ ಚುನಾವಣೆ ಫಲಿತಾಂಶ ನ.14 ರಂದು ಬರಲಿದೆ. ಚುನಾವಣೆಯನ್ನು ವಿಸ್ತೃತವಾಗಿ ವರದಿ ಮಾಡಲು ವಿಶ್ವವಾಣಿಯ ಪರವಾಗಿ ಬಿಹಾರಕ್ಕೆ ತೆರಳಿದ್ದ ರಾಘವ ಶರ್ಮಾ ನಿಡ್ಲೆ ಅವರು ಅಲ್ಲಿನ ತಮ್ಮ ಅನುಭವವನ್ನು ಕ್ರೋಢೀಕರಿಸಿ ದಾಖಲಿಸಿದ್ದಾರೆ. ಹಾಜಿಪುರದ ಬಾಳೆಗೊನೆ ಪ್ರತಿಮೆ ಯಿಂದ ಹಿಡಿದು, ಯಾವುದೇ ಭದ್ರತೆಯಿಲ್ಲದೇ ನೇರವಾಗಿ ತಮ್ಮ ಮತ ಕ್ಷೇತ್ರಕ್ಕೆ ಹೋಗುತ್ತಿದ್ದ ಮಾಜಿ ರಕ್ಷಣಾ ಸಚಿವ, ದಿವಂಗತ ಜಾರ್ಜ್ ಫೆರ್ನಾಂಡಿಸ್, ಹಿಂದೂ-ಮುಸ್ಲಿಮ್ ಸಂಘರ್ಷದ ಚರ್ಚೆ ಯಿಲ್ಲದೇ ನಡೆದ ಪ್ರಚಾರದವರೆಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.
ಅಸ್ವಚ್ಛತೆಯೊಂದಿಗೆ ಬದುಕು
ಬಿಹಾರದ ಯಾವುದೇ ನಗರ, ಪಟ್ಟಣಗಳಲ್ಲಿ ಸ್ವಚ್ಛತೆ ಬಗ್ಗೆ ಜನರಿಗೆ ಮತ್ತು ಆಡಳಿತ ವ್ಯವಸ್ಥೆಗೆ ಕಿಂಚಿತ್ತೂ ಕಾಳಜಿ ಇಲ್ಲ ಅನಿಸುತ್ತದೆ. ಎಂದರಲ್ಲಿ, ಕಸ-ಕಡ್ಡಿ ಪ್ಲಾಸ್ಟಿಕ್‌ಗಳನ್ನು ಎಸೆಯುತ್ತಾರೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಸಂಸತ್ ಕ್ಷೇತ್ರ, ಅವರ ತಂದೆ ರಾಮ್ ವಿಲಾಸ್ ಪಾಸ್ವಾನ್ ೯ ಬಾರಿ ಸಂಸದರಾಗಿದ್ದ ಹಾಜಿಪುರದಲ್ಲಿ ಕೂಡ ಕಸಗಳದ್ದೇ ಸಾಮ್ರಾಜ್ಯ. ತಾನು ಪ್ರಧಾನಿ ಮೋದಿಯ ಹನುಮಾನ್ ಎನ್ನುವ ಚಿರಾಗ್ ಪಾಸ್ವಾನ್‌ಗೆ ಪ್ರಧಾನಿಯವರ ಸ್ವಚ್ಛತೆ ಅಭಿಯಾನದ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ ಅನಿಸುತ್ತದೆ. ಇದು ಪಾಸ್ವಾನ್ ಮಾತ್ರವಲ್ಲ, ಇಲ್ಲಿರುವ ಜನಪ್ರತಿನಿಧಿಗಳೆಲ್ಲರೂ ಸ್ವಚ್ಛತೆ ಬಗ್ಗೆ ತಲೆಕೆಡಿಸಿ ಕೊಂಡಿಲ್ಲ ಅನಿಸುತ್ತದೆ. ಹಾಗೆ ನೋಡಿದರೆ, ಬಿಹಾರದ ಹಳ್ಳಿಗಳೇ ಎಷ್ಟೋ ವಾಸಿ. ನಗರ ವಾಸಿಗಳ ಅಶಿಸ್ತು, ಸಂವೇದನಾಶೂನ್ಯತೆ ಅಲ್ಲಿ ಕಾಣುವುದಿಲ್ಲ.
ಲಾಲೂ ಪೋಸ್ಟರ್ ಯಾಕಿಲ್ಲ?
