ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

West Bengal Election ground report by Raghava Sharma Nidle: ʼದೀದಿʼ ಭದ್ರಕೋಟೆ ಭೇದಿಸುವರೇ ಮೋದಿ ?

ಉತ್ತರ ದಿಕ್ಕಿನಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ರಾಜಕೀಯ ನೆಲೆ ವಿಸ್ತರಣೆ ಮಾಡಿ, ಚುನಾವಣೆ ಗೆದ್ದಿರುವ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲು ಇನ್ನೂ ಸಾಧ್ಯವಾಗಿಲ್ಲ. ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ, ಮಹಾರಾಷ್ಟ್ರ, ಒಡಿಶಾ ರಾಜ್ಯಗಳಲ್ಲಿ ಅಧಿಕಾರ ಸ್ಥಾಪಿಸಿರುವ ಬಿಜೆಪಿಗೆ ಮಮತಾ ದೀದಿಯ ರಾಜಕೀಯ ಭದ್ರಕೋಟೆಯನ್ನು ಪೂರ್ತಿ ಭೇದಿಸಲು ಸಾಧ್ಯವಾಗಿಲ್ಲ.

ಬಂಗಾಳ ಚುನಾವಣೆಯ ಗ್ರೌಂಡ್ ರಿಪೋರ್ಟ್

ಪಶ್ಚಿಮ ಬಂಗಾಳದಲ್ಲಿ 1977ರಿಂದ ಆರಂಭಗೊಂಡು 34 ವರ್ಷಗಳ ಕಾಲವಿದ್ದ ಎಡಪಕ್ಷಗಳ ಕೆಂಪುಕೋಟೆಯನ್ನು ನಾಶ ಮಾಡಿ, ರಾಜ್ಯದ ಮುಖ್ಯಮಂತ್ರಿಯಾಗಿ ಗದ್ದುಗೆ ಏರಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ರಾಜಕೀಯ ಜೀವನದ ಅತಿ ಸವಾಲಿನ ಚುನಾವಣೆ ಎದುರಿಸು ತ್ತಿದ್ದಾರೆ. ಯಾವುದೇ ರಾಜ್ಯದಲ್ಲಿ, ಯಾವುದೇ ಸರಕಾರವಿರಲಿ, 15 ವರ್ಷಗಳ ದರ್ಬಾರಿನ ನಂತರ ಆಡಳಿತ-ವಿರೋಧಿ ಅಲೆ ಎದುರಿಸುವುದು ಸಹಜ. ಮಮತಾ ದೀದಿಗೂ ಈ ಸವಾಲು ಎದುರಾಗಿದೆ. ಎಡಪಕ್ಷಗಳ ಭದ್ರಕೋಟೆ ಭೇದಿಸಿ, ಒಂದೂವರೆ ದಶಕದಿಂದ ಆಡಳಿತ ನಡೆಸಿರುವ ಸಿಎಂ ಮಮತಾ, ಮೋದಿ-ಶಾ ಜೋಡಿಗೆ ಮತ್ತೊಮ್ಮೆ ಮಣ್ಣು ಮುಕ್ಕಿಸುತ್ತೇವೆ ಎನ್ನುತ್ತಿದ್ದರೂ, ಹೊಸ ರಣನೀತಿ ಗಳೊಂದಿಗೆ ಬಿಜೆಪಿ ಚುನಾವಣಾ ಯುದ್ಧಭೂಮಿಯಲ್ಲಿ ಸೆಣಸಾಟಕ್ಕೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಬಂಗಾಳದಲ್ಲಿ ಚುನಾ ವಣಾ ಪ್ರವಾಸ ಕೈಗೊಂಡು, ಮತದಾರನ ಮನಸ್ಥಿತಿ, ರಾಜಕೀಯ ಪರಿಸ್ಥಿತಿ, ಗ್ರಾಮೀಣ ಭಾಗದ ನಾಡಿಮಿಡಿತ, ನಗರವಾಸಿಗಳ ಮನದಾಳ, ಲೆಕ್ಕಾಚಾರ ಸೇರಿದಂತೆ ಕುತೂಹಲ ಕಾರಿ ಅಂಶಗಳತ್ತ ಬೆಳಕು ಚೆಲ್ಲುವ ಯತ್ನವನ್ನು ವಿಶ್ವವಾಣಿ ಮಾಡಲಿದ್ದು, ಪತ್ರಿಕೆಯ ವಿಶೇಷ ಪ್ರತಿನಿಧಿ ರಾಘವ ಶರ್ಮ ನಿಡ್ಲೆ ಇಂದಿನಿಂದ ಬಂಗಾಳ ಚುನಾವಣೆಯ ಗ್ರೌಂಡ್ ರಿಪೋರ್ಟ್ ನೀಡಲಿದ್ದಾರೆ.

