ರಂಜಿತ್ ಎಚ್.ಅಶ್ವತ್ಥ, ಬೆಂಗಳೂರು
ಬಹುತೇಕ ಮನುಷ್ಯನ ಪ್ರಚೋದನೆಯಿಂದಲೇ ಹುಲಿಗಳ ದಾಳಿ
ಸಫಾರಿ ಭಾಗದಲ್ಲಿ ಹುಲಿಗಳು ದಾಳಿ ಮಾಡಲ್ಲ
ಹುಲಿಯಷ್ಟೇ ಅಲ್ಲದೇ ಬಹುತೇಕ ಕಾಡುಪ್ರಾಣಿಗಳು ಮನುಷ್ಯ ಎನ್ನುವ ‘ಪ್ರಾಣಿ’ಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತವೆ. ಆದರೆ ಮನುಷ್ಯನೇ ಪ್ರಚೋದಿಸಿ, ಅವುಗಳ ಹೊಡೆತಕ್ಕೆ ಬಲಿಪಶುವಾಗುತ್ತಾನೆ. ಆದರೂ, ಮಾನವ ತನ್ನ ತಪ್ಪನ್ನು ಒಪ್ಪಿಕೊಳ್ಳದೇ ವನ್ಯಜೀವಿಗಳನ್ನು ‘ಶಿಕ್ಷಿ ಸಲು’ ಮುಂದಾಗುತ್ತಾನೆ. ಸದ್ಯ ಸಫಾರಿ ವಿಷಯದಲ್ಲಿ ಹುಲಿಗಳ ತಪ್ಪಿಲ್ಲದಿದ್ದರೂ, ಹುಲಿಗಳ ದಾಳಿಯನ್ನು ತೋರಿಸಿ ಅರಣ್ಯ ಇಲಾಖೆ ಇದೇ ಅವೈಜ್ಞಾನಿಕ ತೀರ್ಮಾನ ಕೈಗೊಂಡಿದೆ.
ಬಂಡೀಪುರ, ನಾಗರಹೊಳೆ ಭಾಗದಲ್ಲಾಗಿರುವ ಹುಲಿ ದಾಳಿಗೂ, ಸಫಾರಿಗೂ ಸಂಬಂಧವಿಲ್ಲ ದಿದ್ದರೂ ಎರಡಕ್ಕೂ ಸಂಬಂಧ ಕಲ್ಪಿಸಿ ಅರಣ್ಯ ಇಲಾಖೆ ಸಫಾರಿಯನ್ನು ಸ್ಥಗಿತಗೊಳಿಸಿದೆ. ಆದರೆ ಈ ಭಾಗದಲ್ಲಿ ಹುಲಿ ದಾಳಿಯ ಹಿಂದಿನ ಉದ್ದೇಶವೇನು? ಮನುಷ್ಯರಿಂದ ಹುಲಿಗಳಿಗೆ ಆಗಿರುವ ತೊಂದರೆ ಏನು ಎನ್ನುವ ಬಗ್ಗೆ ಅರಣ್ಯ ಇಲಾಖೆ ಪರಿಶೀಲಿಸುತ್ತಿಲ್ಲ.
ಒಂದು ವೇಳೆ ವೈಜ್ಞಾನಿಕ ಕಾರಣ ಹುಡುಕಿ ನೋಡಿದ್ದರೆ, ಸಫಾರಿಯನ್ನು ನಿರ್ಬಂಧಿಸುವ ಬದಲು ಹುಲಿಗಳನ್ನು ಪ್ರಚೋದಿಸುವ ಜನರನ್ನು ನಿಯಂತ್ರಿಸುವ ಕೆಲಸವನ್ನು ಮಾಡುತ್ತಿತ್ತು.
ಇದನ್ನೂ ಓದಿ: Safari Ban: ಇರುವುದೇ ಸ್ವಲ್ಪ ಜಾಗ, ಅಲ್ಲೂ ಸಫಾರಿ ನಿರ್ಬಂಧ !
ಸಫಾರಿಯಿಂದ 40 ಕಿಮೀ ದೂರದಲ್ಲಾಗಿರುವ ದಾಳಿಯನ್ನು ತೋರಿಸಿ ಸಫಾರಿ ನಿರ್ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ದಾಳಿಯಾಗುವ ಮೊದಲು ಕಾಡಿನಿಂದ ಹೊರಬಂದಿದ್ದ ಹುಲಿಗಳು ದಾಳಿ ಮಾಡಲು ಪ್ರಚೋದಿಸಿದ್ದು ಯಾರು, ಏಕೆ ಎನ್ನುವ ಬಗ್ಗೆ ಮೊದಲು ಪರಿಶೀಲಿಸಬೇಕು.
