ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Zero development, Bogus bills: ಅಭಿವೃದ್ಧಿ ಶೂನ್ಯ, ಬೋಗಸ್ ಬಿಲ್‌ಗಳದ್ದೇ ಹವಾ

ತಾಲೂಕಿನ ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿ ಕೆಲಸಗಳು ಕೇವಲ ಕಾಗದದ ಮೇಲೆ ಸೀಮಿತ ವಾಗಿದ್ದು, ಯಾವುದೇ ಕೆಲಸ ಮಾಡದೆಯೇ ನೂರಕ್ಕೆ ನೂರರಷ್ಟು ಹಣ ಪಾವತಿ ಮಾಡಿ ಕೊಳ್ಳುವ ಮೂಲಕ ಕೋಟ್ಯಂತರ ರು. ಸಾರ್ವಜನಿಕ ಹಣ ದುರ್ಬಳಕೆಯಾಗುತ್ತಿದೆ. ಸರಕಾರಿ ಅನುದಾನದ ದುರ್ಬಳಕೆ ಮಿತಿ ಮೀರಿದ್ದು, ಪಂಚಾಯತ್ ರಾಜ್ ಇಲಾಖೆಯಿಂದ ಹಿಡಿದು ಶಿಕ್ಷಣ ಮತ್ತು ವಸತಿ ನಿಲಯಗಳವರೆಗೆ ಭ್ರಷ್ಟಾಚಾರದ ಜಾಲ ವ್ಯಾಪಿಸಿದೆ.

ಶ್ರೀಕಾಂತ ಆರ್‌ಜಿ

ತಾಲೂಕಿನಲ್ಲಿ ಭ್ರಷ್ಟಾಚಾರದ ಅಟ್ಟಹಾಸ

ಗ್ರಾಮ ಪಂಚಾಯತ್ ಅನುದಾನ ಲೂಟಿ

ತನಿಖೆ ಹೆಸರಲ್ಲಿ ಕಾಲಹರಣದ ಆರೋಪ

ಲಿಂಗಸೂಗೂರು: ತಾಲೂಕಿನ ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿ ಕೆಲಸಗಳು ಕೇವಲ ಕಾಗದದ ಮೇಲೆ ಸೀಮಿತವಾಗಿದ್ದು, ಯಾವುದೇ ಕೆಲಸ ಮಾಡದೆಯೇ ನೂರಕ್ಕೆ ನೂರರಷ್ಟು ಹಣ ಪಾವತಿ ಮಾಡಿಕೊಳ್ಳುವ ಮೂಲಕ ಕೋಟ್ಯಂತರ ರು. ಸಾರ್ವಜನಿಕ ಹಣ ದುರ್ಬಳಕೆಯಾಗುತ್ತಿದೆ. ಸರಕಾರಿ ಅನುದಾನದ ದುರ್ಬಳಕೆ ಮಿತಿ ಮೀರಿದ್ದು, ಪಂಚಾಯತ್ ರಾಜ್ ಇಲಾಖೆಯಿಂದ ಹಿಡಿದು ಶಿಕ್ಷಣ ಮತ್ತು ವಸತಿ ನಿಲಯಗಳವರೆಗೆ ಭ್ರಷ್ಟಾಚಾರದ ಜಾಲ ವ್ಯಾಪಿಸಿದೆ.