ಉತ್ತರ ದಿಕ್ಕಿನಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ರಾಜಕೀಯ ನೆಲೆ ವಿಸ್ತರಣೆ ಮಾಡಿ, ಚುನಾವಣೆ ಗೆದ್ದಿರುವ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲು ಇನ್ನೂ ಸಾಧ್ಯವಾಗಿಲ್ಲ. ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ, ಮಹಾರಾಷ್ಟ್ರ, ಒಡಿಶಾ ರಾಜ್ಯಗಳಲ್ಲಿ ಅಧಿಕಾರ ಸ್ಥಾಪಿಸಿರುವ ಬಿಜೆಪಿಗೆ ಮಮತಾ ದೀದಿಯ ರಾಜಕೀಯ ಭದ್ರಕೋಟೆಯನ್ನು ಪೂರ್ತಿ ಭೇದಿಸಲು ಸಾಧ್ಯವಾಗಿಲ್ಲ.

ಬಿಜೆಪಿಯ ಹಿಂದುತ್ವ ಪ್ರೇರಿತ ರಾಜಕಾರಣವನ್ನು ಇಲ್ಲಿನ ಜನ ಈಗಲೂ ಪೂರ್ಣ ಪ್ರಮಾಣದಲ್ಲಿ ಸ್ವೀಕರಿಸಿಲ್ಲ. 2019ರಿಂದ ಟಿಎಂಸಿ ವಿರೋಧಿ ಧ್ವನಿಗಳು ನಿಧಾನವಾಗಿ ಬಲಗೊಳ್ಳುತ್ತಿರುವ ಹಿನ್ನೆಲೆ ಯಲ್ಲಿ, 2026ರ ಚುನಾವಣೆ ರಾಜ್ಯದಲ್ಲಿ ಹೊಸ ರಾಜಕೀಯ ಇತಿಹಾಸ ನಿರ್ಮಾಣ ಮಾಡಲಿದೆ ಎನ್ನುವುದು ಬಿಜೆಪಿಯ ಪ್ರತಿಪಾದನೆ.

2019ರ ಲೋಕಸಭೆ ಮತ್ತು 2021ರ ವಿಧಾನಸಭೆ ಚುನಾವಣೆ ವರದಿಗಾಗಿ ನಾನು ರಾಜ್ಯ ಪ್ರವಾಸ ಮಾಡಿದ್ದಾಗ, ಬಿಜೆಪಿಯ ನೆಲೆ ವಿಸ್ತರಿಸುವ ಲಕ್ಷಣಗಳು ಕಂಡುಬಂದಿದ್ದವು. 2019ರ ಲೋಕಸಭೆ ಫಲಿತಾಂಶವಂತೂ (42ರಲ್ಲಿ 18 ಸೀಟು ಗೆದ್ದಿತ್ತು) ಬಿಜೆಪಿಯ ಮನೋಬಲವನ್ನು ವೃದ್ಧಿಸಿ, 2021ರ ವಿಧಾನಸಭೆ ಚುನಾವಣೆ ಗೆದ್ದೇ ಬಿಡುತ್ತೇವೆ ಎಂಬ ಹುಮ್ಮಸ್ಸಿನಲ್ಲಿ ಬಿಜೆಪಿ ಇತ್ತು. ಆದರೆ, ಟಿಕೆಟ್ ಹಂಚಿಕೆ ಗೊಂದಲ, ದಿಲ್ಲಿಯಿಂದ ಬಂದ ಕೆಲ ನಾಯಕರ ರಣನೀತಿಯಲ್ಲಿನ ವೈಫಲ್ಯದ ಲಾಭ ಪಡೆದುಕೊಂಡ ಟಿಎಂಸಿ, ಬಿಜೆಪಿಯನ್ನು 76ಕ್ಕೆ (ಒಟ್ಟು 294 ವಿಧಾನ ಸಭೆ ಸೀಟು) ಸೀಮಿತಗೊಳಿ ಸಿತು.

