ಬೆಂಗಳೂರು: ʼರಂಗಿ ತರಂಗʼ, ‘ಅವನೇ ಶ್ರೀಮನ್ನಾರಾಯಣʼ ದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಎಚ್.ಕೆ. ಪ್ರಕಾಶ್ ನಿರ್ಮಾಣದ, ʼದಿಯಾʼ, ʼಬ್ಲಿಂಕ್ʼ ಸೇರಿದಂತೆ ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ಹಾಗೂ ಅಭಿಷೇಕ್ ಎಂ. ನಿರ್ದೇಶನದ ʼಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀʼ ಚಿತ್ರದ (Bank of Bhagyalakshmi Movie) ಮೊದಲ ಹಾಡು MRT ಮ್ಯೂಸಿಕ್ (ಲಹರಿ) ಮೂಲಕ ಬಿಡುಗಡೆಯಾಗಿದೆ. ʼಪ್ರೇಮ ಪೂಜ್ಯಂʼ, ʼಕೌಸಲ್ಯ ಸುಪ್ರಜಾ ರಾಮʼ ಖ್ಯಾತಿಯ ಬೃಂದಾ ಆಚಾರ್ಯ ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ನಾಗಾರ್ಜುನ ಶರ್ಮ ಅವರು ಬರೆದಿರುವ ʼಹರ ಓಂʼ ಎಂಬ ಶಿವನ ಕುರಿತಾದ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ.
ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಹಾಡು ಸಹ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಕನ್ನಡದಲ್ಲಿ ಶಿಲ್ಪ ಹಾಗೂ ತೆಲುಗಿನಲ್ಲಿ ಖ್ಯಾತ ಗಾಯಕಿ ಮಂಗ್ಲಿ ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಉಷಾ ಭಂಡಾರಿ ಹಾಗೂ ದರ್ಶನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಲಹರಿ ವೇಲು ಅವರು ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಸಿಂಪಲ್ ಸುನಿ ಅವರ ಜತೆಗೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ನನಗೆ ಇದು ಮೊದಲ ನಿರ್ದೇಶನದ ಚಿತ್ರ. ನಾನು, ರಕ್ಷಿತ್ ಶೆಟ್ಟಿ ಹಾಗೂ ಸಚಿನ್ ಅವರು ಸೇರಿ ಪಿನಾಕ ಎಂಬ ವಿ.ಎಫ್.ಎಕ್ಸ್ ಸ್ಟುಡಿಯೋ ಸಹ ನಡೆಸುತ್ತಿದ್ದೇವೆ. ನಿರ್ಮಾಪಕ ಪ್ರಕಾಶ್ ಅವರು ʼಅವನ್ನೇ ಶ್ರೀಮನ್ನಾರಾಯಣʼ ಚಿತ್ರದ ಸಮಯದಿಂದಲೂ ಪರಿಚಯ. ಈ ಚಿತ್ರದ ಕಥೆ ಕೇಳಿದ ಅವರು ನಿರ್ಮಾಣಕ್ಕೆ ಮುಂದಾದರು. ʼಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀʼ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇಂದು ʼಹರ ಓಂʼ ಎಂಬ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಹಾಡು ಬಿಡುಗಡೆಯಾಗಿದೆ. ಚಿತ್ರದ ಪ್ರೀ ಕ್ಲೈಮ್ಯಾಕ್ಸ್ ನಲ್ಲಿ ಈ ಹಾಡು ಬರುತ್ತದೆ. ಚಿತ್ರದ ಕಥೆಗೆ ಹಾಗೂ ಈ ಹಾಡಿಗೂ ಸಂಬಂಧವಿದೆ. ಈ ವರ್ಷದ ಮಧ್ಯದಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎಂದರು ನಿರ್ದೇಶಕ ಅಭಿಷೇಕ್.
