ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಮಾಜಿ ಸಿಎಂಗೆ ರಾಜ್ಯದಲ್ಲಿ ಯಾವ ಹೊಣೆ?
ಇದು ಡಿಕೆಶಿಗೆ ಮಾತ್ರವಲ್ಲ, ಪಕ್ಷಕ್ಕೇ ದೊಡ್ಡ ಸವಾಲು
ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಕೆಯಾಗಿದೆ. ಹಾಗಾದರೆ ಮುಂದೇನು? ಇದು ಕಾಂಗ್ರೆಸ್‌ನಲ್ಲಿ ನಡೆದ ಬಹುನಿರೀಕ್ಷಿತ ಬೆಳವಣಿಗೆ ನಂತರ ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿರುವ ಸಹಜ ಪ್ರಶ್ನೆ.
ಹೌದು... ಹಿಂದುಳಿದ ವರ್ಗಗಳ ಸದ್ಯದ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದಾಗಿದೆ. ಆದರೆ ಮುಂದೇನು ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ರಾಜೀನಾಮೆ ಸಲ್ಲಿಕೆ ನಂತರ ಅವರೇ ಸೂಚ್ಯವಾದ ಉತ್ತರಗಳನ್ನೂ ನೀಡಿದ್ದಾರೆ. ಅದೆಂದರೆ, ನಾನು ಯಾವುದೇ ಕಾರಣಕ್ಕೂ ರಾಷ್ಟ್ರರಾಜಕಾರಣಕ್ಕೆ ಹೋಗುವುದಿಲ್ಲ. ರಾಜ್ಯ ರಾಜಕಾರಣದ ಮುಂದುವರಿಯುತ್ತೇನೆ. ಅದೂ ಸಕ್ರಿಯವಾಗಿಯೇ ಇರುತ್ತೇನೆ.
ಜತೆಗೆ ಕೋಮುವಾದಿ ಶಕ್ತಿಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತೇನೆ ಎಂದು ತಮ್ಮ ಭವಿಷ್ಯದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಆದರೆ ಅವರು ರಾಜ್ಯ ರಾಜಕಾರಣದಲ್ಲಿ ಹೇಗೆ ಸಕ್ರಿಯವಾಗಿ ಇರುತ್ತಾರೆ. ತಮ್ಮ ಮುಂದಿನ ಹೋರಾಟಗಳನ್ನು ಕಾಂಗ್ರೆಸ್‌ನಲ್ಲಿ ಯಾವ ಸ್ಥಾನ ಮಾನಗಳ ಮೂಲಕ ನಡೆಸುತ್ತಾರೆ ಎನ್ನುವುದನ್ನು ಮಾತ್ರ ಹೇಳದೆ ಅದನ್ನು ಸೂಚ್ಯವಾಗಿ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಕಾರಣ ಅದನ್ನು ಪಕ್ಷ ನಿರ್ಧರಿಸಬೇಕಿದೆ.
ಇದನ್ನೂ ಓದಿ:Siddaramaiah Resigns: ʼʼರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲʼʼ: ಸಿದ್ದರಾಮಯ್ಯ ಸ್ಪಷ್ಟನೆ
ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನಂತರ ಅವರನ್ನು ಪಕ್ಷದಲ್ಲಿ ಹೇಗೆ ನಡೆಸಿಕೊಳ್ಳಬೇಕು ಎನ್ನುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಸದ್ಯ ಗೊಂದಲ ಶುರುವಾಗಿದೆ ಎನ್ನಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಹೈಕಮಾಂಡ್ ಒತ್ತಡವೋ ಅಥವಾ ಹಿಂದೆ ನೀಡಿದ್ದ ವಚನ ಪಾಲನೆಗಾಗಿಯೋ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಕೊಡಿಸಿ ಆಗಿದೆ. ಆದರೆ ಅವರ ಆಡಳಿತ ಅನುಭವ, ಆರ್ಥಿಕ ತಜ್ಞತೆ ಹಾಗೂ ರಾಜಕೀಯ ತಂತ್ರಗಾರಿಕೆಗಳನ್ನು ಹೇಗೆ ಬಳಸಿಕೊಳ್ಳಬೇಕು. ಅದಕ್ಕಾಗಿ ಅವರಿಗೆ ಪಕ್ಷದಲ್ಲಿ ಅಥವಾ ಸರಕಾರದಲ್ಲಿ ಯಾವ ಸ್ಥಾನಮಾನ ನೀಡಬೇಕು ಎನ್ನುವುದು ಪಕ್ಷದ ಹೈಕಮಾಂಡ್‌ಗೆ ಸದ್ಯಕ್ಕೆ ತಲೆನೋವು ತಂದಿದೆ.