ಇದನ್ನೂ ಓದಿ: West Bengal Election: ಭವಾನಿಪುರ ಚಕ್ರವ್ಯೂಹ: ಮಮತಾ ಬ್ಯಾನರ್ಜಿ ಕಟ್ಟಿಹಾಕಲು ಬಿಜೆಪಿ ರಣತಂತ್ರ!

2016ರ ವಿಧಾನಸಭೆ ಚುನಾವಣೆಯಲ್ಲಿ ಬರೀ 3 ಸೀಟು ಗೆದ್ದಿದ್ದ ಪಕ್ಷ 5 ವರ್ಷಗಳ ನಂತರ 76 ಸೀಟುಗಳನ್ನು ಬಾಚಿಕೊಂಡದ್ದು ಗಮನಾರ್ಹ ಸಾಧನೆಯಾಗಿತ್ತಾದರೂ, ಸಿಎಂ ಮಮತಾ ಬ್ಯಾನರ್ಜಿ ಯವರ ಅಬ್ಬರವನ್ನು (213 ಸೀಟು) ತಗ್ಗಿಸಲು ಮೋದಿ-ಶಾ ಜೋಡಿಗೆ ಸಾಧ್ಯವಾಗಲಿಲ್ಲ.

ಹಾಗಂತ, 2014ರ ಲೋಕಸಭೆ ಚುನಾವಣೆಯಲ್ಲಿ ಶೇ.17ರಷ್ಟು ಮತಗಳಿಸಿದ ಬಿಜೆಪಿ, 2021ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಈ ಪ್ರಮಾಣವನ್ನು ಶೇ.38ಕ್ಕೆ ಏರಿಸಿ ಕೊಂಡು ರಾಜ್ಯದ ನಂ.2 ಪಕ್ಷವಾಗಿ ರೂಪುಗೊಂಡಿರುವುದು ಅಸಾಮಾನ್ಯ ಸಾಧನೆಯೇ ಸರಿ.

ಎಡಪಕ್ಷಗಳ ಕುಸಿಯುವಿಕೆಯಿಂದ ಸೃಷ್ಟಿಯಾದ ಖಾಲಿ ಸ್ಥಾನವನ್ನು ಭರ್ತಿ ಮಾಡಿದ ಬಿಜೆಪಿ, ಕೋಲ್ಕತ್ತಾದ ಗಿಜಿಗುಡುವ ಟೀ ಅಂಗಡಿಗಳಿಂದ ಹಿಡಿದು ಬಾಂಗ್ಲಾದೇಶ ಗಡಿ ಭಾಗದ ಮುರ್ಷಿದಾ ಬಾದ್, ಮಾಲ್ಡಾ ಜಿಲ್ಲೆಗಳ ಗ್ರಾಮೀಣ ಭಾಗಗಳತ್ತಲೂ ನೆಲೆ ವಿಸ್ತರಿಸುತ್ತಿದೆ.

ಬಾಂಗ್ಲಾ ಗಡಿ ನುಸುಳುವಿಕೆ ವಿಷಯಗಳನ್ನು ಪ್ರಸ್ತಾಪಿಸುತ್ತಾ, ರಾಷ್ಟ್ರವಾದದ ನರೇಟಿವ್ ಅನ್ನು ಬಿಗಿಗೊಳಿಸುತ್ತಿದೆ. ಹಿಂದುತ್ವ, ಟಿಎಂಸಿ ವಿರೋಧಿ ನರೇಟಿವ್, ಅಭಿವೃದ್ಧಿ ಮಂತ್ರದ ಜತೆಗೆ ಆರ್‌ಎಸ್‌ಎಸ್‌ನ ಸಂಘಟನಾ ಬಲದೊಂದಿಗೆ ರಾಜ್ಯ ರಾಜಕೀಯದ ಭೂದೃಶ್ಯವನ್ನೇ ಬಿಜೆಪಿ ಮರುವಿನ್ಯಾಸಗೊಳಿಸಿದೆ.