ಬಿಹಾರ ಚುನಾವಣೆಯುದ್ದಕ್ಕೂ ಆರ್‌ಜೆಡಿ ಪಕ್ಷ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವರ ಒಂದೇ ಒಂದು ಪೋಸ್ಟರ್ ಕಾಣಲಿಲ್ಲ. ಎಡೆ ತೇಜಸ್ವಿ ಯಾದವ್ ಮುಖವೇ ರಾರಾಜಿಸುತ್ತಿತ್ತು. ಮೇವು ಹಗರಣದಲ್ಲಿ ಅಪರಾಧಿಯಾಗಿರುವ ಲಾಲೂ ಅವರ ಪೋಸ್ಟರ್ ಬಳಸಿ ಮತ ಕೇಳಿದರೆ, ಅಪರಾಧಿಗಳ ಹೆಸರು ಬಳಿ ಮತ ಕೇಳುತ್ತಿದ್ದಾರೆ ಎಂದು ಬಿಜೆಪಿ ಪ್ರಚಾರ ಮಾಡುವ ಆತಂಕ ಇತ್ತು ಮತ್ತು ಜಂಗಲ್‌ರಾಜ್ ವಿಚಾರವೂ ಆರ್‌ಜೆಡಿಗೆ ಅತಿ ದೊಡ್ಡ ಬ್ಯಾಗೇಜ್ ಆಗಿರುವುದರಿಂದ ಲಾಲೂ ಪೋಸ್ಟರ್‌ಗಳನ್ನು ಎಲ್ಲೂ ಹಾಕದಿರಲು ಪುತ್ರ ತೇಜಸ್ವಿ ಯಾದವ್ ನಿರ್ಧರಿಸಿದರು. ಹಾಗಿದ್ದರೂ, ಕೊನೆ ಹಂತದ ಒಂದೆರಡು ಪ್ರಚಾರಗಳ ವೇದಿಕೆಯಲ್ಲಿ ಲಾಲೂ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: Bihar Election ground report by Raghav Sharma Nidle: ಪರ್ವತ ಪುರುಷನ ಪರಿವಾರ ಕೈ ಕಡೆ ವಾಲಿದ್ದೇಕೆ ?
ಲಿಕ್ಕರ್ ಹೋಮ್ ಡೆಲಿವರಿ
ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧಗೊಂಡು ಅನೇಕ ವರ್ಷಗಳಾದವು. ಮದ್ಯ ಬೇಕಿದ್ದರೆ ಬೇರೆ ಡಬಲ್ ಹಣ ನೀಡಿ ಅಕ್ರಮ ಮಾರಾಟಗಾರರಿಂದ ಖರೀದಿ ಮಾಡಿ ತರಬೇಕು. ಮದ್ಯ ವಿಲ್ಲದೆ ಬದುಕು ಸಾಧ್ಯವೇ ಇಲ್ಲ ಎಂಬ ಕುಡುಕರು ನಿತ್ಯವೂ ಸಿಎಂ ನಿತೀಶ್ ಕುಮಾರ್‌ಗೆ ಶಾಪ ಹಾಕುತ್ತಿರುತ್ತಾರೆ. ಶರಾಬ್ ಬಂದ್ ಮಾಡಿ ಏನು ಪ್ರಯೋಜನ. ಇಲ್ಲಿ ಲಿಕ್ಕರ್ ಹೋಮ್ ಡೆಲಿವರಿ ಆಗುತ್ತದೆ. ನಿಮಗೆ ಬೇಕಿದ್ದರೆ ಈಗ ತಂದುಕೊಡುತ್ತೇನೆ ಎಂದು ನನಗೂ ಕೆಲವರು ಆಫರ್ ಮಾಡಿದರು. ನಾನು ಬೇಡ ಎಂದು ನಯವಾಗಿ ತಿರಸ್ಕರಿಸಿದೆ. ನಾವು 150 ರು. ಮದ್ಯವನ್ನು 500 ರು. ಕೊಟ್ಟು ಖರೀದಿ ಮಾಡಬೇಕು. ಇಲ್ಲಿ ಮದ್ಯ ನಿಷೇಧ ತೆಗೆಯ ಬೇಕು, ನಮ್ಮ ಕಷ್ಟಕ್ಕೂ ಸ್ಪಂದಿಸಬೇಕು ಎನ್ನುವುದು ಮದ್ಯಪ್ರಿಯರ ಡಿಮ್ಯಾಂಡ್. ಹಾಗಂತ, ಮಹಿಳಾಪರ ನಿಲುವಿನ ಸಿಎಂ ನಿತೀಶ್ ಕುಮಾರ್ ಇದಕ್ಕೆ ತಲೆಕೆಡಿಸಿ ಕೊಂಡಂತಿಲ್ಲ.