ಗ್ರಾಮ ಪಂಚಾಯತ್ಗಳಲ್ಲಿ ನಡೆದಿರುವ ಅವ್ಯವಹಾರದ ಕುರಿತು ದೂರು ನೀಡಿದರೂ ಅಧಿಕಾರಿಗಳು ಕೇವಲ ತನಿಖೆ ಹಂತದಲ್ಲಿದೆ" ಎಂಬ ಹಾರಿಕೆ ಉತ್ತರದ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಎಂದು ತಾಲೂಕಿನ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್ ತಿಂಗಳ ಅಂತ್ಯದೊಳಗೆ ಅನುದಾನ ಖರ್ಚು ಮಾಡಬೇಕೆಂಬ ಮೇಲಧಿಕಾರಿಗಳ ಸೂಚನೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಭ್ರಷ್ಟ ಅಧಿಕಾರಿಗಳು, ರಾತ್ರೋರಾತ್ರಿ ಬೋಗಸ್ ಬಿಲ್ಗಳನ್ನು ಸೃಷ್ಟಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ವಾಸ್ತವವಾಗಿ ಯಾವುದೇ ಕೆಲಸ ನಡೆದಿಲ್ಲದಿದ್ದರೂ, ಅನುದಾನವನ್ನು ಸಂಪೂರ್ಣವಾಗಿ ಖಾಲಿ ಮಾಡುವ ಭರದಲ್ಲಿ ಸರಕಾರಿ ಖಜಾನೆಗೆ ಕನ್ನ ಹಾಕಲಾಗುತ್ತಿದೆ.

ಇದನ್ನೂ ಓದಿ: Raichur News: ಸೆಕೆ ಅಂತ ಮನೆ ಮುಂದೆ ಮಲಗಿದ್ದ ವೃದ್ಧೆಗೆ ಕಚ್ಚಿದ ಹಾವು!

ತಾಲೂಕಿನ 30 ಗ್ರಾಮ ಪಂಚಾಯತ್ಗಳಲ್ಲಿ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಯಾಗಿರುವ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಅವರಿಗೆ ಈಗಾಗಲೇ ದೂರು ನೀಡಲಾಗಿದೆ. ಆದರೆ ದೂರು ನೀಡಿ ತಿಂಗಳುಗಳೇ ಕಳೆದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ತನಿಖೆ ನಡೆಯುತ್ತಿದೆ ಎನ್ನುವ ಅಧಿಕಾರಿಗಳ ಮೌನವು ಭ್ರಷ್ಟರಿಗೆ ರಕ್ಷಣೆ ನೀಡುತ್ತಿರುವಂತಿದೆ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಕ್ಷೇತ್ರದ ಅಭಿವೃದ್ಧಿಗೆ ಹಣವಿಲ್ಲ, ಅನುದಾನ ಬರುತ್ತಿಲ್ಲ ಎಂದು ಹೇಳುವ ಶಾಸಕರು, ಅಧಿಕಾರಿಗಳ ಜೇಬು ಸೇರುತ್ತಿರುವ ಕೋಟ್ಯಂತರ ರೂಪಾಯಿಗಳ ಬಗ್ಗೆ ಏಕೆ ಮೌನ ವಹಿಸಿದ್ದಾರೆ ? ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಈ ಲೂಟಿಯನ್ನು ತಡೆದು, ಆ ಹಣವನ್ನು ಕ್ಷೇತ್ರದ ಜನರ ನೈಜ ಕೆಲಸಗಳಿಗೆ ಬಳಸುವಂತೆ ಶಾಸಕರು ಅಧಿಕಾರಿಗಳಿಗೆ ಚಾಟಿ ಬೀಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಠ ವರ್ಗಗಳ ಇಲಾಖೆ, ಅಲ್ಪಸಂಖ್ಯಾಂತರ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ದೊಡ್ಡ ಮಟ್ಟದ ಹಗರಣ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಆಹಾರ ಧಾನ್ಯಗಳು ಮತ್ತು ಸಾಮಗ್ರಿಗಳನ್ನು ಪೂರ್ಣ ಪ್ರಮಾಣದಲ್ಲಿ ಪೂರೈಕೆ ಮಾಡದೆಯೇ, ನಕಲಿ ದಾಖಲೆ ಸೃಷ್ಟಿಸಿ ಬಿಲ್ ಪಾವತಿ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳ ಹಸಿವಿನಲ್ಲೂ ಅಧಿಕಾರಿಗಳು ಪಾಲನ್ನು ಹುಡುಕುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಕ್ಷೇತ್ರದ ಶಾಸಕರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಈ ಎಲ್ಲಾ ಇಲಾಖೆಗಳ ಸಮಗ್ರ ತನಿಖೆಗೆ ವಿಶೇಷ ತಂಡವನ್ನು ರಚಿಸಬೇಕು. ಮಾರ್ಚ್ ಅಂತ್ಯ ದೊಳಗೆ ಹಣ ಖಾಲಿ ಮಾಡುವ ಭರದಲ್ಲಿ ನಡೆಯುತ್ತಿರುವ ಈ ಬೋಗಸ್ ಬಿಲ್ ದಂಧೆ ಯನ್ನು ತಡೆಯದಿದ್ದರೆ, ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕಿನ ಪ್ರಗತಿಪರ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.