2021ರಲ್ಲಿ ನಂದಿಗ್ರಾಮದಲ್ಲಿ ಸಿಎಂ ಮಮತಾರನ್ನು ಸೋಲಿಸಿದ್ದಂತೂ ಐತಿಹಾಸಿಕ ಬೆಳವಣಿಗೆ. ನಂತರ ದೀದಿ ಕೋಲ್ಕತ್ತಾದ ಭವಾನಿಪುರ ಉಪಚುನಾವಣೆ ಗೆದ್ದು ವಿಧಾನಸಭೆಯನ್ನು ಅಧಿಕೃತ ವಾಗಿ ಪ್ರವೇಶಿಸಬೇಕಾಯಿತು.

ಇದನ್ನೂ ಓದಿ: Bihar Election ground report by Raghav Sharma Nidle: ಎನ್‌ಡಿಎಗೆ ಗಜಬಲ, ʼಇಂಡಿʼ ವಿಲವಿಲ

ಕಳೆದ 5 ವರ್ಷಗಳಲ್ಲಿ ಕೋಲ್ಕತ್ತಾದ ಹೂಗ್ಲಿ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. 2021ರಲ್ಲಿ ಎಸಗಿದ್ದ ಪ್ರಮಾದ, ಲೋಪಗಳನ್ನು ಬಿಜೆಪಿ ಸರಿಪಡಿಸಿಕೊಂಡಂತೆ ಕಾಣುತ್ತಿದೆ. ಗ್ರಾಮೀಣ ಭಾಗದಲ್ಲಿ ಬಿಜೆಪಿ ಜನಪ್ರಿಯತೆ ಹೆಚ್ಚಿರುವ ಚರ್ಚೆಯಾಗುತ್ತಿದೆ. 15 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಟಿಎಂಸಿ ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆ, ಕಾನೂನು - ಸುವ್ಯವಸ್ಥೆ ವೈಫಲ್ಯ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ನಡುವೆಯೂ ಜನರ ಮಧ್ಯೆ ಮುನ್ನುಗ್ಗಿ ಪ್ರಚಾರ ಮಾಡುತ್ತಾ, ನಾಲ್ಕನೇ ಬಾರಿ ರಾಜ್ಯದಲ್ಲಿ ಸರಕಾರ ರಚಿಸುವ ಕನಸು ಕಾಣುತ್ತಿದೆ.

ನಂದಿಗ್ರಾಮದ ಬಿಜೆಪಿ ಶಾಸಕ, ಒಂದೊಮ್ಮೆ ಮಮತಾ ಬ್ಯಾನರ್ಜಿ ಯವರ ಅತ್ಯಾಪ್ತರಾಗಿದ್ದ ಸುವೇಂದು ಅಧಿಕಾರಿ ಈಗ ಬಿಜೆಪಿಯ ಮುಂಚೂಣಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಹಿಂದಿನ ಜಾತ್ಯತೀತ ರಾಜಕಾರಣದ ಶೈಲಿ ಬದಲಿಸಿ, ಬಿಜೆಪಿಯ ಹಿಂದುತ್ವ ಮಂತ್ರ ಜಪಿಸುತ್ತಾ, ಟಿಎಂಸಿ ವಿರೋಧಿ ವಾತಾವರಣ ರೂಪಿಸಲು ಹಿಂದೂ ಮತಗಳ ಪ್ರಬಲ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ.

lakshmi Bhanda scheme R

ಟಿಎಂಸಿ ಸರಕಾರದಲ್ಲಿ ಹಲವು ವರ್ಷಗಳ ಕಾಲ ಮಂತ್ರಿಯಾಗಿ, ಪಕ್ಷದ ಹಿರಿಯ ನಾಯಕರಾಗಿದ್ದ ಸುವೇಂದು ಅಧಿಕಾರಿ ಬಿಜೆಪಿಯ ಇತರೆ ರಾಜ್ಯ ನಾಯಕರಿಗಿಂತ ಹೆಚ್ಚು ಇಲ್ಲಿನ ರಾಜ ಕಾರಣವನ್ನು ಅರಿತವರೂ, ಟಿಎಂಸಿಯ ಒಳ-ಹೊರಗನ್ನು ತಿಳಿದುಕೊಂಡವರೂ ಆಗಿದ್ದಾರೆ.