ಜೆಡಿಯು ಮತ್ತು ಬಾಹುಬಲಿ
ಬಿಹಾರದಲ್ಲಿ ಬಾಹುಬಲಿಗಳನ್ನು ಮಟ್ಟ ಹಾಕಿದ್ದು ನಾವು ಎನ್ನುವ ಜೆಡಿಯು, ಮುಂಗೇರ್ ಜಿಯ ಮೊಕಾಮ ವಿಧಾನಸಭೆಯಿಂದ ಡೆಡ್ಲಿ ಬಾಹುಬಲಿ ಅನಂತ್ ಕುಮಾರ್ ಸಿಂಗ್‌ಗೆ ಟಿಕೆಟ್ ನೀಡಿದ್ದು ಪಕ್ಷಗಳ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿತ್ತು. ಅನಂತ್ ಕುಮಾರ್ ಸಿಂಗ್ ಅಲ್ಲಿಂದ ೫ ಬಾರಿ ಶಾಸಕ ಮತ್ತು ಆ ಭಾಗದ ಅತಿದೊಡ್ಡ ಬಾಹುಬಲಿ. ಸೋನು-ಮೋನು ಗ್ಯಾಂಗ್ ಜತೆಗಿನ ಗ್ಯಾಂಗ್ ವಾರ್ ನಂತರ ಜೈಲಿನಲ್ಲಿದ್ದ ಅನಂತ್ ಸಿಂಗ್, ಆಗಸ್ಟ್‌ನಲ್ಲಿ ಜಾಮೀನು ಪಡೆದು ಹೊರ ಬಂದಿದ್ದರು. ಟಿಕೆಟ್ ಕೊಟ್ಟ ಸಿಎಂ ನಿತೀಶ್ ಕುಮಾರ್ ಬಿಹಾರದ ಮಹಾನ್ ನಾಯಕ ಎಂದು ಹೊಗಳುತ್ತಾರೆ ಅನಂತ್ ಸಿಂಗ್. ಮೊಕಾಮದಲ್ಲಿ ಅವರ ಪ್ರತಿಸ್ಪರ್ಧಿ ಆರ್‌ಜೆಡಿಯ ವೀಣಾ ದೇವಿ. ವೀಣಾ ಮತ್ತೋರ್ವ ದೊಡ್ಡ ಗ್ಯಾಂಗ್‌ಸ್ಟರ್ ಸೂರಜ್ ಭಾನ್ ಸಿಂಗ್ ಪತ್ನಿ. ಅನಂತ್ ಸಿಂಗ್ -ಸೂರಜ್‌ಭಾನ್ ಪರಸ್ಪರ ವೈರಿಗಳು. ಜನ ಸುರಾಜ್ ಪಾರ್ಟಿ ಅಭ್ಯರ್ಥಿ ಪ್ರಿಯದರ್ಶಿ ಪೀಯೂಷ್ ಪರ ಪ್ರಚಾರ ಮಾಡುತ್ತಿದ್ದ ಡಾನ್, ಗ್ಯಾಂಗ್‌ಸ್ಟರ್ ಧುಲಾರ್‌ಚಂದ್ ಯಾದವ್‌ರನ್ನು ಪ್ರಚಾರದ ಸಂದರ್ಭದ ಗುಂಡಿಕ್ಕಿ ಕೊಲ್ಲ ಲಾಯಿತು.
ಹತ್ಯೆ ಆರೋಪದಡಿಯಲ್ಲಿ ಅನಂತ್ ಸಿಂಗ್ ಜೈಲು ಸೇರಿದ್ದಾರೆ. ಸಿಂಗ್‌ಗೆ ಜೈಲು ಮತ್ತೊಂದು ಮನೆ ಇದ್ದ ಹಾಗೆ. ಅಲ್ಲಿಯೂ ರಾಜಾತಿಥ್ಯ. ಕರ್ಪೂರಿ ಠಾಕೂರ್ ಮತ್ತು ಸಿದ್ದರಾಮಯ್ಯ ಸಿದ್ದರಾಮಯ್ಯರನ್ನು ಆರಂಭದ ದಿನಗಳಲ್ಲಿ ಹತ್ತಿರದಿಂದ ನೋಡಿದ್ದ ಜೆಡಿಯು ನಾಯಕ, ಜಾರ್ಜ್ ಫೆರ್ನಾಂಡಿಸ್, ನಿತೀಶ್ ಕುಮಾರ್ ಆಪ್ತ ಅನಿಲ್ ಪ್ರಸಾದ್ ಹೆಗ್ಡೆ, ರಾಜ್ಯಸಭೆ ಸದಸ್ಯರಾದ ಮೇಲೆ ಸಂಸತ್ತಿನಲ್ಲಿ ಒಮ್ಮೆ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರಂತೆ. ಕರ್ನಾಟಕದಲ್ಲಿ 1983ರ ಚುನಾವಣೆ ವೇಳೆ ಬಂಗಾರಪ್ಪನವರ ಕ್ರಾಂತಿರಂಗ ಮತ್ತು ಸೋಷಿಯಲಿಸ್ಟ್ ನಾಯಕ ಚಂದ್ರಶೇಖರ್ ನೇತೃತ್ವದ ಜನತಾಪಾರ್ಟಿಯ ಮೈತ್ರಿಕೂಟ ವಿತ್ತು.