ʼರಂಗಿತರಂಗʼ ಚಿತ್ರದಿಂದ ನಿರ್ಮಾಪಕನಾದೆ. ಇದು ನನ್ನ ನಿರ್ಮಾಣದ ಆರನೇ ಚಿತ್ರ. ʼರಂಗಿತರಂಗʼ ಚಿತ್ರದ ಹಾಡುಗಳು ಲಹರಿ ಸಂಸ್ಥೆಯಿಂದ ಬಿಡುಗಡೆಯಾಗಿತ್ತು. ಈ ಚಿತ್ರದ ಹಾಡುಗಳು ಸಹ ಲಹರಿ ಸಂಸ್ಥೆಯಿಂದಲೇ ಬಿಡುಗಡೆಯಾಗಿದೆ. ವೇಲು ಅವರು ಒಂದೊಳ್ಳೆ ಮೊತ್ತ ಸಹ ನೀಡಿದ್ದಾರೆ. ನಿರ್ದೇಶಕ ಅಭಿಷೇಕ್ ಉತ್ತಮ ಕಥೆ ಮಾಡಿಕೊಂಡಿದ್ದಾರೆ. ನಮ್ಮ ʼರಂಗಿತರಂಗʼ ಚಿತ್ರ ಹತ್ತು ವರ್ಷಗಳ ಹಿಂದೆ ಜುಲೈ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಸಹ ಜುಲೈನಲ್ಲೇ ಬಿಡುಗಡೆ ಮಾಡುತ್ತೇವೆ ಎಂದರು ನಿರ್ಮಾಪಕ ಪ್ರಕಾಶ್.
ಕಳೆದ ವರ್ಷ ಇದೇ ಸಮಯಕ್ಕೆ ನನ್ನ ʼಬ್ಲಿಂಕ್ʼ ಚಿತ್ರ ಬಿಡುಗಡೆಯಾಗಿತ್ತು. ಒಂದು ವರ್ಷದ ನಂತರ ನಿಮ್ಮನೆಲ್ಲಾ ಭೇಟಿ ಮಾಡುತ್ತಿದ್ದೇನೆ. ಇನ್ನೂ, ಇಂದು ಬಿಡುಗಡೆಯಾಗಿರುವ ಈ ಚಿತ್ರದ ಹಾಡು ತುಂಬಾ ಚೆನ್ನಾಗಿದೆ. ವಿಶೇಷವೆಂದರೆ ಈ ಹಾಡಿನಲ್ಲಿ ನನ್ನ ಗುರುಗಳು ಹಾಗೂ ನಾನು ಪಾಠ ಹೇಳಿ ಕೊಟ್ಟಿರುವ ಹುಡುಗರು ಅಭಿನಯಿಸಿದ್ದಾರೆ ಎಂದು ನಾಯಕ ದೀಕ್ಷಿತ್ ಶೆಟ್ಟಿ ತಿಳಿಸಿದರು.
ನನ್ನ ದಿನಚರಿ ಆರಂಭವಾಗುವುದೆ ಶಿವನಾಮ ಸ್ಮರಣೆಯಿಂದ. ನಮ್ಮ ಚಿತ್ರದ ಈ ಹಾಡನ್ನು ಕೇಳಿದ ಮೇಲಂತೂ ಎಷ್ಟು ಸಲ ಗುನುಗಿದ್ದೇನೊ ಲೆಕ್ಕವಿಲ್ಲ. ಅಷ್ಟು ಅದ್ಭುತವಾಗಿದೆ ʼಹರ ಓಂʼ ಹಾಡು ಎಂದರು ನಾಯಕಿ ಬೃಂದಾ ಆಚಾರ್ಯ.
ಈ ಸುದ್ದಿಯನ್ನೂ ಓದಿ | Big Jumka Fashion: ಮಾನಿನಿಯರನ್ನು ಸೆಳೆಯುತ್ತಿವೆ ಕಿವಿಗಿಂತ ಅಗಲವಾದ ಬಿಗ್ ಜುಮುಕಿಗಳು
ಹಾಡು ಬರೆದಿರುವ ನಾಗಾರ್ಜುನ ಶರ್ಮ, ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು, ನಾಯಕನ ಸ್ನೇಹಿತರಾಗಿ ನಟಿಸಿರುವ ಶ್ರೀವತ್ಸ, ಶ್ರೇಯಸ್ ಶರ್ಮ, ಅಶ್ವಿನ್, ವಿನುತ್ ಹಾಗೂ ನೃತ್ಯ ಸಂಯೋಜನೆ ಮಾಡಿರುವ ಉಷಾ ಭಂಡಾರಿ ಮತ್ತು ದರ್ಶನ್ ಮುಂತಾದವರು ʼಹರ ಓಂʼ ಹಾಡಿನ ಕುರಿತು ಮಾತನಾಡಿದರು. ಉಷಾ ಭಂಡಾರಿ ಅವರು ಈ ಹಾಡಿನಲ್ಲಿ ಅಭಿನಯ ಕೂಡ ಮಾಡಿದ್ದಾರೆ.