2019ರ ಲೋಕಸಭಾ ಚುನಾವಣೆ ಫಲಿತಾಂಶದ ನಂತರದಿಂದ ಬದಲಾದ ಬಂಗಾಳ ರಾಜಕಾರಣ ದಿಂದಾಗಿ, 2021ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಗಳು ಬಿಜೆಪಿ-ಟಿಎಂಸಿ ನಡುವಿನ ಹೋರಾಟಕ್ಕೆ ಅನೇಕ ಕಡೆ ಸಾಕ್ಷಿಯಾದವು. 2024ರಲ್ಲಿ ಬಿಜೆಪಿಯ ಲೋಕಸಭೆ ಸೀಟು 18ರಿಂದ 12ಕ್ಕೆ ಇಳಿದರೂ ಮತಗಳಿಕೆ ತಗ್ಗಲಿಲ್ಲ. ಈಗ, ಮತದಾರ ಪಟ್ಟಿ ಪರಿಷ್ಕರಣೆ, ಬಾಂಗ್ಲಾ ಹಿಂದೂ ಹತ್ಯೆಗಳು, ರಾಜಕೀಯ ಧ್ರುವೀಕರಣದ ಜತೆಗೆ ಬಿಜೆಪಿಯ ಅಗ್ರೆಸಿವ್ ಹಿಂದುತ್ವ ಪ್ರತಿಪಾದನೆಯಿಂದಾಗಿ, 2026ರ ವಿಧಾನ ಸಭೆ ಚುನಾವಣೆ ಹೊಸ್ತಿಲಲ್ಲಿ ಬಂಗಾಳದ ಚುನಾವಣಾ ಯುದ್ಧಭೂಮಿ (ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳನ್ನು ಹೊರತುಪಡಿಸಿ) ಸಂಪೂರ್ಣ ‘ಬಿಜೆಪಿ ವರ್ಸಸ್ ಟಿಎಂಸಿ’ ಎಂಬಂತೆ ಗೋಚರಿಸುತ್ತಿದೆ.

ಎಡಪಕ್ಷಗಳ ಜತೆ ಕಾಂಗ್ರೆಸ್ ಈಗ ಪ್ರಸ್ತುತತೆ ಕಳೆದುಕೊಂಡಿದೆ. ಜನರ ಮಧ್ಯೆ ಟಿಎಂಸಿ-ಬಿಜೆಪಿ ಬಗ್ಗೆ ಚರ್ಚೆಯಾಗುತ್ತಿದೆಯೇ ವಿನಾ ಕಾಂಗ್ರೆಸ್ ಮತ್ತು ಎಡಪಕ್ಷಗಳ ಬಗ್ಗೆ ಜನ ತಲೆಕೆಡಿಸಿಕೊಳ್ಳುತ್ತಿಲ್ಲ. ಹತ್ತಾರು ರಾಜಕೀಯ ಹಿಂಸಾಚಾರ ಘಟನೆಗಳು, ಕೋಲ್ಕತ್ತಾದ ಆರ್.ಜಿ. ಕರ್ ಮೆಡಿಕಲ್ ಕಾಲೇಜು ಅತ್ಯಾಚಾರ ಪ್ರಕರಣ, ಸೌತ್ ಕೋಲ್ಕತ್ತಾ ಲಾ ಕಾಲೇಜು ಗ್ಯಾಂಗ್ ರೇಪ್ ಕೇಸು, ಮುರ್ಷಿದಾಬಾದ್'ನಲ್ಲಿನ ಕೋಮು ಗಲಭೆ ಸೇರಿ ಹಲವು ಘಟನೆಗಳು ಸರಕಾರದ ವಿರುದ್ಧದ ಜನಾ ಕ್ರೋಶವನ್ನು ಹೆಚ್ಚಿಸಿ, ಟಿಎಂಸಿಯ ಆಡಳಿತ ವೈಫಲ್ಯಗಳನ್ನು ಎತ್ತಿ ತೋರಿಸಿದ್ದರೂ, ಇದನ್ನು ಮತಗಳಾಗಿ ಪರಿವರ್ತಿಸುವಲ್ಲಿ ಬಿಜೆಪಿ ಯಶಸ್ವಿಯಾಗುವುದೇ ಎನ್ನುವುದು ಪ್ರಶ್ನೆ.