224 ಸೀಟುಗಳಲ್ಲಿ 223 ಕ್ಷೇತ್ರಗಳಿಂದ ಈ ೨ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದರು. ಉಳಿದ ೧ ಸೀಟಿನಿಂದ ಬಿಹಾರ ಮಾಜಿ ಸಿಎಂ ಕರ್ಪೂರಿ ಠಾಕೂರ್ ನೇತೃತ್ವದ ಲೋಕದಳ (ಕೆ) ಪಕ್ಷದಿಂದ ರಾಜ್ಯದ ಈಗಿನ ಸಿಎಂ ಸಿದ್ದರಾಮಯ್ಯರನ್ನು ನಿಲ್ಲಿಸಲು ತೀರ್ಮಾನವಾಗಿ, ಅಲ್ಲಿಂದ ಸ್ಪರ್ಧೆ ಮಾಡಿದ್ದರು. ಜಾರ್ಜ್ ಫೆರ್ನಾಂಡಿಸ್ -ಸಿದ್ದರಾಮಯ್ಯ ಇಬ್ಬರೂ ಆಗ ಈ ಪಕ್ಷದಲ್ಲಿದ್ದರು ಮತ್ತು ಆಪ್ತರಾಗಿದ್ದರು ಎಂದು ಅನಿಲ್ ಹೆಗ್ಡೆ ಸ್ಮರಿಸಿಕೊಳ್ಳುತ್ತಾರೆ.
ಭಕ್ತಿಯಾರ್‌ಪುರ ಹೆಸರು ಬದಲಾಗುವುದೇ?
ಅಲಿ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಸಿದ್ಧ ಯುವ ಗಾಯಕಿ ಮೈಥಿಲಿ ಠಾಕೂರ್ ತಾನು ಗೆದ್ದರೆ ಅಲಿ ನಗರದ ಹೆಸರನ್ನು ಸೀತಾ ನಗರ ಎಂದು ನಾಮಕರಣ ಮಾಡುವ ಬಗ್ಗೆ ಭರವಸೆ ನೀಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ನಳಂದಾ ಜಿಲ್ಲೆಯ ಸನಿಹಕ್ಕೆ ಭಕ್ತಿಯಾರ್ ಪುರ ಎಂಬ ಊರಿದೆ. ಈ ಊರಿನ ಹೆಸರನ್ನು ಬದಲಿಸಬೇಕು ಎನ್ನುವುದು ಸ್ಥಳೀಯ ಹಿಂದೂಗಳ ಒತ್ತಾಯ. ಪುರಾತನ ನಳಂದಾ ವಿಶ್ವವಿದ್ಯಾಲಯ ನಾಶ ಮಾಡಿದ್ದ ಆಕ್ರಮಣ ಕಾರ ಮುಹಮ್ಮದ್ ಬಿನ್ ಭಕ್ತಿಯಾರ್ ಖಿಲ್ಜಿಯ ಹೆಸರು ಈ ಊರಿಗೆ ಬೇಡ ಎಂಬ ವಾದ ಈ ಚುನಾವಣೆಯಲ್ಲೂ ಕೇಳಿಬಂತು. ಆ ಹೆಸರು ಕೇಳಿದರೆ ಅಂದಿನ ದಬ್ಬಾಳಿಕೆಯ ದಿನಗಳೇ ನೆನಪಾಗುತ್ತವೆ ಎನ್ನುವ ಕೂಗು ಜೋರಾಗಿದೆ.