ಸರಣಿ ಲೂಟಿಯಿಂದ ಅಭಿವೃದ್ಧಿ ಕುಂಠಿತ

ಲ್ಯಾಂಡ್ ಆರ್ಮಿ,ನಿರ್ಮಿತಿ ಕೇಂದ್ರ, ಲೋಕೋಪಾಯೋಗಿ ಇಲಾಖೆ. ಕೆ.ಕೆ.ಆ.ಡಿ.ಬಿಯಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕೋಟ್ಯಂತರ ರು. ಅನುದಾನ ವು ಗುಣಮಟ್ಟವಿಲ್ಲದ ಕಾಮಗಾರಿ ಅಥವಾ ಕೆಲಸ ಮಾಡದೆಯೇ ಬಿಲ್ ಮಾಡುವ ಮೂಲಕ ಪೋಲಾಗುತ್ತಿದೆ. ಶಿಕ್ಷಣ ಮತ್ತು ಶಿಶು ಅಭಿವೃದ್ಧಿ ಇಲಾಖೆಗಳಲ್ಲಿ ಅನುದಾನದ ಹೆಸರಿನಲ್ಲಿ ಅನಗತ್ಯ ಖರ್ಚು ತೋರಿಸಿ ಹಣ ಲೂಟಿ ಮಾಡಲಾಗುತ್ತಿದೆ. ಪುರಸಭೆ ವ್ಯಾಪ್ತಿ ಯಲ್ಲಿನ ನಗರದ ಅಭಿವೃದ್ಧಿ ಕಾಮಗಾರಿಗಳು ಕೇವಲ ಕಾಗದದ ಮೇಲೆ ಸೀಮಿತವಾಗಿವೆ. ಕೇವಲ ಪಂಚಾಯತ್ಗಳಷ್ಟೇ ಅಲ್ಲದೆ, ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರದ ಬೇರುಗಳು ಆಳವಾಗಿ ಇಳಿದಿವೆ. ಇಲಾಖೆಗಳ ಸರಣಿ ಲೂಟಿಯಿಂದ ತಾಲೂಕಿನ ಅಭಿವೃದ್ದಿ ಕುಂಠಿತ ಗೊಳ್ಳುತ್ತಿದೆ.

image

ಪ್ರತಿ ವರ್ಷ ಇದೇ ಸಮಸ್ಯೆ ಆಗಿದೆ, ನಾವು ಹೋರಾಟ ಮಾಡುವುದು ವ್ಯರ್ಥವಾಗಿದೆ. ಕೆಲಸ ಜೀರೋ, ಪಾವತಿ ನೂರು ಪ್ರತಿಶತ ಎನ್ನುವಂತಾಗಿದೆ ತಾಲೂಕಿನ ಸ್ಥಿತಿ. ಸಾರ್ವಜನಿಕರ ತೆರಿಗೆ ಹಣವನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹಂಚಿಕೊಳ್ಳುತ್ತಿರುವುದು ಖಂಡನೀಯ. ತಾಲೂಕಿನಲ್ಲಿ ಕಳೆದ ಕೆಲವು ತಿಂಗಳ ಹಣಕಾಸು ವ್ಯವಹಾರಗಳ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು.

-ಶಿವಪುತ್ರಗೌಡ ನಂದಿಹಾಳ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