ಸದಾ ಸಂಘರ್ಷಮಯ

2021ರಲ್ಲಿ ಪ್ರವಾಸ ಮಾಡಿದ್ದಾಗ ರಾಜಕೀಯ ಸಂಘರ್ಷಕ್ಕೆ ಬಲಿಯಾಗಿದ್ದ ಸಂತ್ರಸ್ತೆಯರನ್ನು ಭೇಟಿ ಮಾಡಿದ್ದೆ. ಬಿಜೆಪಿಯನ್ನು ಬೆಂಬಲಿಸಬೇಕೆಂದಿದ್ದ ಅನೇಕ ಮಹಿಳೆಯರು ಬಹಿರಂಗವಾಗಿ ಮಾತನಾಡಲು ಹಿಂದೇಟು ಹಾಕುತ್ತಿದ್ದರು. ಬಿಜೆಪಿಯ ಪ್ರಚಾರ ರ್ಯಾಲಿಗಳಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ಲೈಂಗಿಕ ದೌರ್ಜನ್ಯಕ್ಕೀಡಾದ ಮಹಿಳೆಯರು, “ನಾವು ಮಾಧ್ಯಮಕ್ಕೆ ಮಾತನಾಡಿದರೆ, ಎದುರಾಳಿ ಪಕ್ಷದವರು ಹುಡುಕಿ ಬಂದು ಹಲ್ಲೆ ಮಾಡುತ್ತಾರೆ. ರಾತ್ರಿ ಮನೆಗಳಿಗೆ ಕಲ್ಲುಗಳು ಬೀಳುತ್ತವೆ. ಪೊಲೀಸರು ದೂರು ಸ್ವೀಕರಿಸುವುದಿಲ್ಲ" ಎಂದೇ ಆತಂಕ ಹೊರ ಹಾಕುತ್ತಿದ್ದರು. 5 ವರ್ಷಗಳಲ್ಲಿ ಈ ಪರಿಸ್ಥಿತಿ ಕೊಂಚ ಮಟ್ಟಿಗೆ ಬದಲಾಗಿದೆ ಮತ್ತು ಟಿಎಂಸಿ ವಿರೋಧಿಗಳು ಧೈರ್ಯ ದಿಂದ ಮಾತನಾಡಲು ಶುರುಮಾಡಿದ್ದಾರೆ ಎಂಬ ವರದಿಗಳಿವೆ. ಯಾರೇನೇ ಹೇಳಲಿ, ರಾಜ್ಯ ರಾಜಕೀಯ ಸಂಘರ್ಷದ ಕಹಿ ವಾಸ್ತವವು, ನೈಜತೆಯನ್ನು ಅರಿಯಲು ಇಲ್ಲಿಗೆ ಭೇಟಿ ನೀಡಿದ್ದಾಗ ಗೊತ್ತಾಗಿತ್ತು. ಅಷ್ಟರಮಟ್ಟಿಗೆ, ರಾಜಕೀಯ ಸಂಘರ್ಷ-ಬಡಿದಾಟಗಳು ರಾಜ್ಯದಲ್ಲಿ ಬೇರೂರಿ ಬಿಟ್ಟಿದೆ. ಬಂಗಾಳದ ಬಗ್ಗೆ ಯಾರು ಏನೇ ಹೇಳಿದರೂ, ಎಡಪಕ್ಷಗಳಿದ್ದಾಗ ನಡೆಯುತ್ತಿದ್ದ ರಾಜಕೀಯ ಸಂಘರ್ಷಗಳು ಮಮತಾ ಆಡಳಿತದನೂ ಕಡಿಮೆ ಯಾಗಲಿಲ್ಲ. ವಾಸ್ತವದಲ್ಲಿ ಅದು ಮತ್ತಷ್ಟು ಹೆಚ್ಚಿತು.