ಮೂಲತಃ ನಳಂದಾ ಎಂದು ಕರೆಯಲ್ಪಡುತ್ತಿದ್ದ ಈ ಊರಿಗೆ ಭಕ್ತಿಯಾರ್ ಖಿಲ್ಜಿ ನೆನಪಿಗಾಗಿ ಭಕ್ತಿಯಾರ್‌ಪುರ ಎಂದು ಹೆಸರಿಡಲಾಗಿತ್ತು. ಆತ ಕುತುಬ್ ಉದ್-ದಿನ್ ಐಬಕ್‌ನ ಸೇನಾ ನಾಯಕ ಆಗಿದ್ದ. 1203ರಲ್ಲಿ ಬಂಗಾಳವನ್ನು ವಶಪಡಿಸಿಕೊಂಡ ನಂತರ, ನಳಂದಾ ತ್ತು ವಿಕ್ರಮಶಿಲೆಯನ್ನೂ ನಾಶ ಮಾಡಿ, ನಂತರ ಭಕ್ತಿಯಾರ್ ನಗರ ಸ್ಥಾಪನೆ ಮಾಡಿದ್ದ. ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಮರು ಆಯ್ಕೆಯಾದರೆ ಈ ಬಾರಿ ಹೆಸರು ಬದಲಾವಣೆ ಖಚಿತ ಎಂಬ ಭರವಸೆಯಲ್ಲಿದ್ದಾರೆ ಸ್ಥಳೀಯರು.
ಹಿಂದೂ-ಮುಸ್ಲಿಂ ರಾಜಕೀಯ ಇಲ್ಲ
ಬಿಹಾರ ಪಕ್ಕದ ಉತ್ತರಪ್ರದೇಶದಲ್ಲಿ ಹಿಂದೂ- ಮುಸ್ಲಿಂ ರಾಜಕೀಯ ಸಂಘರ್ಷ ಜೋರಾಗಿ ಯೇ ನಡೆಯುತ್ತದೆ. ಆದರೆ, ಪಕ್ಕದ ಬಿಹಾರದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಸಂಘರ್ಷದ ಘಟನೆಗಳು ಕೇಳಿಬರುವುದು ವಿರಳ. ಅಷ್ಟರಮಟ್ಟಿಗೆ ಕಾನೂನು-ಸುವ್ಯವಸ್ಥೆ ಕಾಪಾಡು ವಲ್ಲಿ ಸಿಎಂ ನಿತೀಶ್ ಕುಮಾರ್ ಯಶಸ್ವಿಯಾಗಿದ್ದಾರೆ. ಈ ಕಾರಣಕ್ಕಾಗಿಯೇ ಎನ್‌ಡಿಎ ನಲ್ಲಿದ್ದು ಬಿಜೆಪಿ ಮಿತ್ರತ್ವ ಸಾಧಿಸಿದ ನಿತೀಶರನ್ನು ಬೆಂಬಲಿಸುವ ಮುಸ್ಲಿಂ ಮತದಾರರನ್ನು ಬಿಹಾರದಲ್ಲಿ ಕಾಣಬಹುದು.
ಚುನಾವಣೆ ಪ್ರಚಾರದಲ್ಲೂ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ಅನೇಕರು ಅಕ್ರಮ ನುಸುಳುಕೋರರ ಬಗ್ಗೆ ಮಾತನಾಡಿದರೆಯೇ ವಿನಃ ಹಿಂದೂ ಮತಗಳ ಕ್ರೋಢೀ ಕರಣಕ್ಕಾಗಿ ಅಲ್ಲಿನ ಮುಸ್ಲಿಂ ಧರ್ಮೀಯರನ್ನು ನೇರವಾಗಿ ಗುರಿ ಮಾಡುವ ಆರೋಪ ಮಾಡಲಿಲ್ಲ. ಬಿಹಾರ ಜನರ ರಾಜಕೀಯ ಚಿಂತನೆಗಳೇ ಬೇರೆ, ಉತ್ತರಪ್ರದೇಶ ಹಾಗೂ ಮತ್ತಿತರ ರಾಜ್ಯಗಳ ರಾಜಕೀಯ-ಸಾಮಾಜಿಕ ಸಮೀಕರಣಗಳೇ ಬೇರೆ ಎನ್ನುವುದಕ್ಕೆ ಇದೇ ಸಾಕ್ಷಿ.
ಎಷ್ಟೊಂದು ಖರ್ಚು ಸಾರ್!
ಜನರೊಂದಿಗೆ ನಾನು ಎಲ್ಲಿ ಚುನಾವಣೆ ಚರ್ಚೆಗೆ ಕೂರುತ್ತಿದ್ದೆನೋ ಅಲ್ಲಿ ನಮ್ಮ ಕಾರಿನ ಚಾಲಕ ವಿಜಯ್ ಕುಮಾರ್ ಕೂಡ ಇರುತ್ತಿದ್ದ. ಭೋಜಪುರಿ ಮಿಶ್ರಿತ ಹಿಂದಿ ಅರ್ಥ ಮಾಡಿಸುತ್ತಿದ್ದದ್ದು ನನಗೆ ಅವನೇ. ಅದೇ ರೀತಿ ಮುಜಫರಪುರದ ಹಾರ್ಡ್‌ವೇರ್ ಅಂಗಡಿ ಮಾಲೀಕರಾಗಿದ್ದ ಮದನ್ ಮೋಹನ್ ಸಿಂಗ್ ಜತೆಗೆ ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಬಗ್ಗೆ ಮಾತನಾಡುತ್ತಿದ್ದಾಗ ಚಾಲಕ ಎಲ್ಲವನ್ನೂ ಕೇಳಿಸಿ ಕೊಳ್ಳುತ್ತಿದ್ದ.