ಮರಿಗಳ ಮೇಲೆ ಕಲ್ಲು ಎಸೆಯಲು, ಮುಟ್ಟಲು ಹೋದರೆ ಬೀದಿನಾಯಿಗಳೇ ಪ್ರಚೋದನೆಗೊಂಡು, ಪ್ರತಿಕ್ರಿಯಿಸುತ್ತವೆ. ಹೀಗಿರುವಾಗ ತಾಯಿ ಹುಲಿಯ ಆಸುಪಾಸಿನಲ್ಲಿರುವ ಮರಿಗಳಿಗೆ ಕೀಟಲೆ ಮಾಡಲು ಹೋದರೆ ಅದನ್ನು ಗಮನಿಸಿಯೂ ಹುಲಿಗಳು ಸುಮ್ಮನೇ ಇರಲು ಸಾಧ್ಯವೇ? ಆದರೆ ಈ ಅಂಶವನ್ನು ಅರಣ್ಯ ಇಲಾಖೆ ಪರಿಶೀಲಿಸದೆ, ಅವೈಜ್ಞಾನಿಕವಾಗಿ ಸಫಾರಿಯನ್ನು ನಿರ್ಬಂಧಿಸಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.
ಹೆಡಿವಾಳ ಭಾಗದಲ್ಲಿ ಆಗುತ್ತಿರುವ ಹುಲಿ ದಾಳಿಯಲ್ಲಿ ಬಹುತೇಕ ದಾಳಿಗಳು ಮಾನವ ಪ್ರಚೋದಿತ ದಾಳಿಗಳಾಗಿವೆ. ಮೊದಲ ಪ್ರಕರಣದಲ್ಲಿ ಮರದ ಮೇಲೆ ಕೂತು ಹುಲಿ ಮರಿಗಳ ಮೇಲೆ ಕಲ್ಲು ಎಸೆದ ಕಾರಣಕ್ಕೆ ತಾಯಿ ಹುಲಿ ದಾಳಿ ನಡೆಸಿದ್ದರೆ, ಇನ್ನೊಂದು ಪ್ರಕರಣದಲ್ಲಿ ಕಾಡಂಚಿನ ಜಮೀನಿನಲ್ಲಿ ತಾಯಿ ಹುಲಿ ಹಾಗೂ ಮರಿಗಳು ಹೋಗುತ್ತಿರುವಾಗ ವ್ಯಕ್ತಿ ಮರಿ ಹುಲಿಯನ್ನು ಮುಟ್ಟಲು ಪ್ರಯತ್ನಿಸಿದ್ದಾರೆ. ಈ ಸಮಯದಲ್ಲಿ ಸಹಜವಾಗಿಯೇ ತಾಯಿ ಹುಲಿ ತನ್ನ ಮರಿಗಳನ್ನು ರಕ್ಷಿಸಿ ಕೊಳ್ಳಲು ದಾಳಿ ನಡೆಸಿದೆ.
ಮತ್ತೊಂದು ಪ್ರಕರಣದಲ್ಲಿ ಕಾಡಿನೊಳಗೆ ಮೇಯಲು ಬಿಟ್ಟಿದ್ದ ದನದ ಮೇಲೆ ಹುಲಿ ದಾಳಿ ಮಾಡಿದ ಸಮಯದಲ್ಲಿ ದನವನ್ನು ರಕ್ಷಿಸಲು ವ್ಯಕ್ತಿ ಮುಂದಾಗಿದ್ದಾನೆ. ಆಗ ಹುಲಿ ಮನುಷ್ಯನ ಮೇಲೆ ದಾಳಿ ನಡೆಸಿ ಸಾಯಿಸಿದೆ. ಇವಿಷ್ಟೇ ಅಲ್ಲದೇ ಹುಲಿಯಷ್ಟೇ ಅಲ್ಲದೇ ಬಹುತೇಕ ವನ್ಯಜೀವಿ ಗಳ ದಾಳಿ ಪ್ರಕರಣದಲ್ಲಿ, ಮನುಷ್ಯನ ಪ್ರಚೋದನೆಯಿಂದ ದಾಳಿಗಳಾಗಿರುತ್ತವೆಯೇ ವಿನಃ ಸುಖಾ ಸುಮ್ಮನೆ ಅವುಗಳು ದಾಳಿ ನಡೆಸಿಲ್ಲ.