ಫ್ರೀ ಸ್ಕೀಮ್‌ನ ಬಲ

ಮಹಿಳೆಯರ ಆರ್ಥಿಕ ಬಲ ವೃದ್ಧಿಸಲು ಮಮತಾ ಬ್ಯಾನರ್ಜಿಯವರ ಸರಕಾರ ಮಹಿಳೆಯರ ಖಾತೆಗಳಿಗೆ 1500 ರು. (ಎಸ್‌ಸಿ-ಎಸ್‌ಟಿಗಳಿಗೆ 1700 ರು.) ಸಹಾಯಧನವನ್ನು ‘ಲಕ್ಷ್ಮಿ ಭಂಡಾರ್’ ಯೋಜನೆ ಮೂಲಕ ಪ್ರತಿ ತಿಂಗಳು ಜಮೆ ಮಾಡುತ್ತಿದೆ. ಉಚಿತ ಗ್ಯಾರಂಟಿ ಯೋಜನೆಗಳನ್ನು ಜನ ಮುಗಿಬಿದ್ದು ಸ್ವೀಕರಿಸುತ್ತಿರುವ ಮತ್ತು ಅವು ಮತ ಕೀಳುವ ತಂತ್ರಗಳಾಗಿ ಬದಲಾಗಿರುವ ಇಂದಿನ ಕಾಲಘಟ್ಟದಲ್ಲಿ ಫಲಾನುಭವಿ ಮಹಿಳೆಯರು (ಮುಖ್ಯವಾಗಿ, ಬಡ ಮತ್ತು ಮಧ್ಯಮ ವರ್ಗದವರು) ದೀದಿಯ ವಿರುದ್ಧ ಮತ ಚಲಾಯಿಸುತ್ತಾರಾ? ಎಂಬ ಸಂಶಯ ಬಿಜೆಪಿಯಲ್ಲೂ ಇದೆ.

ಎಸ್‌ಐಆರ್-ವಿರೋಧಿ ನರೇಟಿವ್

ದೀದಿಗೆ ಈಗ ವಯಸ್ಸಾದಂತೆ ಕಂಡರೂ, ಅವರ ಹೋರಾಟ ಗುಣ, ಛಲ ಮತ್ತು ದಿಟ್ಟತನ ಇನ್ನೂ ತಗ್ಗಿಲ್ಲ. ‘ಬಂಗಾಳಿ ಭದ್ರಲೋಕ್’ಗಳು (ಮಧ್ಯಮ ಮತ್ತು ಮೇಲ್ಮಧ್ಯಮ ಸಮುದಾಯದ ಚಿಂತಕ, ಬುದ್ಧಿಜೀವಿ ವರ್ಗ-ಕುಟುಂಬ) ಈಗಲೂ ದೀದಿಯನ್ನೇ ನೆಚ್ಚಿಕೊಂಡಂತಿದೆ. ಕೇಂದ್ರ ಸರಕಾರದ ಶಕ್ತಿಗಳ ಜತೆ ಬಂಗಾಳ ಪ್ರವೇಶಿಸಿರುವ ಮೋದಿ-ಶಾ ಜೋಡಿಯನ್ನು ಏಕಾಂಗಿಯಾಗಿ ಎದುರಿಸು ತ್ತಿರುವ ಮಮತಾ ಬ್ಯಾನರ್ಜಿಗೆ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ತಲೆನೋವು ತಂದಿರುವುದು ಸುಳ್ಳಲ್ಲ. ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆಯ ಹೆಸರಲ್ಲಿ ಸುಮಾರು 94 ಲಕ್ಷ ಮತದಾರರ ಹೆಸರನ್ನು ಅಳಿಸಿ ಹಾಕಲಾಗಿದ್ದು, ಇದನ್ನೇ ಟಿಎಂಸಿ ಈ ಚುನಾವಣೆಯ ಅತಿದೊಡ್ಡ ವಿಷಯ ವನ್ನಾಗಿ ಪರಿವರ್ತಿಸಿ, ‘ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ’ ಎಂಬ ನರೇಟಿವ್ ಹಬ್ಬಿ ಸಿದೆ. ಬಿಜೆಪಿ ವಿರುದ್ಧ ಜನಾಕ್ರೋಶವನ್ನು ದುಪ್ಪಟ್ಟುಗೊಳಿಸುವ ತಂತ್ರ ಮಾಡಿದೆ. ಸಂತ್ರಸ್ತ ಮತದಾರರನ್ನು ಸೇರಿಸಿಕೊಂಡು, ಈ ಅನ್ಯಾಯಕ್ಕೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಿ ಎಂಬ ಕರೆ ನೀಡುತ್ತಿದೆ.

ಕೆ. ರಾಘವ ಶರ್ಮ ನಿಡ್ಲೆ

View all posts by this author