ಜಾರ್ಜ್ ಅವರಿಗೆ ಯಾವುದೇ ಸೆಕ್ಯುರಿಟಿ ಗಾರ್ಡ್‌ಗಳೇ ಬೇಕಾಗುತ್ತಿರಲಿಲ್ಲ ಸರ್. ಹೇಳದೆ ಕೇಳದೆಯೇ ಹಳ್ಳಿಗಳೊಳಗೆ ಹೋಗಿಬಿಡುತ್ತಿದ್ದರು. ಆಗ ಇಲ್ಲಿ ಬಾಹುಬಲಿಗಳು (ಗ್ಯಾಂಗ್ ಸ್ಟರ್‌ಗಳು) ಹೆಚ್ಚಿದ್ದರೂ, ಜಾರ್ಜ್‌ಜೀ ಯಾರಿಗೂ ಹೆದರುತ್ತಿರಲಿಲ್ಲ. ರಾತ್ರಿಯೂ ಒಬ್ಬರೇ ಹೋಗುತ್ತಿದ್ದರು ಎಂದರು ಮದನ್ ಮೋಹನ್. ದೂರದ ಗೋಪಾಲ್‌ಗಂಜ್‌ನಲ್ಲಿ ಅ.೩೦ರ ರಾತ್ರಿ ಹೋಟೆಲ್ ಒಂದರಲ್ಲಿ ನಾನು, ಚಾಲಕ ಊಟ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಹೋಮ್ಗಾ ರ್ಡ್‌ಗಳ ತಂಡವೂ ಬಂತು. ೩ ದಿನಗಳ ನಂತರ ಗೃಹ ಸಚಿವ ಅಮಿತ್ ಶಾ ಬರುವ ಹಿನ್ನೆಲೆಯಲ್ಲಿ ಅವರೂ ಬಂದಿದ್ದರು ಹೋಮ್ ಗಾರ್ಡ್‌ಗಳೂ ಬಂದಿದ್ದರು.
ಇದನ್ನು ನೋಡಿ ನಮ್ಮ ಡ್ರೈವರ್, ನೋಡಿ ಮುಜಫರಪುರದಲ್ಲಿ ಜಾರ್ಜ್ ಸಾಬ್‌ಗೆ ಯಾವುದೇ ಸೆಕ್ಯುರಿಟಿ ಬೇಕಾಗುತ್ತಿರಲಿಲ್ಲ. ಅವರು ನಿಜ ಜನನಾಯಕ. ಈ ಅಮಿತ್ ಶಾ ಬರುವುದಕ್ಕೆ ಎಷ್ಟೊಂದು ಸೆಕ್ಯುರಿಟಿ, ಎಷ್ಟೊಂದು ಹಣ ಖರ್ಚು? ಹೀಗೆ ಅಲ್ಲವೇ ನೇತಾ ಗಳಿಗೆ ಹಣ ಪೋಲಾಗುವುದು? ಈ ಹಣವನ್ನೆ ಸೇರಿಸಿ ನಮ್ಮ ಬಿಹಾರದ ಎಷ್ಟೋ ಯುವಕ ರಿಗೆ ಕೆಲಸ ಕೊಡಿಸಬಹುದು.
ಕುಟುಂಬಕ್ಕೊಂದು ಉದ್ಯೋಗ ಕೊಡಿಸುತ್ತೇನೆ ಎಂದು ತೇಜಸ್ವಿ ಯಾದವ್ ಹೇಳುವ ಅಗತ್ಯವೇ ಬರುತ್ತಿರಲಿಲ್ಲ ಎನ್ನುತ್ತಲೇ ಗೊಣಗಿದ. ಅಂದ ಹಾಗೆ ಅವನು ತೇಜಸ್ವಿ ಯಾದವ್ ಕಟ್ಟಾ ಅಭಿಮಾನಿ.