ಉದಾಹರಣೆಗೆ ಜಮೀನಿನಲ್ಲಿ ಹುಲಿಯಿದೆ ಎಂದರೆ ಫೊಟೋ ತೆಗೆಯಲು ಗುಂಪುಗೂಡುವುದು, ಕಾಡಾನೆ ದಾಳಿಯ ವೇಳೆ ಕೋಲಿನಲ್ಲಿ ಹೊಡೆದು ಓಡಿಸುವ ‘ದುಸ್ಸಾಹಸ’ಕ್ಕೆ ಕೆಲವರು ಕೈ ಹಾಕಿ ಪ್ರಚೋದನೆ ಮಾಡುತ್ತಾರೆ. ಆಗ ವನ್ಯಜೀವಿಗಳು ಪ್ರತಿಕ್ರಿಯಿಸುವ ರಭಸಕ್ಕೆ ವ್ಯಕ್ತಿ ಸಾಯುತ್ತಾನೆ ಎನ್ನುವುದು ವನ್ಯಜೀವಿ ತಜ್ಞರ ಅಭಿಪ್ರಾಯ.
ಕಾಡಿನ ಹುಲಿಗೂ, ಸಫಾರಿ ಹುಲಿಗೂ ಇದೆ ವ್ಯತ್ಯಾಸ: ಹಾಗೆ ನೋಡಿದರೆ, ದಟ್ಟ ಕಾಡಿನಲ್ಲಿರುವ ಹುಲಿಗಳಿಗೂ, ಸಫಾರಿಯಲ್ಲಿರುವ ಹುಲಿಗಳಿಗೂ ವ್ಯತ್ಯಾಸವಿರುತ್ತದೆ. ಸಫಾರಿಯಲ್ಲಿರುವ ಹುಲಿಗಳು ಸಾಮಾನ್ಯವಾಗಿ ದಟ್ಟ ಕಾಡಿನೊಳಗೆ ವಾಸಿಸುವ ಹುಲಿಯಷ್ಟು ‘ಆಕ್ರಮಣಕಾರಿ’ಯಾಗಿರುವುದಿಲ್ಲ. ಜತೆಗೆ ಸಫಾರಿಗೆ ಪ್ರತ್ಯೇಕ ವಾಹನಗಳಲ್ಲಿಯೇ ತೆರಳುವುದರಿಂದ, ಆ ವಾಹನಗಳ ಸಂಚಾರಕ್ಕೆ ಒಗ್ಗಿಕೊಂಡಿರುತ್ತದೆ.
ಆದ್ದರಿಂದ ಆ ವಾಹನಗಳು ಸಂಚರಿಸಿದಾಗ, ಅದರಲ್ಲಿ ಮನುಷ್ಯರಿದ್ದರೂ, ಅದು ಹುಲಿಗಳಿಗೆ ಭಯ ಹುಟ್ಟಿಸುವುದಿಲ್ಲ. ಆದರೆ ದಟ್ಟ ಕಾನನದೊಳಗೆ ಅಂದರೆ ಸಫಾರಿಯ ಪರಿಚಯವಿಲ್ಲದ ಹುಲಿಗಳು, ಮನುಷ್ಯರು ಅಥವಾ ವಾಹನಗಳನ್ನು ನೋಡಿದರೆ ಬೆದರುತ್ತವೆ. ದೇಶದ ಬಹುಪಾಲು ಸಫಾರಿ ಗಳನ್ನು ಬಫರ್ ಝೋನ್‌ಗಳಲ್ಲಿ ನಡೆಸುವುದರಿಂದ, ಅದರಲ್ಲಿಯೂ ಕರ್ನಾಟಕದಲ್ಲಿ ಕಾಡಿನ ಅಂಚಿನಲ್ಲಿರುವ ಭಾಗದಲ್ಲಿ ನಡೆಸುವುದರಿಂದ, ಕಾಡಿನೊಳಗೆ ವಾಸಿಸುವ ಹುಲಿಗಳ ಸಂಪರ್ಕಕ್ಕೆ ಸಫಾರಿ ಬರುವುದಿಲ್ಲ. ಹೀಗಿರುವಾಗ ಪ್ರವಾಸಿಗರ ಮೇಲೆ ದಾಳಿ ಮಾಡುವ ಪ್ರಮೇಯವೂ ಬರುವು ದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
ಸಫಾರಿ ಹುಲಿಗಳ ಸವಾರಿ ಸ್ನೇಹ