ಏಕೆಂದರೆ, ಸಿದ್ದರಾಮಯ್ಯ ರಾಜೀನಾಮೆ ನಂತರ ಸಲ್ಲಿಸಿರುವ ನಂತರದ ಬೇಡಿಕೆಗಳಲ್ಲಿ ತಮಗೆ ರಾಷ್ಟ್ರರಾಜಕಾರಣ ಬೇಡ, ಸಕ್ರಿಯ ರಾಜಕಾರಣ ಬೇಕು. ಕೋಮು ಶಕ್ತಿಗಳ ವಿರುದ್ಧ ಹೋರಾಟ ನಡೆಸಬೇಕು ಎನ್ನುವುದು. ಈ ಬೇಡಿಕೆಗಳನ್ನು ಪಕ್ಷದ ಹೈಕಮಾಂಡ್ ಹೇಗೆ ಈಡೇರಿಸುತ್ತದೆ ಎನ್ನುವ ಪ್ರಶ್ನೆ ಪಕ್ಷದ ರಾಜ್ಯ ನಾಯಕರನ್ನು ಕಾಡುತ್ತಿದೆ.
ಸಿದ್ದು ಸುಮ್ಮನಿರಲಾರರು ಏಕೆ?
ಸುಮಾರು 50 ವರ್ಷಗಳ ರಾಜಕೀಯ ಅನುಭವದ ದೊಡ್ಡ ಬೆಟ್ಟದಂತಿರುವ ಸಿದ್ದರಾಮಯ್ಯ ಅವರು ಸದಾ ಜನರ ಮಧ್ಯೆ ರಾಜಕಾರಣ ಮಾಡಿರುವ ಹಿಂದುಳಿದ ವರ್ಗದ ದೊಡ್ಡ ನಾಯಕ. ಮಾಸ್ ಲೀಡರ್ ಎಂದು ದೇಶದ ಹೆಸರುವಾಸಿಯಾದವರು. ಹೋರಾಟ ಮತ್ತು ವಾಕ್ಸಮರದ ಮೂಲಕ ಎದುರಾಳಿಯನ್ನು ಹಿಮ್ಮೆಟ್ಟಿಸುವವರು. ಸದಾ ಆe, ಆದೇಶಗಳನ್ನು ಮಾಡುವ ನೈಪುಣ್ಯತೆ ಹೊಂದಿರುವವರು, ಆರ್ಥಿಕ ತಜ್ಞರು ಕೂಡ. ರಾಜಕಾರಣದಲ್ಲಿ ಸಕ್ರಿಯವಾಗಿ ಇರಬೇಕೆನ್ನುವುದರಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಹಾದಿ ತುಳಿದವರಂತೆ ಇರುವವರು.