ಮಿಗ್-21 ಮತ್ತು ಜಾರ್ಜ್ ಫೋಟೋ
1997-98ರಲ್ಲಿ ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರು ತಮ್ಮ ಬಟ್ಟೆ ಒಗೆದು ಏಳುವಾಗ ನೀರಿನ ನಲ್ಲಿ ಅವರ ತಲೆಗೆ ಬಡಿದಿತ್ತು. ಇದರಿಂದ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ನಂತರ ಬಾಂಬೇಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. 2004ರಲ್ಲಿ ಕೇಂದ್ರ ರಕ್ಷಣಾ ಸಚಿವರಾಗಿದ್ದಾಗ ಅವರು ಮಿಗ್-21 ಹತ್ತಿದ್ದರು. 98ರಲ್ಲಿ ನಲ್ಲಿ ಬಡಿದಿದ್ದ ಹಿನ್ನೆಲೆಯಲ್ಲಿ ನೀವು ಮಿಗ್ ಏರುವುದು ಒಳ್ಳೆಯದಲ್ಲ ಎಂದು ವೈದ್ಯರು ಸಲಹೆ ನೀಡಿದ್ದರೂ ಜಾರ್ಜ್ ಮಿಗ್-೨೧ ಏರಿದ್ದರು.
ನಂತರದಲ್ಲಿ ಮತ್ತೆ ಅವರ ತಲೆಯಲ್ಲಿ ರಕ್ತಸ್ರಾವ ಉಂಟಾಗಿತ್ತು. ಅನಾರೋಗ್ಯದ ನಡುವೆ ಯೂ 2004ರ ಲೋಕಸಭೆ ಚುನಾವಣೆಯನ್ನು ಅವರು ಗೆದ್ದಿದ್ದರು. ಮಿಗ್-21 ಏರುವ ಮುನ್ನ ತೆಗೆದಿದ್ದ ಫೋಟೋವನ್ನು ಚುನಾವಣೆ ಪ್ರಚಾರಕ್ಕೆ ಬಳಸಲೂ ಜಾರ್ಜ್ ಮತ್ತವರ ಬೆಂಬಲಿಗರು ಮುಂದಾಗಿದ್ದರಂತೆ. ಆದರೆ, ರಕ್ಷಣಾ ಸಚಿವರಾಗಿ ಸೇನೆಯವರ ಸಮವಸ್ತ್ರ ಧರಿಸಿ ಮಿಗ್-21 ಏರುತ್ತಿರುವ ಚಿತ್ರವನ್ನು ಚುನಾವಣೆ ಪ್ರಚಾರಕ್ಕೆ ಬಳಸು ವಂತಿಲ್ಲ ಎಂದು ಚುನಾವಣಾ ಆಯೋಗ ತಡೆದಿತ್ತಂತೆ. ಈ ವಿಷಯವನ್ನು ನನಗೆ ಹೇಳಿದ್ದು ಮುಜಫರಪುರ ದಲ್ಲಿ ಜಾರ್ಜ್ ಅತ್ಯಾಪ್ತರಾಗಿದ್ದ ಕಮಲೇಶ್ವರ್ ಪ್ರಸಾದ್ ಸಿನ್ಹಾ ಅವರ ಪುತ್ರ ಅಂಬರೀಷ್ ಕುಮಾರ್ ಸಿನ್ಹಾ.
ಅಬ್ಬಬ್ಬಾ... ಬಾಳೆಗೊನೆ ಪ್ರತಿಮೆ!
ಚಿರಾಗ್ ಪಾಸ್ವಾನ್ ಸಂಸತ್ ಕ್ಷೇತ್ರವಾದ ಹಾಜಿಪುರ (ವೈಶಾಲಿ ಜಿಲ್ಲೆ) ಬಾಳೆಹಣ್ಣು ಕೃಷಿಗೆ ವಿಶ್ವಪ್ರಸಿದ್ಧಿ ಪಡೆದಿದೆ. ಇಲ್ಲಿನ ಬಾಳೆಹಣ್ಣನ್ನು ದೇಶವ್ಯಾಪಿ ಪೂರೈಸಲಾಗುತ್ತದೆ. ಹಾಜಿಪುರ ನಗರ ಪಟ್ಟಣ ಪ್ರವೇಶ ಮಾಡಿದರೆ ಎಲ್ಲೂ ಬಾಳೆಹಣ್ಣುಗಳೇ ಕಾಣುತ್ತವೆ. ಬಾಳೆಕೃಷಿಯಲ್ಲಿ ನಗರದ ಖ್ಯಾತಿಯನ್ನು ಸಂಕೇತಿಸಲು, ಪ್ರತಿಬಿಂಬಿಸಲೆಂದೇ ಇಲ್ಲಿನ ರಾಮಶೀಷ್ ಚೌಕ್ನಲ್ಲಿ (ಸರ್ಕಲ) ಬಾಳೆಗೊನೆಯ ಅತಿದೊಡ್ಡ ಪ್ರತಿಮೆಯನ್ನೇ ನಿರ್ಮಾಣ ಮಾಡಲಾಗಿದ್ದು, ಕಣ್ಮನ ಸೆಳೆಯುತ್ತದೆ. ಈ ೨೧ ಅಡಿ ಎತ್ತರದ ಪ್ರತಿಮೆ ವಿಶ್ವದ ಅತಿದೊಡ್ಡ ಬಾಳೆ ಗೊಂಚಲಿನ ಪ್ರತಿಮೆಯಾಗಿದೆ.