ಇನ್ನು ದೇಶದಲ್ಲಿ 50ಕ್ಕೂ ಹೆಚ್ಚು ಹುಲಿ ಸಫಾರಿಗಳಿವೆ. ಈ ಯಾವ ಸಫಾರಿಯಲ್ಲಿಯೂ ಹುಲಿಗಳು ಪ್ರವಾಸಿಗರ ಮೇಲೆ ದಾಳಿ ಮಾಡಿರುವ ಉದಾಹರಣೆ ಇಲ್ಲ. ಅಷ್ಟಕ್ಕೂ ಸಫಾರಿ ಪ್ರದೇಶದಲ್ಲಿರುವ ಹುಲಿಗಳು ಸಫಾರಿ ವಾಹನಗಳ ಸಂಚಾರಕ್ಕೆ ‘ಹೊಂದಿಕೊಂಡಿರುತ್ತವೆ’. ಆ ವಾಹನಗಳು ನಮಗೆ ಮಾರಕವಲ್ಲ ಎನ್ನುವುದು ಖಾತ್ರಿಯಾಗಿರುವುದರಿಂದ, ರಸ್ತೆ ಪಕ್ಕದಲ್ಲಿಯೇ ಮಲಗಿದ್ದರೂ, ಕೆಲವೊಮ್ಮೆ ಸಫಾರಿ ವಾಹನಗಳು ಹುಲಿಗಳಿಗೆ ತೀರಾ ಹತ್ತಿರ ಎನ್ನುವಷ್ಟರ ಮಟ್ಟಿಗೆ ಹೋದರೂ ಅವು ದಾಳಿ ಮಾಡುವುದಿಲ್ಲ.
ಹಾಗೇ ನೋಡಿದರೆ, ಬಂಡೀಪುರ ಸಫಾರಿಯಲ್ಲಿದ್ದ ‘ಪ್ರಿನ್ಸ್’ ಎನ್ನುವ ಬಂಗಾಳಿ ಹುಲಿ 2007ರಿಂದ 2017ರ ಆಸುಪಾಸಿನವರೆಗೂ ಸಫಾರಿಗೆ ತೆರಳುವ ಪ್ರವಾಸಿಗರಿಗೆ ದರ್ಶನ ನೀಡುವುದಷ್ಟೇ ಅಲ್ಲದೇ, ಫೋಟೋ ತೆಗೆಯುವ ಅದೆಷ್ಟೋ ಪ್ರವಾಸಿಗರಿಗೆ ‘ಪೋಸ್’ ಕೊಡುತ್ತಿತ್ತು. ಪ್ರಿನ್ಸ್ ಹುಲಿ ಕೊಡುವ ಫೋಟೋ ಪೋಸ್‌ಗೆ ವಿಶ್ವವಿಖ್ಯಾತಿಯಾಗಿತ್ತು. ಕೇವಲ ಪ್ರಿನ್ಸ್ ಒಂದೇ ಅಲ್ಲದೇ ಸಫಾರಿ ಭಾಗದಲ್ಲಿ ರುವ ಅನೇಕ ಹುಲಿಗಳು ಸಫಾರಿ ವಾಹನಸ್ನೇಹಿ ಆಗಿರುತ್ತದೆ ಎನ್ನುವುದು ವಾಸ್ತವ.
ಏನಿದು ಹುಲಿ ಗುಮ್ಮ?
ಹುಲಿಗಳ ವಿಚಾರದಲ್ಲಿ ಗುಮ್ಮ ಬಂತು ಗುಮ್ಮ ಎಂಬ ರೀತಿಯ ಅಭಿಪ್ರಾಯವೊಂದಿದೆ
ಹುಲಿಗಳು ಕಂಡಕಂಡಲ್ಲೆಲ್ಲ ದಾಳಿ ಮಾಡುತ್ತವೆ ಎಂಬುದೇ ಅವೈಜ್ಞಾನಿಕ ಅನಿವಾರ್ಯವಾದರೆ, ಮನುಷ್ಯನಿಂದ ಭೀತಿಗೊಳಗಾದರೆ ಮಾತ್ರ ದಾಳಿ
ಸಫಾರಿ ನಡೆಯುವ ಭಾಗದಲ್ಲಿ ಹುಲಿಗಳು ಮನುಷ್ಯನ ನಿತ್ಯ ಪರಿಚಯದಿಂದ ವಾಹನ ಸಂಚಾರಕ್ಕೆ ಹೊಂದಿಕೊಂಡಿರುತ್ತವೆ
ಅವುಗಳಿಗೆ ಆಹಾರದ ಸಮಸ್ಯೆಯೂ ಇಲ್ಲದಿರುವುದರಿಂದ, ಸಫಾರಿಗೆ ಬರುವವರ ಮೇಲೆ ದಾಳಿ ಪ್ರಮೇಯವೂ ಇಲ್ಲ.