ಇಂಥ ವ್ಯಕ್ತಿತ್ವ ಹಾಗೂ ಸ್ವಭಾವದ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆದಿರುವ ಪಕ್ಷದ ಹೈಕಮಾಂಡ್ ಅವರನ್ನು ಒಂದಷ್ಟು ಕಾಲ ವಿಶ್ರಾಂತಿಯಿಂದ ಇರಿಸಬಹುದು. ಒಂದೊಮ್ಮೆ ಪಕ್ಷದ ವರಿಷ್ಠರು ದೀರ್ಘಕಾಲದವರೆಗೆ ಸಿದ್ದರಾಮಯ್ಯ ಅವರಿಗೆ ಯಾವುದೇ ಜವಾಬ್ದಾರಿಗಳನ್ನು ನೀಡದೆ, ಅವರಿಗೆ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸದೆ ಇದ್ದರೆ, ಸಿದ್ದರಾಮಯ್ಯ ಅವರು ನಿರೀಕ್ಷಿಸಿದ ಗೌರವಗಳು ಪಕ್ಷದೊಳಗೆ ಮತ್ತು ಸರಕಾರದಲ್ಲಿ ಸಿಗದೇ ಇದ್ದರೆ ಅವರಲ್ಲಿ ಅಸಮಾಧಾನ, ಅತೃಪ್ತಿ, ಅಸಹಕಾರದಂತಹ ಶಬ್ದಗಳು ಬಳಕೆಯಾದರೂ ಅಚ್ಚರಿ ಇಲ್ಲ ಎನ್ನುವುದು ಅವರ ಆಪ್ತರ ಆತಂಕದ ಚಿಂತನೆ. ಏಕೆಂದರೆ ರಾಜೀನಾಮೆಗೂ ಮುನ್ನ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಸ್ವೀಕರಿಸಿದ್ದಾರೆ.
ಅದರಲ್ಲೂ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚು ಎಂದು ಸೋರಿಕೆ ಮಾಡಲಾಗಿದೆ. ಜತೆಗೆ ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಕೂಡ ಇನ್ನೂ ಜಾರಿಯಾಗಿಲ್ಲ. ಇಂಥ ಅನೇಕ ವಿಚಾರಗಳು ಎಂದಾ ದರೂ, ಹೇಗಾದರೂ ಮುನ್ನೆಲೆಗೆ ಅಸ್ತ್ರಗಳಾಗಬಹುದು ಎನ್ನುವ ಚರ್ಚೆಗಳೂ ಇವೆ. ಹೀಗಾಗಿ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದಷ್ಟು ಸುಲಭವಾಗಿ ಅವರನ್ನು ರಾಜ್ಯ ರಾಜಕಾರಣದಲ್ಲಿ ಮೂಲೆ ಸೇರಿಸಲಾಗದು.
ಸಿದ್ದರಾಮಯ್ಯ ಅವರ ಸಮುದಾಯಿಕ ಶಕ್ತಿ ಹಾಗೂ ಪ್ರಭಾವದ ವ್ಯಾಪಕತೆ ಕರ್ನಾಟಕ ಉದ್ದಗಲ ಕ್ಕೂ ಇದೆ. ಚುನಾವಣೆಗಳು ಎದುರಾಗುತ್ತಿರುವ ಸಂದರ್ಭದಲ್ಲಿ ಅವರನ್ನು ಹಗುರವಾಗಿ ಪರಿಗಣಿಸುವುದಕ್ಕೂ ಸಾಧ್ಯವಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಪಕ್ಷ ಹೇಗೆ ಬಳಸಿಕೊಳ್ಳುತ್ತದೆ ಎನ್ನುವ ಪ್ರಶ್ನೆ ಬರೀ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಮಾತ್ರವಲ್ಲ, ಇಡೀ ಕಾಂಗ್ರೆಸ್ ವಲಯದ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ.
![]()
ಸಿದ್ದರಾಮಯ್ಯ ಅವರಿಗೆ ಯಾವುದಾದರೂ ಜವಾಬ್ದಾರಿ ಸ್ಥಾನ ನೀಡದಿದ್ದರೆ ಕಷ್ಟ. ಅವರು ಸುಮ್ಮನೆ ಕುಳಿತುಕೊಳ್ಳುವವರಲ್ಲ. ಹಿಂದುಳಿದ ವರ್ಗದ ಆಯೋಗದ ವರದಿಯನ್ನು ಕೊನೆಯ ಸಂದರ್ಭದಲ್ಲಿ ಸ್ವೀಕರಿಸಿದ್ದಾರೆ ಎಂದರೆ ಸಂಘರ್ಷ ಜೀವಂತ ಎಂದೇ ಅರ್ಥ. ಹೀಗಾಗಿ ಸದ್ಯ ಪಕ್ಷಕ್ಕೂ ದೊಡ್ಡ ಸವಾಲಿದೆ.
- ಬಿ.ಆರ್.ಪಾಟೀಲ, ಕಾಂಗ್ರೆಸ್ ಹಿರಿಯ ಶಾಸಕ