ಪ್ರವಾಸಿಗರಲ್ಲಿ ಕುತೂಹಲ ಹುಟ್ಟುಹಾಕುವ ಇದು, ನಗರದ ಪ್ರಮುಖ ಸೆಲಿ ತಾಣವಾಗಿ ಬದಲಾಗಿದೆ. ಈ ಪ್ರತಿಮೆ ಬಾಳೆ ಕೃಷಿಯ ಶ್ರೇಷ್ಠತೆಯ ಹೆಗ್ಗುರುತು ಎಂದೇ ಸ್ಥಳೀಯರು ನಂಬಿzರೆ. ಹಾಜಿಪುರ ಚಿನಿಯಾ ಎಂಬ ಪ್ರಭೇದದ ಬಾಳೆಹಣ್ಣು ಇಲ್ಲಿ ಹೆಸರುವಾಸಿ. ಗಾತ್ರದಲ್ಲಿ ಸಣ್ಣದಾದರೂ ಇದು ಸಿಹಿ ಮತ್ತು ಪರಿಮಳಯುಕ್ತ ಬಾಳೆಹಣ್ಣು. ಬಾಳೆಗೊನೆ ಪ್ರತಿಮೆಯನ್ನು ಲಾರ್ಸೆನ್ ಟೂಬ್ರೊ ಲಿಮಿಟೆಡ್ ರು. ೧೫ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಕೆಲ ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿತ್ತು.
ಸದಾಕತ್ ಆಶ್ರಮವೇ ಕಾಂಗ್ರೆಸ್ ಕಚೇರಿ
ಬಿಹಾರ ರಾಜಧಾನಿ ಪಟನಾದಲ್ಲಿರುವ ಸದಾಕತ್ ಆಶ್ರಮ ಐತಿಹಾಸಿಕವಾಗಿ ಮಹತ್ವವುಳ್ಳ ಸ್ಥಳ. ಇದು ಸ್ವಾತಂತ್ರ್ಯ ಹೋರಾಟದ ಕೇಂದ್ರವಾಗಿ ಕಾರ್ಯನಿರ್ವಹಿಸಿತ್ತು. ಇದನ್ನು 1921ರಲ್ಲಿ ಮೌಲಾನಾ ಮಜರುಲ್ ಹಕ್ ಸ್ಥಾಪಿಸಿದರು. ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ತಮ್ಮ ಜೀವನದ ಕೊನೆ ದಿನಗಳನ್ನು ಇಲ್ಲೇ ಕಳೆದಿದ್ದರು ಮತ್ತು ಅವರ ನೆನಪಿಗಾಗಿ ಸ್ಥಾಪಿಸಿರುವ ಸಂಗ್ರಹಾಲಯ ಆಸಕ್ತರ ಗಮನ ಸೆಳೆಯುತ್ತದೆ. ರಾಜ್ಯ ಕಾಂಗ್ರೆಸ್ ಕಚೇರಿ ಕೂಡ ಇರುವುದು ಈ ಆಶ್ರಮದ. ರಾಜೇಂದ್ರ ಪ್ರಸಾದ್ ಅವರು ಆಶ್ರಮದ ಈ ಆಸ್ತಿಯನ್ನು ಕಾಂಗ್ರೆಸ್ ಪಕ್ಷಕ್ಕೆ ದಾನ ಮಾಡಿದ್ದರಿಂದ ನಂತರ ಬಿಹಾರ ಕಾಂಗ್ರೆಸ್ ಕಾರ್ಯ ಚಟುವಟಿಕೆಗಳ ನೆಲೆಯಾಗಿ ಇದು ಬದಲಾಗಿದೆ. ಹಾಗಿದ್ದರೂ, ಐತಿಹಾಸಿಕ ಹೋರಾಟ, ನೆನಪುಗಳ ಗುರುತಾಗಿರುವ ಸದಾಕತ್ ಆಶ್ರಮವನ್ನು ಒಮ್ಮೆ ನೋಡಲೇಬೇಕು.